ಶಿವಮೊಗ್ಗ(ಜು.16): ಸಾಗರ ತಾಲೂಕಿನ ಹೊಸೂರು ಗ್ರಾ.ಪಂ. ವ್ಯಾಪ್ತಿಗೊಳಪಡುವ ಜಂಬೆಕೊಪ್ಪ ಗ್ರಾಮಸ್ಥರು ಮಳೆಗಾಲದಲ್ಲಿ ಕಾಲು ಸಂಕದ ಮೇಲೆ ಹಳ್ಳ ದಾಟುವ ಅನಿವಾರ್ಯವಿದ್ದು, ಹಲವು ಬಾರಿ ಮನವಿ ಸಲ್ಲಿಸಿದರೂ ಇದುವರೆಗೂ ಸೇತುವೆಯ ವ್ಯವಸ್ಥೆಯಾಗಿಲ್ಲ.

ಶರಾವತಿ ನದಿಗೆ ಲಿಂಗನಮಕ್ಕಿ ಅಣೆಕಟ್ಟು ನಿರ್ಮಿಣವಾದಾಗ ಮುಳುಗಡೆ ಹೊಂದಿ ವಲಸೆ ಬಂದ ಕುಟುಂಬಗಳು ಜಂಬೆಕೊಪ್ಪದಲ್ಲಿ ನೆಲೆಸಿವೆ. ಮೂಲತಃ ಅಂಬಾರಗೊಡ್ಲು ಸಮೀಪದ ಹೆಡಿತ್ರ ಗ್ರಾಮದವರಾದ ಇವರು ಕೃಷಿ ಜಮೀನು ಅರಸಿ ಇಲ್ಲಿ ಬಂದು ಬದುಕು ಕಟ್ಟಿಕೊಂಡಿದ್ದಾರೆ. ಕಳೆದ 55-60 ವರ್ಷಗಳಿಂದ ವಾಸವಾಗಿರುವ ಇವರಿಗೆ ಸಮರ್ಪಕ ರಸ್ತೆ, ನಿರಂತರ ವಿದ್ಯುತ್‌, ಹಳ್ಳಕ್ಕೆ ಸೇತುವೆ ಇತ್ಯಾದಿ ಮೂಲ ಸೌಕರ್ಯ ಇಂದಿಗೂ ಇಲ್ಲ.

ಹಲವು ಬಾರಿ ಸೇತುವೆಗೆ ಮನವಿ ಸಲ್ಲಿಸಿದರೂ ರೆಸ್ಪಾನ್ಸ್ ಇಲ್ಲ:

ಮಳಲಿಮಠದಿಂದ ಹರಿದು ಬರುವ ಹಳ್ಳ ದೊಡ್ಡದಾಗುತ್ತ ಜಂಬೆಕೊಪ್ಪ ಗ್ರಾಮದಲ್ಲಿ ಜೋರಾಗಿ ಹರಿಯುತ್ತಾ ಸಾಗಿ ಹೊಸೂರಿನ ನಂದಿ ಹೊಳೆಗೆ ಸೇರುತ್ತದೆ. ಜಂಬೆಕೊಪ್ಪ ಹಳ್ಳದ ಆಚೆ ದಡದಲ್ಲಿ 15 ಕುಟುಂಬಗಳಿವೆ. ಈ ಕುಟುಂಬಸ್ಥರ ಮಕ್ಕಳು ಶಾಲೆ -ಕಾಲೇಜಿಗೆ ಹೋಗಲು ಈ ಹಳ್ಳ ದಾಟಲೇ ಬೇಕು. ಹಲವು ದಶಕಗಳಿಂದ ಜನ ಪ್ರತಿನಿಧಿಗಳಿಗೆ ಇಲ್ಲಿನ ಗ್ರಾಮಸ್ಥರು ಸೇತುವೆ ಬೇಡಿಕೆ ಸಲ್ಲಿಸುತ್ತಾ ಬಂದಿದ್ದಾರೆ. ಮಳೆಗಾಲ ಆರಂಭದಿಂದ ಅಕ್ಟೋಬರ್‌ ವರೆಗೂ ಈ ಹಳ್ಳ ತುಂಬಿ ಹರಿಯುತ್ತದೆ. ಜೋರಾಗಿ ಮಳೆ ಬಂದಾಗ ಇಲ್ಲಿನ ಕಾಲುಸಂಕ ಸಹ ನೀರಿನಲ್ಲಿ ಮುಳುಗುತ್ತದೆ. ನೀರಿನ ರಭಸ ಕಡಿಮೆಯಾಗುವವರೆಗೆ ಕಾದು ಸಂಕ ದಾಟಬೇಕಾದ ಅನಿವಾರ್ಯ ಒದಗುತ್ತದೆ.

ಮಕ್ಕಳನ್ನು ಸಂಕ ದಾಟಿಸುವುದೇ ಪೋಷಕರಿಗೆ ಸವಾಲು:

ಪ್ರತಿ ವರ್ಷ ಮಳೆಗಾಲದ ಆರಂಭದಲ್ಲಿ ಇಲ್ಲಿನ ಜನರು ಅಡಕೆ ಮರ, ಕಾಡು ಮರ ಇತ್ಯಾದಿ ಬಳಸಿ ಕಾಲು ಸಂಕ ನಿರ್ಮಿಸುತ್ತಾರೆ. ಈ ಗ್ರಾಮದ ವಿದ್ಯಾರ್ಥಿಗಳು ನಂದಿತಳೆಯ ಸರಕಾರಿ ಪ್ರಾಥಮಿಕ ಶಾಲೆಗೆ ಹೋಗಲು ಈ ಮಾರ್ಗವಲ್ಲದೆ ಬೇರೆ ಯಾವುದೇ ಸಂಪರ್ಕ ರಸ್ತೆ ಇಲ್ಲ. ಮಳೆಗಾಲದಲ್ಲಿ ಬೆಳಗ್ಗೆ ಮತ್ತು ಸಂಜೆ ಶಾಲಾ ಮಕ್ಕಳನ್ನು ಸಂಕ ದಾಟಿಸುವುದೇ ಪೋಷಕರಿಗೆ ಮುಖ್ಯ ಕಾರ್ಯವಾಗುತ್ತದೆ.

ಈಗಿರುವ ಕಾಲು ಸಂಕದ ಸ್ಥಳದ ಎರಡೂ ಕಡೆ ಖಾಸಗಿ ವ್ಯಕ್ತಿಯ ಜಮೀನು ಇದೆ. ಸೇತುವೆ ನಿರ್ಮಾಣವಾದರೆ ಎರಡೂ ಕಡೆ ಸಂಪರ್ಕ ರಸ್ತೆ ನಿರ್ಮಿಸಿದರೆ ಕೃಷಿ ಜಮೀನು ನಷ್ಟವಾಗುತ್ತದೆ. ಅದಕ್ಕಾಗಿ ಈ ಸ್ಥಳದಿಂದ ಸುಮಾರು 400 ಮೀ . ದೂರದಲ್ಲಿ ಸರಕಾರಿ ಜಮೀನು ಇದ್ದು ಅಲ್ಲಿ ಶಾಶ್ವತ ಸೇತುವೆ ನಿರ್ಮಿಸುವಂತೆ ಗ್ರಾಮಸ್ಥರು ಸಾಗರ ವಿಧಾನಸಭಾ ಕ್ಷೇತ್ರದ ಶಾಸಕ ಹರತಾಳು ಹಾಲಪ್ಪನವರಿಗೆ ಕಳೆದ ವರ್ಷ ಮನವಿ ನೀಡಿದ್ದರು. ಶಾಸಕರ ಕ್ಷೇತ್ರಾಭಿವೃದ್ಧಿ ಅನುದಾನದಿಂದ ಸೇತುವೆ ನಿರ್ಮಿಸುವ ಭವರಸೆ ದೊರೆತಿತ್ತು. ಆದರೆ ಈ ವರೆಗೂ ಯಾವುದೇ ಕಾಮಗಾರಿ ನಡೆದಿಲ್ಲ.