ಚಾಲಕರಹಿತ ‘ನಮ್ಮ ಮೆಟ್ರೋ’ ನಿರ್ವಹಣೆಗೆ ಬೈಯಪ್ಪನಹಳ್ಳಿ ಡಿಪೋ ಬಳಿ ಹೊಸ ಕೇಂದ್ರ ನಿರ್ಮಾಣ
‘ನಮ್ಮ ಮೆಟ್ರೋ’ದ ಹೊಸ ಮಾರ್ಗಗಳು ಸೇರಿದಂತೆ ಚಾಲಕ ರಹಿತ ಮೆಟ್ರೋ ರೈಲುಗಳ ನಿರ್ವಹಣೆಗಾಗಿ ಬೈಯಪ್ಪನಹಳ್ಳಿಯಲ್ಲಿ ನೂತನ ‘ಕಾರ್ಯಾಚರಣೆ ನಿಯಂತ್ರಣ ಕೇಂದ್ರ’ (ಒಸಿಸಿ) ತಲೆ ಎತ್ತುತ್ತಿದೆ.
ಮಯೂರ್ ಹೆಗಡೆ
ಬೆಂಗಳೂರು (ಮೇ.28): ‘ನಮ್ಮ ಮೆಟ್ರೋ’ದ ಹೊಸ ಮಾರ್ಗಗಳು ಸೇರಿದಂತೆ ಚಾಲಕ ರಹಿತ ಮೆಟ್ರೋ ರೈಲುಗಳ ನಿರ್ವಹಣೆಗಾಗಿ ಬೈಯಪ್ಪನಹಳ್ಳಿಯಲ್ಲಿ ನೂತನ ‘ಕಾರ್ಯಾಚರಣೆ ನಿಯಂತ್ರಣ ಕೇಂದ್ರ’ (ಒಸಿಸಿ) ತಲೆ ಎತ್ತುತ್ತಿದೆ. ಮೆಟ್ರೋ ಆರಂಭಗೊಂಡ ಸುಮಾರು 12 ವರ್ಷಗಳಿಂದ ಬೆಂಗಳೂರು ಮೆಟ್ರೋ ರೈಲ್ವೇ ನಿಗಮ ಒಂದೇ ನಿರ್ವಹಣಾ ಕೇಂದ್ರದಿಂದ ರೈಲುಗಳನ್ನು ನಿಯಂತ್ರಿಸುತ್ತಿದೆ. ಈಗಿನ ನೇರಳೆ ಹಾಗೂ ಹಸಿರು ಮಾರ್ಗದ 57 ರೈಲುಗಳ ಸಂಚಾರವನ್ನು ಇಲ್ಲಿಂದ ನಿರ್ವಹಿಸಲಾಗುತ್ತಿದೆ. ಇದೀಗ ಚಾಲಕ ರಹಿತ ವ್ಯವಸ್ಥೆ ಅನುಷ್ಠಾನ ಆಗಲಿರುವ ಕಾರಣ ಬೈಯಪ್ಪನಹಳ್ಳಿಯ ಮೆಟ್ರೋದ ಡಿಪೋದಲ್ಲಿರುವ ದುರಸ್ತಿ ಕೇಂದ್ರದ ಹಿಂಭಾಗದಲ್ಲಿ ಹೊಸ ನಿರ್ವಹಣಾ ಕೇಂದ್ರ ನಿರ್ಮಾಣ ಮಾಡಲಾಗುತ್ತಿದೆ. ಜೊತೆಗೆ ಮೆಟ್ರೋದ ಮುಂಬರುವ ಗುಲಾಬಿ, ನೀಲಿ, ಹಳದಿ ಹೊಸ ಮಾರ್ಗಗಳ ನಿರ್ವಹಣೆಯಲ್ಲಿ ಈ ಕೇಂದ್ರ ಪ್ರಮುಖ ಪಾತ್ರವನ್ನು ವಹಿಸಲಿದೆ.
ಏನೇನು ವ್ಯವಸ್ಥೆ: 23 ಕೋಟಿ ಮೊತ್ತದಲ್ಲಿ ಈ ಕಟ್ಟಡ ನಿರ್ಮಾಣವಾಗುತ್ತಿದ್ದು, ನೆಲಮಹಡಿ ಸೇರಿ ಐದು ಮಹಡಿಗಳಿರಲಿವೆ. ಎರಡು ಮಹಡಿ ಪೂರ್ಣಗೊಂಡಿದೆ. ಡಿಸೆಂಬರ್ ವೇಳೆಗೆ ಸಿವಿಲ್ ಕಾಮಗಾರಿ ಪೂರ್ಣಗೊಳ್ಳಲಿದೆ. ಬಳಿಕ ಒಸಿಸಿ ಅನುಗುಣವಾಗಿ ಎಲೆಕ್ಟ್ರಿಕ್ ವ್ಯವಸ್ಥೆ ರೂಪುಗೊಳ್ಳಲಿದೆ. ಅತ್ಯಾಧುನಿಕ ತಂತ್ರಜ್ಞಾನದ ಮಾನಿಟರ್ ಸೆಟ್‌ಗಳು ಇಲ್ಲಿ ಸ್ಥಾಪಿತವಾಗಲಿವೆ. ಜೊತೆಗೆ ರೇಡಿಯೋ ಸಂವಹನ ಆಧಾರಿತ ನಿಯಂತ್ರಿತ ವ್ಯವಸ್ಥೆ, ಹೆಚ್ಚಿನ ಸಾಮರ್ಥ್ಯದ ಆಧುನಿಕ ಕ್ಯಾಮೆರಾ, ಭದ್ರತಾ ವ್ಯವಸ್ಥೆ ಇರಲಿದೆ. ರೈಲುಗಳ ನಿರ್ವಹಣೆ ಜೊತೆಗೆ ಇಲ್ಲಿ ಮೆಟ್ರೋದ ಕಂದಾಯ ವಿಭಾಗವೂ ಕಾರ್ಯ ನಿರ್ವಹಿಸಲಿದೆ.
ಮಾರ್ಗಗಳು: ಸುರಂಗ ಮಾರ್ಗವಾದ ರೀಚ್-5, ರೀಚ್-6 ಕಾಳೇನ ಅಗ್ರಹಾರ- ನಾಗವಾರ, ರೇಷ್ಮೆ ಕೇಂದ್ರದಿಂದ-ಕೆ.ಆರ್.ಪುರ, ಹಾಗೆಯೇ ಕೆ.ಆರ್.ಪುರ-ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಜೆಪಿ ನಗರ 4ನೇ ಹಂತದಿಂದ ಕೆಂಪಾಪುರ ಹಾಗೂ ಹೊಸಹಳ್ಳಿ ಮೆಟ್ರೋ ಮಾರ್ಗದ ನಿರ್ವಹಣೆಯನ್ನು ಹೊಸ ಕಾರ್ಯಾಚರಣೆ ನಿಯಂತ್ರಣ ಕೇಂದ್ರ ನಿಭಾಯಿಸಲಿದೆ.
ಚಾಲಕ ರಹಿತ ರೈಲು: ಮುಂದೆ ಭಾರತ್ ಅಥ್‌ರ್ ಮೂವರ್ಸ್ ಲಿಮಿಟೆಡ್ ಒದಗಿಸಲಿರುವ 318 ರೋಲಿಂಗ್ ಸ್ಟಾಕ್ (ಬೋಗಿಗಳು) ಹೊಸ ಮಾರ್ಗದಲ್ಲಿ ಬಳಕೆಯಾಗಲಿವೆ. ಇವುಗಳಲ್ಲಿ ಚಾಲಕ ರಹಿತ ರೈಲುಗಳು ಕೂಡ ಸೇರಿವೆ. ಗಂಟೆಗೆ 80 ಕಿ.ಮೀ. ವೇಗದಲ್ಲಿ ಓಡಲಿರುವ ಈ ರೈಲುಗಳು ಹಳಿಗಳ ವ್ಯವಸ್ಥೆ, ಎದುರಾಗುವ ತೊಂದರೆಗಳನ್ನು ಗುರುತಿಸಿಕೊಳ್ಳುವುದು, ಸ್ವಯಂಚಾಲಿತವಾಗಿ ಹಳಿ ಬದಲಾವಣೆ, ಸಮಯ ನಿಗದಿ ಸೇರಿ ಆಧುನಿಕ ತಂತ್ರಜ್ಞಾನ ವ್ಯವಸ್ಥೆಯನ್ನು ಹೊಸ ರೈಲು ಹೊಂದಿರಲಿದ್ದು, ಇದನ್ನು ಒಸಿಸಿ ನಿರ್ವಹಿಸಲಿದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ತಿಳಿಸಿದರು.
ಹಳದಿ ಮಾರ್ಗದ ಕಾರ್ಯಾಚರಣೆ: ಇನ್ನು, ಡಿಸೆಂಬರ್‌ನಲ್ಲಿ ಹಳದಿ ಮಾರ್ಗ ಆರ್.ವಿ.ರಸ್ತೆ-ಬೊಮ್ಮಸಂದ್ರ ಮಾರ್ಗ ಪ್ರಯಾಣಿಕರಿಗೆ ಮುಕ್ತಗೊಳಿಸಲು ಮೆಟ್ರೋ ಗುರಿ ಇಟ್ಟುಕೊಂಡಿದೆ. ಅಂದುಕೊಂಡಂತೆ ಆದರೆ, ಈ ಮಾರ್ಗದ ನಿರ್ವಹಣೆ ಕೂಡ ನೂತನ ಕಾರ್ಯಾಚರಣೆ ನಿಯಂತ್ರಣ ಕೇಂದ್ರದಿಂದಲೇ ಆಗಲಿದೆ ಎಂದು ಬಿಎಂಆರ್‌ಸಿಎಲ್ ಮೂಲಗಳು ತಿಳಿಸಿವೆ.
2 ಸಾವಿರ ನೋಟು ಸ್ವೀಕರಿಸಬೇಡಿ ಎಂದ ಬಿಎಂಟಿಸಿ: ಪ್ರಯಾಣಿಕರ ಆಕ್ರೋಶ
ನೂತನ ಆಪರೇಶನ್ ಕಂಟ್ರೋಲ್ ಸೆಂಟರ್‌ನಲ್ಲಿ ಚಾಲಕ ರಹಿತ ಮೆಟ್ರೋ ರೈಲುಗಳ ನಿರ್ವಹಣೆಗೆ ಪ್ರತ್ಯೇಕ ವಿಭಾಗ ಇರಲಿದೆ. ಮುಂದಿನ ಹೊಸ ಮಾರ್ಗಗಳ ಕಾರ್ಯಾಚರಣೆಗೆ ಅನುವಾದ ಬಳಿಕ ಈ ಕೇಂದ್ರ ಕಾರ್ಯಾರಂಭ ಮಾಡಲಿದೆ.
-ಯಶವಂತ ಚೌಹಾಣ್, ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ, ಮೆಟ್ರೋ