ಸಮುದ್ರಕ್ಕೆ ವ್ಯರ್ಥವಾಗಿ ಹರಿಯುತ್ತಿದ್ದ ನೀರು ಕೆರೆಗೆ; ರೈತರ ಚಿಂತೆ ದೂರ ಮಾಡಿದ ಸಚಿವ ಸೋಮಣ್ಣ
- ಸಮುದ್ರಕ್ಕೆ ವ್ಯರ್ಥವಾಗಿ ಹರಿಯುತ್ತಿದ್ದ ನೀರು ಕೆರೆಗೆ
- ಸಚಿವ ವಿ. ಸೋಮಣ್ಣ ಕಾಳಜಿಯಿಂದ ರೈತರ ಚಿಂತೆ ದೂರ
- ನಂಜೇದೇವನಪುರ ಕೆರೆಗೆ ಸಚಿವ ವಿ. ಸೋಮಣ್ಣ ಸೂಚನೆ ಮೇರೆಗೆ ಕೆರೆ ಭರ್ತಿಯಾಗಿ ಬಿದ್ದ ಕೋಡಿ
ಚಾಮರಾಜನಗರ:(ಸೆ.10) : ಮಹಾಮಳೆಯಿಂದ ಜಿಲ್ಲೆಯ ಕೆರೆ ಕಟ್ಟೆಗಳು ಈ ಬಾರಿ ಅವಧಿಗೆ ಮುನ್ನ ತುಂಬಿವೆ. ಒಣಗಿ ಭಣಗುಡುತ್ತಿದ್ದ ಕೆರೆಗಳು ಸಚಿವರ ಇಚ್ಛಾಶಕ್ತಿಯಿಂದ ಕೆರೆ ಮೈದುಂಬಿವೆ. ಕಳೆದ ವಾರ ಮಳೆಹಾನಿ ಸಂಬಂಧ ನಡೆದ ಅಧಿಕಾರಿಗಳ ಸಭೆಯಲ್ಲಿ 20ಕ್ಕೂ ಹೆಚ್ಚು ಕೆರೆ ಬರಿದಾಗಿರುವ ಅಂಶ ಗಮನಿಸಿ, ಕೆರೆಗಳನ್ನು ತುಂಬಿಸುವಂತೆ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದರು. ಇದರಿಂದ, ಎಚ್ಚೆತ್ತ ಅಧಿಕಾರಿಗಳು ಕೆರೆಗೆ ನೀರು ತುಂಬಿಸುತ್ತಿದ್ದಾರೆ.
ಮಳೆ ಪರಿಹಾರ ಸಮರೋಪಾದಿಯಲ್ಲಿ ನಿರ್ವಹಿಸಿ: ಸಚಿವ ಸೋಮಣ್ಣ
ನೀರು ಹರಿದು ಬರುತ್ತಿದ್ದ ಕಾಲುವೆಗಳು ಬಂಡವಾಳ ಶಾಹಿಗಳ ಅತಿಕ್ರಮಣ ಮತ್ತು ಕರಿಕಲ್ಲು ಕ್ವಾರಿದಾಹಕ್ಕೆ ಕಾಲುವೆಗಳು ಮುಚ್ಚಿ ಹೋದ ಪರಿಣಾಮ ಮಳೆಯಾದರೂ ಚಾಮರಾಜನಗರ, ಗುಂಡ್ಲುಪೇಟೆ ತಾಲೂಕಿನ ಹಲವು ಕೆರೆಗಳು ಬಣಗುಡುತ್ತಿದ್ದವು. ಆದರೆ, ಜಲಾಶಯ, ಕೆರೆ ಕಟ್ಟೆಭರ್ತಿಯಾಗಿ ವ್ಯರ್ಥವಾಗಿ ನೀರು ಸಮುದ್ರದ ಪಾಲಾಗುತ್ತಿದ್ದರೂ ಸ್ಥಳೀಯ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಜಿಲ್ಲೆಯ ಕೆರೆಕಟ್ಟೆಗಳಿಗೆ ನೀರು ತುಂಬಿಸಲು ಮನಸ್ಸು ಮಾಡಿದ ಉದಾಹರಣೆಯೇ ಇಲ್ಲ.
ಪ್ರತಿವರ್ಷ ಆಗಸ್ಟ್ -ಸೆಪ್ಟೆಂಬರ್ ತಿಂಗಳಲ್ಲಿ ಸಮುದ್ರಕ್ಕೆ ವ್ಯರ್ಥವಾಗಿ ನೀರು ಹರಿದು ಹೋಗುತ್ತಿದ್ದರೂ ಕೆರೆ ಕಟ್ಟೆಗಳಿಗೆ ನೀರು ತುಂಬಿಸಲು ಅಧಿಕಾರಿಗಳು ಮಂದಾಗುತ್ತಿರಲಿಲ್ಲ. ಕೆರೆಗಳಿಗೆ ನೀರು ತುಂಬಿಸುವ ಹೋರಾಟ ಸಮಿತಿ ಮತ್ತು ರೈತ ಸಂಘಟನೆ ಹೋರಾಟಕ್ಕಿಳಿದ ಬಳಿಕವಷ್ಟೇ ನೀರು ತುಂಬಿಸಲು ಮುಂದಾಗುತ್ತಿದ್ದರು. ಈ ವರ್ಷ ಅಧಿಕಾರಿಗಳು ಕೆರೆಕಟ್ಟೆಗಗಳಿಗೆ ನೀರು ತುಂಬಿಸಲು ಮುಂದಾಗಿರುವಂತೆ ಪ್ರತಿವರ್ಷ ತುಂಬಿಸಿದರೆ ವರ್ಷದಲ್ಲಿ ಎರಡು ಮೂರು ಬಾರಿ ತುಂಬಿಸಬಹುದು. ಕೆರೆ ಕಟ್ಟೆಖಾಲಿಯಾಗದಂತೆ ನೋಡಿಕೊಳ್ಳಬಹುದು.
ಸಮಿತಿ ರಚನೆಯಾಗಲಿ: ಜಿಲ್ಲೆಯ ಕೆರೆ ಕಟ್ಟೆಗಳಿಗೆ ನೀರು ತುಂಬಿಸುವ ಸಂಬಂಧ ಇದುವರಗೆ ಯಾವುದೇ ಸಮಿತಿ ರಚನೆಯಾಗಿಲ್ಲ. ಇದರಿಂದ ಆಗಾಗ್ಗೆ ಸಣ್ಣ ಪುಟ್ಟಮನಸ್ತಾಪ ಆಗಿವೆ. ನೀರು ವ್ಯರ್ಥ ವಾಗಿ ಸಮುದ್ರ ಪಾಲಾಗುವುದನ್ನು ತಪ್ಪಿಸಲು, ಎಲ್ಲಾ ಕೆರೆಗಳಿಗೂ ಸಮರ್ಪಕ ನೀರು ಹರಿದು ಹೋಗುವಂತೆ ಮಾಡುವ ನಿಟ್ಟಿನಲ್ಲಿ ನೀರಾವರಿ ತಜ್ಞರು, ಕೆರೆಗಳಿಗೆ ನೀರು ತುಂಬಿಸುವ ಹೋರಾಟ ಸಮಿತಿಯವರು, ನೀರಾವರಿ ಇಲಾಖೆ ಅಧಿಕಾರಿಗಳನ್ನು ಒಳಗೊಂಡ ಸಮಿತಿ ರಚಿಸಲು ಮುಂದಾಗಬೇಕಿದೆ.
ಕೆರೆಗಳ ಸ್ವಚ್ಚತೆಗೆ ಮುಂದಾಗಬೇಕು: ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಕೆರೆಗಳ ಅಭಿವೃದ್ಧಿಗೆ ಅವಕಾಶವಿದೆ. ಆದರೆ, ಕೆರೆಗಳು ಜಂಗಲ್ ಕಟ್ಟಿಂಗ್ ಮತ್ತು ಹೂಳು ಎತ್ತಿಸುವ ಕೆಲಸವಾಗುತ್ತಿಲ್ಲ. ಇದರಿಂದಾಗಿ ಕೆರೆಗಳಲ್ಲಿ ಹೆಚ್ಚಿನ ನೀರು ಸಂಗ್ರಹವಾಗದೆ ಕೋಡಿ ಬಿದ್ದಿರುವುದು ಮತ್ತು ತಾಜಾ ಉದಾಹರಣೆ ಎಂಬಂತೆ ತುಂಬಿದ ಕೆರೆಗಳಲ್ಲಿ ನೀರು ಕಾಣದಂತೆ ಗಿಡಗಂಟಿಗಳು ಬೆಳೆದು ನಿಂತಿರುವುದು. ಉದ್ಯೋಗ ಖಾತ್ರಿಯಡಿ ಅಂತರ್ ಜಲ ಹೆಚ್ಚಿಸುವ ಬದಲಿಗೆ ಹೆಚ್ಚಿನ ಕಡೆ ಕಡೆ ಕೆರೆ ಮಣ್ಣು ಕೆರೆಗೆ ಚೆಲ್ಲುವ ಕೆಲಸ ನಡೆದಿದೆ.
ಅಧಿಕಾರಿಗಳಿಗೆ ಸಚಿವರ ಪಾಠ: ಕೆಡಿಪಿ ಸಭೆಯಲ್ಲಿ ನೀರಾವರಿ ಅಧಿಕಾರಿಗಳನ್ನು ಮುಂದಕ್ಕೆ ಕುರ್ಚಿ ಹಾಕಿ ಕೆರೆಗಳನ್ನು ತುಂಬಿಸುವಂತೆ ಕ್ಲಾಸ್ ತೆಗೆದುಕೊಂಡಿದ್ದರು. ಇಷ್ಟುಮಳೆ ಬರುತ್ತಿದೆ. ಆದರೂ 20ಕ್ಕೂ ಹೆಚ್ಚು ಕೆರೆ ತುಂಬಿಲ್ಲ, ಆದಷ್ಟುಬೇಗ ಕೆರೆ ನೀರು ತುಂಬಿಸಬೇಕು ಇಲ್ಲವೇ ಜಿಲ್ಲೆ ಬಿಟ್ಟು ಹೋಗಿ ಎಂದು ಸಚಿವ ಸೋಮಣ್ಣ ಅಧಿಕಾರಿಗಳ ವಿರುದ್ಧ ಗುಡುಗಿದ್ದರು.
ವಾಸ್ತವಾಂಶ ಅರಿತು ಮಾಹಿತಿ ನೀಡುವೆ: ಸಚಿವ ಸೋಮಣ್ಣ
ಭಾರಿ ಮಳೆಯ ನಡುವೆಯೂ ಕರೆ ಕಟ್ಟೆಗಳು ಬಣಗುಡುತ್ತಿದ್ದು, ನೀರು ವ್ಯರ್ಥವಾಗಿ ಹರಿದು ಹೋಗುತ್ತಿರುವ ವಿಚಾರ ತಿಳಿದು ಬಹಳ ಬೇಸರವಾಯಿತು. ತಕ್ಷಣವೇ ಅಧಿಕಾರಿಗಳಿಗೆ ಸೂಚನೆ ನೀಡಿದ ಪರಿಣಾಮ ಕೆರೆಗಳಿಗೆ ನೀರು ಬರುತ್ತಿದೆ. ಎಲ್ಲಾ ಕೆರೆಗಳಿಗೂ ನೀರು ತುಂಬಿಸಲು ಕ್ರಮ ಕೈಗೊಳ್ಳಲಾಗುವುದು.
ವಿ.ಸೋಮಣ್ಣ, ಜಿಲ್ಲಾ ಉಸ್ತುವಾರಿ ಸಚಿವರು, ಚಾಮರಾಜನಗರ