Asianet Suvarna News Asianet Suvarna News

ಯಾದಗಿರಿ: ಕುಡಿಯಲು ಯೋಗ್ಯವಲ್ಲದ ನೀರು ಸರಬರಾಜು

ಹೆಬ್ಬಾಳ ಗ್ರಾಪಂ ವ್ಯಾಪ್ತಿಗೊಳಪಡುವ ಬೈಲಾಪೂರ ತಾಂಡಾದಲ್ಲಿ ಸುಮಾರು 2 ಸಾವಿರ ಜನರು ವಾಸವಾಗಿದ್ದು, ಇಲ್ಲಿನ ನಿವಾಸಿಗಳಿಗೆ ಶುದ್ಧ ಕುಡಿಯುವ ನೀರು ಇಲ್ಲದೇ ಜನರ ಆರೋಗ್ಯದ ಮೇಲೆ ಹಲವಾರು ಪರಿಣಾಮ ಬೀರಿ ಕಲುಷಿತ ನೀರಿನ ಸೇವನೆಯಿಂದ ವರ್ಷದುದ್ದಕ್ಕೂ ಒಂದಲ್ಲ ಒಂದು ರೋಗ ಇಡೀ ತಾಂಡಾಕ್ಕೆ ಕಾಡುತ್ತಿದೆ. 

Non Potable Water Supply at Hunasagi in Yadgir grg
Author
First Published Jun 7, 2023, 9:58 PM IST

ಬಸವರಾಜ ಎಂ. ಕಟ್ಟಿಮನಿ

ಹುಣಸಗಿ(ಜೂ.07):  ಸರಕಾರ ಶುದ್ಧ ಕುಡಿವ ನೀರಿಗಾಗಿ ಸಾಕಷ್ಟು ದುಡ್ಡು ಖರ್ಚು ಮಾಡಿ ವಿವಿಧ ಯೋಜನೆಗಳನ್ನು ಜಾರಿಗೆ ತಂದರೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಹಳ್ಳಿ ಹಾಗೂ ತಾಂಡಾಗಳಲ್ಲಿ ಇನ್ನು ಶುದ್ಧ ಕುಡಿವ ನೀರಿನಿಂದ ವಂಚಿತರಾಗಿರುವುದಕ್ಕೆ ತಾಲೂಕಿನ ಬೈಲಾಪೂರ ತಾಂಡಾವೇ ಸಾಕ್ಷಿಯಾಗಿದೆ.

ಹೆಬ್ಬಾಳ ಗ್ರಾಪಂ ವ್ಯಾಪ್ತಿಗೊಳಪಡುವ ಬೈಲಾಪೂರ ತಾಂಡಾದಲ್ಲಿ ಸುಮಾರು 2 ಸಾವಿರ ಜನರು ವಾಸವಾಗಿದ್ದು, ಇಲ್ಲಿನ ನಿವಾಸಿಗಳಿಗೆ ಶುದ್ಧ ಕುಡಿಯುವ ನೀರು ಇಲ್ಲದೇ ಜನರ ಆರೋಗ್ಯದ ಮೇಲೆ ಹಲವಾರು ಪರಿಣಾಮ ಬೀರಿ ಕಲುಷಿತ ನೀರಿನ ಸೇವನೆಯಿಂದ ವರ್ಷದುದ್ದಕ್ಕೂ ಒಂದಲ್ಲ ಒಂದು ರೋಗ ಇಡೀ ತಾಂಡಾಕ್ಕೆ ಕಾಡುತ್ತಿದೆ. ವರ್ಷದ 365 ದಿನವು ಜ್ವರ, ಶೀತ, ಕೆಮ್ಮು, ಮೈಕೈ ನೋವು ಸೇರಿದಂತೆ ಇನ್ನಿತರ ರೋಗಗಳು ತಾಂಡಾದ ಜನರನ್ನು ಹೈರಾಣಾಗಿಸಿ ದುಡಿದ ದುಡ್ಡು ಆಸ್ಪತ್ರೆಯ ಪಾಲಾಗುತ್ತಿದೆ.

ಯಾದಗಿರಿಯಲ್ಲಿ ಭೀಕರ ರಸ್ತೆ ಅಪಘಾತ: 13 ಜನರಿಗೆ ಗಾಯ, 5 ಮಂದಿ ಸಾವು

ಸಮಸ್ಯೆ ಬಗ್ಗೆ ಗ್ರಾಪಂ ಅಧಿಕಾರಿಗಳಿಗೆ ಸಾಕಷ್ಟುಬಾರಿ ಮನವಿ ಮಾಡಿಕೊಂಡರೂ ಪ್ರಯೋಜನವಾಗಿಲ್ಲ ಎಂದು ಬೈಲಾಪೂರ ತಾಂಡಾದ ಸಾಮಾಜಿಕ ಹೋರಾಟಗಾರ ಗುರುಲಿಂಗಪ್ಪ ಜಾಧವ ಆರೋಪಿಸಿದ್ದಾರೆ.

ಪ್ರಯೋಗಾಲಯ ವರದಿಯಿಂದ ದೃಢ:

ಕಳೆದ ಕೆಲ ದಿನಗಳಿಂದ ತಾಂಡಾದಲ್ಲಿ ಚಿಕೂನ್‌ ಗುನ್ಯಾ ಸೇರಿದಂತೆ ಇನ್ನಿತರ ಕಾಯಿಲೆಗಳಿಂದ ನೂರಾರು ಜನರು ಬಳಲುತ್ತಿರುವ ಸಂದರ್ಭದಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳ ತಂಡ ಭೇಟಿ ನೀಡಿ ಒಂದೇ ಸ್ಥಳದಲ್ಲಿರುವ 2 ಬೋರವೆಲ್‌ಗಳ ನೀರನ್ನು ಪ್ರಯೋಗ ಶಾಲಾ ತಾಂತ್ರಿಕ ಅಧಿಕಾರಿಗಳಿಗೆ ನೀರಿನ ಮಾದರಿ ನೀಡಿ ತಪಾಸಣೆ ಒಳಪಡಿಸಲಾಗಿತ್ತು. ತಪಾಸಣೆಗೆ ಕಳುಹಿಸಿದ 2 ಬೋರವೆಲ್‌ಗಳಲ್ಲಿ 1 ಬೋರವೆಲ್‌ ನೀರು ಕುಡಿಯಲು ಯೋಗ್ಯವಲ್ಲವೆಂದು ವರದಿಯಿಂದ ದೃಢಪಟ್ಟಿದೆ.

ಆ ಬಳಿಕ ಆರೋಗ್ಯ ಇಲಾಖೆ ಅಧಿಕಾರಿಗಳು ತಾಲೂಕು ಪಂಚಾಯ್ತಿ ಅಧಿಕಾರಿಗಳಿಗೆ ಮಾಹಿತಿ ನೀಡಿ ಯೋಗ್ಯವಲ್ಲದ ನೀರು ಸರಬರಾಜು ಮಾಡದಿರಲು ಸೂಚಿಸಲಾಗಿತ್ತು. ನಂತರದ ಕೆಲವು ದಿನಗಳಿಂದ ಯೋಗ್ಯವಲ್ಲದ ನೀರನ್ನು ಗ್ರಾಪಂಯಿಂದ ನೀರಿನ ಸರಬರಾಜು ಸ್ಥಗಿತಗೊಳಿಸಲಾಗಿತ್ತು. 2 ಸಾವಿರ ಜನರು ವಾಸವಿರುವ ತಾಂಡಾಕ್ಕೆ 1 ಬೋರವೆಲ್‌ನ ನೀರು ಬೇಡಿಕೆಗೆ ಅನುಗುಣವಾಗಿ ಸರಬರಾಜು ಆಗದಿರುವುದರಿಂದ ಕುಡಿಯಲು ಯೋಗ್ಯವಲ್ಲದ ಬೋರವೆಲ್‌ನಿಂದ ನೀರು ಸರಬರಾಜು ಮಾಡಲಾಗುತ್ತಿದೆ ಎಂದು ತಾಂಡಾದ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಿಷ್ಕ್ರೀಯಗೊಂಡ ಶುದ್ಧ ಕುಡಿವ ನೀರು ಘಟಕ:

ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕವು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯಿಂದ 2020-21ನೇ ಸಾಲಿನಲ್ಲಿ ಲಕ್ಷಾಂತರ ರು.ಗಳ ಖರ್ಚು ಮಾಡಿ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣ ಮಾಡಲಾಗಿತ್ತು. ಆದರೆ, ಘಟಕದ ನಿರ್ವಹಣೆ ಕೊರತೆಯಿಂದಾಗಿ ಸ್ಥಗಿತಗೊಂಡು ಯಂತ್ರೋಪಕರಣಗಳು ತುಕ್ಕು ಹಿಡಿದು ಕರಗುತ್ತಿವೆ. ಸರಕಾರದ ಲಕ್ಷಾಂತರ ಹಣ ಯಾವುದೇ ಪ್ರಯೋಜನಕ್ಕೆ ಬಾರದೆ ವ್ಯರ್ಥವಾಗಿದೆ.

ಶುದ್ಧ ಕುಡಿವ ನೀರು ಒದಗಿಸಲು ಆಗ್ರಹ:

ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ತಾಂಡಾದಲ್ಲಿರುವ 2 ಬೋರವೆಲ್‌ನ ನೀರನ್ನು ಇನ್ನೊಮ್ಮೆ ನೀರಿನ ಮಾದರಿ ಪರೀಕ್ಷಿಸಿ ಶುದ್ಧ ಕುಡಿಯುವ ನೀರು ಸರಬರಾಜು ಮಾಡಬೇಕು. ಇಲ್ಲವಾದರೆ ತಾಂಡಾದ ಸುತ್ತಮುತ್ತ ಹೆಚ್ಚುವರಿ ಬೋರ್‌ಗಳನ್ನು ಕೊರೆಯಿಸಿ ತಾಂಡಾದ ನಿವಾಸಿಗಳಿಗೆ ಶುದ್ಧ ಕುಡಿಯುವ ನೀರು ಸರಬರಾಜು ಮಾಡಬೇಕೆಂದು ವಿಜಯಾನಂದ್‌ ಚವ್ಹಾಣ್‌ ಒತ್ತಾಯಿಸಿದ್ದಾರೆ.

ಸಂಸದ ಕಟೀಲ್‌ಗೆ ಅಧ್ಯಕ್ಷ ಸ್ಥಾನ ನೀಡಿದ್ದರಿಂದಲೇ ಬಿಜೆಪಿ ನಾಶ: ಸಚಿವ ದರ್ಶನಾಪೂರ್‌

ಬೈಲಾಪೂರ ತಾಂಡಾದಲ್ಲಿ 1 ಬೋರವೆಲ್‌ ನೀರು ಕುಡಿಯಲು ಯೋಗ್ಯವಲ್ಲದ ನೀರು ಎಂದು ವರದಿಯಿಂದ ದೃಢಪಟ್ಟನಂತರ ನೀರು ಸರಬರಾಜು ಮಾಡದಿರಲು ಗ್ರಾಪಂ ಅಧಿಕಾರಿಗಳಿಗೆ ಸೂಚನೆ ನೀಡಲಾಗಿತ್ತು. ಒಂದು ವೇಳೆ ಕುಡಿಯಲು ಯೋಗ್ಯವಲ್ಲದ ನೀರು ಸರಬರಾಜು ಮಾಡುತ್ತಿದ್ದರೆ ತಕ್ಷಣದಿಂದ ಬಂದ್‌ ಮಾಡಿಸಲಾಗುತ್ತದೆ ಅಂತ ಹುಣಸಗಿ ತಾಪಂ ಇಒ ಮಲ್ಲಿಕಾರ್ಜುನ ಸಂಗವಾರ ಹೇಳಿದ್ದಾರೆ. 

ಬೈಲಾಪೂರ ತಾಂಡಾಕ್ಕೆ ಶಾಶ್ವತ ಕುಡಿಯುವ ನೀರು ಸರಬರಾಜು ಮಾಡಬೇಕು. ಇಲ್ಲಿನ ನಿವಾಸಿಗಳು ಶುದ್ಧ ಕುಡಿಯುವ ನೀರಿನಿಂದ ವಂಚಿತರಾಗಿ ಹಲವಾರು ರೋಗದಿಂದ ಬಳಲುತ್ತಿದ್ದಾರೆ. ಗ್ರಾಪಂ ಅಧಿಕಾರಿಗಳು ಹೊಸದಾಗಿ 2 ಅಥವಾ 3 ಬೋರವೆಲ್‌ ಕೊರೆಯಿಸಿ ತಾಂಡಾಕ್ಕೆ ಶುದ್ಧ ಕುಡಿಯುವ ನೀರು ಸರ¸ರಾಜು ಮಾಡಬೇಕು. ಇಲ್ಲಿರುವ ಜನರಿಗೆ ಕಲುಷಿತ ನೀರಿನಿಂದ ಏನಾದರು ಅನಾಹುತವಾದರೆ ಅದಕ್ಕೆ ಅಧಿಕಾರಿಗಳೇ ನೇರ ಹೊಣೆಯಾಗಿರುತ್ತಾರೆ ಅಂತ ಬೈಲಾಪೂರ ತಾಂಡಾದ ನಿವಾಸಿ, ಸಾಮಾಜಿಕ ಹೋರಾಟಗಾರ ಗುರುಲಿಂಗಪ್ಪ ಜಾಧವ ತಿಳಿಸಿದ್ದಾರೆ.  

Follow Us:
Download App:
  • android
  • ios