ಟೋಕನ್‌ ವ್ಯವಸ್ಥೆ ಈವರೆಗೆ ಆರಂಭಿಸದ ಹಿನ್ನೆಲೆಯಲ್ಲಿ ತುರ್ತು ಕೆಲಸ ಇಲ್ಲವೇ, ಬೇರೆ ಬೇರೆ ಕಾರಣಗಳಿಂದ ಪರ ಊರಿನಿಂದ ಬಂದವರು ಮೆಟ್ರೋದಲ್ಲಿ ಸಂಚರಿಸಲು ಆಗದೇ ಅನಿವಾರ್ಯವಾಗಿ ಬಸ್‌, ಆಟೋಗಳತ್ತ  ಒಲವು ತೋರುತ್ತಿದ್ದಾರೆ. 

 ಬೆಂಗಳೂರು (ಜ.28):‘ನಮ್ಮ ಮೆಟ್ರೋ’ದಲ್ಲಿ ಟೋಕನ್‌ ವ್ಯವಸ್ಥೆ ಈವರೆಗೆ ಆರಂಭಿಸದ ಹಿನ್ನೆಲೆಯಲ್ಲಿ ತುರ್ತು ಕೆಲಸ ಇಲ್ಲವೇ, ಬೇರೆ ಬೇರೆ ಕಾರಣಗಳಿಂದ ಪರ ಊರಿನಿಂದ ಬಂದವರು ಮೆಟ್ರೋದಲ್ಲಿ ಸಂಚರಿಸಲು ಆಗದೇ ಅನಿವಾರ್ಯವಾಗಿ ಬಸ್‌, ಆಟೋಗಳತ್ತ ಮುಖ ಮಾಡುವ ಸಮಸ್ಯೆ ಎದುರಿಸುತ್ತಿದ್ದಾರೆ.

ಕೇವಲ ಸ್ಮಾರ್ಟ್‌ ಕಾರ್ಡ್‌ ಇದ್ದವರಿಗೆ ಮಾತ್ರ ಪ್ರಯಾಣಿಸಲು ಅವಕಾಶ ನೀಡಿರುವುದರಿಂದ ಅನೇಕರು ತುರ್ತು ಸಂದರ್ಭದಲ್ಲಿ ಬೇರೆ ದಾರಿ ಇಲ್ಲದೇ ಹೋಗಿ ಬರಲು ಕನಿಷ್ಠ .150 ನೀಡಿ ಸ್ಮಾರ್ಟ್‌ ಕಾರ್ಡ್‌ ಪಡೆಯುತ್ತಿದ್ದಾರೆ. ವಿಶೇಷವಾಗಿ ಸಮಯ ಉಳಿತಾಯವಾಗುವುದರಿಂದ ಕೇವಲ ಒಂದು ಬಾರಿ ಪ್ರಯಾಣಿಸಲು ಅನೇಕರು ಸ್ಮಾರ್ಟ್‌ ಕಾರ್ಡ್‌ ಖರೀದಿಸಬೇಕಾಗಿದೆ.

ಕೋವಿಡ್‌ ಪೂರ್ವದಲ್ಲಿ ಸರಾಸರಿ ಪ್ರತಿ ದಿನ ನಾಲ್ಕೈದು ಲಕ್ಷ ಜನರು ಪ್ರಯಾಣ ಮಾಡುತ್ತಿದ್ದರು. ಈ ಪೈಕಿ ಶೇ.40ರಷ್ಟುಜನರು ಟೋಕನ್‌ ಖರೀದಿಸಿ ಪ್ರಯಾಣ ಮಾಡುವವರಾಗಿದ್ದರು. ಪ್ರಸ್ತುತ ಕೋವಿಡ್‌ ಮಾರ್ಗಸೂಚಿ ಸಡಿಲಿಸಿದ್ದರೂ ನಗದು ವಹಿವಾಟು, ಟೋಕನ್‌ ವ್ಯವಸ್ಥೆಗೆ ಕೇಂದ್ರ ಸರ್ಕಾರ ಇನ್ನೂ ಅನುಮತಿ ಕೊಡದ ಕಾರಣ ಒಂದು ಕಡೆ ಮೆಟ್ರೋಗೆ ಆರ್ಥಿಕ ನಷ್ಟಉಂಟಾಗುತ್ತಿದ್ದರೆ, ಮತ್ತೊಂದು ಕಡೆ ಜನರಿಗೂ ತೊಂದರೆಯಾಗುತ್ತಿದೆ.

ಬೆಂಗಳೂರಿಗರಿಗೆ ಸಂಕ್ರಾಂತಿ ಗಿಫ್ಟ್.. ನಮ್ಮ ಮೆಟ್ರೋ ಮತ್ತೆ ಎಲ್ಲೆಲ್ಲಿ ವಿಸ್ತರಣೆ? ...

ಸರ್ಕಾರ ಗಮನ ಹರಿಸಲಿ: ಈಗಿರುವಂತೆ ಗರಿಷ್ಠ 400 ಪ್ರಯಾಣಿಕರಿಗೆ ಮಾತ್ರ ಒಂದು ಮೆಟ್ರೋದಲ್ಲಿ ಅವಕಾಶ ನೀಡುವ ನಿಯಮ ಮುಂದುವರಿಯಲಿ, ಆದರೆ ಟೋಕನ್‌ ವ್ಯವಸ್ಥೆ ಕೂಡ ಜಾರಿಗೆ ಬರಲಿ. ನಾಲ್ಕೈದು ನಿಮಿಷಕ್ಕೆ ಒಂದರಂತೆ ರೈಲು ಓಡಿಸುವ ಮೂಲಕ ನೂಕು ನುಗ್ಗಲು ತಪ್ಪಿಸಬಹುದು. ಆಗ ಕೋವಿಡ್‌ ನಿಯಮದಂತೆ ಸಾಮಾಜಿಕ ಅಂತರದ ಪಾಲನೆಯ ಜೊತೆ ಜೊತೆಗೆ ಮೆಟ್ರೋದ ಆದಾಯ ಕೂಡ ಹೆಚ್ಚುತ್ತದೆ. ಅಧಿಕಾರಿಗಳು, ಮಂತ್ರಿಗಳು ಈ ಬಗ್ಗೆ ಗಮನ ಹರಿಸಲಿ ಎಂದು ವಿಜಯನಗರದ ನಿವಾಸಿ ಚೇತನ್‌ ಕುಮಾರ್‌ ಅಭಿಪ್ರಾಯ ಪಡುತ್ತಾರೆ.

ಪ್ರಯಾಣಿಕರ ಸಂಖ್ಯೆ ಹೆಚ್ಚಳ : ಮೆಟ್ರೋ ಪುನಾರಂಬದ ನಂತರ ಪ್ರಯಾಣಿಕರ ಸಂಖ್ಯೆ ನಿಧಾನವಾಗಿ ಹೆಚ್ಚಾಗುತ್ತಿದ್ದು, ನವೆಂಬರ್‌ನಲ್ಲಿ 19.49 ಲಕ್ಷ ಮಂದಿ ಹಾಗೂ ಡಿಸೆಂಬರ್‌ ನಲ್ಲಿ 28.87 ಲಕ್ಷ ಜನರು ಪ್ರಯಾಣಿಸಿದ್ದಾರೆ. ಜನವರಿಯಲ್ಲಿ ಪ್ರತಿದಿನದ ಸರಾಸರಿ ಪ್ರಯಾಣಿಕರ ಸಂಖ್ಯೆ 1.12 ಲಕ್ಷ ಮೀರಿದೆ. ನವೆಂಬರ್‌ನಲ್ಲಿ 4.90 ಕೋಟಿ ರು., ಡಿಸೆಂಬರ್‌ ನಲ್ಲಿ .7.20 ಕೋಟಿ ಆದಾಯ ಮೆಟ್ರೋಗೆ ಹರಿದು ಬಂದಿದೆ ಎಂದು ನಮ್ಮ ಮೆಟ್ರೋ ಅಧಿಕಾರಿಗಳು ತಿಳಿಸಿದ್ದಾರೆ.

ಮಾರ್ಗಸೂಚಿ ಪಾಲನೆ :  ನಾವು ಈಗ ಮಾಸಿಕ ಆದಾಯದ ನಿರೀಕ್ಷೆ ಎಂಬುದನ್ನು ಇಟ್ಟುಕೊಂಡಿಲ್ಲ. ಮಾರ್ಗಸೂಚಿ ಜಾರಿಯಲ್ಲಿರುವುದರಿಂದ ನಾವು ಅದಕ್ಕೆ ಅನುಗುಣವಾಗಿಯೇ ಕಾರ್ಯನಿರ್ವಹಿಸುತ್ತಿದ್ದೇವೆ. ಒಂದು ರೈಲಿನಲ್ಲಿ ಗರಿಷ್ಠ 400 ಜನರಿಗೆ ಮಾತ್ರ ಓಡಾಟಕ್ಕೆ ಅವಕಾಶ ನೀಡಿದ್ದೇವೆ ಎಂದು ನಮ್ಮ ಮೆಟ್ರೋದ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಬಿ.ಎಲ್‌. ಯಶವಂತ ಚೌವಾಣ್‌ ಹೇಳುತ್ತಾರೆ.

2019ರ ಡಿಸೆಂಬರ್‌ನಲ್ಲಿ 1.24 ಕೋಟಿ ಪ್ರಯಾಣಿಕರು ಮೆಟ್ರೋ ಬಳಸಿದ್ದು, .33.39 ಕೋಟಿ ಆದಾಯ ಸಂಗ್ರಹವಾಗಿತ್ತು. ಈ ಅವಧಿಗೆ ಹೋಲಿಸಿದರೆ ಪ್ರಯಾಣಿಕರ ಸಂಖ್ಯೆಯಲ್ಲಿ ಮತ್ತು ಆದಾಯದಲ್ಲಿ ಶೇ.75ಕ್ಕಿಂತ ಹೆಚ್ಚು ನಷ್ಟವನ್ನು ನಮ್ಮ ಮೆಟ್ರೋ ಅನುಭವಿಸಿದೆ.