ಬೆಂಗಳೂರು(ಜು.20): ಕೊರೋನಾ  ಪರಿಸ್ಥಿತಿ ನಿರ್ವಹಣೆಯಲ್ಲಿ ಸರ್ಕಾರದ ವೈಫಲ್ಯ ಮತ್ತು ಕೋವಿಡ್-19 ಚಿಕಿತ್ಸಾ ಸಲಕರಣೆ ಖರೀದಿಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ಸೇರಿದಂತೆ ರಾಜ್ಯಾದ್ಯಂತ ಸೋಂಕಿತರ ಪರದಾಟ ಮತ್ತಿತರ ವಿಚಾರಗಳ ಬಗ್ಗೆ ಚರ್ಚಿಸಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಸಭೆ ನಡೆಸಿದರು. 

ಕೆಪಿಸಿಸಿ ಕಚೇರಿಯಲ್ಲಿ ನಡೆದ ಈ ಸಭೆಯಲ್ಲಿ ಹಿರಿಯ ಮುಖಂಡರು, ಕಾಂಗ್ರೆಸ್ ಕೋವಿಡ್ ಕಾರ್ಯಪಡೆ ಹಾಗೂ ವೈದ್ಯ ಘಟಕದ ಪ್ರತಿನಿಧಿಗಳು ಭಾಗಿಯಾಗಿದ್ದರು. 

ಕೋವಿಡ್ ಆಸ್ಪತ್ರೆಗಳಿಗೆ ಪರಿಸರ ಸ್ನೇಹಿ ಬೆಡ್ ಖರೀದಿಸಿದ ಕಾಂಗ್ರೆಸ್, ಮಲಗಿ ಟ್ರಯಲ್ ನೋಡಿದ ಡಿಕೆಶಿ

ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್​, ಕೋವಿಡ್-19 ಸೋಂಕಿತರು ಬಳಸಿದ ಹಾಸಿಗೆಗಳನ್ನು ಹಾಸ್ಟೆಲ್ ವಿದ್ಯಾರ್ಥಿಗಳಿಗೆ ನೀಡಲು ಸರ್ಕಾರ ನಿರ್ಧರಿಸಿದೆ. ಇದರ ವಿರುದ್ಧ ಆಂದೋಲನ ಆರಂಭಿಸುವುದಾಗಿ ಎಚ್ಚರಿಕೆ ನೀಡಿದರು.

ಸರ್ಕಾರ 10 ಸಾವಿರವೋ 20 ಸಾವಿರವೋ ಹಾಸಿಗೆಗಳನ್ನು ಖರೀದಿಸುತ್ತಿದೆ. ಮೊದಲು ಒಂದಕ್ಕೆ ಮೂರರಷ್ಟು ದರ ನಿಗದಿ ಮಾಡಿ ಬಾಡಿಗೆ ಎಂದು ಹೇಳಿದ್ದರು. ಈಗ ಖರೀದಿ ಮಾಡಲಿದ್ದೇವೆ. ಇದನ್ನು ಕೋವಿಡ್ ಸೋಂಕಿತರು ಬಳಸಿದ ನಂತರ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ನೀಡಲಿದ್ದೇವೆ ಎಂದು ಹೇಳುತ್ತಿವೆ ಎಂದರು.

ಅಧಿಕಾರಿಗಳು ನೀಡಿದ ಈ ಸಲಹೆಯನ್ನು ಸರ್ಕಾರ ಒಪ್ಪಿದೆ. ಅದಕ್ಕೆ ನನ್ನ ಬಳಿ ದಾಖಲೆಗಳಿವೆ. ಈ ದೇಶದಲ್ಲಿ ವಿದ್ಯಾವಂತಿಕೆ, ಬುದ್ಧಿವಂತಿಕೆ ಇಲ್ಲದಿದ್ದರೂ ಪರವಾಗಿಲ್ಲ. ಆದರೆ ಪ್ರಜ್ಞಾವಂತಿಕೆ ಇರಬೇಕು. ಸೋಂಕಿನಿಂದ ಸತ್ತವರ ದೇಹವನ್ನು ಮುಟ್ಟಲು ಹಿಂದೆ ಮುಂದೆ ನೋಡುತ್ತಿರುವ ಈ ಸರ್ಕಾರ, ಅವರು ಬಳಸಿದ ಹಾಸಿಗೆಯನ್ನು ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಕೊಡುವುದು ಎಷ್ಟು ಸರಿ? ಎಂದು ಪ್ರಶ್ನಿಸಿದರು.