ಸಿದ್ದಯ್ಯ ಹಿರೇಮಠ 

ಕಾಗವಾಡ(ಡಿ.13): ಈರುಳ್ಳಿ ಬೆಲೆ ನೂರರ ಗಡಿ ದಾಟಿ ಕಣ್ಣೀರು ತರಿಸಿದೆ. ಹೋಟೆಲ್‌, ದಾಬಾ, ಖಾನಾವಳಿಗಳಲ್ಲಿ ಗ್ರಾಹಕರಿಗೆ ಈರುಳ್ಳಿ ನೀಡಲು ಹಿಂದೇಟು ಹಾಕುವಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಉತ್ತರ ಕರ್ನಾಟಕ ಹಾಗೂ ಪಶ್ಚಿಮ ಮಹಾರಾಷ್ಟ್ರದ ಪ್ರತಿಯೊಂದು ಹಳ್ಳಿಗಳ ಹೋಟೆಲ್‌ಗಳಲ್ಲಿ ಭಜಿ ಹಾಗೂ ಖಾರವಾದ ಬಡಂಗ್‌ ಫೇಮಸ್‌. ಇಂಥ ಖಾದ್ಯ ತಿನ್ನುವಾಗ ಉಳ್ಳಾಗಡ್ಡಿ ಬೇಕೇ ಬೇಕು. ಆದರೆ, ಏಕಾಏಕಿ ಬೆಲೆ ಏರಿಕೆಯಿಂದಾಗಿ ಹೋಟೆಲ್‌ಗಳಲ್ಲಿ ಭಜಿ ಬಂಡಂಗಳಲ್ಲಿ  ಈರುಳ್ಳಿ ಬದಲಾಗಿ ಕೋಬಿಜ್‌ ಪೀಸ್‌ಗಳನ್ನು ಕೊಡುತ್ತಿರುವ ಸ್ವಾರಸ್ಯಕರ ಸಂಗತಿಗಳಿಗೆ ಕಾರಣವಾಗಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಊಟಕ್ಕಿಂತ ಮುಂಚೆ ಉಪ್ಪಿನಕಾಯಿ ಎಂಬಂತೆ ಉತ್ತರ ಕರ್ನಾಟಕ ಹಾಗೂ ಪಶ್ವಿಮ ಮಹಾರಾಷ್ಟ್ರದ ಭಾಗದಲ್ಲಿ ಜನರಿಗೆ ಈರುಳ್ಳಿ ಎಂದರೆ ಪಂಚಪ್ರಾಣ. ಈರುಳ್ಳಿಗೆ ಈ ಭಾಗದಲ್ಲಿ ಉಳ್ಳಾಗಡ್ಡಿ(ಕಾಂದಾ) ಎಂದು ಜನಪ್ರೀಯತೆ ಹೊಂದಿದೆ. ಊಟ, ಉಪಹಾರಗಳಲ್ಲಿ ಈರುಳಿಯನ್ನು ಯಥೇಚ್ಚವಾಗಿ ಬಳಸುತ್ತಾರೆ. ಆದರೀಗ ವಿಚಾರ ಮಾಡುವಂತಾಗಿದೆ. ಒಮ್ಮೆಲೆ ಭಾರಿ ಪ್ರಮಾಣದ ಬೆಲೆ ಏರಿಕೆಯಿಂದ ಕಂಗಾಲಾಗಿರುವ ಗ್ರಾಹಕರು ಹಿಂಗಾದ್ರ ಹ್ಯಾಂಗ್‌.. ಬಾಳ ತ್ರಾಸ್‌ ಆಗತೈತಿ. ಉಳ್ಳಗಡ್ಡಿ ಒಂದು ಕೆಜಿಗೆ 125 ಕೊಡುದಾದ್ರ ಎಲ್ಲಿಂದ ತರೋದು ಎಂದು ಜನ ಗೊಣಗುವಂತಾಗಿದೆ.

ಉಳ್ಳಾಗಡ್ಡಿ ಇಲ್ಲಾರೀ:

ಮಿರ್ಚಿ, ಮಂಡಕ್ಕಿಯ ಖೋಕಾಗಳಲ್ಲಿ ಬಿಳಿಜೋಳ ರೊಟ್ಟಿಯ ಖಾನಾವಳಿಗಳಲ್ಲಿ, ಸವಿಯಲು ಉಳ್ಳಾಗಡ್ಡಿ ಇಷ್ಟಪಡುವವರ ಸಂಖ್ಯೆ ಹೆಚ್ಚಿದೆ. ಜವಾರಿ ಊಟಕ್ಕೆ ಈರುಳ್ಳಿ ಬೇಕೇ ಬೇಕು. ಆದ್ದರಿಂದ ಆದರೀಗ ಹೋಟೆಲ್‌, ದಾಬಾಗಳಲ್ಲಿ ಏ ವೇಟರ್‌ ಉಳ್ಳಾಗಡ್ಡಿ(ಕಾಂದಾ) ತುಗೊಂದ ಬಾರೋ ಎಂದು ಗ್ರಾಹಕರು ಕೇಳಿದರೆ ಇತ್ತ ನೋ ರಿಪ್ಲಾಯ್‌. ಗ್ರಾಹಕರು ಪದೇ ಪದೇ ಕೇಳಿದರೆ ಒಂದೆರಡು ಪೀಸು ನೀಡಿ ಕೈತೊಳೆದುಕೊಳ್ಳುತ್ತಿರುವುದೀಗ ಸಾಮಾನ್ಯವಾಗಿದೆ. ಈರುಳ್ಳಿ ಬದಲಿಗೆ ಸವತೆಕಾಯಿ, ಗಜ್ಜರಿ, ಹಾಗೂ ಕೋಬಿಜ್‌ ಮತ್ತಿತರ ತರಕಾತಿ ಹೋಟೆಲ್‌ಗಳಲ್ಲಿ ಬಳಸುತ್ತಿದ್ದಾರೆ.

20 ಪ್ಲೇಟ್‌ ಕಾಂದಾ:

ಅಂಡಾಕರಿ, ಎಗ್‌ರೈಸ್‌, ನಾನ್‌ವೆಜ್‌ ರಸ್ತೆಬದಿಯ ದಾಬಾಗಳಲ್ಲಿ ಈರುಳ್ಳಿ ಬಳಿಕೆ ಅತಿ ಹೆಚ್ಚಾಗುತ್ತದೆ. ಆದರೀಗ ಬಹಳ ವಿಚಾರ ಮಾಡುತ್ತಿರುವ ಮಾಲೀಕರು ಊಟದ ಪೇಟ್‌ ಜೊತೆ ಎರಡು ಪೀಸ್‌ ಉಳ್ಳಾಗಡ್ಡಿ ಹಾಗೂ ಲಿಂಬು ಇಡುತ್ತಿದ್ದಾರೆ. ಹೆಚ್ಚಿಗೆ ಬೇಕೆಂದರೆ 20 ಚಾರ್ಜ್ ಮಾಡುತ್ತಿದ್ದಾರೆ. ಇದರಿಂದ ಹೋಟೆಲ್‌ ಮಾಲೀಕರಿಗೂ ಹಾಗೂ ಗ್ರಾಹಕರ ಮಧ್ಯೆ ಆಗಾಗ ವಾಗ್ವಾದಗಳು ನಡೆಯುತ್ತಿವೆ. ಆಯ್ತು ಬಿಡಪ್ಪ ಎಂದು ಒಂದು ಪೇಟ್‌ ಎಕ್ಟ್ರಾ ಕಾಂದಾ ಕೊಡಪ್ಪ ಎನ್ನುವಂತಾಗಿದೆ ಗ್ರಾಹಕರ ಪರಿಸ್ಥಿತಿ. ಇನ್ನು ಹೋಟೆಲ್‌ ಮಾಲಿಕರು ಪ್ರತಿವಾರ ಖರೀದಿಸುತ್ತಿರುವ ಉಳ್ಳಾಗಡ್ಡಿಯಲ್ಲಿ ಭಾರಿ ಪ್ರಮಾಣದಲ್ಲಿ ಕಡಿಮೆಯಾಗಿದೆ ಎಂದು ಹೇಳುತ್ತಾರೆ. ಒಟ್ಟಾರೆ ಎಲ್ಲರಿಗೂ ಬೆಲೆ ಬಿಸಿ ಎಲ್ಲರಿಗೂ ತಟ್ಟಿದೆ.

ಜಲಾವೃತದಿಂದ ಈರುಳ್ಳಿ ಬೆಳೆ ಹಾನಿ:

ಈರುಳ್ಳಿಯನ್ನು ಹೆಚ್ಚಾಗಿ ಉತ್ತರ ಕರ್ನಾಟಕ ಹಾಗೂ ಮಹಾರಾಷ್ಟ್ರದಲ್ಲಿ ಹೆಚ್ಚಾಗಿ ಬೆಳೆಯುತ್ತಾರೆ. ಒಣ ಭೂಮಿಯಲ್ಲಿ ಮತ್ತು ಕಬ್ಬಿನ ಸಾಲಿನಲ್ಲಿ ಎರಡನೇಯ ವಾಣಿಜ್ಯ ಬೆಳೆಯಾಗಿ ಹೆಚ್ಚಾಗಿ ಬೆಳೆಯುವುದು ರೈತರ ವಾಡಿಕೆ. ಆದರೆ, ಈ ವರ್ಷ ಅತಿಯಾದ ಮಳೆಯಿಂದಾಗಿ ನದಿಗೆ ಪ್ರವಾಹ ಬಂದು ಬೆಳೆದು ನಿಂತ ಲಕ್ಷಾಂತರ ಎಕ್ಕರ ಭೂಮಿಯಲ್ಲಿಯ ಈರುಳ್ಳಿ ನೀರಿನಿಂದ ಜಲಾವೃತಗೊಂಡು ನಾಶವಾಗಿ ಹೊಗಿದ್ದೆ ಈ ಬೆಲೆ ಏರಿಕೆಗೆ ಕಾರಣವಾಗಿದೆ.

ಒಂದ್‌ ಹೆಚ್‌ ಹಾಕಿದ್ರ ಲಾಭ ಸಿಗಲ್‌ ನೋಡ್ರೀ.

ಈ ಮೊದಲು ಸಂತೆ ಹಾಗೂ ಮಾರುಕಟ್ಟೆಗಳಲ್ಲಿ ತೂಕ ಮಾಡದೇ ಚೀಲುಗಟ್ಟಲೇ ರೈತರು ಮಾರಾಟ ಮಾಡುತ್ತಿದ್ದರು. ಆದರೆ, ಈಗ ಈರುಳ್ಳಿಯ ಬೆಲೆ ಗಗಣಕ್ಕೇರಿರುವುದರಿಂದ ವ್ಯಾಪಾರಸ್ಥರು ತೂಕ ಮಾಡಿಯೇ ಮಾರಾಟ ಮಾಡಿ ಮಾರಾಟ ಮಾರುತ್ತಿದ್ದಾರೆ. ಮೊದಲು ತೂಕಕ್ಕಿಂತ ಒಂದೇರಡು ಹೆಚ್ಚಿಗೆ ಈರುಳ್ಳಿ ಕೊಡುತ್ತಿದ್ದರು. ವ್ಯಾಪಾರಸ್ಥರು ಅಷ್ಟೊಂದು ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಆದರೆ, ಇದೀಗ ಪರಿಸ್ಥಿತಿ ಬದಲಾಗಿದೆ. ಒಂದೊಂದು ಈರುಳ್ಳಿಗೂ ಲೆಕ್ಕ ಹಾಕುವಂತಾಗಿದ್ದು, ಒಂಗಾರದ ಹಾಗೆ ತೂಕಮಾಡಿ ಮಾರಾಟ ಮಾಡುವ ಪರಿಸ್ಥಿತಿ ಬಂದಿದೆ. ಎನ್‌ ಬಂಗಾರ ತೂಕಾ ಮಾಡಿದಾಂಗ್‌ ಮಾಡ್ತಿಯಲ್ಲೋ ಮಾರಾಯಾ.., ಒಂದರ ಹೆಚ್ಚ ಹಾಕೋ ಎಂದು ಗ್ರಾಹಕರು ಗದರಿಸಿದರೆ, ಇಲ್ರೀ.. ಮಾಲಕರ ಬಾಳ ತುಟ್ಟಿಆಗ್ಯಾವ್ರೀ ಒಂದ್‌ ಹೆಚ್‌ ಹಾಕಿದ್ರ ಲಾಭ ಸಿಗಲ್‌ ನೋಡ್ರೀ ಎಂದು ವ್ಯಾಪಾರಸ್ಥರು ಅಳಲು ತೋಡಿಕೊಳ್ಳುವಂತಾಗಿದೆ.