ಮಳವಳ್ಳಿ (ಆ.13) :  ಕೊರೋನಾ ಸೋಂಕು ಕಾಣಿಸಿಕೊಂಡ ನಂತರದಲ್ಲಿ ಮಾನವೀಯತೆ ಕರಗಿಹೋಗುತ್ತಿದೆ. ಸೋಂಕಿನಿಂದ ಸಾವನ್ನಪ್ಪಿದ ಮೃತದೇಹಗಳ ಅಂತ್ಯಸಂಸ್ಕಾರಕ್ಕೆ ಅವಕಾಶ ಕೊಡದೆ ಜನರು ಮನಸ್ಸನ್ನು ಕಲ್ಲಾಗಿಸಿಕೊಂಡಿದ್ದಾರೆ. ಮೃತರನ್ನು ಗೌರವಯುತವಾಗಿ ಅಂತ್ಯಸಂಸ್ಕಾರ ನಡೆಸುವ ಹೃದಯವಂತಿಕೆ ಪ್ರದರ್ಶಿಸದೇ ಜನರು ಅಂತಹ ಶವಗಳನ್ನು ಕಸದಂತೆ ಕಾಣುವ ಕಠೋರ ಹೃದಯಿಗಳಾಗಿದ್ದಾರೆ.

ಸೋಂಕಿನಿಂದ ಮೃತಪಟ್ಟಿದ್ದ ಮಹಿಳೆಯೊಬ್ಬರ ಶವವನ್ನು ಮೂರು ದಿನಗಳ ನಂತರ ಪೊಲೀಸ್‌ ಭದ್ರತೆಯ ನಡುವೆ ಸ್ವ ಗ್ರಾಮದಲ್ಲಿ ಅಂತ್ಯಸಂಸ್ಕಾರ ನಡೆಸಿರುವುದೇ ಇದಕ್ಕೆ ಪ್ರತ್ಯಕ್ಷ ಸಾಕ್ಷಿಯಾಗಿದೆ. ಕೊರೋನಾ ಸೋಂಕು ದೃಢಪಟ್ಟಿದ್ದ ತಾಲೂಕಿನ ನೆಲಮಾಕನಹಳ್ಳಿ ಗ್ರಾಮದ ಮಹಿಳೆಯೊಬ್ಬರು ಭಾನುವಾರ ಮಧ್ಯರಾತ್ರಿ ಮೃತಪಟ್ಟಿದ್ದರು. ಸೋಮವಾರ ಮಹಿಳೆಯ ಜಮೀನಿನಲ್ಲಿ ಶವಸಂಸ್ಕಾರ ಮಾಡಲು ಕುಟುಂಬಸ್ಥರು ತಯಾರಿ ನಡೆಸಿದ್ದರು. ನೆಲಮಾಕನಹಳ್ಳಿ ಗ್ರಾಮದ ಕೆಲ ಗ್ರಾಮಸ್ಥರು ಶವಸಂಸ್ಕಾರ ನಡೆಸಿದರೇ ಗ್ರಾಮಕ್ಕೆ ರೋಗ ಹರಡುತ್ತದೆ ಎಂಬ ಭೀತಿಯೊಂದಿಗೆ ಸಂಸ್ಕಾರ ಮಾಡದಂತೆ ತಡೆದರು. ಅಧಿಕಾರಿಗಳು ಮನವೊಲಿಸಲು ಪ್ರಯತ್ನಪಟ್ಟರೂ ಪ್ರಯೋಜನವಾಗಲಿಲ್ಲ.

ಗೋಮಾಳದಲ್ಲೂ ಅವಕಾಶ ಸಿಗಲಿಲ್ಲ:

ಮಂಗಳವಾರ ತಾಲೂಕಿನ ಹೊಸಹಳ್ಳಿ ಗ್ರಾಮದ ಸರ್ಕಾರಿ ಗೋಮಾಳದಲ್ಲಿ ಶವಸಂಸ್ಕಾರ ಮಾಡಲು ಮುಂದಾಗಿದ್ದರು. ಆದರೆ ಗೋಮಾಳದ ಸಮೀಪ ಮನೆ ನಿರ್ಮಿಸಿಕೊಂಡಿರುವ ಜನರು ಶವಸಂಸ್ಕಾರ ಮಾಡಲು ವಿರೋಧಿಸಿ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳನ್ನು ತಡೆದು ಪ್ರತಿಭಟನೆ ನಡೆಸಿದರು.

ಉದ್ಯೋಗ ಕಸಿದುಕೊಂಡ ಕೊರೋನಾ: ಕೂಲಿ ಹಣದಿಂದ ಸೈಬರ್‌ ಕೆಫೆ ಆರಂಭಿಸಿದ ಯುವಕ..!

ಪ್ರತಿಭಟನಾ ಸ್ಥಳಕ್ಕೆ ಬಂದ ತಹಸೀಲ್ದಾರ್‌ ಕೆ. ಚಂದ್ರಮೌಳಿ ಹಾಗೂ ಅಧಿಕಾರಿಗಳ ತಂಡ ಗ್ರಾಮಸ್ಥರ ಮನವೊಲಿಸಲು ಪ್ರಯತ್ನ ನಡೆಸಿದ್ದರೂ ಗ್ರಾಮಸ್ಥರು ಪಟ್ಟುಬಿಡದ ಹಿನ್ನೆಲೆಯಲ್ಲಿ ಶವವನ್ನು ಮಂಡ್ಯ ಜಿಲ್ಲಾಸ್ಪತ್ರೆ ಸಾಗಿಸಲಾಯಿತು.

ಕೊನೆಗೆ ಜಿಲ್ಲಾಧಿಕಾರಿಗಳು ಶವ ಸಂಸ್ಕಾರ ನಡೆಸಲು ತಡೆವೊಡ್ಡಿದರೆ ರಾಷ್ಟ್ರೀಯ ವಿಪತ್ತು ಕಾಯ್ದೆಯಡಿ ದೂರು ದಾಖಲಿಸಲಾಗುವುದು ಎಂದು ಕಟ್ಟುನಿಟ್ಟಿನ ಅದೇಶ ಹೊರಡಿಸಿದರು. ಅದರಂತೆ ಬುಧವಾರ ಅಧಿಕಾರಿಗಳು ಮತ್ತು ಪೊಲೀಸರ ಭದ್ರತೆಯೊಂದಿಗೆ ಮೃತ ಮಹಿಳೆಯ ಸ್ವಗ್ರಾಮದಲ್ಲಿರುವ ಆಕೆಯ ಸ್ವಂತ ಜಮೀನಿನಲ್ಲಿಯೇ ಅಂತ್ಯಸಂಸ್ಕಾರ ನೆರೆವೇರಿಸಲಾಯಿತು.

ಕೊರೋನಾದಿಂದ ಮೃತಪಟ್ಟಶವದಿಂದ ಸೋಂಕು ಹರಡದಂತೆ ಮುನ್ನೆಚ್ಚರಿಕೆ ಕ್ರಮ ವಹಿಸಿದ ನಂತರವೇ ಅಂತ್ಯಸಂಸ್ಕಾರ ನಡೆಸಲಾಗುತ್ತದೆ. ಶವದಿಂದ ಸೋಂಕು ಹರಡುವುದೆಂಬ ವದಂತಿಗೆ ಸಾರ್ವಜನಿಕರು ಕಿವಿಗೊಡಬಾರದು. ಶವ ಸಂಸ್ಕಾರವನ್ನು ಸರ್ಕಾರಿ ಅಥವಾ ಸ್ವಂತ ಜಮೀನಿನಲ್ಲಿ ಮಾಡುವ ತೀರ್ಮಾನವನ್ನು ಸಂಬಂಧಿಸಿದ ಅಧಿಕಾರಿಗಳು ಕೈಗೊಳ್ಳುತ್ತಾರೆ. ಸರ್ಕಾರಿ ಅಧಿಕಾರಿಗಳ ನೇತೃತ್ವದಲ್ಲಿಯೇ ಶವಸಂಸ್ಕಾರ ನಡೆಸುವುದರಿಂದ ಸಾರ್ವಜನಿಕರು ತಡೆವೊಡ್ಡಲು ಮುಂದಾಗಬಾರದು.

-ಡಾ.ವೀರಭದ್ರಪ್ಪ, ತಾಲೂಕು ವೈದ್ಯಾಧಿಕಾರಿ, ಮಳವಳ್ಳಿ.

ವರದಿ : ಸಿ.ಸಿದ್ದರಾಜು,ಮಾದಹಳ್ಳಿ.