Weather Forecast: ಕರ್ನಾಟಕದಲ್ಲಿ ಅಕಾಲಿಕ ಮಳೆ, ಎಲ್ಲೆಲ್ಲಿ ಸುರಿಯಲಿದ್ದಾನೆ ಮಳೆರಾಯ?
* ವಿಜಯಪುರದ ಅಡವಿ ಸಂಗಾಪುರದಲ್ಲಿ ಆಲಿಕಲ್ಲು ಮಳೆ
* ಬೆಳಗಾವಿಯಲ್ಲಿ ಬಿರುಗಾಳಿಗೆ ಹಾರಿಹೋದ ತಗಡಿನ ಚಾವಣಿ
* ಗಾಳಿ ಮಳೆಗೆ ಕೃಷಿ, ಮೆಸ್ಕಾಂಗೆ ನಷ್ಟ
ಬೆಂಗಳೂರು(ಏ.05): ಬೆಳಗಾವಿ, ವಿಜಯಪುರ, ಧಾರವಾಡ, ಶೃಂಗೇರಿ ಸೇರಿ ಸೋಮವಾರ ಹಲವೆಡೆ ಅಕಾಲಿಕ ಮಳೆಯಾಗಿದ್ದು, ಹಾನಿ ಸಂಭವಿಸಿದೆ. ವಿಜಯಪುರ ಜಿಲ್ಲೆ ಬಬಲೇಶ್ವರ ತಾಲೂಕಿನ ಅಡವಿ ಸಂಗಾಪುರದಲ್ಲಿ ಭಾರಿ ಗಾಳಿ ಜತೆಗೆ ಆಲಿಕಲ್ಲು ಮಳೆಯಾಗಿದ್ದು, ಸುಮಾರು ಅರ್ಧ ಗಂಟೆವರೆಗೆ ಮಳೆಯಾಗಿದೆ(Rain). ಪರಿಣಾಮ ಒಣ ದ್ರಾಕ್ಷಿ ಮಾಡಲೆಂದು ಶೆಡ್‌ನಲ್ಲಿ ಇಟ್ಟಿದ್ದ ಅಪಾರ ಪ್ರಮಾಣದ ದ್ರಾಕ್ಷಿ(Grape Crop)ಹಾನಿಗೀಡಾಗಿದೆ.
ಬಸವನ ಬಾಗೇವಾಡಿ ತಾಲೂಕಿನ ಕೆಲ ಕಡೆಗಳಲ್ಲೂ ಮಳೆಯಾಗಿದೆ. ಇನ್ನು ಬೆಳಗಾವಿ(Belagavi) ನಗರದ ಸುತ್ತಮುತ್ತ ಬಿರುಗಾಳಿ ಸಮೇತ ಮಳೆ ಸುರಿದಿದ್ದರಿಂದ ಪಂತಬಾಳೇಕುಂದ್ರಿ, ಕಣಬರ್ಗಿ ಮತ್ತಿತರ ಕಡೆಗಳಲ್ಲಿ ಮನೆಯ ಮೇಲೆ ಹಾಕಲಾಗಿದ್ದ ತಗಡಿನ ಚಾವಣಿ ಹಾರಿಹೋಗಿವೆ. ಪಂತಬಾಳೇಕುಂದ್ರಿಯಲ್ಲಿ ಚಾವಣಿ ಬಾಳೇಶಿ ಮಲಕಣ್ಣವರ ಎಂಬುವವರ ಕಾರಿನ ಮೇಲೆ ಬಿದ್ದು, ಕಾರಿನ ಗಾಜುಗಳು ಪುಡಿ ಪುಡಿಯಾಗಿವೆ. ತಾಲೂಕಿನ ಅಗಸಗಿ ಗ್ರಾಮದ ಬಳಿ ಶಿವಾಜಿ ಅಪ್ಪಯ್ಯ ಬಚ್ಚೆನಟ್ಟಿ ಎಂಬುವರಿಗೆ ಸೇರಿದ ಎರಡು ಮೇವಿನ ಬಣವೆಗಳು ಸಿಡಿಲು(Thunderbolt) ಬಡಿದು ಬೆಂಕಿಗಾಹುತಿಯಾಗಿವೆ.
ಚಿಕ್ಕಮಗಳೂರಲ್ಲಿ ಮಳೆ: ವರುಣನ ಆರ್ಭಟಕ್ಕೆ ಹಲವೆಡೆ ಭಾರೀ ಅನಾಹುತ
ಶೃಂಗೇರಿ ತಾಲೂಕಿನ ವಿವಿಧೆಡೆ ಗುಡುಗು ಸಹಿತ ಸಾಧಾರಣ ಮಳೆಯಾಗಿದೆ. ತಾಲೂಕಿನಾದ್ಯಂತ ಕಳೆದ ಒಂದು ವಾರದಿಂದ ಉತ್ತಮ ಮಳೆಯಾಗುತ್ತಿದ್ದು, ಅಡಕೆ, ಕಾಫಿತೋಟಗಳಿಗೆ ಮಳೆಯಿಂದ ಅನುಕೂಲವಾಗಿದೆ. ಧಾರವಾಡ ನಗರ ಹಾಗೂ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳಲ್ಲಿ ಸಾಯಂಕಾಲ ತುಂತುರು ಮಳೆಯಾಗಿದ್ದು, ಜೋರಾದ ಗಾಳಿ ಇತ್ತು. ಆದರೆ ಯಾವುದೇ ಹಾನಿಯಾದ ಬಗ್ಗೆ ವರದಿಯಾಗಿಲ್ಲ.
ಬೆಳ್ತಂಗಡಿ: ಗಾಳಿ ಮಳೆಗೆ ಕೃಷಿ, ಮೆಸ್ಕಾಂಗೆ ನಷ್ಟ
ಬೆಳ್ತಂಗಡಿ: ತಾಲೂಕಿನ ನಾನಾ ಕಡೆ ಭಾನುವಾರ ರಾತ್ರಿ ಮಳೆಯ ಜತೆಗೆ ಬೀಸಿದ ಗಾಳಿಗೆ ಕೃಷಿ(Agriculture) ಹಾನಿ ಹಾಗೂ ಮೆಸ್ಕಾಂಗೆ ಭಾರಿ ನಷ್ಟಸಂಭವಿಸಿದೆ. ಭಾನುವಾರ ಸಂಜೆಯಿಂದ ರಾತ್ರಿಯ ತನಕ ಸುರಿದ ಗಾಳಿ ಮಳೆಗೆ ನಡ, ಕನ್ಯಾಡಿ1, ಗುರಿಪಳ್ಳ, ಕಲ್ಮಂಜ, ಮುಂಡಾಜೆ ಸೇರಿದಂತೆ ಹಲವೆಡೆ ಅಡಕೆ, ರಬ್ಬರ್ ಗಿಡಗಳು ಮುರಿದು ಬಿದ್ದಿವೆ. ತೋಟ, ರಸ್ತೆ, ವಿದ್ಯುತ್ ಲೈನ್‌ಗಳ ಮೇಲೆ ಕೂಡ ಮರಗಳು ಉರುಳಿ ಬಿದ್ದಿವೆ.
ಧರೆಗುರುಳಿದ ವಿದ್ಯುತ್ ಕಂಬಗಳು
ಉಜಿರೆ ಮೆಸ್ಕಾಂ(MESCOM) ಉಪ ವಿಭಾಗ ವ್ಯಾಪ್ತಿಯಲ್ಲಿ 9 ಎಚ್.ಟಿ. ಹಾಗೂ 12 ಎಲ….ಟಿ. ಕಂಬಗಳು ಗಾಳಿಗೆ ಮುರಿದು ಇಲಾಖೆಗೆ 5 ಲಕ್ಷ ರು.ಗಿಂತ ಅಧಿಕ ನಷ್ಟ ಉಂಟಾಗಿದೆ. ಗುರಿಪಳ್ಳ ಸಮೀಪ ಮರವೊಂದು ಲೈನ್ ಮೇಲೆ ಉರುಳಿ 6 ವಿದ್ಯುತ್ ಕಂಬಗಳು ಸಾಲು ಸಾಲು ಮುರಿದಿವೆ. ಇದರಿಂದ ಇಂದಬೆಟ್ಟು ರಸ್ತೆ ಸಂಚಾರಕ್ಕೆ ವ್ಯತ್ಯಯ ಉಂಟಾಯಿತು. ಸ್ಥಳೀಯರು ಹಾಗೂ ಮೆಸ್ಕಾಂ ಸಕಾಲಿಕವಾಗಿ ಸ್ಪಂದಿಸಿ ರಾತ್ರಿಯೇ ವಾಹನ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಿಕೊಟ್ಟರು.
ವಿದ್ಯಾರ್ಥಿಗಳಿಗೆ ಸಮಸ್ಯೆ
ಎಸ್ಸೆಸ್ಸೆಲ್ಸಿ ಸಹಿತ ಹಲವು ತರಗತಿಗಳಿಗೆ ಅಂತಿಮ ಪರೀಕ್ಷೆಗಳು ನಡೆಯುತ್ತಿದ್ದು, ವಿದ್ಯುತ್ ಕೈಕೊಟ್ಟಕಾರಣ ಗ್ರಾಮೀಣ ಭಾಗದ ಮಕ್ಕಳು ಚಿಮಿಣಿ ದೀಪದ ಬೆಳಕಿನಲ್ಲಿ ಅಭ್ಯಾಸ ನಡೆಸುವುದು ಅನಿವಾರ್ಯವಾಯಿತು. ಕೆಲವೆಡೆ ಸೋಮವಾರ ಮಧ್ಯಾಹ್ನದ ಹೊತ್ತಿಗೆ ವಿದ್ಯುತ್ ಪ್ರತ್ಯಕ್ಷವಾಯಿತು. ಆದರೂ ಹಲವು ಭಾಗಗಳಲ್ಲಿ ದುರಸ್ತಿ ಕಾಮಗಾರಿ ಪ್ರಗತಿಯಲ್ಲಿದ್ದು, ಸೋಮವಾರ ರಾತ್ರಿವರೆಗೂ ವಿದ್ಯುತ್ ಪೂರೈಕೆಯಾಗಿಲ್ಲ.
ಬಿಸಿಲಿನಲ್ಲಿ ನರಳಿದ್ದ ಬೆಂಗ್ಳೂರಲ್ಲಿ ತಂಪೆರೆದ ವರುಣ: ಇಂದೂ ಕೂಡ ಗುಡುಗು ಸಹಿತ ಮಳೆ
ಶೃಂಗೇರಿ: ಸಾಧಾರಣ ಮಳೆ
ಶೃಂಗೇರಿ: ತಾಲೂಕಿನ ವಿವಿಧೆಡೆ ಸೋಮವಾರ ಗುಡುಗುಸಹಿತ ಸಾಧಾರಣ ಮಳೆಯಾಗಿದೆ. ಬೆಳಗ್ಗೆಯಿಂದಲೇ ಮೋಡ ಕವಿದ ವಾತಾವರಣವಿದೆ. ಮಧ್ಯಾಹ್ನದ ವೇಳೆಯಲ್ಲಿ ಗುಡುಗು ಸಿಡಿಲಿನ ಆರ್ಭಟ ಆರಂಭಗೊಂಡಿತು. ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶದ ಕೆಲವೆಡೆ ಸಾದಾರಣ ಮಳೆಬಿದ್ದಿತು.
ಶನಿವಾರ ಸಂಜೆ ಪಟ್ಟಣದಲ್ಲಿ ಗುಡುಗು ಸಿಡಿಲುಸಹಿತ ಕೆಲಹೊತ್ತು ಭಾರಿ ಮಳೆ ಸುರಿಯಿತು. ಕೆರೆಕಟ್ಟೆ, ಮೆಣಸೆ, ಕಿಗ್ಗಾ ಸುತ್ತಮುತ್ತಲ ಪ್ರದೇಶಗಳಲ್ಲಿಯೂ ಭಾರಿ ಮಳೆ ಸುರಿದಿತ್ತು. ರಾತ್ರಿ ಮತ್ತೆ ಶೃಂಗೇರಿ ಸುತ್ತಮುತ್ತ ಧಾರಾಕಾರ ಮಳೆ ಸುರಿದಿತ್ತು. ತಾಲೂಕಿನಾದ್ಯಂತ ಕಳೆದ ಒಂದು ವಾರದಿಂದ ಉತ್ತಮ ಮಳೆಯಾಗುತ್ತಿದೆ. ಅಡಕೆ, ಕಾಫಿತೋಟಗಳಿಗೆ ಮಳೆಯಿಂದ ಉತ್ತಮ ಅನುಕೂಲವಾಗಿದೆ. ಕಳೆದ ಕೆಲದಿನಗಳಿಂದ ಪ್ರತಿದಿನ ಮಧ್ಯಾಹ್ನ ಗುಡುಗು ಸಿಡಿಲಿನ ಆರ್ಭಟ, ಮಳೆ ನಿರಂತರವಾಗಿದೆ.