ಸಂಸದ ಕಟೀಲ್‌ಗೆ ಅಧ್ಯಕ್ಷ ಸ್ಥಾನ ನೀಡಿದ್ದರಿಂದಲೇ ಬಿಜೆಪಿ ನಾಶ: ಸಚಿವ ದರ್ಶನಾಪೂರ್
ರಾಜ್ಯದಲ್ಲಿ ಬಿಜೆಪಿಯ ರಾಜ್ಯಾಧ್ಯಕ್ಷ ಸ್ಥಾನವನ್ನು ನಳಿನ್ ಕುಮಾರ್ ಕಟೀಲ್‌ಗೆ ನೀಡಿದ್ದರಿಂದಲೆ ರಾಜ್ಯದಲ್ಲಿ ಬಿಜೆಪಿ ನಾಶವಾಗಲು ಕಾರಣವಾಗಿದೆ ಎಂದು ಸಣ್ಣ ಕೈಗಾರಿಕೆ ಸಚಿವ ಶರಣಬಸಪ್ಪಗೌಡ ದರ್ಶನಾಪೂರ್ ಆರೋಪಿಸಿದರು.
ಶಹಾಪುರ (ಜೂ.05): ರಾಜ್ಯದಲ್ಲಿ ಬಿಜೆಪಿಯ ರಾಜ್ಯಾಧ್ಯಕ್ಷ ಸ್ಥಾನವನ್ನು ನಳಿನ್ ಕುಮಾರ್ ಕಟೀಲ್‌ಗೆ ನೀಡಿದ್ದರಿಂದಲೆ ರಾಜ್ಯದಲ್ಲಿ ಬಿಜೆಪಿ ನಾಶವಾಗಲು ಕಾರಣವಾಗಿದೆ ಎಂದು ಸಣ್ಣ ಕೈಗಾರಿಕೆ ಸಚಿವ ಶರಣಬಸಪ್ಪಗೌಡ ದರ್ಶನಾಪೂರ್ ಆರೋಪಿಸಿದರು. ನಗರದ ಆರಬೋಳ ಕಲ್ಯಾಣ ಮಂಟಪದಲ್ಲಿ ನಡೆದ ಅಭಿನಂದನಾ ಸಮಾರಂಭ ಮುಗಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಳಿನ್ ಕುಮಾರ್ ಕಟೀಲ್‌ಗೆ ರಾಜ್ಯದ ಜಿಲ್ಲೆಗಳ ಬಗ್ಗೆ ಮಾಹಿತಿಯೆ ಸರಿಯಾಗಿ ಇಲ್ಲ. ಕಲ್ಯಾಣ ಕರ್ನಾಟಕ ಭಾಗಕ್ಕೆ ಬಂದಾಗ ಇಲ್ಲಿನ ಜಿಲ್ಲೆಗಳ ಬಗ್ಗೆ ಅರಿವೇ ಇರಲಿಲ್ಲ. ಹಾಗೆಂದ ಮೇಲೆ ಗ್ಯಾರಂಟಿಗಳ ಬಗ್ಗೆ ಮಾಹಿತಿ ಹೇಗೆ ಇರಲು ಸಾಧ್ಯ.
ಗ್ಯಾರಂಟಿಗಳ ಘೋಷಣೆ ಬಗ್ಗೆ ಕಟೀಲ್ ಅವರು ತಿಳುವಳಿಕೆ ಇಲ್ಲದೆ ಮಾತನಾಡುತ್ತಿದ್ದಾರೆ. ಅವರಿಗೆ ಕನ್ನಡ ಬರುತ್ತದೆಯೋ ಇಲ್ಲವೋ ಗೊತ್ತಿಲ್ಲ. ಸ್ಪಷ್ಟವಾಗಿ ಕನ್ನಡದಲ್ಲಿ ಇರುವ ಗ್ಯಾರಂಟಿಗಳನ್ನು ಓದಿಕೊಂಡು ಮಾತನಾಡಲಿ ಎಂದು ಕಟೀಲ್ ಅವರನ್ನು ತರಾಟೆಗೆ ತೆಗೆದುಕೊಂಡರು. ರಾಜ್ಯದಲ್ಲಿ ಗ್ಯಾರಂಟಿಗಳನ್ನು ಘೋಷಣೆ ಮಾಡಿದ್ದು, ಇದಕ್ಕೆ ಎಷ್ಟುಕೋಟಿ ಖರ್ಚಾಗಬಹುದು ಎನ್ನುವುದು ಕೂಡ ರಾಜ್ಯದಲ್ಲಿ 13, 14 ಬಜೆಟ್‌ಗಳನ್ನು ಮಂಡಿಸಿರೋ ಅನುಭವಿರುವ ಸಿಎಂ ಸಿದ್ದರಾಮಯ್ಯ, ಇಂಧನ ಸಚಿವರಾಗಿ ಕಾರ್ಯನಿರ್ವಹಿಸಿದ ಅನುಭವವಿರುವ ಡಿ.ಕೆ. ಶಿವಕುಮಾರ ಹಾಗೂ ಆರ್ಥಿಕ ತಜ್ಞರ ಸಲಹೆ ಪಡೆದು ಜಾರಿ ಮಾಡಲಾಗಿದೆ ಎಂದರು.
ಕಾಡು ಪ್ರಾಣಿಗಳ ದಾಳಿ ತಡೆಗೆ ಶಾಶ್ವತ ಪರಿಹಾರ ಕಲ್ಪಿಸಿ: ಎಚ್.ಡಿ.ಕುಮಾರಸ್ವಾಮಿ
ಇದಕ್ಕೆ ಬಜೆಟ್‌ನಲ್ಲಿ ಅನುದಾನದ ಕೊರತೆ ಇಲ್ಲ. ಭ್ರಷ್ಟಾಚಾರ ಇಲ್ಲದಂತೆ ಆಡಳಿತ ನಡೆಸಿದರೆ ಹಣಕಾಸಿನ ಕೊರತೆ ಇರುವುದಿಲ್ಲ. ಬಿಜೆಪಿಯವರಿಗೆ ಮಾಡಲು ಬೇರೆ ಕೆಲಸವಿಲ್ಲದೆ ಇದಕ್ಕೆ ಹಣ ಎಲ್ಲಿಂದ ತರುತ್ತಾರೆ. ರಾಜ್ಯ ದಿವಾಳಿಯತ್ತ ಸಾಗುತ್ತದೆ ಎನ್ನುವ ತಳ ಬುಡ ಇಲ್ಲದ ಮಾತುಗಳನ್ನು ಆಡುತ್ತಿದ್ದಾರೆ. ರಾಜ್ಯದ ಜನತೆ ಇವರ ಮಾತಿಗೆ ಕಿವಿ ಕೊಡುವುದಿಲ್ಲ. ಇದರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡವರೆಂದರೆ ಮಾಧ್ಯಮದವರು ಎಂದರು. ಇತ್ತೀಚೆಗೆ ನಗರದಲ್ಲಿ ಪಡಿತರ ಅಕ್ಕಿ ಸಮೇತ ಲಾರಿ ಕಳ್ಳತನವಾಗಿರುವ ಘಟನೆ ಕುರಿತು ವಿವರಗಳನ್ನು ಪಡೆದಿದ್ದೇನೆ. ಈಗ ತಾನೆ ಖಾಲಿ ಲಾರಿ ಸಿಕ್ಕಿದೆ ಎನ್ನುವ ಮಾಹಿತಿ ಬಂದಿದೆ.
ಗುಂಡ್ಲುಪೇಟೆಯನ್ನು ಮಾದರಿ ಕ್ಷೇತ್ರ ಮಾಡುವುದೇ ಗುರಿ: ಶಾಸಕ ಎಚ್.ಎಂ.ಗಣೇಶ್‌ಪ್ರಸಾದ್
ಆ ಅಕ್ಕಿ ಎಲ್ಲಿಗೆ ಹೋಯಿತು?, ಹೇಗಾಯಿತು? ಎನ್ನುವುದರ ಬಗ್ಗೆ ಪೊಲೀಸ್ ಅಧಿಕಾರಿಗಳ ಜೊತೆ ಮಾತನಾಡಿ, ತಕ್ಷಣ ಕಳ್ಳತನವಾಗಿರುವ ಅಕ್ಕಿ ಪತ್ತೆ ಮಾಡುವಂತೆ ಸೂಚನೆ ನೀಡಿದ್ದೇನೆ ಎಂದರು. ನಮ್ಮ ಜಿಲ್ಲೆಗೆ ಪ್ರಾಧಾನ್ಯತೆ ಕೊಟ್ಟು ಮಂತ್ರಿ ಸ್ಥಾನ ನೀಡಿದ್ದಾರೆ. ಅವರು ಯಾವ ಜಿಲ್ಲೆಗೆ ಉಸ್ತುವಾರಿ ಕೊಡುತ್ತಾರೋ ಅಲ್ಲಿ ನಿಷ್ಠೆಯಿಂದ ಕೆಲಸ ನಿರ್ವಹಿಸುತ್ತೇನೆ. ಜಿಲ್ಲಾ ಉಸ್ತುವಾರಿ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುವ ಸುದ್ದಿ ಸುಳ್ಳು. ಇನ್ನು ಯಾವುದು ಅಧಿಕೃತ ಆದೇಶ ಇಲ್ಲ. ಜಿಲ್ಲೆಯಲ್ಲಿ ಎಲ್ಲ ಕಾಂಗ್ರೆಸ್ ಶಾಸಕರು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಿ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಹೊತ್ತು ನೀಡುತ್ತೇವೆ ಎಂದರು.