ಸಾವಿರಾರು ದೇವರಿಲ್ಲ, ಒಬ್ಬನೇ ದೇವರಿದ್ದಾನೆ: ಸಿದ್ದರಾಮಯ್ಯ
ದೇವರೊಬ್ಬನೇ ನಾಮ ಹಲವು. ಶುದ್ಧ ಭಕ್ತಿ ಮನಸ್ಸಿನಿಂದ ದೇವರನ್ನು ಪೂಜಿಸಬೇಕು. ಯಾರಿಗೂ ಕೆಡಕು ಬಯಸಬಾರದು. ಮನುಕುಲಕ್ಕೆ ಒಳ್ಳೆಯದಾಗಲಿ ಎಂದು ದೇವರನ್ನು ಭಕ್ತಿಯಿಂದ ಪೂಜಿಸಿದಾಗ ಎಲ್ಲರಿಗೂ ಒಳ್ಳೆಯದಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಮಂಡ್ಯ(ಜ.22): ಅನಾದಿ ಕಾಲದಿಂದಲೂ ದೇವರ ಸೇವೆ ಮಾಡುವ ಪದ್ಧತಿ ನಡೆದು ಬಂದಿದೆ. ದೇವರಿದ್ದಾನೆ. ಆದರೆ, ಸಾವಿರಾರು ದೇವರು ಇರಲು ಸಾಧ್ಯವಿಲ್ಲ. ಒಬ್ಬನೇ ದೇವರು ಇರಲು ಸಾಧ್ಯ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ತಾಲೂಕಿನ ಚೀರನಹಳ್ಳಿಯಲ್ಲಿ ಉರುಗಮ್ಮ ದೇವಿ ಮತ್ತು ಮಸಣಮ್ಮ ದೇವಿ ದೇವಸ್ಥಾನ ಉದ್ಘಾಟನೆ ಹಾಗೂ ಬಿಲ್ವಪತ್ರ ಕಟ್ಟೆನೂತನ ಗೋಪುರ ಉದ್ಘಾಟನೆ, ಕಳಶ ಪ್ರತಿಷ್ಠಾನೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಮನುಷ್ಯನ ನಾಗರಿಕತೆ ಪ್ರಾರಂಭವಾದ ಮೇಲೆ ನಗರ ಹಾಗೂ ಹಳ್ಳಿಗಳಲ್ಲಿ ದೇವಸ್ಥಾನ ನಿರ್ಮಾಣ ಮಾಡಿಕೊಂಡು ದೇವರ ಮೂರ್ತಿ ಪ್ರತಿಷ್ಠಾಪನೆ ಮಾಡಿ ಆ ಮೂಲಕ ದೇವರ ಸೇವೆ, ಪೂಜೆ ಮಾಡುತ್ತಾ ಬಂದಿದ್ದಾರೆ ಎಂದಿದ್ದಾರೆ.
ವಾರಪತ್ರಿಕೆ ಸಂಪಾದಕನ ಕಿರುಕುಳ, ಪಿಡಿಒ ಆತ್ಮಹತ್ಯೆಗೆ ಯತ್ನ
ದೇವರೊಬ್ಬನೇ ನಾಮ ಹಲವು. ಶುದ್ಧ ಭಕ್ತಿ ಮನಸ್ಸಿನಿಂದ ದೇವರನ್ನು ಪೂಜಿಸಬೇಕು. ಯಾರಿಗೂ ಕೆಡಕು ಬಯಸಬಾರದು. ಮನುಕುಲಕ್ಕೆ ಒಳ್ಳೆಯದಾಗಲಿ ಎಂದು ದೇವರನ್ನು ಭಕ್ತಿಯಿಂದ ಪೂಜಿಸಿದಾಗ ಎಲ್ಲರಿಗೂ ಒಳ್ಳೆಯದಾಗುತ್ತದೆ ಎಂದು ತಿಳಿಸಿದ್ದಾರೆ.
ಮನುಷ್ಯ ಬದುಕಿನಲ್ಲಿ ನಿರಂತರ ಪ್ರಯತ್ನ ಮಾಡಬೇಕು. ಹುಟ್ಟಿನಿಂದ, ಜಾತಿಯಿಂದ ಯಾರೂ ದೊಡ್ಡವರಾಗಲು ಸಾಧ್ಯವಿಲ್ಲ. ನಿಮ್ಮ ಕ್ರಿಯೆಯಿಂದ ದೊಡ್ಡವರಾಗಲು ಸಾಧ್ಯ. ಕೆಲವರು ಗುಡಿ ಪೂಜೆ ಮಾಡುತ್ತಾರೆ. ಕೆಲವರು ಇಷ್ಟಲಿಂಗ ಪೂಜೆ ಮಾಡುತ್ತಾರೆ. ಯಾರು ಏನೇ ಪೂಜೆ ಮಾಡಿದರೂ ಶುದ್ಧ ಭಕ್ತಿಯಿಂದ ಮಾಡಬೇಕು ಎಂದು ಸಲಹೆ ನೀಡಿದ್ದಾರೆ.
ಸರ್ಕಾರಿ ಕಚೇರಿಯೇ ಇವರಿಗೆ ಸಿನಿಮಾ ಥಿಯೇಟರ್..!
ದೇವರು ಒಬ್ಬ. ಅದು ಎಲ್ಲರ ದೇವರು, ಮನುಕುಲದ ದೇವರು. ಗ್ರಾಮಗಳಲ್ಲಿ ಸೋದರತ್ವ, ಸಹೋದರತ್ವ ಇರಬೇಕು. ಭ್ರಾತೃತ್ವ ಭಾವನೆಯನ್ನು ಬೆಳೆಸಿಕೊಂಡು, ಉತ್ತಮ ಜೀವನ ನಡೆಸಬೇಕು. ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿದರೆ ಸಮಾಜಕ್ಕೆ ಆಸ್ತಿಯಾಗುತ್ತಾರೆ. ಪೋಷಕರು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು ಎಂದು ಅವರು ಹೇಳಿದ್ದಾರೆ.
ಮಾಜಿ ಶಾಸಕ ರಮೇಶ್ ಬಂಡಿಸಿದ್ದೇಗೌಡ ಮಾತನಾಡಿ, ಕಳೆದ 15 ವರ್ಷದಿಂದ ದೇವಾಲಯ ನಿರ್ಮಾಣ ಕಾಮಗಾರಿ ನನೆಗುದಿಗೆ ಬಿದ್ದಿತ್ತು. ಗ್ರಾಮಸ್ಥರು ಒಟ್ಟಾಗಿ ದೇವಾಲಯ ನಿರ್ಮಾಣ ಮಾಡಿರುವುದು ಶ್ಲಾಘನೀಯ ಎಂದಿದ್ದಾರೆ. ಸಮಾರಂಭದಲ್ಲಿ ಕಾಗಿನೆಲೆ ಮಠದ ಶಿವಾನಂದಪುರಿ ಸ್ವಾಮೀಜಿ, ರಾಮರೂಢ ಮಠದ ಬಸವಾನಂದ ಸ್ವಾಮೀಜಿ, ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು.
ರಂಗನತಿಟ್ಟಿನಲ್ಲಿ ಅನಿಲ್ ಕುಂಬ್ಳೆ ದೋಣಿ ವಿಹಾರ
ಮಾಜಿ ಸಚಿವರಾದ ಎನ್.ಚಲುವರಾಯಸ್ವಾಮಿ, ಪಿ.ಎಂ.ನರೇಂದ್ರಸ್ವಾಮಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ನಾಗರತ್ನ ಸ್ವಾಮಿ, ಮಾಜಿ ಶಾಸಕರಾದ ಕೆ.ಬಿ.ಚಂದ್ರಶೇಖರ್, ಬಿ.ರಾಮಕೃಷ್ಣ, ತಾಪಂ ಅಧ್ಯಕ್ಷೆ ಶಿವಕುಮಾರಿ, ಜಿಲ್ಲಾ ಪಂಚಾಯಿತಿ ಸದಸ್ಯ ಡಿ.ಮಂಜುನಾಥ್, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ರಮೇಶ್ ಮಿತ್ರ ಉಪಸ್ಥಿತರಿದ್ದರು.