ಬೆಂಗಳೂರು(ಜು.21): ಬಿಬಿಎಂಪಿಯ 12 ಚಿತಾಗಾರದಲ್ಲಿ 10 ಮಾತ್ರ ಕಾರ್ಯ ನಿರ್ವಹಿಸುತ್ತಿವೆ, ಪಾಲಿಕೆಯ ಕೇಂದ್ರ ಭಾಗದ ಬಹುತೇಕ ಸ್ಮಶಾನಗಳು ಭರ್ತಿಯಾಗಿವೆ. ಇನ್ನು ಜಿಲ್ಲಾಡಳಿತ ನಗರದ 10 ಕಡೆ ಗುರುತಿಸಿರುವ ಸ್ಮಶಾನಗಳ ವ್ಯಾಜ್ಯಗಳು ಪರಿಹಾರವಾಗಿಲ್ಲ. ಹೀಗಾಗಿ, ಬೆಂಗಳೂರಿನಲ್ಲಿ ಮೃತದೇಹಗಳ ಅಂತ್ಯಕ್ರಿಯೆ ಸಮಸ್ಯೆ ಸದ್ಯಕ್ಕೆ ಪರಿಹಾರವಾಗುವ ಲಕ್ಷಣಗಳಿಲ್ಲ.

ನಗರದಲ್ಲಿ ಸುಮಾರು ಪ್ರತಿ ದಿನಕ್ಕೆ 80 ರಿಂದ 100 ಮಂದಿ ಸಾಮಾನ್ಯವಾಗಿ ಮೃತಪಡುತ್ತಾರೆ. ಇದರಲ್ಲಿ ಸುಮಾರು 50 ರಿಂದ 70 ಮಂದಿಯನ್ನು ಬಿಬಿಎಂಪಿ ವಿದ್ಯುತ್‌ ಚಿತಾಗಾರದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗುತ್ತದೆ. ಇದೀಗ ಸಾಮಾನ್ಯ ಸಾವಿನ ಜೊತೆಗೆ ಕೊರೋನಾ ಸೋಂಕಿನಿಂದ ಮೃತಪಡುತ್ತಿರುವ ಸಂಖ್ಯೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಬಿಬಿಎಂಪಿಯ ಚಿತಾಗಾರದಲ್ಲಿ ಮೃತದೇಹಗಳ ಅಂತ್ಯಕ್ರಿಯೆಗೆ ಸಾರ್ವಜನಿಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಬಿಎಸ್‌ವೈ ಸರ್ಕಾರಕ್ಕೆ ಖಡಕ್ ಎಚ್ಚರಿಕೆ ರವಾನಿಸಿದ ಡಿಕೆ ಶಿವಕುಮಾರ್

ಅದರಲ್ಲೂ ಬಿಬಿಎಂಪಿಯ ಎಂಟು ವಲಯದಲ್ಲಿ 12 ವಿದ್ಯುತ್‌ ಚಿತಾಗಾರಗಳಿವೆ. ಅದರಲ್ಲಿ ಬೊಮ್ಮನಹಳ್ಳಿಯ ಕೋಡಲುಗೆರೆ ಹಾಗೂ ಪಶ್ಚಿಮ ವಲಯದ ಮೈಸೂರು ರಸ್ತೆಯ ಚಿತಾಗಾರ ದುರಸ್ಥಿತಿಯಲ್ಲಿವೆ. ಸಾರ್ವಜನಿಕರು ಸಹ ಮೃತದೇಹಗಳನ್ನು ಮಣ್ಣು ಮಾಡುವುದಕ್ಕಿಂತ ಚಿತಾಗಾರದಲ್ಲಿ ಅಂತ್ಯಕ್ರಿಯೆ ಮಾಡುವುದಕ್ಕೆ ಇಚ್ಚೆಪಡುತ್ತಾರೆ. ಹೀಗಾಗಿ, ನಗರ ಕೇಂದ್ರ ಭಾಗದಲ್ಲಿರುವ ಚಿತಾಗಾರಗಳ ಮೇಲೆ ಒತ್ತಡ ಹೆಚ್ಚಾಗಿದೆ.

ಇನ್ನು ಬೆಂಗಳೂರಿನ ಕೇಂದ್ರಭಾಗದಲ್ಲಿ ಸುಮಾರು 45 ಸ್ಮಶಾನಗಳಿವೆ. ಅದರಲ್ಲಿ ಹರಿಚಂದ್ರಘಾಟ್‌, ವಿಲ್ಸನ್‌ ಗಾರ್ಡ್‌ ಸೇರಿದಂತೆ ಪ್ರಮುಖ ಸ್ಮಶಾನಗಳು ಭರ್ತಿಯಾಗಿವೆ. ಹೀಗಾಗಿ ನಗರದಲ್ಲಿ ಅದಕ್ಕೆ ಪರ್ಯಾವಾಗಿ ಕಳೆದ ಒಂದು ವರ್ಷದಿಂದ ನಗರ ಹೊರವಲಯದಲ್ಲಿರುವ ಬಿಬಿಎಂಪಿಯ ಐದು ಕಡೆ ಸುಮಾರು 8 ಎಕರೆ ಸ್ಮಶಾನಕ್ಕೆ ನಿಗದಿ ಪಡಿಸಲಾಗಿದೆ. ಅಭಿವೃದ್ಧಿಗೆ .40 ಲಕ್ಷ ಸಹ ಅನುದಾನ ಮೀಸಲಿಡಲಾಗಿದೆ. ಆದರೆ, ಆ ಸ್ಮಶಾನಗಳಲ್ಲಿ ಇನ್ನು ವ್ಯವಸ್ಥೆ ಮಾಡಿಲ್ಲ.

ಹೊಸ ಸ್ಮಶಾನ ಹಸ್ತಾಂತರಕ್ಕೆ ಹಲವು ಸಮಸ್ಯೆ:

ನಗರದಲ್ಲಿ ಕೊರೋನಾ ಸಾವಿನ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆ ಕಂಡು ಬಂದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ನಗರದ ಹೊರ ವಲಯದಲ್ಲಿ 8 ಕಡೆ ಸುಮಾರು 35 ಎಕರೆ ಪ್ರದೇಶವನ್ನು ಸ್ಮಶಾನಕ್ಕೆ ಗುರುತಿಸಿದೆ. ಆದರೆ, ಆ ಜಾಗದ ಸರ್ವೇ ಕಾರ್ಯ ನಡೆಯುತ್ತಿದೆ. ಪೂರ್ಣಗೊಂಡ ಬಳಿಕ ಅದನ್ನು ಬಿಬಿಎಂಪಿಗೆ ಹಸ್ತಾಂತರ ಮಾಡಲಾಗುತ್ತಿದೆ. ಅದಕ್ಕೆ ಇನ್ನು 15 ದಿನ ಕಾಲಾವಕಾಶ ಬೇಕಾಗಲಿದೆ. ಅದರೊಂದಿಗೆ ಅಲ್ಲಿ ಒತ್ತುವರಿ ಸಹ ಆಗಿದ್ದು, ಆ ಕುರಿತು ಹಲವು ವ್ಯಾಜ್ಯಗಳು ನ್ಯಾಯಲಯದಲ್ಲಿವೆ. ಹೀಗಾಗಿ, ಹೊಸ ಸ್ಮಶಾನಗಳು ಅಂತ್ಯಕ್ರಿಯೆಗೆ ದೊರೆಯುವುದು ಅನುಮಾನವಾಗಿದೆ. ಸರ್ಕಾರ ಮತ್ತು ಬಿಬಿಎಂಪಿ ಗಡ್ಡಕ್ಕೆ ಬೆಂಕಿ ಬಿದ್ದಾಗ ಬಾಯಿ ತೆಗೆಯುವ ಕೆಲಸಕ್ಕೆ ಮುಂದಾಗಿವೆ. ಹೀಗಾಗಿ, ಬೆಂಗಳೂರಿನಲ್ಲಿ ತಕ್ಷಣಕ್ಕೆ ಅಂತ್ಯಕ್ರಿಯೆ ಸಮಸ್ಯೆ ಪರಿಹಾರವಾಗುವುದು ಅನುಮಾನ.

ಕೋವಿಡ್ ಆಸ್ಪತ್ರೆಗಳಿಗೆ ಪರಿಸರ ಸ್ನೇಹಿ ಬೆಡ್ ಖರೀದಿಸಿದ ಕಾಂಗ್ರೆಸ್, ಮಲಗಿ ಟ್ರಯಲ್ ನೋಡಿದ ಡಿಕೆಶಿ

ನಿಗದಿ ಪಡಿಸಿರುವ ಸ್ಮಶಾನ ಸಿದ್ಧತೆ ಹಾಗೂ ಸ್ಥಗಿತಗೊಂಡಿರುವ ಬಿಬಿಎಂಪಿಯ ಚಿತಾಗಾರದ ದುರಸ್ತಿಗೆ ತಕ್ಷಣ ಕ್ರಮಕೊಳ್ಳಲಾಗುವುದು. ಮೃತರ ಅಂತ್ಯಕ್ರಿಯೆ ತೊಂದರೆ ಆಗದಂತೆ ಎಚ್ಚರಿಕೆ ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು. ಮಂಗಳವಾರ ನಗರದ ಕೆಲವು ಚಿತಾಗಾರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗುವುದು ಎಂದು ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ್‌ ಪ್ರಸಾದ್‌ ತಿಳಿಸಿದ್ದಾರೆ.

ಜಿಲ್ಲಾಡಳಿತ ಗುರುತಿಸಿದ ಸ್ಮಶಾನ

ಗಿಡ್ಡೆನಹಳ್ಳಿಯಲ್ಲಿ 4 ಎಕರೆ, ಸೋಮನಹಳ್ಳಿಯಲ್ಲಿ 1.18 ಎಕರೆ, ಗುಳಿಕಮಲೆ ಎರಡು ಕಡೆ ತಲಾ 4 ಎಕರೆ, ತಿಪ್ಪಗೊಂಡನಹಳ್ಳಿ 5 ಎಕರೆ, ಗಿಡ್ಡೆನÖಳ್ಳಿಯಲ್ಲಿ 3 ಎಕರೆ, ಎಂ.ಹೊಸಹಳ್ಳಿ 2 ಎಕರೆ, ಹುತ್ತಹಳ್ಳಿ 2 ಎಕರೆ, ಮಾರೇನಹಳ್ಳಿ 5 ಎಕರೆ ಹಾಗೂ ಮಾವಳ್ಳಿಪುರದಲ್ಲಿ 5 ಎಕರೆ ಒಟ್ಟು 35.18 ಎಕರೆ ಗುರುತಿಸಿ ಜಿಲ್ಲಾಧಿಕಾರ ಅದೇಶಿಸಿದ್ದರು.

ವರ್ಷದ ಹಿಂದೆ ಪಾಲಿಕೆಗೆ ಹಸ್ತಾಂತರವಾದ ಸ್ಮಶಾನ

ಕುದುರೆಗೆರೆ 2 ಎಕರೆ, ಬಾಗಲೂರು 1ಎಕರೆ, ಶಿವಪುರ 2ಎಕರೆ, ಹುಲ್ಲೇಗೌಡನಹಳ್ಳಿ 2 ಎಕರೆ, ದೇವಸಂದ್ರದಲ್ಲಿ 30 ಗುಂಟೆ ಒಟ್ಟು 7.30 ಎಕೆರೆ ಬಿಬಿಎಂಪಿಗೆ ಸರ್ಕಾರದಿಂದ ಹಸ್ತಾಂತರವಾಗಿತ್ತು.

-ವಿಶ್ವನಾಥ ಮಲೇಬೆನ್ನೂರು