ಮಳವಳ್ಳಿಯಲ್ಲಿ ಕೃಷಿ ಸಚಿವ ಪಿ.ಎಂ ನರೇಂದ್ರಸ್ವಾಮಿ ಅವರ ಅಭಿವೃದ್ಧಿ ಕಾರ್ಯ ಮೆಚ್ಚಿ ಜೆಡಿಎಸ್ ಮುಖಂಡ ನೂರುಲ್ಲಾ ಹಾಗೂ ಬೆಂಬಲಿಗರು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಮತ್ತೊಂದೆಡೆ, ಹಲಗೂರಿನ ತೊರೆಕಾಡನಹಳ್ಳಿ ಸರ್ಕಾರಿ ಶಾಲೆಯ 54 ವಿದ್ಯಾರ್ಥಿಗಳಿಗೆ ಸರ್ಕಾರದ ವತಿಯಿಂದ ಉಚಿತ ಶೂ ವಿತರಿಸಲಾಯಿತು.
ಮಂಡ್ಯ (ಸೆ.27): ಮಳವಳ್ಳಿ ಪಟ್ಟಣದ 7ನೇ ವಾರ್ಡ್ ನ ಮುಸ್ಲಿಂ ಸಮುದಾಯದ ಜೆಡಿಎಸ್ ಮುಖಂಡ ಹಾಗೂ ಪುರಸಭೆ ಮಾಜಿ ಸದಸ್ಯ ನೂರುಲ್ಲಾ ಕೃಷಿ ಸಚಿವ ಪಿ.ಎಂ ನರೇಂದ್ರಸ್ವಾಮಿ ಅವರ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಕಾಂಗ್ರೆಸ್ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಯಾದರು.
ತಾಲೂಕಿನ ಪೂರಿಗಾಲಿ ಗ್ರಾಮದ ಸಚಿವರ ನಿವಾಸಕ್ಕೆ ಆಗಮಿಸಿದ ನೂರುಲ್ಲಾ ಸೇರಿದಂತೆ ನೂರಾರು ಮುಸ್ಲಿಂ ಸಮುದಾಯದ ಮುಖಂಡರು ಸಚಿವರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
ನರೇಂದ್ರಸ್ವಾಮಿ ನಾಯಕತ್ವ ಮೆಚ್ಚಿ ಪಕ್ಷ ಸೇರ್ಪಡೆ
ಈ ವೇಳೆ ನೂರುಲ್ಲಾ ಮಾತನಾಡಿ, ಕೃಷಿ ಸಚಿವ ಪಿ.ಎಂ ನರೇಂದ್ರಸ್ವಾಮಿ ಅವರು ದಕ್ಷ ಆಡಳಿತ, ಉತ್ತಮ ನಾಯಕತ್ವದ ಜೊತೆಗೆ ಮಳವಳ್ಳಿ ಮೀಸಲು ಕ್ಷೇತ್ರವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಿದ್ದಾರೆ. ಅಭಿವೃದ್ಧಿ ಕಾರ್ಯಗಳು ಯುವ ನಾಯಕರಿಗೆ ಸ್ಫೂರ್ತಿಯಾಗಿದ್ದು, ನಾಯಕತ್ವವನ್ನು ಮೆಚ್ಚಿ ಮುಸ್ಲಿಂ ಸಮುದಾಯದ ಹಲವು ಮುಖಂಡರೊಂದಿಗೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತಿರುವುದಾಗಿ ತಿಳಿಸಿದರು.
ಈ ವೇಳೆ ಮುಸ್ಲಿಂ ಮುಖಂಡರು ಕೃಷಿ ಸಚಿವ ಪಿ.ಎಂ ನರೇಂದ್ರಸ್ವಾಮಿ ಅವರನ್ನು ಅಭಿನಂದಿಸಿದರು. ಈದ್ಗಾ ಮೊಹಲ್ಲಾದ ಮುಖಂಡರಾದ ವಾಹೀದ್ ಪಾಷ, ಅತ್ತಾವುಲ್ಲಾ, ಸೈಯದ್ ಅಹ್ಮದ್, ಇಲ್ಯಾಜ್ ಪಾಷ, ರಹೀಮ್ ಪಾಷ, ಜಮೀಲ್, ದೌಲತ್, ಜಾವೀದ್, ಫೈರೋಜ್ ಪಾಷ ಹಲವರು ಕಾಂಗ್ರೆಸ್ ಸೇರ್ಪಡೆಯಾದರು.
ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಪಿ.ರಾಜು, ಮನ್ಮುಲ್ ಮಾಜಿ ನಿರ್ದೇಶಕ ಆರ್.ಎನ್.ವಿಶ್ವಾಸ್, ಎಪಿಎಂಸಿ ಮಾಜಿ ಅಧ್ಯಕ್ಷ ಮುಟ್ಟನಹಳ್ಳಿ ಅಂಬರೀಶ್, ಮುಖಂಡರಾದ ಮಹೇಶ್, ಶ್ರೀನಿವಾಸ್ ಪಾಲ್ಗೊಂಡಿದ್ದರು.
ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಶೂ ವಿತರಣೆ
ಹಲಗೂರು: ಸಮೀಪದ ತೊರೆಕಾಡನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ 54 ವಿದ್ಯಾರ್ಥಿಗಳಿಗೆ ಸರ್ಕಾರದ ವತಿಯಿಂದ ನೀಡಿದ ಶೂಗಳನ್ನು ಎಸ್ಡಿಎಂಸಿ ಅಧ್ಯಕ್ಷ ಟಿ.ಸಿ.ಮಹೇಶ್ ವಿತರಿಸಿದರು. ಈ ವೇಳೆ ಮಾತನಾಡಿದ ಅವರು, ಸರ್ಕಾರಿ ಶಾಲೆಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಸರ್ಕಾರ ವಿದ್ಯಾರ್ಥಿಗಳಿಗೆ ಎಲ್ಲಾ ರೀತಿಯ ಸೌಲತ್ತುಗಳನ್ನು ನೀಡುತ್ತಿದೆ. ಮಕ್ಕಳು ಸಮವಸ್ತ್ರ ಹಾಗೂ ಶೂ ಗಳನ್ನು ಧರಿಸಿ ಶಾಲೆಗೆ ಬರಬೇಕು ಎಂದರು. ಮುಖ್ಯ ಶಿಕ್ಷಕಿ ರೂಪ ಮಾತನಾಡಿ, ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೂ ಸರ್ಕಾರದಿಂದ ಸಮವಸ್ತ್ರಗಳು ಹಾಗೂ ಉಚಿತ ಶಿಕ್ಷಣ , ಪಠ್ಯಪುಸ್ತಕ, ನೋಟ್ ಪುಸ್ತಕಗಳನ್ನು ನೀಡುತ್ತಿದೆ. ಇದನ್ನು ಸದ್ಬಳಕೆ ಮಾಡಿಕೊಂಡು ಉತ್ತಮ ಶಿಕ್ಷಣ ಪಡೆದು ತಂದೆ ತಾಯಿಗೆ ಕೀರ್ತಿ ತರಬೇಕು ಎಂದು ಕರೆ ನೀಡಿದರು. ಈ ವೇಳೆ ಕಮಲಮ್ಮ, ಕಾವ್ಯ, ಸೇರಿ ಇತರರು ಇದ್ದರು.


