ಬೆಂಗಳೂರಿನಲ್ಲಿ ಡೆಲಿವರಿ ತಡವಾಗಿದ್ದನ್ನು ಪ್ರಶ್ನಿಸಿದ ಮಹಿಳೆಯ ಮನೆ ಬಳಿ ರ್ಯಾಪಿಡೋ ಡೆಲಿವರಿ ಬಾಯ್ ಅಸಭ್ಯವಾಗಿ ವರ್ತಿಸಿ, ಗೇಟು ಮುರಿದು ಒಳಗೆ ನುಗ್ಗಲು ಯತ್ನಿಸಿದ್ದಾನೆ. ಈ ಬಗ್ಗೆ ರ್ಯಾಪಿಡೋ ಕಂಪನಿ ನಿರ್ಲಕ್ಷ್ಯ ತೋರಿದ್ದು, ಸಂತ್ರಸ್ತೆ ಟ್ವಿಟರ್‌ನಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ. ಮುಂದೇನಾಯ್ತು ನೋಡಿ
ಬೆಂಗಳೂರು (ಸೆ.27): ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದ್ದು, ಡೆಲಿವರಿ ತಡವಾಯಿತು ಎಂದು ಪ್ರಶ್ನಿಸಿದ್ದಕ್ಕೆ ರ್ಯಾಪಿಡೋ (Rapido) ಡೆಲಿವರಿ ಬಾಯ್ ಒಬ್ಬ ಮಹಿಳೆಯ ಮನೆ ಬಳಿ ಬಂದು ಅಸಭ್ಯವಾಗಿ ವರ್ತಿಸಿ, ಗೇಟು ಮುರಿದು ಒಳಬರಲು ಪ್ರಯತ್ನಿಸಿ ವಿಫಲವಾದಾ, ಹೊರಗಡೆ ಮೂತ್ರ ವಿಸರ್ಜನೆ ಮಾಡಿ ವಿಕೃತಿ ಮೆರೆದಿರುವ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ.
ಸಿರಿಶಾ ಎಂಬ ಬೆಂಗಳೂರಿನ ಮಹಿಳೆಯೊಬ್ಬರು ತಮ್ಮ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಈ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಿದ್ದು, ತಮ್ಮ ಮೇಲಾದ ದೌರ್ಜನ್ಯದ ವಿವರಗಳನ್ನು ಹಂಚಿಕೊಂಡಿದ್ದಾರೆ.
ಸಿರಿಶಾ ಅವರ ಟ್ವೀಟ್‌ನಲ್ಲಿ ಏನಿದೆ?
'ರ್ಯಾಪಿಡೋ ಡೆಲಿವರಿ ಬಾಯ್ ನನ್ನ ಮನೆಗೆ ಬಂದು ನನ್ನನ್ನು ಬಾಯಿಗೆ ಬಂದಂತೆ ನಿಂದಿಸಿದನು, ಗೇಟಿಗೆ ಬಡೆದು ಅದನ್ನು ತೆರೆಯಲು ಯತ್ನಿಸಿದನು ಮತ್ತು ನನ್ನ ಮನೆಯ ಹೊರಗೆ ಮೂತ್ರ ವಿಸರ್ಜನೆ ಮಾಡಿದನು' ಎಂದು ಸಿರಿಶಾ ಆರೋಪಿಸಿದ್ದಾರೆ.'ಆ ವ್ಯಕ್ತಿ 4 ಗಂಟೆಗಳಿಗೂ ಹೆಚ್ಚು ಕಾಲ ತಡವಾಗಿ ಬಂದಿದ್ದನು. ಇಡೀ ಸಮಯದಲ್ಲಿ ನನ್ನನ್ನು ನಿಂದಿಸುತ್ತಾ, ಪದೇ ಪದೇ ಅತ್ಯಂತ ಕೀಳು ಪದಗಳಿಂದ ಕರೆದನು. ಗೇಟ್ ತೆರೆಯಲು ಕೈಹಾಕಲು ಯತ್ನಿಸಿದನು. ಅದೃಷ್ಟವಶಾತ್ ನಾನು ಗೇಟ್ ಲಾಕ್ ಮಾಡಿದೆ, ಇಲ್ಲದಿದ್ದರೆ ಏನಾಗುತ್ತಿತ್ತೋ ನನಗೆ ತಿಳಿಯುತ್ತಿಲ್ಲ' ಎಂದು ಅವರು ಭಯಾನಕ ಅನುಭವವನ್ನು ಹಂಚಿಕೊಂಡಿದ್ದಾರೆ.
ಅಲ್ಲದೆ, ಆ ವ್ಯಕ್ತಿ ನಂತರ ತನಗೆ ಆಡಿಯೋ ಸಂದೇಶಗಳನ್ನು ಕಳುಹಿಸಿ, ಮನೆಯ ಹೊರಗೆ ಚೆಲ್ಲಿದ ದ್ರವ, ನಾನು ಮಾಡಿದ ಮೂತ್ರ ಎಂದು ಒಪ್ಪಿಕೊಂಡಿದ್ದಾನೆ ಎಂದು ಸಿರಿಶಾ ತಿಳಿಸಿದ್ದಾರೆ. ಘಟನೆ ನಡೆದಾಗ ತಾನು ಮನೆಯಲ್ಲಿ ಒಬ್ಬಂಟಿಯಾಗಿದ್ದು, ಇದು ತನಗೆ ತೀವ್ರ ಮಾನಸಿಕ ಆಘಾತವನ್ನುಂಟು ಮಾಡಿದೆ ಎಂದಿದ್ದಾರೆ.
ಕಂಪನಿಯ ನಿರ್ಲಕ್ಷ್ಯ:
ಘಟನೆ ನಡೆದು 24 ಗಂಟೆಗಳು ಕಳೆದರೂ ರ್ಯಾಪಿಡೋ ಕಂಪನಿಯ ಗ್ರಾಹಕ ಬೆಂಬಲ (Rapido Support) ತಂಡದಿಂದ ಯಾವುದೇ ಸೂಕ್ತ ಸ್ಪಂದನೆ ಸಿಕ್ಕಿಲ್ಲ. 'ನೀವು ಅನೇಕ ಟಿಕೆಟ್‌ಗಳನ್ನು ಸೃಷ್ಟಿಸಿದ್ದೀರಿ' ಎಂದು ಕಂಪನಿ ನಿರ್ಲಕ್ಷ್ಯ ತೋರುತ್ತಿದೆ ಎಂದು ಸಿರಿಶಾ ಅಸಮಾಧಾನ ವ್ಯಕ್ತಪಡಿಸಿದ್ದು, ಗ್ರಾಹಕರ ಸುರಕ್ಷತೆ ಗಂಭೀರ ಸಮಸ್ಯೆಯಾಗಿದ್ದು ಕಂಪನಿ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಬೆಂಗಳೂರು ಪೊಲೀಸ್ ತಕ್ಷಣದ ಸ್ಪಂದನೆ:
ಮಹಿಳೆಯು ಈ ಪೋಸ್ಟ್‌ನಲ್ಲಿ ಬೆಂಗಳೂರು ನಗರ ಪೊಲೀಸ್ (Bengaluru City Police) ಹಾಗೂ ಪೊಲೀಸ್ ಆಯುಕ್ತರನ್ನು ಟ್ಯಾಗ್ ಮಾಡಿದ್ದರು. ಟ್ವೀಟ್‌ಗೆ ತಕ್ಷಣವೇ ಸ್ಪಂದಿಸಿರುವ ಬೆಂಗಳೂರು ಪೊಲೀಸರು, ಘಟನೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಕಲೆಹಾಕಿದ್ದಾರೆ. ಈ ಕುಕೃತ್ಯ ಎಸಗಿರುವ ಡೆಲಿವರಿ ಬಾಯ್‌ಗಾಗಿ ತೀವ್ರ ಹುಡುಕಾಟ ನಡೆಸಿದ್ದು, ಶೀಘ್ರದಲ್ಲೇ ಆತನನ್ನು ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.


