ಲಕ್ನೋ(ಜೂ.10): ಗೋವುಗಳ ರಕ್ಷಣೆ ಮಾಡುವ ಹಾಗೂ ಇವುಗಳ ಹತ್ಯೆ ತಡೆಯುವ ನಿಟ್ಟಿನಲ್ಲಿ ಯೋಗಿ ಸರ್ಕಾರ ಪ್ರಮುಖ ಹೆಜ್ಜೆ ಇರಿಸಿದೆ. ಉತ್ತರ ಪ್ರದೇಶ ಸಚಿವ ಸಂಪುಟ ಗೋವಧೆ ತಿದ್ದುಪಡಿ ಸುಗ್ರೀವಾಜ್ಞೆ 2020ಕ್ಕೆ ಸಮ್ಮತಿ ಸೂಚಿಸಿದ್ದು, ಇನ್ಮುಂದೆ ಉತ್ತರ ಪ್ರದೇಶದಲ್ಲಿ ಗೋ ಹತ್ಯೆ ಕಾನೂನು ಬಾಹಿರ ಅಪರಾಧವಾಗಲಿದೆ.

ಗೋ ಹತ್ಯೆ ನಡೆಸುವವರ ವಿರುದ್ಧ ಗ್ಯಾಂಗ್‌ಸ್ಟರ್ ಆಕ್ಟ್ ಅಡಿಯಲ್ಲಿ ಆಸ್ತಿ ಮುಟ್ಟುಗೋಲು ಮಾಡುವ ಅಧಿಕಾರವೂ ಇದೆ. ಅಲ್ಲದೇ ಗೋ ಹತ್ಯೆ ನಡೆಸುವವರ ಪೋಸ್ಟರ್ ಆ ವ್ಯಕ್ತಿ ನೆಲೆಸುವ ಪ್ರದೇಶದಲ್ಲಿ ಲಗತ್ತಿಸುವ ವಿಚಾರವೂ ಇದೆ. ಗೋ ಹತ್ಯೆ ಕಾಯ್ದೆ 1955ಕ್ಕೆ ಮತ್ತಷ್ಟು ಬಲ ತುಂಬುವುದೇ ಈ ಕಾನೂನಿನ ಉದ್ದೇಶವಾಗಿದೆ ಎಂದು ಸರ್ಕಾರ ತಿಳಿಸಿದೆ.

ನಮ್ಮಲ್ಲೂ ಇದ್ದಾರೆ ನೀಚರು; ಹಣ್ಣಿನಲ್ಲಿ ವಿಷವಿಟ್ಟು 3 ಹಸುಗಳನ್ನು ಕೊಂದರು..!

ಈ ಪ್ರಸ್ತಾವನೆ ಅಂಗೀಕಾರ ಪಡೆದ ಬಳಿಕ, ಮೊದಲ ಬಾರಿ ಗೋ ಹತ್ಯೆ ನಡೆಸಿರುವ ಆರೋಪ ಸಾಬೀತಾದಲ್ಲಿ ಕನಿಷ್ಟ ಮೂರು ವರ್ಷದಿಂದ ಗರಿಷ್ಟ ಹತ್ತು ವರ್ಷ ಜೈಲು ಶಿಕ್ಷೆಯಾಗುವ ಅಥವಾ ಮೂರರಿಂದ ಐದು ಲಕ್ಷದವರೆಗೆ ದಂಡ ವಿಧಿಸಲಾಗುತ್ತದೆ. ಇನ್ನು ಎರಡನೇ ಬಾರಿ ಈ ಆರೋಪ ಸಾಬೀತಾದರೆ, ಶಿಕ್ಷೆ ಹಾಗೂ ದಂಡ ಎರಡೂ ವಿಧಿಸಲಾಗುತ್ತದೆ. ಗ್ಯಾಂಗ್‌ಸ್ಟರ್ ಆಕ್ಟ್ ಅನ್ವಯ ತನಿಖೆ ಹಾಗೂ ಸಂಪತ್ತು ಮುಟ್ಟುಗೋಲು ಮಾಡುವ ಅಧಿಕಾರವನ್ನೂ ನೀಡಲಾಗಿದೆ. 

ಇನ್ನು ಗೋವುಗಳ ಅಂಗಗಳನ್ನು ಕತ್ತರಿಸಿ, ಗಂಭೀರ ಗಾಯಗಳನ್ನುಂಟು ಮಾಡಿದ ಆರೋಪ ಸಾಬೀತಾದಲ್ಲಿ ಒಂದರಿಂದ ಏಳು ವರ್ಷದವರೆಗೆ ಜೈಲು ಶಿಕ್ಷೆ ಹಾಗೂ ಒಂದರಿಂದ ಮೂರು ಲಕ್ಷದವರೆಗೆ ದಂಡ ವಿಧಿಸುವ ಅಧಿಕಾರ ನೀಡಲಾಗಿದೆ.