ಕೋಲಾರ(ಆ.13):  ಕೋವಿಡ್‌ 19 ಹರಡುವ ಭೀತಿ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಈ ಬಾರಿ ಸಾರ್ವಜನಿಕ ಸ್ಥಳಗಳಲ್ಲಿ ಗಣೇಶಮೂರ್ತಿಗಳ ಪ್ರತಿಷ್ಠಾಪನೆ, ಮೆರವಣಿಗೆ ಹಾಗೂ ವಿಸರ್ಜನೆಯನ್ನು ನಿಷೇಧಿಸಲಾಗಿದ್ದು, ನಿಯಮ ಉಲ್ಲಂಘಿಸುವವರ ವಿರುದ್ಧ ಕ್ರಮ ಜರುಗಿಸುವುದಾಗಿ ಜಿಲ್ಲಾಧಿಕಾರಿ ಸಿ.ಸತ್ಯಭಾಮ ಎಚ್ಚರಿಕೆ ನೀಡಿದರು.

ಜಿಲ್ಲಾಧಿಕಾರಿ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗಣೇಶ ಚತುರ್ಥಿಗೆ ಭಕ್ತಿ-ಭಾವನೆ ಅಗತ್ಯವಾಗಿದ್ದು, ಆಡಂಭರದ ಆಚರಣೆ ಅವಶ್ಯವಿಲ್ಲ. ಹೀಗಾಗಿ ಪಿಒಪಿ, ಕೆಮಿಕಲ್‌ ಗಣೇಶ ಮೂರ್ತಿಗಳ ಮಾರಾಟವನ್ನೂ ನಿಷೇಧ ಮಾಡಲಾಗಿದ್ದು, ಈ ಮೊದಲು ನಗರಸಭೆಯಿಂದ ವಿಸರ್ಜನೆಗೆ ಮಾಡಲಾಗುತ್ತಿದ್ದ ವ್ಯವಸ್ಥೆಗಳನ್ನೂ ಈ ಬಾರಿ ಮಾಡಲಾಗುತ್ತಿಲ್ಲ ಎಂದರು.

ಪರಿಸರ ಸ್ನೇಹಿ ಗಣಪ ನಿರ್ಮಿಸಿ

ಪ್ರತಿಯೊಬ್ಬರೂ ತಮ್ಮ ಮನೆಗಳಲ್ಲಿಯೇ ಪರಿಸರಸ್ನೇಹಿ ಗಣಪನನ್ನು ಅರಿಶಿನ, ಗೋಧಿಹಿಟ್ಟು ಹಾಗೂ ಸಗಣಿ ಮೂಲಕ ತಯಾರಿಸಿಕೊಂಡು ಹಬ್ಬ ಆಚರಿಸಿಕೊಳ್ಳಬೇಕಾಗಿದೆ. ಸರಳ ಆಚರಣೆ ಶ್ರೇಷ್ಠವಾಗಿದ್ದು, ನಂಬಿಕೆ ಎನ್ನುವುದು ಮುಖ್ಯ. ಆಚರಣೆ, ಪೂಜೆ ಯಾವ ರೂಪದಲ್ಲಾದರೂ ಮಾಡಿಕೊಳ್ಳಿ ಹಾಗೂ ವಿಸರ್ಜನೆಯನ್ನು ಮನೆಯಲ್ಲೇ ಮಾಡಿಕೊಳ್ಳುವಂತೆ ಸಲಹೆ ನೀಡಿದರು.

ಕೊರೋನಾದಿಂದ ಕರಗಿದ ಮಾನವೀಯತೆ..!...

ಇನ್ನು ಕೊರೊನಾ ನಿಯಂತ್ರಣಕ್ಕೆ ಜಿಲ್ಲಾಡಳಿತದಿಂದ ಎಲ್ಲ ರೀತಿಯ ಬಿಗಿ ಕ್ರಮಗಳನ್ನು ಮತ್ತಷ್ಟುಕೈಗೊಳ್ಳಲಾಗುತ್ತಿದ್ದು, ಸೋಂಕಿತರ ಸಂಖ್ಯೆಯು ಇಳಿಮುಖವಾಗುತ್ತಿದೆ. ಮೃತಪಟ್ಟಿರುವವರ ಪೈಕಿ ಶೇ.80ರಷ್ಟುಮಂದಿ ಡಯಾಲಿಸಿಸ್‌ ಸಮಸ್ಯೆ ಹೊಂದಿದ್ದವರಾಗಿದ್ದು, ಉಳಿದವರು ವಯಸ್ಸಾಗಿ, ಕೊರೊನಾದಿಂದ ಮೃತಪಟ್ಟಿದ್ದಾರೆ ಎಂದು ಸ್ಪಷ್ಟಪಡಿಸಿದರು.

ಜಾಲಪ್ಪ ಆಸ್ಪತ್ರೆ ಸರಿಹೋಗಿದೆ

ಈ ಮೊದಲು ಆರ್‌ಎಲ್‌ ಜಾಲಪ್ಪ ಆಸ್ಪತ್ರೆಯವರು ನಡೆದುಕೊಳ್ಳುತ್ತಿದ್ದ ರೀತಿ ಸರಿಯಾಗಿರಲಿಲ್ಲ. ನಿರ್ಲಕ್ಷ್ಯ ಹೆಚ್ಚಾಗಿರುತ್ತಿತ್ತು. ಇದೀಗ ಅವರನ್ನು ಸರಿದಾರಿಗೆ ತರಲಾಗಿದ್ದು, ಈ ಹಿಂದೆ ದಿನಕ್ಕೆ 25-30 ಮಂದಿಯನ್ನು ಮಾತ್ರವೇ ಕೋವಿಡ್‌ ಪರೀಕ್ಷೆ ಮಾಡುತ್ತಿದ್ದರು, ಇದೀಗ 200-300 ಮಂದಿಯನ್ನು ಮಾಡುತ್ತಿದ್ದಾರೆ.

ಪುಟಾಣಿ ಗಣಪ ಮಾರಾಟಕ್ಕೆ ಅವಕಾಶ:

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಾರ್ತಿಕ್‌ರೆಡ್ಡಿ ಮಾತನಾಡಿ, ಮಣ್ಣಿನ ಪುಟಾಣಿ ಗಣಪ ಮೂರ್ತಿಗಳ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ಪಿಒಪಿ, ಕೆಮಿಕಲ್‌ ಮೂರ್ತಿಗಳನ್ನು ಮಾರಾಟ ಮಾಡಿದರೆ ಕ್ರಮಕೈಗೊಳ್ಳಲಾಗವುದು. ಜತೆಗೆ ಸಾರ್ವಜನಿಕ ಪ್ರದೇಶಗಳಲ್ಲಿ ಪ್ರತಿಷ್ಠಾಪಿಸುವವರ ವಿರುದ್ಧವೂ ಕ್ರಮಜರುಗಿಸಲಾಗುವುದಾಗಿ ಹೇಳಿದರು.

ಮೈಸೂರಿನಲ್ಲಿ ಸ್ಫೋಟಗೊಂಡ ಕೊರೋನಾ ಸೋಂಕಿತರ ಸಂಖ್ಯೆ..

ಬೆಂಗಳೂರಿನ ಡಿಜೆ ಹಳ್ಳಿಯಲ್ಲಿ ಗಲಭೆ ನಡೆದಿರುವ ಹಿನ್ನೆಲೆಯಲ್ಲಿ ಕಿಡಿಗೇಡಿಗಳು ಕೋಲಾರ ಜಿಲ್ಲೆಗೂ ಬಂದಿದ್ದಾರೆಂಬ ವದಂತಿ ಹರಡಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಹೈ ಅಲರ್ಟ್‌ ಘೋಷಣೆ ಮಾಡಲಾಗಿದ್ದು, ಸೂಕ್ಷ್ಮ ಪ್ರದೇಶಗಳಲ್ಲಿ ಬಿಗಿ ಬಂದೋಬಸ್‌್ತ ಕಲ್ಪಿಸಲಾಗಿದೆ. ಗಲಭೆ ಸಂಬಂಧ ಧರಣಿ, ಪ್ರತಿಭಟನೆಗಳನ್ನು ಯಾರಾದರು ನಡೆಸಿದರೆ ಮುಲಾಜಿಲ್ಲದೆ ಕ್ರಮವಹಿಸಲಾಗುವುದು ಎಂದು ಎಚ್ಚರಿಸಿದರು.