ಚುನಾವಣೆಗೂ ಮುನ್ನವೇ ಕಾಂಗ್ರೆಸ್ ಟಿಕೆಟ್‌ಗೆ ಬಿಗ್ ಫೈಟ್..!
ರಾಯಚೂರು ಜಿಲ್ಲೆಯ ಲಿಂಗಸೂಗೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್‌ಗಾಗಿ ಹಾಲಿ ಶಾಸಕ ಮತ್ತು ನಿವೃತ್ತ ಇಂಜಿನಿಯರ್ ನಡುವೆ ಫೈಟ್
ವರದಿ: ಜಗನ್ನಾಥ ಪೂಜಾರ್, ಏಷ್ಯಾನೆಟ್ ಸುವರ್ಣ ನ್ಯೂಸ್, ರಾಯಚೂರು
ರಾಯಚೂರು(ನ.04): ಲಿಂಗಸೂಗೂರು ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆ ಮುನ್ನವೇ ಚುನಾವಣೆ ಕಾವು ಹೆಚ್ಚಾಗಿದೆ. ಬಿಜೆಪಿ ಅಭ್ಯರ್ಥಿ ಮಾನಪ್ಪ ವಜ್ಜಲ್ ಈ ಬಾರಿ ಲಿಂಗಸೂಗೂರು ವಿಧಾನಸಭಾ ಕ್ಷೇತ್ರದಲ್ಲಿ ಕಮಲ ಅರಳಿಸಲ್ಲೇ ಬೇಕು ಅಂತ ಕ್ಷೇತ್ರದಲ್ಲಿ ಸುತ್ತಾಟ ನಡೆಸಿದ್ದಾರೆ. ಮತ್ತೊಂದು ಕಡೆ ಜೆಡಿಎಸ್ ಅಭ್ಯರ್ಥಿ ಸಿದ್ದು ಬಂಡಿ ಕುಮಾರಸ್ವಾಮಿ ಮತ್ತು ದೇವೇಗೌಡರ ಮಾಡಿ ನೀರಾವರಿ ಕಾಮಗಾರಿ ಮತ್ತು ಕಳೆದ ಬಾರಿ ಸೋಲಿನ ಅಂಶಗಳು ತಿಳಿಸುತ್ತಾ ಒಂದು ಅವಕಾಶ ನೀಡಿ ಅಂತ ಕ್ಷೇತ್ರದಲ್ಲಿ ಪ್ರಚಾರ ಶುರು ಮಾಡಿದ್ದಾರೆ. ಇತ್ತ ಕಾಂಗ್ರೆಸ್ ನಿಂದ ಗೆದ್ದು ಶಾಸಕರಾದ ಡಿ.ಎಸ್. ಹೂಲಗೇರಿ ಕೂಡ ಲಿಂಗಸೂಗೂರು ವಿಧಾನಸಭಾ ಕ್ಷೇತ್ರದಿಂದ 2023ರ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಸ್ಪರ್ಧೆ ಮಾಡಲು ಎಲ್ಲಾ ರೀತಿಯ ಸಿದ್ಧತೆಗಳು ಮಾಡಿಕೊಂಡಿದ್ದಾರೆ. ಆದ್ರೆ ಐದು ವರ್ಷಗಳ ಕಾಲ ಅಧಿಕಾರ ಇದ್ರೂ ಶಾಸಕ ಡಿ.ಎಸ್. ಹೂಲಗೇರಿ ಅಭಿವೃದ್ಧಿ ಕಾರ್ಯಗಳು ಮಾಡಿಲ್ಲವೆಂಬ ಆಡಳಿತ ವಿರೋಧಿ ಅಲೆ ಇದೆ. ಇದೇ ಬಂಡವಾಳ ಮಾಡಿಕೊಂಡ ನಿವೃತ್ತ ಇಂಜಿನಿಯರ್ ಆದ ಆರ್. ರುದ್ರಯ್ಯ ನಾನು 2023ರ ಲಿಂಗಸೂಗೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಂತ ಹೇಳಿಕೊಂಡು ಲಿಂಗಸೂಗೂರು ಕ್ಷೇತ್ರದಲ್ಲಿ ಸುತ್ತಾಟ ನಡೆಸಿದ್ದಾರೆ.
ಯಾರು ಈ ಆರ್. ರುದ್ರಯ್ಯ?
ಮೂಲತಃ ಬೆಂಗಳೂರಿನವರಾದ ಆರ್. ರುದ್ರಯ್ಯನವರು. 25ಕ್ಕೂ ಹೆಚ್ಚು ವರ್ಷಗಳ ಕಾಲ ಕಲ್ಯಾಣ ಕರ್ನಾಟಕದ ಭಾಗದಲ್ಲಿ ಇಂಜಿನಿಯರ್ ಆಗಿ ಸೇವೆ ಸಲ್ಲಿಸಿದ್ದಾರೆ. ಅಷ್ಟೇ ಅಲ್ಲದೆ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆಯವರ ಆಪ್ತರು ಸಹ ಆಗಿದ್ದಾರೆ. 1987ರಿಂದ ಬೀದರ್ ಜಿಲ್ಲೆಯಿಂದ ತಮ್ಮ ವೃತ್ತಿ ಜೀವನ ಆರಂಭಿಸಿದ ಆರ್. ರುದ್ರಯ್ಯ.. ಕಲ್ಯಾಣ ಕರ್ನಾಟಕದ ಬಹುತೇಕ ಎಲ್ಲಾ ಜಿಲ್ಲೆಯಲ್ಲಿ ಸೇವೆ ಸಲ್ಲಿಸಿದ್ದಾರೆ. ಈಗ ಇಂಜಿನಿಯರ್ ಸೇವೆಯಿಂದ ನಿವೃತ್ತಿ ಹೊಂದಿದ್ದ ಆರ್. ರುದ್ರಯ್ಯ ರಾಜಕೀಯ ಪ್ರವೇಶ ಮಾಡಿ ಲಿಂಗಸೂಗೂರು ವಿಧಾನಸಭಾ ಕ್ಷೇತ್ರ ಆಯ್ಕೆ ಮಾಡಿಕೊಂಡು ಸುತ್ತಾಟ ನಡೆಸಿದ್ದಾರೆ. ಅಷ್ಟೇ ಅಲ್ಲದೆ ಕಳೆದ 6-7ತಿಂಗಳಿಂದ ಜನರ ಬಳಿಗೆ ಹೋಗಿ ತಮ್ಮ ಪ್ಲಾನ್ ಗಳನ್ನು ಹೇಳುತ್ತಾ ಜನರ ಮನಸ್ಸು ಗೆಲ್ಲಲು ನಾನಾ ಕಸರತ್ತು ನಡೆಸಿದ್ದಾರೆ. ಇತ್ತ ಲಿಂಗಸೂಗೂರಿನ ಜನರು ಅಷ್ಟೇ ಅಲ್ಲದೇ ಹಾಲಿ ಶಾಸಕ ಡಿ.ಎಸ್. ಹೂಲಗೇರಿ ಬೆಂಬಲಿಗರು ಎಂದು ಗುರುತಿಸಿಕೊಂಡವರು ಸಹ ಇತ್ತೀಚಿಗೆ ಆರ್. ರುದ್ರಯ್ಯ ನವರ ಜೊತೆಗೆ ಓಡಾಟ ಮಾಡಲು ಶುರು ಮಾಡಿದ್ದಾರೆ. ಇದು ಒಂದು ಕಡೆ ಹಾಲಿ ಕಾಂಗ್ರೆಸ್ ಶಾಸಕ ಡಿ.ಎಸ್. ಹೂಲಗೇರಿಗೆ ಆತಂಕ ಶುರುವಾಗಿದೆ. ಹೀಗಾಗಿ ಕೆಲ ಕಾರ್ಯಕರ್ತರು ಸಿದ್ದರಾಮಯ್ಯ ಸೇರಿದಂತೆ ಇತರೆ ಕಾಂಗ್ರೆಸ್ ಮುಖಂಡರ ಎದುರು ಮತ್ತೆ ಡಿ.ಎಸ್. ಹೂಲಗೇರಿಗೆ ಟಿಕೆಟ್ ನೀಡಬೇಕು ಎಂಬ ಬೇಡಿಕೆ ಸಹ ಇಡಲು ಶುರು ಮಾಡಿದ್ದಾರೆ. ಆದ್ರೆ ಕಾಂಗ್ರೆಸ್ ಹೈಕಮಾಂಡ್ ಮಾತ್ರ ಟಿಕೆಟ್ ಬಗ್ಗೆ ಯಾವುದೇ ಸ್ಪಷ್ಟನೆ ನೀಡುತ್ತಿಲ್ಲ.ಇದು ಕೈ ನಾಯಕರ ಚರ್ಚೆಗೆ ಕಾರಣವಾಗಿದೆ.
ಸಚಿವ ಸಂಪುಟ ವಿಸ್ತರಣೆ ಸಿಎಂಗೆ ಬಿಟ್ಟ ಸಂಗತಿ: ಸಚಿವ ಬೈರತಿ ಬಸವರಾಜ
ಹಾಲಿ ಕಾಂಗ್ರೆಸ್ ಶಾಸಕರು ಇದ್ರೂ ಆರ್. ರುದ್ರಯ್ಯ ಪ್ರಚಾರ:
ಲಿಂಗಸೂಗೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ನ ಹಾಲಿ ಶಾಸಕ ಡಿ.ಎಸ್. ಹೂಲಗೇರಿ ಇದ್ದಾರೆ. ಆದ್ರೆ ಇತ್ತೀಚಿಗೆ ಲಿಂಗಸೂಗೂರು ವಿಧಾನಸಭಾ ಕ್ಷೇತ್ರದಲ್ಲಿ ಮನೆ ಮಾಡಿದ ಆರ್. ರುದ್ರಯ್ಯ ನಾನು ಲಿಂಗಸೂಗೂರು ಅಭಿವೃದ್ಧಿ ಮಾಡುತ್ತೇನೆ. ಲಿಂಗಸೂಗೂರು ಜನತೆ ನನಗೆ ಆರ್ಶಿವಾದ ಮಾಡಬೇಕು ಅಂತ ಹೇಳುತ್ತಾ ತಂಡವೊಂದನ್ನ ಕಟ್ಟಿಕೊಂಡು ಲಿಂಗಸೂಗೂರು ವಿಧಾನಸಭಾ ಕ್ಷೇತ್ರದ ಹಳ್ಳಿ- ಹಳ್ಳಿಗೆ ಭೇಟಿ ನೀಡಲು ಶುರು ಮಾಡಿದ್ದಾರೆ. ಅಷ್ಟೇ ಅಲ್ಲದೇ ರಾಹುಲ್ ಗಾಂಧಿ ನಡೆಸಿದ ಭಾರತ್ ಜೋಡೋ ಪಾದಯಾತ್ರೆಯಲ್ಲಿಯೂ 5ಸಾವಿರಕ್ಕೂ ಹೆಚ್ಚು ಜನರನ್ನು ಕರೆದುಕೊಂಡು ಹೋಗಿ ತನ್ನ ಶಕ್ತಿ ಪ್ರದರ್ಶನ ಮಾಡಲು ಮುಂದಾಗುವ ಮುಖಾಂತರ ಹೈಕಮಾಂಡ್ ಮನಸ್ಸು ಗೆಲ್ಲಲು ಮುಂದಾಗಿದ್ದಾರೆ. ಮತ್ತೊಂದು ಕಡೆ ಕ್ಷೇತ್ರದಲ್ಲಿ ಓಡಾಟ ನಡೆಸುತ್ತಾ ಇಡೀ ಲಿಂಗಸೂಗೂರು ಕ್ಷೇತ್ರದ ಜನರ ಸಮಸ್ಯೆಗಳು ಆಲಿಸುತ್ತಾ..ತನ್ನ ಆಲೋಚನೆ ಜನರ ಮುಂದೆ ತಿಳಿಸುತ್ತಾ ಚುನಾವಣೆಗೆ ಅಖಾಡ ಸಿದ್ದಪಡಿಸಿಕೊಳ್ಳುತ್ತಿದ್ದಾರೆ.
ಲಿಂಗಸೂಗೂರು ಜನತೆಗೆ ಆರ್. ರುದ್ರಯ್ಯ ಹೇಳುತ್ತಿರುವುದು?
ಲಿಂಗಸೂಗೂರು ಚಿನ್ನದ ನಾಡು, ಕೃಷ್ಣ ಮಡಿಲಿನಲ್ಲಿ ಇರುವ ಭೂಮಿ. ಇಂತಹ ಫಲವತ್ತಾದ ಭೂಮಿ ಇದ್ರೂ ಜನರು ಗೂಳೆ ಹೋಗುತ್ತಿದ್ದಾರೆ. ಇದನ್ನು ತಪ್ಪಿಸಲು ನಾನು ಮುಂದಾಗುತ್ತೇನೆ. ಲಿಂಗಸುಗೂರು ಕ್ಷೇತ್ರದಲ್ಲಿ ಮುದಗಲ್, ಲಿಂಗಸೂಗೂರು, ಹಟ್ಟಿ ಮೂರು ಪುರಸಭೆ, ಪಟ್ಟಣ ಪಂಚಾಯಿತ್ ಗಳಿವೆ. ಇವು ಮೂರು ಪಟ್ಟಣದಲ್ಲಿ ಒಂದು ಕಡೆ ಆದರೂ ಯು ಜಿ ಡಿ ಯೋಜನೆಗೆ ಒಳ ಪಟ್ಟಿಲ್ಲ. ಈ ಪಟ್ಟಣಗಳಲ್ಲಿ ಕೆಲ ಕಡೆ ಕೊಳಚೆ ಪ್ರದೇಶಗಳು ಇದ್ದು ಅವುಗಳ ಅಭಿವೃದ್ಧಿ ಆಗಿಲ್ಲ, ಕ್ಷೇತ್ರದಲ್ಲಿ ಸಾಕಷ್ಟು ಯುವಕರು ನಿರುದ್ಯೋಗಿಯಾಗಿ ಅಲೆದಾಡುತ್ತಿದ್ದಾರೆ. ಅವರಿಗೆ ಉದ್ಯೋಗ ಸೃಷ್ಟಿಸುವಂತಹ ಯೊಜನೆಗಳನ್ನು ಯಾರು ಮಾಡಿಲ್ಲ. ನಾನು ಶಾಸಕನಾದರೆ ಅನೇಕ ಯೋಜನೆಗಳನ್ನು ತಂದು ಉದ್ಯೋಗ ಸೃಷ್ಟಿ ಮಾಡಿಕೊಂಡುತ್ತೇನೆ. ಕ್ಷೇತ್ರದಲ್ಲಿ ಈಗಾಗಲೇ ಎಲ್ಲಾ ಕಡೆ ನಾನು ಸಂಚರಿಸಿದ್ದೇನೆ. ಜನರ ಒಲವು ನನ್ನ ಮೇಲೆ ಇದೆ. ಜನರೇ ಚುನಾವಣೆಯಲ್ಲಿ ಸ್ಪರ್ಧಿಸಿ ಎಂದು ಒತ್ತಡ ಹಾಕುತ್ತಿದ್ದಾರೆ. ಜನರ ಒತ್ತಾಯದ ಮೇರೆಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಇಚ್ಚಿಸುತ್ತಿದ್ದೇನೆ. ನಾನು ರಾಜಕೀಯಕ್ಕೆ ಬರುತ್ತಿರುವುದು ಕ್ಷೇತ್ರದ ಅಭಿವೃದ್ಧಿಗಾಗಿ ನನ್ನ ಅಭಿವೃದ್ಧಿಗೆ ಅಲ್ಲ. ಪಕ್ಷ ನನಗೆ ಕಾಂಗ್ರೆಸ್ ಟಿಕೆಟ್ ನೀಡುತ್ತೆ ಎಂದು ಭರವಸೆ ಇದೆ. ಯಾವುದೇ ಕಾರಣಕ್ಕೂ ನನಗೆ ಟಿಕೆಟ್ ತಪ್ಪುವುದಿಲ್ಲ.
ಜೋಡೋ ಯಶಸ್ಸು: ಕಾಂಗ್ರೆಸ್‌ನಲ್ಲಿ ಹುಮ್ಮಸ್ಸು..!
35 ವರ್ಷಗಳ ಕಾಲ ಇಂಜಿನಿಯರ್ ಆಗಿ ಸೇವೆ ಸಲ್ಲಿಸಿರುವ ಅನುಭವವಿದೆ. ಲಿಂಗಸೂಗೂರು ವಿಧಾನಸಭಾ ಕ್ಷೇತ್ರದಲ್ಲಿ ಮಾರ್ಡನ್ ಕೃಷಿ ಮಾಡಬಹುದು. ಕೇವಲ ಈಗ 2 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ನೀರಾವರಿ ಇದೆ. ಇನ್ನುಳಿದ 2.5 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ನೀರಾವರಿ ಮಾಡಬಹುದು. ಅದಕ್ಕೆ ನನ್ನ ಬಳಿ ಎಲ್ಲಾ ರೀತಿಯ ಪ್ಲಾನ್ ಗಳು ಇವೆ. ಲಿಂಗಸೂಗೂರು - ಬೆಂಗಳೂರು ಮುಖ್ಯ ರಸ್ತೆಯಲ್ಲಿ ಬರುವ ವಿಧಾನಸಭಾ ಕ್ಷೇತ್ರ ಹತ್ತಾರು ರೀತಿಯ ಹೊಸ ಹೊಸ ಉದ್ಯೋಗ ಸೃಷ್ಟಿ ಮಾಡುವ ಕನಸು ಇದೆ. ಕ್ಷೇತ್ರದ ಯುವಕರಿಗೆ ಕೌಶಲ್ಯ ತರಬೇತಿ ನೀಡಿ ಸ್ಥಳೀಯ ಮಟ್ಟದಲ್ಲಿಯೇ ಅವರು ಉದ್ಯೋಗ ಮಾಡಲು ಅನುಕೂಲ ಮಾಡಿ, ಕೃಷಿ ಅಭಿವೃದ್ಧಿ ಆದ್ರೆ ಅವರು ಗೂಳೆ ಹೋಗುವುದು ತಪ್ಪಿಸಬಹುದು. ನಾನು ರಾಜಕೀಯ ಮಾಡಲು ಲಿಂಗಸೂಗೂರು ವಿಧಾನಸಭಾ ಕ್ಷೇತ್ರಕ್ಕೆ ಬಂದಿಲ್ಲ. ಜನರ ಸಮಸ್ಯೆ ಬಗ್ಗೆ ಹರಿಸಲು ರಾಜಕೀಯ ಪ್ರವೇಶ ಮಾಡಿದ್ದೇನೆ ಎಂದು ಕ್ಷೇತ್ರದಲ್ಲಿ ಪ್ರಚಾರ ನಡೆಸಿದ್ದಾರೆ.
ಒಟ್ಟಿನಲ್ಲಿ ಲಿಂಗಸೂಗೂರು ವಿಧಾನಸಭಾ ಕ್ಷೇತ್ರದಲ್ಲಿ ಕೈ ಟಿಕೆಟ್ ಗಾಗಿ ಸಿದ್ದರಾಮಯ್ಯ ಆಪ್ತರಾದ ಹಾಲಿ ಶಾಸಕ ಡಿ.ಎಸ್. ಹೂಲಗೇರಿ ಮತ್ತು ಮಲ್ಲಿಕಾರ್ಜುನ ಖರ್ಗೆ ಆಪ್ತರ ನಡುವೆ ಭಾರೀ ಪೈಪೋಟಿ ಶುರುವಾಗಿದೆ. ಆದ್ರೆ ಹೈಕಮಾಂಡ್ ಯಾರಿಗೆ ಮಣೆ ಹಾಕುತ್ತೆ ಎಂಬುದು ಕಾದು ನೋಡಬೇಕಾಗಿದೆ.