RSS Karnataka: ನಮ್ಮ ಗೃಹಮಂತ್ರಿಯವರು ಹೇಳುವುದರಲ್ಲಿ ಅಸಂವಿಧಾನಿಕ ಅಂತ ಏನಿದೆ. ಕಾನೂನು ಬಾಹಿರವಾದ ವಿಚಾರವನ್ನೇನಾದರೂ ಮುಂದಿಟ್ಟಿದ್ದಾರಾ ಎಂದು ಕೃಷಿ ಸಚಿವ ಪಿ.ಎಂ. ನರೇಂದ್ರಸ್ವಾಮಿ ಪ್ರಶ್ನಿಸಿದರು.

ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು

ಕೊಡಗು (ಆ.15): ರಾಜ್ಯದ ಸರ್ಕಾರಿ ಮೈದಾನ ಮತ್ತು ಜಾಗಗಳಲ್ಲಿ ಕಾರ್ಯಕ್ರಮ ಮಾಡಲು ಅನುಮತಿ ಪಡೆಯುವ ವಿಧೇಯಕ ಮಂಡನೆ ಮೂಲಕ ಆರ್ ಎಸ್ ಎಸ್ ನಿರ್ಬಂಧಿಸಲು ಸರ್ಕಾರ ಮುಂದಾಗಿದೆ ಎಂಬ ಬಿಜೆಪಿಯವರ ಹೇಳಿಕೆ ವಿಚಾರ ಕೃಷಿ ಸಚಿವ ಪಿ.ಎಂ. ನರೇಂದ್ರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಡಿಕೇರಿಯಲ್ಲಿ ಮಾತನಾಡಿದ ಅವರು ನಮ್ಮ ಗೃಹಮಂತ್ರಿಯವರು ಹೇಳುವುದರಲ್ಲಿ ಅಸಂವಿಧಾನಿಕ ಅಂತ ಏನಿದೆ. ಕಾನೂನು ಬಾಹಿರವಾದ ವಿಚಾರವನ್ನೇನಾದರೂ ಮುಂದಿಟ್ಟಿದ್ದಾರಾ ಎಂದು ಪ್ರಶ್ನಿಸಿದರು. ದೇಶದಲ್ಲಿ ಈ ಸಂವಿಧಾನವನ್ನು ಒಪ್ಪಿ ಎಲ್ಲರೂ ಬದುಕಬೇಕಾಗುತ್ತದೆ.

ಅದರ ಅಡಿಯಲ್ಲಿ ಸಂಘ ನೋಂದಾಯಿಸಲು ಯಾರಿಗೆ ಯಾವ ಸಮಸ್ಯೆ ಇದೆ ಅಥವಾ ಅಪಮಾನವೇನು ಎಂದು ಸಚಿವ ನರೇಂದ್ರ ಸ್ವಾಮಿ ಪ್ರಶ್ನಿಸಿದರು. ನಾವು ಭಾರತೀಯರು ನಾವೆಲ್ಲರೂ ಒಂದು ಎಂದ ಮೇಲೆ, ಸಂಘಟನೆ ನೋಂದಾಯಿಸಲು ಸಮಸ್ಯೆ ಏನು ಎಂದಿದ್ದಾರೆ. ಯಾರನ್ನು ನಾವು ಭಿನ್ನವಾಗಿ ಕಾಣುತ್ತಿಲ್ಲ, ಆದರೆ ಭಿನ್ನವಾಗಿ ನಡೆಯುತ್ತೇವೆ ಎನ್ನುವ ಅವರ ಮನೋಧರ್ಮ ಬದಲಾಯಿಸಿಕೊಳ್ಳಲಿ. ನೋಂದಾಯಿತ ಸಂಸ್ಥೆಗಳಿಗೆ ಅವಕಾಶವಿದೆ, ನೋಂದಾಯಿಸದೇ ಇರುವ ಸಂಘಟನೆ ಇದನ್ನೇ ಉದಾಹರಣೆಯಾಗಿಟ್ಟುಕೊಂಡು ನಾವು ಯಾವುದೇ ಒಪ್ಪಿಗೆ ಪಡೆಯದೇ ಕಾರ್ಯಕ್ರಮ ಮಾಡುತ್ತೇವೆ ಎಂದರೆ ಕಾನೂನು ಸುವ್ಯವಸ್ಥೆ ಕಾಪಾಡುವುದು ಹೇಗೆ ಎಂದಿದ್ದಾರೆ.

ಕಾರ್ಯಕ್ರಮಗಳ ಮಾಡುವುದಕ್ಕೆ ಅವಕಾಶ ನೀಡಲು ಯಾವುದೇ ಸಂಘಟನೆ ಹೇಗೆ ನಡೆದುಕೊಳ್ಳಬೇಕು. ಒಗ್ಗೂಡುವ, ಸಮೂಹ ಕಾರ್ಯಕ್ರಮ ಮಾಡಬೇಕಾದರೆ ಒಪ್ಪಿಗೆ ಪಡೆಯಬೇಕೋ ಬೇಡವೋ. ಅನುಮತಿ ನೀಡಬೇಕಾದರೆ ಸರ್ಕಾರ ಯಾರ ಹೆಸರಿನಲ್ಲಿ ಕೊಡಬೇಕು. ಒಬ್ಬರೇ ಭಾರತ ಮಾತಾಕಿ ಜೈ ಎನ್ನುವಾಗ ಸಮಸ್ಯೆ ಇಲ್ಲ. ಆದರೆ ಸಮೂಹ ಒಗ್ಗೂಡಿ ಕಾರ್ಯಕ್ರಮ ಮಾಡುವಾಗ ಒಪ್ಪಿಗೆ ಬೇಕಲ್ವಾ. ಹಿಂದೆ ಕೆಲವು ಅನಪೇಕ್ಷಿತ ಘಟನೆ ನಡೆದಿವೆ. ಹೀಗಾಗಿ ಸರಿ ದಾರಿಯಲ್ಲಿ ಬನ್ನಿ ಅಂತ ನಾವು ಕರೆಯುತ್ತಿದ್ದೇವೆ, ಅವರನ್ನು ನಾವು ವಿರೋಧ ಮಾಡುತ್ತಿಲ್ಲ. ನಾವೆಲ್ಲರೂ ಭಾರತೀಯರು ಎಂದ ಮೇಲೆ ದೇಶದ ಕಾನೂನು ಪಾಲಿಸಲು ಅವರಿಗೆ ಸಮಸ್ಯೆ ಏನುನ ಎಂದಿದ್ದಾರೆ.

ಇನ್ನು ಗುಟ್ಕಾ ನಿಷೇಧದಿಂದ ಯಾವುದೇ ಸಮಸ್ಯೆ ಆಗಲ್ಲ ಅಂತ ಅಡಿಕೆ ಬೆಳೆಗಾರರ ಸಂಘವೇ ಸ್ಪಷ್ಟಪಡಿಸಿದೆ, ಬಿಜೆಪಿಯವರಿಗೆ ಅದೇ ಉತ್ತರ ಸಾಕಲ್ವಾ ಎಂದು ಕೃಷಿ ಸಚಿವ ಪಿ.ಎಂ. ನರೇಂದ್ರಸ್ವಾಮಿ ತಿರುಗೇಟು ನೀಡಿದ್ದಾರೆ. ಗುಟ್ಕಾ ನಿಷೇಧದಿಂದ ಅಡಿಕೆ ಬೆಳೆಗಾರರಿಗೆ ಸರ್ಕಾರ ಮೋಸ ಮಾಡಲು ಹೊರಟಿದೆ ಎಂದು ಬಿಜೆಪಿ ಆರೋಪಿಸುತ್ತಿರುವ ವಿಚಾರಕ್ಕೆ ಮಡಿಕೇರಿಯಲ್ಲಿ ಪ್ರತಿಕ್ರಿಯಿಸಿದ ಅವರು ಬಿಜೆಪಿಯವರಿಗೆ ರಾಜ್ಯದ ಅಭಿವೃದ್ಧಿ ವಿಚಾರ, ಕೇಂದ್ರದಿಂದ ಬರುವ ಅನುದಾನಗಳ ಬಗ್ಗೆ ಮಾತನಾಡುವುದಕ್ಕೆ ಆಗಲ್ಲ. ರಾಜ್ಯದಲ್ಲಿ ಹೆಚ್ಚು ಸಂಸದರು ಇರುವುದು ಯಾವ ಪಕ್ಷದಲ್ಲಿ, ಕೇಂದ್ರದಲ್ಲಿ ಆಡಳಿತದಲ್ಲಿ ಇರುವುದು ಯಾವ ಪಕ್ಷ. ರಾಜ್ಯದ ಪಾಲನ್ನು ಕೇಳಿ ಆರ್ಥಿಕ ಮುನ್ನೆಡೆಗೆ ಅವರು ಸಹಕರಿಸುತಿದ್ದಾರೆಯೇ ಎಂದು ಪ್ರಶ್ನಿಸಿದರು.

ಕೇಂದ್ರದಿಂದ ನಮಗೆ ಬರಬೇಕಾಗಿರುವ ಪಾಲೆಷ್ಟು, ನಮಗೆ ಆಗುತ್ತಿರುವ ವಂಚನೆ ಬಗ್ಗೆ ಯಾಕೆ ಬಿಜೆಪಿಯವರು ಮಾತನಾಡಲ್ಲ. ಇಲ್ಲಿ ಇರುವೆ ಹೋಯ್ತು ಎನ್ನುವುದಕ್ಕೆ ಮಾತನಾಡುತ್ತಾರೆ, ಆದರೆ ಅಲ್ಲಿ ಆನೆ ಹೋಯ್ತು ಎನ್ನುವುದಕ್ಕೆ ಯಾಕೆ ಮಾತನಾಡಲ್ಲ. ನಾವು ಕರ್ನಾಟಕದ ಸ್ವಾಭಿಮಾನವನ್ನು ಎತ್ತಿಡಿಯಬೇಕು. ಕ್ಷುಲ್ಲಕ ವಿಚಾರಕ್ಕೆ ಮಾತನಾಡುವುದಲ್ಲ ಎಂದು ಬಿಜೆಪಿ ನಾಯಕರಿಗೆ ಸಚಿವ ನರೇಂದ್ರಸ್ವಾಮಿ ತಿರುಗೇಟು ನೀಡಿದ್ದಾರೆ. ಇವರು ಕನ್ನಡಿಗರಲ್ವಾ ನಮ್ಮ ರಾಜ್ಯದ ಜನತೆಯ ಮತ ಪಡೆದಿಲ್ವಾ ಇವರು. ಸಣ್ಣವಿಚಾರವನ್ನು ಮಾತನಾಡುವ ಇವರು ದೊಡ್ಡ ವಿಚಾರವನ್ನು ಯಾಕೆ ಗೌಣ ಮಾಡುತ್ತಿದ್ದಾರೆ. ಅವರು ಅದಕ್ಕೆ ಉತ್ತರ ಕೊಡಲಿ, ಆ ಮೇಲೆ ನಾನು ಮಾತನಾಡುತ್ತೇನೆ ಎಂದು ಮಡಿಕೇರಿಯಲ್ಲಿ ಸಚಿವ ನರೇಂದ್ರ ಸ್ವಾಮಿ ತಿರುಗೇಟು ನೀಡಿದ್ದಾರೆ.