Mysuru : ನನ್ನನ್ನು ಸೋಲಿಸಲು ಯಾರಿಂದಲೂ ಸಾಧ್ಯವಿಲ್ಲ : ಕೆ. ಮಹದೇವ್
ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ನನ್ನನ್ನು ಸೋಲಿಸಲು ಯಾರಿಂದಲೂ ಸಾಧ್ಯವಿಲ್ಲ, ಅಭಿವೃದ್ಧಿಯಲ್ಲಿ ರಾಜ್ಯದಲ್ಲಿಯೇ ಪಿರಿಯಾಪಟ್ಟಣ ಕ್ಷೇತ್ರ ಮುಂದಿದೆ ಎಂದು ಶಾಸಕ ಕೆ. ಮಹದೇವ್ ಹೇಳಿದರು.
ಬೆಟ್ಟದಪುರ (ನ.13): ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ನನ್ನನ್ನು ಸೋಲಿಸಲು ಯಾರಿಂದಲೂ ಸಾಧ್ಯವಿಲ್ಲ, ಅಭಿವೃದ್ಧಿಯಲ್ಲಿ ರಾಜ್ಯದಲ್ಲಿಯೇ ಪಿರಿಯಾಪಟ್ಟಣ ಕ್ಷೇತ್ರ ಮುಂದಿದೆ ಎಂದು ಶಾಸಕ ಕೆ. ಮಹದೇವ್ ಹೇಳಿದರು.
ಕಳ್ಳಿಕೊಪ್ಪಲು, ಮಾಳೆಗೌಡನ ಕೊಪ್ಪಲು, ತಮ್ಮಡಹಳ್ಳಿ ಸೇರಿದಂತೆ ಸುಮಾರು 10ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಶನಿವಾರ ಗ್ರಾಮಗಳ ಸಿಸಿ ರಸ್ತೆಗೆ ಚಾಲನೆ ನೀಡಿದ ನಂತರ ಅವರು ಮಾತನಾಡಿದರು.
ರಾಜ್ಯದ ಎಲ್ಲ ಮಂತ್ರಿಗಳನ್ನು (Ministers ) ಭೇಟಿ ಮಾಡಿ ಹೆಚ್ಚಿನ ಅನುದಾನ ತಂದು ಅಭಿವೃದ್ಧಿಪಡಿಸುತ್ತಿದ್ದೇನೆ, ಆದ್ದರಿಂದ ನನ್ನನ್ನು ಮುಂದಿನ ಚುನಾವಣೆಯಲ್ಲಿ (Election) ಸೋಲಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಅವರು ಹೇಳಿದರು. ಸಿದ್ದರಾಮಯ್ಯ ಕೂಡ ನನ್ನ ಗುರುಗಳು, ಅವರ ಪಾದಕ್ಕೆ ನಮಸ್ಕರಿಸಿ ನಾನು ಅವರ ಆಶೀರ್ವಾದ ನನಗಿದೆ, ಕುರುಬ ಸಮಾಜದವರು ನನ್ನನ್ನು ತಿರಸ್ಕರಿಸುವುದಿಲ್ಲ, ಕುರುಬ ಸಮಾಜ ವಾಸಿಸುವ ಪ್ರತಿಯೊಂದು ಹಳ್ಳಿಯನ್ನು ಅಭಿವೃದ್ಧಿಪಡಿಸಿದ್ದೇನೆ ಎಂದರು.
ಇದೇ ವೇಳೆ ಹಲವಾರು ಮುಖಂಡರು ಕಾಂಗ್ರೆಸ್ ತೊರೆದು ಜೆಡಿಎಸ್‌ಗೆ ಸೇರ್ಪಡೆಯಾದರು. ತಾಲೂಕು ಜೆಡಿಎಸ್ ಅಧ್ಯಕ್ಷ ಅಣ್ಣಯ್ಯಶೆಟ್ಟಿ, ಮುಖಂಡ ಗಗನ್ ಅವರು ಸಹ ಪಕ್ಷದ ಹಾಗೂ ಶಾಸಕರ ಅಭಿವೃದ್ಧಿ ಬಗ್ಗೆ ಸಂತಸ ವ್ಯಕ್ತಪಡಿಸಿದರು. ಗ್ರಾಮದ ಮುಖಂಡರಾದ ಚಿಕ್ಕೇಗೌಡ, ಮಾದೇಗೌಡ, ಬಿ.ಜೆ. ದೇವರಾಜ…, ಪುಟ್ಟರಾಜು, ಗ್ರಾಪಂ ಮಾಜಿ ಅಧ್ಯಕ್ಷ ರಾಮಚಂದ್ರು, ರಾಜೇಶ್, ಮಾದೇಶ್ ಇದ್ದರು.
750 ಅರ್ಜಿ
ಬೆಂಗಳೂರು : ಮುಂಬರುವ ವಿಧಾನಸಭಾ ಚುನಾವಣೆಗೆ ಪಕ್ಷದ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಲು ಕೇವಲ ಮೂರು ದಿನ ಉಳಿದಿವೆ. ಈವರೆಗೆ ಸುಮಾರು 750 ಮಂದಿ ಅರ್ಜಿಗಳನ್ನು ಪಡೆದುಕೊಂಡಿದ್ದು, ಆ ಪೈಕಿ 200 ಮಂದಿ ಮಾತ್ರ ಅರ್ಜಿ ಸಲ್ಲಿಸಿದ್ದಾರೆ. ಹೀಗಾಗಿ ಅರ್ಜಿ ಸಲ್ಲಿಸುವ ಅಂತಿಮ ದಿನವನ್ನು ಮುಂದೂಡುವ ಸಾಧ್ಯತೆಯಿದೆ ಎಂದು ಕೆಪಿಸಿಸಿ ಮೂಲಗಳು ತಿಳಿಸಿವೆ. ಪಕ್ಷದ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಲು ನ.15 ಅಂತಿಮ ದಿನವಾಗಿದೆ. ಆದರೆ, ಸಿದ್ದರಾಮಯ್ಯ, ಡಾ
ಜಿ.ಪರಮೇಶ್ವರ್, ಕೆ.ಜೆ.ಜಾಜ್‌ರ್, ಎಂ.ಬಿ.ಪಾಟೀಲ್ ಸೇರಿದಂತೆ ಪ್ರಮುಖ ನಾಯಕರು ಅರ್ಜಿ ಸಲ್ಲಿಸಿಲ್ಲ. ಹೀಗಾಗಿ ಅಂತಿಮ ದಿನವನ್ನು ಕನಿಷ್ಠ ಒಂದು ವಾರವಾದರೂ ಮುಂದೂಡುವ ಸಾಧ್ಯತೆಗಳಿವೆ ಎಂದು ತಿಳಿದು ಬಂದಿದೆ.
ಚುನಾವಣೆಗೂ ಮುನ್ನವೇ ಕಾಂಗ್ರೆಸ್ ಟಿಕೆಟ್‌ಗೆ ಬಿಗ್ ಫೈಟ್..!
ಕುತೂಹಲಕಾರಿ ಸಂಗತಿಯೆಂದರೆ, ಸಿದ್ದರಾಮಯ್ಯ ಅವರ ಆಸಕ್ತ ಕ್ಷೇತ್ರಗಳೆನಿಸಿದ ಕೋಲಾರ, ಬಾದಾಮಿ ಹಾಗೂ ಚಾಮರಾಜಪೇಟೆ ಕ್ಷೇತ್ರಗಳಿಗೆ ಈಗಾಗಲೇ ಹಲವಾರು ಮಂದಿ ಅರ್ಜಿ ಸಲ್ಲಿಸಿದ್ದಾರೆ. ಆದರೆ, ಅವರ ಮತ್ತೊಂದು ಆಸಕ್ತ ಕ್ಷೇತ್ರವೆನಿಸಿದ ಹಾಗೂ ಅವರ ಪುತ್ರ ಡಾ.ಯತೀಂದ್ರ ಸಿದ್ದರಾಮಯ್ಯ ಅವರು ಹಾಲಿ ಶಾಸಕರಾಗಿರುವ ವರುಣ ಕ್ಷೇತ್ರಕ್ಕೆ ಇನ್ನೂ ಯಾರೂ ಅರ್ಜಿ ಸಲ್ಲಿಸಿಲ್ಲ. ಉಳಿದಂತೆ ಕೋಲಾರಕ್ಕೆ 8, ಬಾದಾಮಿಗೆ 7ಕ್ಕೂ ಹೆಚ್ಚು ಹಾಗೂ ಚಾಮರಾಜಪೇಟೆಗೆ ಎರಡು ಅರ್ಜಿಗಳು ಸಲ್ಲಿಕೆಯಾಗಿವೆ. ಆದರೆ, ಸಿದ್ದರಾಮಯ್ಯ ಅವರು ಇನ್ನೂ ಯಾವ ಕ್ಷೇತ್ರದ ಅರ್ಜಿಯನ್ನು ಪಡೆದುಕೊಂಡಿಲ್ಲ.
ಇದೇ ವೇಳೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಕನಕಪುರ ಕ್ಷೇತ್ರಕ್ಕಾಗಿ ಟಿಕೆಟ್ ಬಯಸಿ ಅರ್ಜಿಯನ್ನು ಒಯ್ದಿದ್ದಾರೆ. ಇನ್ನೂ ಸಲ್ಲಿಕೆ ಮಾಡಿಲ್ಲ. ಈ ಬಾರಿ ವಿಧಾನಸಭಾ ಚುನಾವಣೆಗೆ ಕಣಕ್ಕೆ ಇಳಿಯಲಿದ್ದಾರೆ ಎನ್ನಲಾಗುತ್ತಿರುವ ಅವರ ಸಹೋದರ ಹಾಗೂ ಹಾಲಿ ಸಂಸದ ಡಿ.ಕೆ.ಸುರೇಶ್ ಅವರು ಯಾವ ಕ್ಷೇತ್ರಕ್ಕೂ ಇನ್ನೂ ಅರ್ಜಿ ಪಡೆದಿಲ್ಲ.
ಶಾಮನೂರು ಅತಿ ಹಿರಿಯ ಅರ್ಜಿದಾರ:
ಅರ್ಜಿ ಸಲ್ಲಿಸಿದವರ ಪೈಕಿ ಅತಿ ಹಿರಿಯ ಅಭ್ಯರ್ಥಿ 91 ವರ್ಷ ವಯಸ್ಸಿನ ಶಾಮನೂರು ಶಿವಶಂಕರಪ್ಪ ಅವರು ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ ಸ್ಪರ್ಧೆ ಬಯಸಿ ಅರ್ಜಿಯನ್ನು ಪಡೆದುಕೊಂಡಿದ್ದಾರೆ. ಇನ್ನು ಅತಿ ಕಿರಿಯೆ ಮಾಜಿ ಸಚಿವ ಮಹದೇವ ಅವರ ಪುತ್ರಿ 27 ವರ್ಷ ವಯಸ್ಸಿನ ಐಶ್ವರ್ಯ ಮಹದೇವ ಅವರು ಕೆ.ಆರ್. ನಗರ ಕ್ಷೇತ್ರದ ಟಿಕೆಟ್‌ಗಾಗಿ ಅರ್ಜಿ ಪಡೆದುಕೊಂಡಿದ್ದಾರೆ.
ಈ ಬಾರಿಯ ಚುನಾವಣೆಗೆ ಟಿಕೆಟ್ ಬಯಸುವ ಅಪ್ಪ-ಮಕ್ಕಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ. ಈಗಾಗಲೇ ನಾಲ್ಕು ಅಪ್ಪ-ಮಗ ಜೋಡಿ ಟಿಕೆಟ್‌ಗಾಗಿ ಅರ್ಜಿ ಪಡೆದುಕೊಂಡಿದ್ದಾರೆ. ಈ ಪೈಕಿ ಮುಖ್ಯವಾಗಿ ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರು ನಂಜನಗೂಡು ಕ್ಷೇತ್ರದಿಂದ ಹಾಗೂ ಅವರ ಪುತ್ರ ಸುನೀಲ್ ಬೋಸ್ ಟಿ.ನರಸೀಪುರಕ್ಕಾಗಿ ಅರ್ಜಿ ಪಡೆದುಕೊಂಡಿದ್ದಾರೆ. ಮತ್ತೊಬ್ಬ ಮಾಜಿ ಸಚಿವ ಶಿವಾನಂದ ಪಾಟೀಲ ಅವರು ವಿಜಯಪುರ ಸಿಟಿ ಹಾಗೂ ಅವರ ಪುತ್ರಿ ಸಂಯುಕ್ತಾ ಪಾಟೀಲ್ ಅವರು ಬಸವನ ಬಾಗೇವಾಡಿ ಕ್ಷೇತ್ರದ ಟಿಕೆಟ್‌ಗಾಗಿ ಅರ್ಜಿ ಸಲ್ಲಿಕೆ ಮಾಡಿದ್ದಾರೆ.