Asianet Suvarna News Asianet Suvarna News

ಚಿಕ್ಕಮಗಳೂರು: ಅಪಾಯದ ಅರಿವಿದ್ದರೂ ನದಿ ದಾಟಲು ಕಾಲುಸಂಕವೇ ಗತಿ

ಕೊಪ್ಪ ಮತ್ತು ತೀರ್ಥಹಳ್ಳಿ ಎರಡು ತಾಲೂಕಿನ ಗಡಿಭಾಗವಾದ ಮಾತ್ಗಾರ್‌ ಹಾಗೂ ಬಾಂದ್‌ಹಡ್ಲು ಗ್ರಾಮವನ್ನು ಪ್ರತ್ಯೇಕಿಸುವ ಬ್ರಾಹ್ಮಿನದಿಯನ್ನು ದಾಟಲು ಗ್ರಾಮಸ್ಥರು ಇಲ್ಲಿರುವ ಕಾಲು ಸಂಕವನ್ನೇ ಬಳಸಬೇಕಾದ ಸಂಕಷ್ಟದ ಸ್ಥಿತಿ ಇದೆ. ಮಳೆಗಾಲದಲ್ಲಿ ನದಿ ತುಂಬಿ ಹರಿಯುವುದರಿಂದ ಸಮರ್ಪಕ ಸೇತುವೆ ವ್ಯವಸ್ಥೆ ಮಾಡಬೇಕಿದೆ.

No proper Bridge to Cross Bramhi River near Koppa in Chikkamagaluru
Author
Bangalore, First Published Jul 23, 2019, 11:41 AM IST

ಚಿಕ್ಕಮಗಳೂರು(ಜು.23): ಸ್ವಾತಂತ್ರ್ಯ ಬಂದು 72 ವರ್ಷಗಳು ಕಳೆದರೂ ಮಲೆನಾಡು ಭಾಗದ ಕೆಲವು ಹಳ್ಳಿಗಳು ಇನ್ನೂ ಮೂಲ ಸೌಲಭ್ಯಗಳ ಕೊರತೆಯನ್ನು ಎದುರಿಸುತ್ತಿದೆ. ಕೊಪ್ಪ ಮತ್ತು ತೀರ್ಥಹಳ್ಳಿ ಎರಡು ತಾಲೂಕಿನ ಗಡಿಭಾಗವಾದ ಮಾತ್ಗಾರ್‌ ಹಾಗೂ ಬಾಂದ್‌ಹಡ್ಲು ಗ್ರಾಮವನ್ನು ಪ್ರತ್ಯೇಕಿಸುವ ಬ್ರಾಹ್ಮಿನದಿಯನ್ನು ದಾಟಲು ಗ್ರಾಮಸ್ಥರು ಇಲ್ಲಿರುವ ಕಾಲು ಸಂಕವನ್ನೇ ಬಳಸಬೇಕಾದ ಸಂಕಷ್ಟದ ಸ್ಥಿತಿ ಇದೆ.

ನದಿ ದಾಟಲು ಇಂದಿಗೂ ಕಾಲುಸಂಕವೇ ಆಧಾರ:

ಈ ಎರಡೂ ತಾಲೂಕಿನ ಗಡಿಭಾಗವಾದ ಕೆಸವೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಿದ್ಧರಮಠ ಸಮೀಪವಿರುವ ಗ್ರಾಮ ಮಾತ್ಗಾರ್‌ ಹಾಗೂ ತೀರ್ಥಹಳ್ಳಿ ತಾಲೂಕು ಶೇಡ್ಗಾರ್‌ ಗ್ರಾಮ ಪಂಚಾಯಿತಿ ವ್ಯಾಪ್ತಿಗೊಳಪಡುವ ಗ್ರಾಮ ಬಾಂದ್ಹಡ್ಲು ಈ ಎರಡು ಗ್ರಾಮಗಳನ್ನು ಸಂಪರ್ಕಿಸಲು ಇಲ್ಲಿನ ಗ್ರಾಮಸ್ಥರಿಗೆ ಎರಡು ಕಾಲು ಸಂಕವೇ ಆಧಾರ!

ಭಯಹುಟ್ಟಿಸುತ್ತದೆ ಕಾಲುಸಂಕದ ನಡಿಗೆ:

ಕಾಲು ಸಂಕವನ್ನು ನೋಡಲು ದೂರದಿಂದ ಸುಂದರವಾಗಿ ಕಂಡರೂ, ಅದರಲ್ಲಿ ನಡೆಯುವಾಗ ಭಯಕಾಡುತ್ತದೆ. ಒಂದುವೇಳೆ ಕೆಳಮಟ್ಟದಲ್ಲಿ ಕಾಲುಸಂಕವನ್ನು ನಿರ್ಮಿಸಿದ್ದೇ ಆದಲ್ಲಿ ನದಿನೀರಿನ ಹರಿವು ಜಾಸ್ತಿಯಾದಾಗ ಕಾಲು ಸಂಕದ ಮೇಲೆ ಓಡಾಡಲು ಸಾಧ್ಯ ಆಗುವುದಿಲ್ಲ. ಕಾಲುಸಂಕ ಮಗುಚುವ ಸಾಧ್ಯತೆಯೇ ಹೆಚ್ಚಿರುತ್ತದೆ. ಆದ್ದರಿಂದ ಸಾಧ್ಯವಾದಷ್ಟುಮೇಲ್ಮಟ್ಟದಲ್ಲಿ ಕಾಲುಸಂಕ ಕಟ್ಟಿರುತ್ತಾರೆ. ಮಳೆಗಾಲದಲ್ಲಿ ಕೆಂಪಡರಿದ ನೀರು ಎಂಥವರಿಗೂ ಒಮ್ಮೆ ಭಯ ಹುಟ್ಟಿಸುತ್ತದೆ.

ಅಪಾಯದ ಬಗ್ಗೆ ಅರಿವಿದ್ದರೂ, ನದಿ ದಾಟಲು ಕಾಲುಸಂಕವೇ ಗತಿ:

ಈ ಗ್ರಾಮಗಳಲ್ಲಿರುವ ವಿದ್ಯಾರ್ಥಿಗಳಿಗೆ ಪಟ್ಟಣದ ಶಾಲಾ- ಕಾಲೇಜುಗಳಿಗೆ ಬಂದು ಹೋಗಲು ದಿನನಿತ್ಯದ ಹಾದಿ ಕಾಲುಸಂಕವಾಗಿದೆ. ಕುಡಿಯುವ ನೀರು, ದನ- ಕರುಗಳಿಗೆ ಮೇವು, ಕಟ್ಟಿಗೆ ಇತ್ಯಾದಿಗಳಿಗೆ ಒಂದು ಗ್ರಾಮದಿಂದ ಮತ್ತೊಂದು ಗ್ರಾಮಕ್ಕೆ ಬರಲೇಬೇಕಿರುವುದು ಅನಿವಾರ್ಯ ಪರಿಸ್ಥಿತಿ. ಆರೋಗ್ಯ ಸರಿ ಇಲ್ಲದಾಗ ಅವರನ್ನು ಪಟ್ಟಣದ ಆಸ್ಪತ್ರೆಗೆ ಕರೆದೊಯ್ಯಲೂ ಇದೇ ಕಾಲು ಸಂಕವೇ ಗತಿ. ಬಾಂದ್ಹಡ್ಲು ಗ್ರಾಮಸ್ಥರಿಗೆ ಅಗತ್ಯ ಕೆಲಸ ಕಾರ್ಯಗಳಿಗೆ ಸಿದ್ದರಮಠದ ಮೂಲಕ ಕೊಪ್ಪ ಪಟ್ಟಣವೇ ಸಮೀಪವಾಗಿದ್ದರೂ, ಇದು ತೀರ್ಥಹಳ್ಳಿ ತಾಲೂಕು ವ್ಯಾಪ್ತಿಗೆ ಸೇರಿರುವುದರಿಂದ ತಮ್ಮೆಲ್ಲಾ ಕೆಲಸಕಾರ್ಯಗಳಿಗೂ ಮೃಗವಧೆ ಮೂಲಕ ತೀರ್ಥಹಳ್ಳಿಗೆ ಹೋಗಬೇಕಾದ ಅನಿವಾರ್ಯ ಪರಿಸ್ಥಿತಿ ಉಂಟಾಗಿದೆ. ಜನ ಮತ್ತು ವಾಹನ ಸಂಚಾರಕ್ಕೆ ಅನುವಾಗುವಂತೆ ಈ ಭಾಗದಲ್ಲಿ ಒಂದು ಸೇತುವೆ ಅಗತ್ಯವಿದೆ ಎಂದು ಸ್ಥಳೀಯರ ಅನಿಸಿಕೆ.

ಮತ ಕೇಳುವಾಗ ಭರವಸೆ ನೀಡ್ತಾರೆ, ಈಡೇರಿಸಲ್ಲ: 

ಪ್ರತಿ ಬಾರಿ ಮತ ಯಾಚನೆಗೆ ಬರುವವರು ಇಲ್ಲಿವರೆಗೆ ನೀಡಿರುವ ಭರವಸೆಗಳು ಕಾರ್ಯರೂಪಕ್ಕೆ ಬಾರದೇ ಹುಸಿ ಭರವಸೆಗಳಾಗಿಯೇ ಉಳಿದಿವೆ. ಎರಡು ವರ್ಷಗಳ ಹಿಂದೆ ಮಳೆಗಾಲದಲ್ಲಿ ಅಡಕೆಗೆ ಔಷಧಿ ಹೊಡೆಯಲು ಬಂದಿದ್ದವರೊಬ್ಬರು ದಾಟುವಾಗ ಕಾಲುಸಂಕ ತುಂಡಾಗಿ, ನೀರಿಗೆ ಬಿದ್ದಿದ್ದರು. ಕಾಲು ಸಂಕಕ್ಕೆ ತಂತಿ ಕಟ್ಟಿದ್ದರಿಂದ ಜೀವ ಹಾನಿ ಆಗಿರಲಿಲ್ಲ ಎಂದು ತೀರ್ಥಹಳ್ಳಿ ತಾಲೂಕು ಬಾಂದ್ಹಡ್ಲುವಿನ ಗ್ರಾಮಸ್ಥರೊಬ್ಬರು ಸಂಚಾರದ ಗಂಭೀರ ಸಮಸ್ಯೆ ಹೇಳಿಕೊಂಡರು.

ಕಾಲುಸಂಕ: ಜಂಬೆಕೊಪ್ಪ ಗ್ರಾಮಸ್ಥರ ಮುಗಿಯದ ಆತಂಕ

ಕಾಲು ಸಂಕದ ಮೂಲಕ ಕುಡಿಯುವ ನೀರನ್ನು ಕೊಂಡೊಯ್ಯತ್ತೇವೆ. ಸಮೀಪದಲ್ಲಿ ಮತ್ತೊಂದು ಕಾಲುಸಂಕವನ್ನು ನಿರ್ಮಿಸಿದ್ದಾರೆ. ಅಲ್ಲಿ ವಿದ್ಯಾರ್ಥಿಗಳೂ ಓಡಾಡುತ್ತಾರೆ. ಇಲ್ಲಿನ ಆಟೋ ಚಾಲಕರು ಸಾಧಾರಣವಾಗಿ ಸಿದ್ದರಮಠದಲ್ಲಿ ಆಟೋ ನಿಲ್ಲಿಸಿ 3 ಕಿಲೋ ಮೀಟರ್‌ ದೂರ ಬೈಕ್‌ನಲ್ಲಿ ಬರುತ್ತಾರೆ. ಮಳೆಗಾಲದಲ್ಲಿ ಕಾಲು ಸಂಕವನ್ನು ದಾಟಿ ಹೋಗಲು ಸ್ವಲ್ಪ ಸಮಯವೇ ಹಿಡಿಯುತ್ತದೆ ಎಂದು ಕೊಪ್ಪ ತಾಲೂಕಿನ ಮಾತ್ಗಾರ್‌ನ ಗೋಪಾಲ್‌ ನಾಯ್ಕ್‌ ಹೇಳುತ್ತಾರೆ.

ಗ್ರಾಮಸ್ಥರು ಕಾಲು ಸಂಕದಲ್ಲಿ ಓಡಾಡಲು ಸಮಸ್ಯೆ ಎದುರಿಸುತ್ತಿರುವುದನ್ನು ತಡೆಗಟ್ಟಲು ಜನಪ್ರತಿನಿಧಿಗಳು ಮುಂದಾಗಬೇಕು. ಈ ಭಾಗದ ಗ್ರಾಮಸ್ಥರಿಗೆ ಅನುಕೂಲ ಆಗುವಂತೆ ಕಾಯಂ ಸೇತುವೆ ನಿರ್ಮಾಣ ಆಗಬೇಕೆಂದು ಗ್ರಾಮಸ್ಥರಾದ ರಂಗನಾಥ್‌, ವಿಶ್ವನಾಥ, ಸಿದ್ದರಮಠದ ಎಸ್‌.ಶಶಿಧರ್‌, ಯೋಗೀಶ್‌ ಮುಂತಾದವರು ಆಗ್ರಹಿಸಿದ್ದಾರೆ.

ಹಮೀದ್‌ ಕೊಪ್ಪ

Follow Us:
Download App:
  • android
  • ios