Asianet Suvarna News Asianet Suvarna News

'ಬೆಳಗಾವಿಯಲ್ಲಿ ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆ ಇಲ್ಲ'

ದೇವಸ್ಥಾನಗಳಲ್ಲಿ ಮೂರ್ತಿ ಪ್ರತಿಷ್ಠಾಪನೆಗೆ ಜಿಲ್ಲಾಡಳಿತ ಅವಕಾಶ| ಹಲವು ಮಾರ್ಗಸೂಚಿ ಬಿಡುಗಡೆ| ಗಣೇಶ ವಿಸರ್ಜನೆಯ ಸ್ಥಳದಲ್ಲಿ ಅಗತ್ಯ ಸಮಯದವರೆಗೆ ಮಾತ್ರ ಇದ್ದು, ಹೆಚ್ಚಿನ ವೇಳೆ ಆ ಸ್ಥಳದಲ್ಲಿ ನಿಲ್ಲಬಾರದು|

No Public Ganesha Installation in Belagavi
Author
Bengaluru, First Published Aug 13, 2020, 2:28 PM IST

ಬೆಳಗಾವಿ(ಆ.13): ಕೋವಿಡ್‌-19 ಸೋಂಕು ತೀವ್ರಗತಿಯಲ್ಲಿ ಹರಡುತ್ತಿರುವ ಪರಿಸ್ಥಿತಿಯನ್ನು ಪರಿಗಣಿಸಿ, ಸೋಂಕಿನ ಅನಾಹುತಗಳನ್ನು ಪರಿಣಾಮಕಾರಿಯಾಗಿ ತಡೆಗಟ್ಟಲು ಮತ್ತು ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಈ ವರ್ಷ ಸಾರ್ವಜನಿಕ ಸ್ಥಳಗಳಲ್ಲಿ ಸಾರ್ವಜನಿಕ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸದೇ ಸರಳ ರೀತಿಯಲ್ಲಿ ಸಮೀಪದ ದೇವಸ್ಥಾನಗಳಲ್ಲಿ ಪ್ರತಿಷ್ಠಾಪಿಸಬೇಕು. ಜತೆಗೆ ಗಣೇಶ ಮೂರ್ತಿಯನ್ನು ತಮ್ಮ ತಮ್ಮ ಮನೆಗಳಲ್ಲಿಯೇ ಪ್ರತಿಷ್ಠಾಪಿಸಿ ಆಚರಿಸಬೇಕು ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಆದೇಶ ಹೊರಡಿಸಿದ್ದಾರೆ.

ಸಾರ್ವಜನಿಕರು, ದೇವಸ್ಥಾನಗಳ ಮಂಡಳಿಗಳು ಹಾಗೂ ಸಾರ್ವಜನಿಕ ಗಣೇಶೋತ್ಸವ ಮಂಡಳಿಗಳು ಈ ಕೆಳಕಂಡ ಎಲ್ಲ ಮಾರ್ಗಸೂಚಿಗಳನ್ನು ಪಾಲಿಸುವ ನಿಬಂಧನೆಗೆ ಒಳಪಟ್ಟು ಈ ಮೂಲಕ ಆದೇಶಿಸಲಾಗಿದೆ. ದೇವಸ್ಥಾನ ಮಂಡಳಿಗಳು ಹಾಗೂ ಸಾರ್ವಜನಿಕ ಗಣೇಶೋತ್ಸವ ಮಂಡಳಿಗಳು ಗಣೇಶ ಉತ್ಸವ ಆಚರಿಸಲು ಪೊಲೀಸ್‌, ಮಹಾನಗರ ಪಾಲಿಕೆ, ಸ್ಥಳೀಯ ಸಂಸ್ಥೆ, ಹೆಸ್ಕಾಂ, ಆರೋಗ್ಯ, ಅಗ್ನಿಶಾಮಕ, ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಇತರೆ ಸಂಬಂಧಪಟ್ಟ ಇಲಾಖೆಗಳಿಂದ ಪೂರ್ವಾನುಮತಿಯನ್ನು ಕಡ್ಡಾಯವಾಗಿ ಪಡೆಬೇಕು. ಕೋವಿಡ್‌-19 ಸಾಂಕ್ರಾಮಿಕ ರೋಗ ಹರಡುವಿಕೆ ಹೆಚ್ಚಾಗಿರುವುದರಿಂದ ಸಂಬಂಧಪಟ್ಟ ಇಲಾಖೆಯವರು ನೀಡುವ ಸೂಚನೆ, ನಿರ್ದೇಶನಗಳನ್ವಯ ನಿಯಂತ್ರಿತ ವಲಯಗಳ ಹೊರಗೆ ಇರುವ ದೇವಸ್ಥಾನಗಳಲ್ಲಿ ಈ ವರ್ಷದ ಸಾರ್ವಜನಿಕ ಗಣೇಶ ಉತ್ಸವವನ್ನು ಯಾವುದೇ ರೀತಿಯ ಡಾಲ್ಬಿ ಉಪಯೋಗಿಸದೇ, ಪಟಾಕಿಗಳನ್ನು ಸಿಡಿಸದೇ ಮತ್ತು ಬಣ್ಣಗಳನ್ನು ಎರಚದೆ ಅತೀ ಸರಳವಾಗಿ ಆಚರಿಸಬೇಕು.

ಬೆಳಗಾವಿ: SSLCಯಲ್ಲಿ ಶೇ.48 ಅಂಕ ಪಡೆದ ವಿದ್ಯಾರ್ಥಿಗೆ ಗುಲಾಲು ಎರಚಿ ಸನ್ಮಾನ..!

ಮನೆಯಲ್ಲಿ ಪ್ರತಿಷ್ಠಾಪಿಸುವ ಗಣೇಶ ಮೂರ್ತಿಯ ಎತ್ತರ ಗರಿಷ್ಠ 2 ಅಡಿ (ಪೀಠ ಸಹಿತ) ಮೀರದಂತೆ ಹಾಗೂ ದೇವಸ್ಥಾನಗಳಲ್ಲಿ ಪ್ರತಿಷ್ಠಾಪಿಸುವ ಗಣೇಶ ಮೂರ್ತಿಗಳ ಎತ್ತರ ಗರಿಷ್ಠ 4 ಅಡಿ (ಪೀಠ ಸಹಿತ) ಮೀರತಕ್ಕದ್ದಲ್ಲ. ಕಡ್ಡಾಯವಾಗಿ ಮಣ್ಣಿನಿಂದ ತಯಾರಿಸಿದ ಮೂರ್ತಿಗಳನ್ನೇ ಪ್ರತಿಷ್ಠಾಪಿಸಬೇಕು.

ಮನೆಯಲ್ಲಿ ಪ್ರತಿಷ್ಠಾಪಿಸಿದ ಗಣೇಶ ಮೂರ್ತಿಯನ್ನು ಅವರ ಮನೆ ಆವರಣದಲ್ಲಿಯೇ ವಿಸರ್ಜನೆ ಮಾಡಲು ಎಲ್ಲ ಅಗತ್ಯ ವ್ಯವಸ್ಥೆ ಮಾಡಿಕೊಳ್ಳಬೇಕು. ಒಂದು ವೇಳೆ ಈ ವ್ಯವಸ್ಥೆಯನ್ನು ಮಾಡಿಕೊಳ್ಳಲು ಆಗದೇ ಇದ್ದ ಸಂದರ್ಭದಲ್ಲಿ ಮಹಾನಗರ ಪಾಲಿಕೆ, ಬೆಳಗಾವಿ ಹಾಗೂ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಇವರು ತಯಾರಿಸಿದ ಮೊಬೈಲ್‌ ಟ್ಯಾಂಕ್‌ಗಳಲ್ಲಿ ವಿಸರ್ಜನೆಯನ್ನು ನೆರವೇರಿಸತಕ್ಕದ್ದು.

ಪ್ರಸಕ್ತ ಸಾಲಿನಲ್ಲಿ ನಿಗದಿಪಡಿಸಿದ ಸಮಯದಲ್ಲಿ ಗಣೇಶ ಮೂರ್ತಿಯ ವಿಸರ್ಜನೆಯನ್ನು ನೆರವೇರಿಸಲು ಸಾಧ್ಯವಾಗದೇ ಇದ್ದ ಪಕ್ಷದಲ್ಲಿ, ಮುಂಬರುವ 2021ನೇ ಸಾಲಿನ ಭಾದ್ರಪದ ತಿಂಗಳಿನಲ್ಲಿ ವಿಸರ್ಜನೆಯನ್ನು ನೆರವೇರಿಸಬಹುದು. ಇದರಿಂದ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ ಕಾಲಕ್ಕೆ ಹಾಗೂ ವಿಸರ್ಜನಾ ಕಾಲಕ್ಕೆ ಜನದಟ್ಟಣೆಯಾಗುವುದನ್ನು ತಡೆಯುವುದಲ್ಲದೇ ಕುಟುಂಬ ಸದಸ್ಯರಿಗೂ ಕೊರೋನಾ ಸಾಂಕ್ರಾಮಿಕ ರೋಗ ಹರಡುವಿಕೆಯನ್ನು ತಡೆಯಬಹುದಾಗಿದೆ.

ಗಣೇಶೋತ್ಸವ ಕಾಲಕ್ಕೆ ದೇವಸ್ಥಾನಗಳ ಮಂಡಳಿಗಳು ಹಾಗೂ ಸಾರ್ವಜನಿಕ ಗಣೇಶೋತ್ಸವ ಮಂಡಳಿಗಳು ದೇವಸ್ಥಾನಗಳಲ್ಲಿ ಜಾಹೀರಾತು ಪ್ರದರ್ಶನಗಳ ಕಾರಣಗಳಿಂದ ಯಾವುದೇ ರೀತಿಯ ಜನದಟ್ಟಣೆಯಾಗದಂತೆ ಕಟ್ಟುನಿಟ್ಟಾಗಿ ನೋಡಿಕೊಳ್ಳಬೇಕು. ಕೋವಿಡ-19 ಸಾಂಕ್ರಾಮಿಕ ರೋಗ ಕುರಿತು ಜಾಗೃತಿ ಮೂಡಿಸುವ ಸಾಮಾಜಿಕ, ಆರೋಗ್ಯ ಸಂದೇಶಗಳನ್ನು ಬಿಂಬಿಸುವ ಜಾಹೀರಾತುಗಳಿಗೆ ಪ್ರಾಧಾನ್ಯತೆ ನೀಡಬೇಕು. ಗಣೇಶೋತ್ಸವ ಆಚರಣೆ ಕಾಲಕ್ಕೆ ಆರತಿ ಸಮಯದಲ್ಲಿ ಗರಿಷ್ಠ 05 ಜನ ಸೇರತಕ್ಕದ್ದು. ಸಾರ್ವಜನಿಕರಿಗೆ ಗಣೇಶನ ದರ್ಶನದ ಸೌಲಭ್ಯವನ್ನು ಕೇಬಲ… ನೆಟ್‌ವರ್ಕ್, ವೆಬ್‌ಸೈಟ್‌ ಮತ್ತು ಫೇಸ್‌ಬುಕ್‌ ಇತ್ಯಾದಿಗಳ ಮೂಲಕ ಆನ್‌ಲೈನ್‌ನಲ್ಲಿ ಲಭ್ಯವಾಗುವಂತೆ ವ್ಯವಸ್ಥೆ ಮಾಡಬಹುದು. ದೇವಸ್ಥಾನಕ್ಕೆ ಆಗಮಿಸುವ ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್‌ ಧರಿಸುವ ನಿಯಮವನ್ನು ಪಾಲಿಸುವಂತೆ ನೋಡಿಕೊಳ್ಳತಕ್ಕದ್ದು. ಗಣೇಶೋತ್ಸವದಲ್ಲಿ ಶ್ರೀ ಗಣೇಶ ಮೂರ್ತಿಗಳನ್ನು ತರುವಾಗ ಹಾಗೂ ವಿಸರ್ಜನೆಯ ಕಾಲಕ್ಕೆ ಯಾವುದೇ ರೀತಿಯ ಮೆರವಣಿಗೆ ಹೊರಡಿಸಬಾರದು. ಗಣೇಶ ವಿಸರ್ಜನೆಯ ಸ್ಥಳದಲ್ಲಿ ಆರತಿ ಬೆಳಗುವ ಪೂಜಾ ವಿಧಿವಿಧಾನವನ್ನು ಮನೆ ಹಾಗೂ ದೇವಸ್ಥಾನಗಳಲ್ಲಿಯೇ ನೆರವೇರಿಸಬೇಕು.

ಗಣೇಶ ವಿಸರ್ಜನೆಯ ಸ್ಥಳದಲ್ಲಿ ಅಗತ್ಯ ಸಮಯದವರೆಗೆ ಮಾತ್ರ ಇದ್ದು, ಹೆಚ್ಚಿನ ವೇಳೆ ಆ ಸ್ಥಳದಲ್ಲಿ ನಿಲ್ಲಬಾರದು. ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಸಣ್ಣ ಮಕ್ಕಳು, ಹಿರಿಯ ನಾಗರಿಕರು ಹಾಗೂ ಅನಾರೋಗ್ಯದಿಂದ ಬಳಲುತ್ತಿರುವವರು ಗಣೇಶ ಪ್ರತಿಷ್ಠಾಪನೆ, ವಿಸರ್ಜನೆಯ ಸ್ಥಳಗಳಿಗೆ ಹೋಗದಂತೆ ನೋಡಿಕೊಳ್ಳುವುದು. ದೇವಸ್ಥಾನಗಳಲ್ಲಿ ಪ್ರತಿಷ್ಠಾಪಿಸಿರುವ ಎಲ್ಲ ಗಣೇಶ ಮೂರ್ತಿಗಳ ವಿಸರ್ಜನೆಯನ್ನು ಏಕಕಾಲಕ್ಕೆ ಮಾಡಬಾರದು.

ಕೋವಿಡ್‌-19 ಸಾಂಕ್ರಾಮಿಕ ರೋಗ ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಹಾಗೂ ಸಾರ್ವಜನಿಕರ ಆರೋಗ್ಯದ ಹಿತದೃಷ್ಠಿಯಿಂದ ಸರ್ಕಾರ, ಜಿಲ್ಲಾಡಳಿತ, ಪೊಲೀಸ್‌, ಮಹಾನಗರ ಪಾಲಿಕೆ, ಆರೋಗ್ಯ, ಮಾಲಿನ್ಯ ನಿಯಂತ್ರಣ ಮಂಡಳಿ, ಅಗ್ನಿಶಾಮಕ ದಳ ಹಾಗೂ ಇತರೆ ಇಲಾಖೆಗಳಿಂದ ಹೊರಡಿಸಲಾದ ಸೂಚನೆ ಹಾಗೂ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಗಣೇಶೋತ್ಸವ ಆಚರಣೆ ಕಾಲಕ್ಕೆ ಸಂದರ್ಭಕ್ಕನುಸಾರವಾಗಿ ಸರ್ಕಾರ, ಜಿಲ್ಲಾಡಳಿತ, ಪೊಲೀಸ್‌, ಮಹಾನಗರ ಪಾಲಿಕೆ ಹಾಗೂ ಸ್ಥಳೀಯ ಸಂಸ್ಥೆಗಳಿಂದ ಹೊರಡಿಸಲಾಗುವ ಎಲ್ಲ ಆದೇಶ, ನಿರ್ದೇಶನ ಹಾಗೂ ಸೂಚನೆಗಳನ್ನು ಸಹ ಕಡ್ಡಾಯವಾಗಿ ಪಾಲಿಸಬೇಕು.
 

Follow Us:
Download App:
  • android
  • ios