ಗೋವಧೆಗೆ ಕಾನೂನಿನಲ್ಲಿ ಅವಕಾಶ ಬೇಡ: ಕರಾವಳಿ ಯತಿಗಳ ಆಗ್ರಹ
ಗೋಹತ್ಯೆ ನಿಷೇಧ ಕಾಯ್ದೆಯನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ವಾಪಸ್ ಪಡೆಯಬಾರದು. ಯಾವುದೇ ಕಾರಣಕ್ಕೂ ಗೋವಿನ ವಧೆಗೆ ಕಾನೂನಿನಲ್ಲಿ ಅವಕಾಶ ನೀಡಬಾರದು ಎಂದು ಕರಾವಳಿ ಜಿಲ್ಲೆಯ ಸ್ವಾಮೀಜಿಗಳು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಮಂಗಳೂರು (ಜೂ.7) ಗೋಹತ್ಯೆ ನಿಷೇಧ ಕಾಯ್ದೆಯನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ವಾಪಸ್ ಪಡೆಯಬಾರದು. ಯಾವುದೇ ಕಾರಣಕ್ಕೂ ಗೋವಿನ ವಧೆಗೆ ಕಾನೂನಿನಲ್ಲಿ ಅವಕಾಶ ನೀಡಬಾರದು ಎಂದು ಕರಾವಳಿ ಜಿಲ್ಲೆಯ ಸ್ವಾಮೀಜಿಗಳು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಮಂಗಳವಾರ ಇಲ್ಲಿನ ವಿಶ್ವಹಿಂದು ಪರಿಷತ್ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ, ‘ಎಮ್ಮೆ ಕಡಿಯಬಹುದಾದರೆ ಹಸು ಯಾಕೆ ಕಡಿಯಬಾರದು’ ಎಂಬ ರಾಜ್ಯ ಪಶುಸಂಗೋಪನಾ ಸಚಿವ ವೆಂಕಟೇಶ್ ಅವರ ಹೇಳಿಕೆಯನ್ನು ಸಂತರು ಹಾಗೂ ಇಡೀ ಹಿಂದು ಸಮಾಜ ತೀವ್ರವಾಗಿ ಖಂಡಿಸುತ್ತದೆ ಎಂದರು.
ಕರಾವಳಿಯಲ್ಲಿ ಲವ್ ಜಿಹಾದಿಗಳ ವಿರುದ್ಧ ಫೀಲ್ಡಿಗಿಳಿಯಲಿದೆ ಹಿಂದೂ ಟಾಸ್ಕ್ ಫೋರ್ಸ್!
ರಾಜ್ಯದಲ್ಲಿ ಮಹಾರಾಜರ ಕಾಲದಿಂದಲೂ ಗೋವಂಶದ ಹತ್ಯೆಗೆ ಅವಕಾಶ ಇರಲಿಲ್ಲ. 1948ರಲ್ಲಿ ಕರ್ನಾಟಕ ಗೋವಧೆ ನಿಷೇಧ ಕಾಯ್ದೆ ಜಾರಿಗೊಂಡಿತ್ತು. ಅದರಲ್ಲಿ ದನ, ಎತ್ತು, ಕರುಗಳ ವಧೆ ಸಂಪೂರ್ಣ ನಿಷೇಧಿಸಲಾಗಿತ್ತು. 1964ರಲ್ಲಿ ಸುಪ್ರೀಂ ಕೋರ್ಚ್ ತೀರ್ಪಿನಿಂದಾಗಿ ಎತ್ತು, ಎಮ್ಮೆ, ಕೋಣಗಳನ್ನು 12 ವರ್ಷದ ನಂತರ ಸರ್ಕಾರದಿಂದ ಅಧಿಕಾರ ಪಡೆದ ವೈದ್ಯರ ಪ್ರಮಾಣಪತ್ರ ಪಡೆದು ವಧಿಸಬಹುದಾಗಿತ್ತಾದರೂ, 1964ರ ಕಾಯ್ದೆಯಲ್ಲಿ ಯಾವುದೇ ವಯಸ್ಸಿನ ದನಗಳ ವಧೆಗೆ ಅವಕಾಶ ಇರಲಿಲ್ಲ ಎಂದರು.
ಎಮ್ಮೆಯನ್ನು ವಧಿಸಬಹುದು, ಹಸುವನ್ನು ವಧಿಸಬಾರದು ಎಂದು 1948ರ ಕೆ.ಸಿ. ರೆಡ್ಡಿ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಾಗೂ 1964ರಲ್ಲಿ ಎಸ್. ನಿಜಲಿಂಗಪ್ಪ ನೇತೃತ್ವದ ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿದ ಕಾಯ್ದೆಯನ್ನು ಈಗ ಅದೇ ಕಾಂಗ್ರೆಸ್ ಪಕ್ಷದ ಪಶುಸಂಗೋಪನಾ ಸಚಿವ ವೆಂಕಟೇಶ್ ಅವರು ವಿರೋಧಿಸುತ್ತಿದ್ದಾರೆ. ಇದು ಹಾಸ್ಯಾಸ್ಪದ ವಿಚಾರ ಎಂದು ಸ್ವಾಮೀಜಿ ಹೇಳಿದರು.
ಕರ್ನಾಟಕ ಗೋವಧೆ ನಿಯಂತ್ರಣ ಮತ್ತು ಸಂರಕ್ಷಣಾ ಕಾಯ್ದೆ 2020 ರೈತರ, ಗೋವುಗಳ ಹಿತ ಕಾಪಾಡುತ್ತದೆ. ಈ ಕಾಯ್ದೆಯನ್ವಯ ರಚಿಸಿರುವ ಜಾನುವಾರು ಸಾಗಾಟ ನಿಯಮಾವಳಿ ಕಟ್ಟುನಿಟ್ಟಾಗಿ ಪಾಲಿಸಿದರೆ ಸಾಗಾಟ ಸಂದರ್ಭ ಗೋವುಗಳ ಆರೋಗ್ಯ ಕಾಪಾಡುತ್ತದೆ. ಗೋವುಗಳನ್ನು ಉಳಿಸಬೇಕು ಎಂದು ಮಹಾತ್ಮಾ ಗಾಂಧೀಜಿ, ಡಾ. ಅಂಬೇಡ್ಕರ್ ಅವರೂ ಹೇಳಿದ್ದಾರೆ. ಪ್ರಾಯ ಹೆಚ್ಚಾಗಿರುವ ಗೋವಂಶದಿಂದಲೂ ಬಹಳಷ್ಟುಪ್ರಯೋಜನ ಇದೆ ಎಂದು ಪ್ರಕರಣವೊಂದರಲ್ಲಿ ಸುಪ್ರೀಂಕೋರ್ಚ್‌ನ ಸಂವಿಧಾನ ಪೀಠ 2005ರಲ್ಲಿ ಹೇಳಿದೆ. ಈ ಹಿನ್ನೆಲೆಯಲ್ಲಿ ಗೋವುಗಳನ್ನು ಉಳಿಸಬೇಕು ಎಂದು ವಜ್ರದೇಹಿ ಸ್ವಾಮೀಜಿ ಆಗ್ರಹಿಸಿದರು.
ಕಳೆದ ಬಾರಿ ಬಿಜೆಪಿ ಸರ್ಕಾರ ಜಾರಿಗೊಳಿಸಿದ್ದ ಗೋಹತ್ಯೆ ನಿಷೇಧ ಕಾಯ್ದೆಯಿಂದಾಗಿ ಕರಾವಳಿ ಭಾಗದಲ್ಲಿ ಗೋಹತ್ಯೆ, ಅಕ್ರಮ ಸಾಗಾಟ ಪ್ರಕರಣಗಳು ಶೇ.80ರಷ್ಟುಕಡಿಮೆಯಾಗಿದ್ದವು. ಇದರಿಂದಾಗಿ ಕೋಮುಸೂಕ್ಷ್ಮ ಪ್ರದೇಶ ಎಂದು ಕರೆಯಲ್ಪಟ್ಟಿದ್ದ ಕರಾವಳಿಯಲ್ಲಿ ಯಾವುದೇ ಸಂಘರ್ಷಗಳು ನಡೆದಿರಲಿಲ್ಲ. ಇದೀಗ ಕಾಂಗ್ರೆಸ್ ಸರ್ಕಾರ ಗೋಹತ್ಯೆ ನಿಷೇಧ ಕಾಯ್ದೆ ವಾಪಸ್ ಪಡೆಯುವ ಮಾತಗಳನ್ನಾಡಿರುವುದರಿಂದ ನಮಗೆ ಭಯ, ಆತಂಕ ಉಂಟಾಗಿದೆ. ಗೋಹತ್ಯೆ ನಿಷೇಧ ಕಾಯ್ದೆ ವಾಪಸ್ ಪಡೆದರೆ ಸರ್ಕಾರÜಕ್ಕೆ ಗೋಹತ್ಯೆಯ ಶಾಪ ತಟ್ಟುತ್ತದೆ. ಮಠಾಧೀಶರು ಬೀದಿಗಿಳಿದು ಹೋರಾಟ ನಡೆಸುವ ಸನ್ನಿವೇಶ ನಿರ್ಮಾಣವಾಗಲಿದೆ. ಇದಕ್ಕೆ ಸರ್ಕಾರ ಅವಕಾಶ ಮಾಡಿಕೊಡಬಾರದು ಎಂದರು.
ಗೋ ಹಂತಕರಿಗಿಲ್ಲ ಉಳಿಗಾಲ, ಕಠಿಣ ಕಾನೂನು ಜಾರಿಗೊಳಿಸಿದ ಸರ್ಕಾರ!
ಕೇಮಾರು ಮಠದ ಶ್ರೀ ಈಶ ವಿಠಲದಾಸ ಸ್ವಾಮೀಜಿ ಮಾತನಾಡಿ, ರಾಜ್ಯ ಕಾಂಗ್ರೆಸ್ ಸರ್ಕಾರ ಗೋಹತ್ಯೆಯಂತಹÜ ಹಿಂಸೆಯ ಕೆಲಸ ಬಿಟ್ಟು ಜನಪರ ರಾಜಕಾರಣ ನಡೆಸಬೇಕು ಎಂದರು.
ಆ್ಯಂಟಿ ಕಮ್ಯೂನಲ್ ವಿಂಗ್‌ಗೆ ಸ್ವಾಗತ:
ಮಂಗಳೂರಿನಲ್ಲಿ ಆ್ಯಂಟಿ ಕಮ್ಯೂನಲ್ ವಿಂಗ್ ರಚಿಸುವ ಬಗ್ಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರ ಪ್ರಸ್ತಾಪವನ್ನು ಶ್ರೀ ರಾಜಶೇಖರಾನಂದ ಸ್ವಾಮೀಜಿ ಸ್ವಾಗತಿಸಿದ್ದು, ದಕ್ಷ ಅಧಿಕಾರಿಗಳ ಮೂಲಕ ಕೋಮು ವಿಧ್ವಂಸಕ ಶಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಕ್ರಿಯಿಸಿದರು.
ಚಿಲಿಂಬಿಯ ಶ್ರೀ ವಿದ್ಯಾನಂದ ಸರಸ್ವತಿ ಸ್ವಾಮೀಜಿ, ಉಡುಪಿ ಶಂಕರಪುರ ದ್ವಾರಕಾಮಯಿ ಮಠದ ಶ್ರೀ ಸಾಯಿ ಈಶ್ವರ್ ಗುರೂಜಿ ಇದ್ದರು.