Asianet Suvarna News Asianet Suvarna News

108 ಆರೋಗ್ಯ ಕವಚ ಸಿಬ್ಬಂದಿಗಿಲ್ಲ ಸಂಬಳ: ವೇತನವಿಲ್ಲದೆ ಪರದಾಟ..!

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ 108 ಆರೋಗ್ಯ ಕವಚ ಯೋಜನೆಯಲ್ಲಿ ಪೈಲಟ್ ಹಾಗೂ ಇಎಂಟಿ ಹುದ್ದೆಗಳಲ್ಲಿ ರಾಜ್ಯಾದ್ಯಂತ 3700 ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರೆಲ್ಲರಿಗೂ ಡಿಸೆಂಬರ್, ಜನವರಿ ಹಾಗೂ ಫೆಬ್ರುವರಿ ತಿಂಗಳ ಸಂಬಳವನ್ನೇ ಪಡೆದಿಲ್ಲ.

No Salary to 108 Ambulance Staff in Vijayapura grg
Author
First Published Mar 26, 2024, 12:33 PM IST

ಶಶಿಕಾಂತ ಮೆಂಡೆಗಾರ

ವಿಜಯಪುರ(ಮಾ.26):  ಕಳೆದ ಮೂರು ತಿಂಗಳಿನಿಂದ 108 ಆರೋಗ್ಯ ಕವಚ ಸಿಬ್ಬಂದಿ ಸಂಬಳವಿಲ್ಲದೇ ದುಡಿಯುತ್ತಿದ್ದಾರೆ. ಸಂಬಳ ನೀಡಬೇಕಾದ ಏಜೆನ್ಸಿ ಸರ್ಕಾರದತ್ತ ಬೊಟ್ಟು ಮಾಡಿದರೆ, ಸಂಬಳ ಕೊಟ್ಟಿದೆ ಎಂದು ಸರ್ಕಾರ ಹೇಳುತ್ತಿದೆ. ಹಾಗಾದರೆ ಇದರಲ್ಲಿ ಯಾವುದು ಸತ್ಯ ಎಂದು ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗೆ ಗೊಂದಲ ಉಂಟಾಗಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ 108 ಆರೋಗ್ಯ ಕವಚ ಯೋಜನೆಯಲ್ಲಿ ಪೈಲಟ್ ಹಾಗೂ ಇಎಂಟಿ ಹುದ್ದೆಗಳಲ್ಲಿ ರಾಜ್ಯಾದ್ಯಂತ 3700 ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರೆಲ್ಲರಿಗೂ ಡಿಸೆಂಬರ್, ಜನವರಿ ಹಾಗೂ ಫೆಬ್ರುವರಿ ತಿಂಗಳ ಸಂಬಳವನ್ನೇ ಪಡೆದಿಲ್ಲ.

ಕುಂಟು ನೆಪ ಹೇಳುತ್ತಿದೆ ಹೊಸ ಏಜೆನ್ಸಿ:

ಈ ಮೊದಲು ಜಿವಿಕೆ ಇಎಂಆರ್‌ಐ ಕಂಪನಿ ಆರೋಗ್ಯ ಕವಚ ನಿರ್ವಹಿಸುತ್ತಿತ್ತು. ಈಗ ಇಎಂಆರ್‌ಐ ಹೆಲ್ತ್ ಗ್ರೀನ್ ಸರ್ವಿಸಸ್ ಎಂಬ ಹೊಸ ಕಂಪನಿ ನಿಭಾಯಿಸುತ್ತಿದೆ. ಸರ್ಕಾರ ನಮಗೆ ಹಣ ಬಿಡುಗಡೆ ಮಾಡಿಲ್ಲ ಎಂದು ಈ ಹೊಸ ಏಜೆನ್ಸಿ ಕುಂಟುನೆಪ ಹೇಳುತ್ತಿದೆ. ಇನ್ನೊಂದೆಡೆ ಏಜೆನ್ಸಿಗೆ ಹಣ ಬಿಡುಗಡೆ ಮಾಡಿದ್ದು, ಯಾವುದೂ ಬಾಕಿ ಇಲ್ಲ ಎಂದು ಸರ್ಕಾರ ಹೇಳುತ್ತಿದೆ. ಆದರೆ, ಯಾವುದು ವಾಸ್ತವ ಸಂಗತಿ ಎಂಬುದು ತಿಳಿಯುತ್ತಿಲ್ಲ. ಹೀಗಾಗಿ ಸಿಬ್ಬಂದಿ ವೇತನವಿಲ್ಲದೇ ಪರದಾಡುವಂತಾಗಿದೆ.

108 ಆಂಬುಲೆನ್ಸ್‌ ಸಿಬ್ಬಂದಿ ಬಾಕಿ ವೇತನ ಪಾವತಿಗೆ ಕ್ರಮ: ಮುಷ್ಕರ ನಡೆಸದಂತೆ ಸಚಿವ ದಿನೇಶ್ ಗುಂಡೂರಾವ್ ಕರೆ

ಸಂಬಳದಲ್ಲಿಯೂ ಕಡಿತ?:

ಈ ಹಿಂದೆ ಆಯುಕ್ತರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕನಿಷ್ಠ ವೇತನ ಜಾರಿ ಮಾಡಿ ಸುಮಾರು 6 ತಿಂಗಳು ಸಿಬ್ಬಂದಿಗೆ ಪ್ರತಿ ತಿಂಗಳು ₹36,038 ವೇತನ ಪಾವತಿಸಲಾಗಿತ್ತು. ಬಳಿಕ ಏಕಾಏಕಿ ₹6,038 ಕಡಿಮೆ ಮಾಡಿ ಇದೀಗ ₹30,000 ನೀಡಲಾಗುತ್ತಿದೆ. ಇದಕ್ಕೆ ಕಾರಣವನ್ನೂ ಸಂಸ್ಥೆ ನೀಡಿಲ್ಲ ಎಂಬುವುದು ಸಿಬ್ಬಂದಿ ವಾದ.

ಸಂಬಳವಿಲ್ಲದೆ ಆರ್ಥಿಕ ಸಂಕಷ್ಟದಲ್ಲಿರುವ ಸಿಬ್ಬಂದಿ ಹಲವು ಬಾರಿ ಸರ್ಕಾರಕ್ಕೆ ಮನವಿ ಮಾಡಿಕೊಂಡರೂ ಪ್ರಯೋಜನವಾಗಿಲ್ಲ. ಈ ಬಾರಿ 10 ದಿನಗಳಲ್ಲಿ ಸಂಬಳ ಮಾಡದೆ ಇದ್ದರೆ ಮತ್ತೆ ಮುಷ್ಕರ ಹೂಡುವ ಎಚ್ಚರಿಕೆಯನ್ನು ಸಿಬ್ಬಂದಿ ನೀಡಿದ್ದಾರೆ. ತಕ್ಷಣದಲ್ಲಿ ಆರೋಗ್ಯ ಇಲಾಖೆ ಆರೋಗ್ಯ ಕವಚ ಸಿಬ್ಬಂದಿ ಗೋಳನ್ನು ಕೇಳಬೇಕಿದೆ ಎಂದು ಸಿಬ್ಬಂದಿ ಆಗ್ರಹಿಸಿದ್ದಾರೆ.

ಸಿಬ್ಬಂದಿಗೆ ಸಿಗಬೇಕಿರುವ ಸೌಲಭ್ಯಗಳೇನು?:

ಕಳೆದ ಮೂರು ತಿಂಗಳಿನಿಂದ ಬಾಕಿ ಉಳಿದಿರುವ ಸಂಬಳ, ಈ ಮೊದಲು ಕೊಡುತ್ತಿದ್ದ ಟಿಎ ಡಿಎ ನೀಡುವಂತೆ ಅವರು ಆಗ್ರಹಿಸಿದ್ದಾರೆ. 108 ವಾಹನ ಪಂಚರ್ ಸೇರಿದಂತೆ ಸಣ್ಣಪುಟ್ಟ ರಿಪೇರಿಗೆ ಸಿಬ್ಬಂದಿ ಹಾಕುವ ಖರ್ಚಿನ ಹಣವನ್ನು ಕಂಪನಿಯಿಂದ ಹಿಂದಿರುಗಿಸಬೇಕು. ಈ ಹಿಂದೆ ವರ್ಷಕ್ಕೆ ಒಂದು ಬಾರಿ ಕೊಡುತ್ತಿದ್ದ ಒಂದು ತಿಂಗಳ ಸಂಬಳ ಅರಿಯರ್ಸ್(ಬೋನಸ್) ಕಳೆದ ನಾಲ್ಕು ವರ್ಷದಿಂದ ಬಂದಿಲ್ಲ. ಇದನ್ನು ನೀಡುವಂತೆಯೂ ಅವರು ಆಗ್ರಹಿಸಿದ್ದಾರೆ.

ಕಂಡೀಷನ್ ಇಲ್ಲದ ವಾಹನಗಳು:

ಜನರ ಆರೋಗ್ಯ ಸೇವೆಗೆಂದು ಇರುವ ವಾಹನಗಳಲ್ಲಿ ದಿನದ ಎಲ್ಲ ಸಮಯದಲ್ಲಿ ಓಡುವ ವಾಹನಗಳಿಗೆ ಆಯಸ್ಸು ಮುಗಿದಿದ್ದರೂ ಅವುಗಳನ್ನೇ ಓಡಿಸಲಾಗುತ್ತಿದೆ. ಸರಾಸರಿ ಐದು ಲಕ್ಷ ಕಿಮೀ ಓಡಿದ ಬಳಿಕ ಮತ್ತೆ ಓಡಿಸಲು ಯೋಗ್ಯವಲ್ಲ ಎಂದು ಅವುಗಳನ್ನು ತೆಗೆದುಹಾಕಬೇಕು. ಆದರೆ ಸುಮಾರು 7ರಿಂದ 8 ಲಕ್ಷ ಕಿಮೀ ರನ್ನಿಂಗ್ ಆಗಿದ್ದರೂ ತುರ್ತು ವಾಹನಗಳನ್ನು ಬದಲಾಯಿಸಿಲ್ಲ.

ಡಿಸಿ, ಡಿಎಚ್‌ಒಗೆ ಮನವಿ:

ಸಂಬಳಬವಿಲ್ಲದೆ ಕುಟುಂಬ ನಿರ್ವಹಣೆ ಕಷ್ಟವಾಗುತ್ತಿದ್ದು, ತಕ್ಷಣ ಸಂಬಳ ಕೊಡಿಸಬೇಕು ಎಂದು ಜಿಲ್ಲಾಧಿಕಾರಿ ಟಿ. ಭೂಬಾಲನ್ ಹಾಗೂ ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಅಧಿಕಾರಿ ಡಾ. ಬಸವರಾಜ ಹುಬ್ಬಳ್ಳಿ ಅವರ ಮೂಲಕ ಸರ್ಕಾರಕ್ಕೆ ಸುವರ್ಣ ಕರ್ನಾಟಕ ಆರೋಗ್ಯ ಕವಚ (108) ವಿಜಯಪುರ ನೌಕರರ ಸಂಘದಿಂದ ಮನವಿ ಸಲ್ಲಿಸಲಾಗಿದೆ.

108 ಆಂಬ್ಯುಲೆನ್ಸ್‌, ಡಯಾಲಿಸಿಸ್‌ ಕೇಂದ್ರ ಗುತ್ತಿಗೆ ರದ್ದು: ಸಚಿವ ದಿನೇಶ್‌ ಗುಂಡೂರಾವ್‌

ಸರ್ಕಾರದಿಂದಲೇ ಪ್ರತಿ ತಿಂಗಳು ವೇತನ ಪಾವತಿಸುವ ಕೆಲಸ ಆಗಬೇಕು. ಕಳೆದ 2023 ರಲ್ಲಿ ಸರ್ಕಾರ ಮತ್ತು ಜಿವಿಕೆ ಸಂಸ್ಥೆಯ ಒಡಂಬಡಿಕೆಯ ಪ್ರಕಾರ ಶೇ.15 ರಷ್ಟು ವೇತನ ಪರಿಷ್ಕರಣೆ ಸಹ ಆಗಿಲ್ಲ, ಅದನ್ನೂ ಮಾಡಬೇಕು. ಅಲ್ಲದೆ ವಾಹನಕ್ಕೆ ಬರುವ ಸಣ್ಣಪುಟ್ಟ ಖರ್ಚು ಹಾಗೂ ಟಿಎಡಿಎ ಸಹ ಕೊಡುವ ಕೆಲಸ ಆಗಬೇಕಿದೆ ಎಂದು ಸುವರ್ಣ ಕರ್ನಾಟಕ ಆರೋಗ್ಯ ಕವಚ (108) ವಿಜಯಪುರ ನೌಕರರ ಸಂಘದ ಜಿಲ್ಲಾಧ್ಯಕ್ಷ ಮಂಜುನಾಥ ಸಾರವಾಡ ತಿಳಿಸಿದ್ದಾರೆ. 

ಆರೋಗ್ಯ ಕವಚ ವಾಹನದ ಸಿಬ್ಬಂದಿಗೆ ಸಂಬಳ ಆಗಿಲ್ಲ ಎಂಬುದು ನನ್ನ ಗಮನಕ್ಕೂ ಬಂದಿದೆ, ಇದೆಲ್ಲವೂ ಏಜೆನ್ಸಿ ನೋಡಿಕೊಳ್ಳುವುದರಿಂದ ನಮಗೂ ಇದಕ್ಕೂ ನೇರ ಸಂಬಂಧವಿಲ್ಲ. ಆದರೂ ಸಿಬ್ಬಂದಿಗೆ ಸಮಸ್ಯೆ ಆಗಬಾರದು ಎಂದು ತಕ್ಷಣ ಸಂಬಳ ಕೊಡಬೇಕು ಎಂದು ಸರ್ಕಾರದ ಗಮನಕ್ಕೆ ತಂದಿದ್ದೇನೆ. ಸಂಬಂಧಿತ ಏಜೆನ್ಸಿಗೂ ಮಾತನಾಡಲಾಗುವುದು ಎಂದು ವಿಜಯಪುರ ಡಿಎಚ್ಒ ಡಾ.ಬಸವರಾಜ ಹುಬ್ಬಳ್ಳಿ ಹೇಳಿದ್ದಾರೆ. 

Follow Us:
Download App:
  • android
  • ios