* ಎಂಟು ಜಿಲ್ಲೆ​ಗ​ಳಲ್ಲಿ ಮಳೆ, ಮೂವರು ಬಲಿ* ವಿಜ​ಯ​ಪು​ರ​ದಲ್ಲಿ ಆಟೋ ಮೇಲೆ ಬಿದ್ದ ಮರ, ಮಹಿಳೆ ಸಾವು* ಬೆಳ​ಗಾವೀಲಿ ಸಿಡಿ​ಲಿಗೆ, ಹಾವೇ​ರಿಲಿ ಚಾವಣಿ ಕುಸಿ​ದು ಸಾವು* ಗಾಳಿ​ಯ​ಬ್ಬ​ರಕ್ಕೆ ಹಾರಿಹೋದ ಹರಪನಹಳ್ಳಿ ಟೋಲ್‌ಗೇಟ್‌ ಚಾವಣಿ

 ಬೆಂಗಳೂರು(ಏ.06) ಬೆಳ​ಗಾ​ವಿ (Belagavi) ಸೇರಿ ರಾಜ್ಯದ (Karnataka) ಎಂಟು ಜಿಲ್ಲೆ​ಗ​ಳಲ್ಲಿ ಸೋಮ​ವಾರ ರಾತ್ರಿ​ಯಿಂದೀ​ಚೆಗೆ ಕೆಲ​ಕಾಲ ಉತ್ತಮ ಮಳೆ​ಯಾ​ಗಿದ್ದು, ಮಳೆ ಸಂಬಂಧಿ ಅನಾಹುತಕ್ಕೆ ಪ್ರತ್ಯೇಕ ಪ್ರಕ​ರ​ಣ​ಗ​ಳಲ್ಲಿ ಮೂವರು ಬಲಿ​ಯಾ​ಗಿ​ದ್ದಾ​ರೆ.

ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ರಾಜಕಟ್ಟಿಗ್ರಾಮದಲ್ಲಿ ಸಿಡಿಲು ಬಡಿದು ಬಸವರಾಜ ನಾಗಪ್ಪ ಕಾರನ್ನವರ (27), ವಿಜಯಪುರ ನಗರದಲ್ಲಿ ಆಟೋ ಮೇಲೆ ಮರಬಿದ್ದು ಯಲ್ಲಮ್ಮಾ ಕೊಂಡಗೂಳಿ (45) ಹಾಗೂ ಹಾವೇರಿ (Haveri) ತಾಲೂಕಿನ ಗುತ್ತಲದಲ್ಲಿ ಮನೆ ಚಾವಣಿ ಕುಸಿದು ಬಿದ್ದು ಮುಮ್ತಾಜ್‌ ಸಿರಾಜ್‌ ಬಾಲೆಕಾಯಿ (42) ಎಂಬುವವರು (Death) ಮೃತಪಟ್ಟಿದ್ದಾರೆ.

ಕಳೆದ ಕೆಲವು ದಿನ​ಗ​ಳಿಂದ ಬಿಸಿ​ಲ​ಬೇ​ಗೆ​ಯಿಂದ ಕಂಗೆ​ಟ್ಟಿದ್ದ ಬೆಳಗಾವಿ, ವಿಜಯಪುರ, ಧಾರವಾಡ, ಗದಗ, ಹಾವೇರಿ, ವಿಜಯನಗರ, ಶಿವಮೊಗ್ಗ, ಕಲ​ಬು​ರ​ಗಿ​ಯಲ್ಲಿ ಸುಮಾರು ಅರ್ಧ, ಒಂದು ಗಂಟೆ​ಗಳ ಕಾಲ ಭಾರೀ ಗಾಳಿ​ಯೊಂದಿಗೆ ಮಳೆ ಸುರಿ​ದಿದೆ. ದಿಢೀರ್‌ ಮಳೆ​ಯಿಂದಾಗಿ ಕೆಲ​ಕಾಲ ಜನ​ಜೀ​ವನ ಅಸ್ತ​ವ್ಯ​ಸ್ತ​ಗೊಂಡಿ​ದೆ. ಕಲ​ಬು​ರಗಿ, ಬೆಳ​ಗಾವಿ ಸೇರಿ​ದಂತೆ ಕೆಲ ಜಿಲ್ಲೆ​ಗ​ಳಲ್ಲಿ ಮಳೆ-ಗಾಳಿಗೆ 20ಕ್ಕೂ ಹೆಚ್ಚು ಮನೆ​ಗ​ಳಿಗೆ ಹಾನಿ​ಯಾ​ಗಿ​ದೆ.

ಅಕಾಲಿಕ ಮಳೆಗೆ ಮೂಲ ಕಾರವೇನು?

ಭಾರೀ ಹಾನಿ: ಕಲ​ಬು​ರ​ಗಿ​ಯ ಅಫ​ಜ​ಲ್ಪುರ, ಚಿಂಚೋಳಿ, ಶಹಾ​ಬಾದ್‌, ಜೇವ​ರ್ಗಿ​ಯಲ್ಲಿ ಸೋಮ​ವಾರ ರಾತ್ರಿ ಕೆಲ​ಕಾಲ ಸುರಿದ ಬಿರುಗಾಳಿ ಸಹಿತ ಮಳೆ​ಯಾಗಿ​ದೆ. ಅಫಜಲ್ಪುರ ತಾಲೂಕಿನ ಕೆಕ್ಕರಸಾವಳಗಿ ಗ್ರಾಮದಲ್ಲಿ 10ಕ್ಕೂ ಹೆಚ್ಚು ಮನೆಗಳಿಗೆ ಹಾನಿ​ಯಾ​ಗಿ​ದ್ದು, ಧವಸ ಧಾನ್ಯಗಳು, ಬಟ್ಟೆ, ಮನೆಯ ಸಾಮಗ್ರಿಗಳು ನಾಶವಾಗಿವೆ. ಮನೆ​ಯೊಂದರ ಮೇಲೆ ವಿದ್ಯುತ್‌ ಕಂಬ ಮುರಿದು ಬಿದ್ದಿದ್ದು, ಅದೃಷ್ಟವಶಾತ್‌ ಮನೆ​ಯ​ಲ್ಲಿದ್ದ ಎಲ್ಲರೂ ಪ್ರಾಣಾ​ಪಾ​ಯ​ದಿಂದ ಪಾರಾ​ಗಿ​ದ್ದಾರೆ.

ಇನ್ನು ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಅಳಗವಾಡಿ ಗ್ರಾಮದಲ್ಲಿ ಭಾರೀ ಗಾಳಿಗೆ ನಾಲ್ಕಕ್ಕೂ ಹೆಚ್ಚಿನ ಮನೆಗಳ ತಗಡಿನ ಚಾವಣಿ ಹಾರಿಹೋಗಿದ್ದು, ಈ ವೇಳೆ 12 ವರ್ಷದ ಬಾಲಕ ವಿಠ್ಠಲ್‌ ಗಾಯಗೊಂಡಿದ್ದಾನೆ. ಹಾವೇರಿ ಜಿಲ್ಲೆಯ ಹಲವೆಡೆ ಮಳೆ ಗಾಳಿಗೆ ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ. ಗುತ್ತಲ ಹಾವೇರಿ ರಸ್ತೆಯಲ್ಲಿ ಮರ ಬಿದ್ದು ಮೂರು ವಾಹನ ಜಖಂಗೊಂಡಿವೆæ. ಶಿವಮೊಗ್ಗ ಜಿಲ್ಲೆಯ ಹೊಸನಗರ, ತೀರ್ಥಹಳ್ಳಿ ಹಾಗೂ ಸಾಗರ ತಾಲೂಕಿನ ಕೆಲವೆಡೆಯೂ ಭಾನು​ವಾರ ಸಾಧಾ​ರಣ ಮಳೆ​ಯಾದ ವರ​ದಿ​ಯಾ​ಗಿ​ದೆ.

ಕರಾವಳಿ, ದಕ್ಷಿಣ ಒಳನಾಡಿನಲ್ಲಿ ಏ.9ರವರೆಗೆ ಮಳೆ ಮುನ್ಸೂಚನೆ: ಪಶ್ಚಿಮ ವಿದರ್ಭದಿಂದ ತಮಿಳುನಾಡಿನ ಉತ್ತರ ಒಳನಾಡಿನ ತನಕ ಹಬ್ಬಿರುವ ಟ್ರಫ್‌ ಕಾರಣ, ರಾಜ್ಯದ ಕರಾವಳಿ ಮತ್ತು ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಮುಂದಿನ ನಾಲ್ಕು ದಿನಗಳ ಕಾಲ ಮಳೆಯಾಗಲಿದೆ.

ಕರಾವಳಿಯಲ್ಲಿ ಏ.9ರವರೆಗೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಗಳಿವೆ. ದಕ್ಷಿಣ ಒಳನಾಡಿನ ಪಶ್ಚಿಮ ಘಟ್ಟದ ತಪ್ಪಲಿನ ಜಿಲ್ಲೆಗಳಾದ ಚಿಕ್ಕಮಗಳೂರು, ಶಿವಮೊಗ್ಗ, ಹಾಸನ, ಕೊಡಗು ಮತ್ತು ದಾವಣಗೆರೆ ಜಿಲ್ಲೆಯಲ್ಲಿ ಏಪ್ರಿಲ್‌ 8ರವರೆಗೆ ಮಳೆಯಾಗಲಿದೆ. ಏ.9ಕ್ಕೆ ಮೈಸೂರು, ಮಂಡ್ಯ, ಚಾಮರಾಜನಗರ, ಚಿತ್ರದುರ್ಗ, ದಾವಣಗೆರೆ ಜಿಲ್ಲೆಯಲ್ಲಿಯೂ ಗುಡುಗು ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಉತ್ತರ ಒಳನಾಡಿನಲ್ಲಿ ಬುಧವಾರದಂದು ಬೆಳಗಾವಿ, ಧಾರವಾಡ, ಹಾವೇರಿ, ಬಾಗಲಕೋಟೆ, ಗದಗ, ಕೊಪ್ಪಳ ಮತ್ತು ಕಲಬುರಗಿಯ ಜಿಲ್ಲೆಯ ಒಂದೆರಡು ಕಡೆ ಗುಡುಗು ಸಹಿತ ಮಳೆಯಾಗುವ ನಿರೀಕ್ಷೆಯಿದೆ. ಆ ಬಳಿಕದ ಮೂರು ದಿನ ಒಣ ಹವೆ ಮುಂದುವರಿಯಲಿದೆ.

ಕಲಬುರಗಿಯಲ್ಲಿ ಅತ್ಯಧಿಕ 41 ಡಿಗ್ರಿ ತಾಪ: ಬೆಂಗಳೂರು: ರಾಜ್ಯದಲ್ಲಿ ತಾಪಮಾನ ದಿನೇ ದಿನೇ ಹೆಚ್ಚುತ್ತಿದೆ. ಕಲಬುರಗಿಯಲ್ಲಿ ರಾಜ್ಯದಲ್ಲೇ ಗರಿಷ್ಠ 40.7 ಡಿಗ್ರಿ ಸೆಲ್ಸಿಯಸ್‌ ಉಷ್ಣತೆ ದಾಖಲಾಗಿದೆ. ಬೀದರ್‌, ಕಲಬುರಗಿ, ರಾಯಚೂರು, ಯಾದಗಿರಿ, ವಿಜಯಪುರ, ಗದಗ, ಧಾರವಾಡ ಜಿಲ್ಲೆಯಲ್ಲಿ 40 ಡಿಗ್ರಿ ಸೆಲ್ಸಿಯಸ್‌ ಮೀರಿ ತಾಪಮಾನ ದಾಖಲಾಗಿದೆ. ಒಟ್ಟಾರೆ ರಾಜ್ಯದ ಶೇ. 73ರಷ್ಟುಭೂಭಾಗದಲ್ಲಿ 36 ಡಿಗ್ರಿ ಸೆಲ್ಸಿಯಸ್‌ ನಿಂದ 38 ಡಿಗ್ರಿ ಸೆಲ್ಸಿಯಸ್‌ ಉಷ್ಣತೆ ದಾಖಲಾಗಿರುವ ವರದಿಯಾಗಿದೆ.