ಚಿಕ್ಕಮಗಳೂರಿನ ಮಲ್ಲೇನಹಳ್ಳಿ ದೇವಿರಮ್ಮನ ಬೆಟ್ಟವನ್ನು ಏರಲು 50 ಸಾವಿರಕ್ಕೂ ಹೆಚ್ಚು ಭಕ್ತರು ಆಗಮಿಸಿದ್ದಾರೆ. 6500 ಅಡಿ ಎತ್ತರದ ಈ ಬೆಟ್ಟದಲ್ಲಿ ವರ್ಷಕ್ಕೊಮ್ಮೆ ಮಾತ್ರ ವಿಶೇಷ ಪೂಜೆ ನಡೆಯುತ್ತದೆ.

ಚಿಕ್ಕಮಗಳೂರು: 15 ಸಾವಿರಕ್ಕೂ ಅಧಿಕ ವಾಹನಗಳು. 50 ಸಾವಿರಕ್ಕೂ ಹೆಚ್ಚು ಭಕ್ತರು. ಕಾಲಲ್ಲಿ ಚಪ್ಪಲಿ ಇಲ್ಲ. ನಡೆಯೋಕೆ ದಾರಿ ಇಲ್ಲ. ಆದ್ರು ಬೆಟ್ಟದ ತಾಯಿಯನ್ನ ನೋಡೋ ತವಕ. ಇದು ಚಿಕ್ಕಮಗಳೂರಿನ ಮಲ್ಲೇನಹಳ್ಳಿ ದೇವಿರಮ್ಮನ ದರ್ಶನ ಪಡೆಯೋಕೆ ಇಂದು ಬಂದ ಭಕ್ತಸಾಗರ. ಸಮುದ್ರ ಮಟ್ಟದಿಂದ ಸುಮಾರು 6500 ಅಡಿ ಎತ್ತರದ ಬೆಟ್ಟದಲ್ಲಿ ನೆಲೆಸಿರೋ ಈ ಶಕ್ತಿ ದೇವಿಯನ್ನ ನೋಡಲು ಭಕ್ತ ಸಾಗರವೇ ಹರಿದು ಬಂದಿದೆ. ಭಕ್ತರು ಬರಿಗಾಲಲ್ಲಿ ಕಾಡು-ಮೇಡು ಅಲೆದು ದೇವಿಯ ದರ್ಶನ ಪಡೆದು ಪುನೀತರಾದ್ರು. ಭಕ್ತರ ಅನುಕೂಲಕ್ಕೆ ಈ ಬಾರಿ 2 ದಿನ ಬೆಟ್ಟ ಹತ್ತಲು ಜಿಲ್ಲಾಡಳಿತ ಅವಕಾಶ ನೀಡಿತ್ತು. ಇಂದು ಒಂದೇ ದಿನ ಸುಮಾರು 50 ಸಾವಿರದಷ್ಟು ಭಕ್ತರು ಬೆಟ್ಟ ಹತ್ತಿ ಬೆಟ್ಟದ ತಾಯಿಯನ್ನ ಕಂಡು ಪುಳಕಿತರಾಗಿದ್ದಾರೆ.

ನಾಳೆಯೂ ಬೆಟ್ಟ ಹತ್ತಲು ಅವಕಾಶ

ಹೀಗೆ ಬೆಟ್ಟಗಳ ಸಾಲಲ್ಲಿ ಇರುವೆಯಂತೆ ತಳುಕುತ್ತಾ-ಬಳುಕುತ್ತಾ-ತೆವಳುತ್ತಾ ಅಕ್ಕಪಕ್ಕದವರ ನೆರವಿನಿಂದ ಸಾಗ್ತಿರೋ ಇವರೆಲ್ಲಾ ಬಿಂಡಿಗ ದೇವಿರಮ್ಮನ ಭಕ್ತರು. ವರ್ಷಕ್ಕೊಮ್ಮೆ ದರ್ಶನ ಕೊಡೋ ಬೆಟ್ಟದ ತಾಯಿಯನ್ನ ನೋಡೋಕೆ ಈ ವರ್ಷ ನಿರೀಕ್ಷೆಗೂ ಮೀರಿದ ಭಕ್ತವೃಂದ ಆಗಮಿಸಿತ್ತು. ಪ್ರತಿ ವರ್ಷ 50 ಸಾವಿರಕ್ಕೂ ಅಧಿಕ ಭಕ್ತರು ಬೆಟ್ಟ ಹತ್ತುತ್ತಿದ್ರು. ಆದರೆ, ಕಳೆದ ಎರಡ್ಮೂರು ವರ್ಷಗಳಿಂದ ಮಳೆಯಿಂದ ಕೊಂಚ ಜನಸಂಖ್ಯೆ ಕ್ಷೀಣಿಸಿತ್ತು. ಆದರೆ, ಈ ವರ್ಷ ಬೆಟ್ಟ ಹತ್ತಿದ ಭಕ್ತರ ಸಂಖ್ಯೆ ಅಂದಾಜು 50 ಸಾವಿರ ದಾಟಿದೆ. ನಾಳೆಯೂ ಬೆಟ್ಟ ಹತ್ತಲು ಅವಕಾಶವಿದ್ದು, ಲಕ್ಷದ ಗಡಿಯೂ ದಾಟಬಹುದು.

ಕೊಂಚ ಎಡವಿದ್ರು ಪಾತಾಳ ಸೇರೋದು ಗ್ಯಾರಂಟಿ!

ದೀಪಾವಳಿ ಅಮವಾಸೆಯ ಹಿಂದಿನ ದಿನ ಬೆಟ್ಟದಲ್ಲಿರೋ ಶಿವನ ಅಸ್ತ್ರಗಳುಳ್ಳ ದುರ್ಗೆಗೆ ವಿಶೇಷ ಪೂಜೆ ನಡೆಯಲಿದೆ. ಆ ಪೂಜೆಯನ್ನ ನೋಡಿ ಕಣ್ತುಂಬಿಕೊಳ್ಳಲು ಭಕ್ತರು ಚಿಕ್ಕಮಗಳೂರು ತಾಲೂಕಿನ ಚಂದ್ರದ್ರೋಣ ಪರ್ವತದ ಸಾಲಿನಲ್ಲಿರುವ ಬಿಂಡಿಗ ಗ್ರಾಮಕ್ಕೆ ಬಂದೇ ಬರ್ತಾರೆ. ಇಲ್ಲಿ ಹರಕೆ ಕಟ್ಟಿದ್ರೆ ಆ ಹರಕೆ ಈಡೇರೋದ್ರಲ್ಲಿ ಅನುಮಾನವಿಲ್ಲ. ಅದಕ್ಕಾಗಿ ಹರಕೆ ಕಟ್ಟಿದ-ಕಟ್ಟದ ಭಕ್ತರು ಪ್ರತಿವರ್ಷ ಇಲ್ಲಿಗೆ ಬಂದೇ ಬರ್ತಾರೆ. ಕಿರಿದಾದ ಕಲ್ಲು-ಬಂಡೆ, ಮುಳ್ಳುಗಳ ಬೆಟ್ಟದಲ್ಲಿ ಭಕ್ತರು ಮುಂಜಾನೆಯಿಂದಲೇ ಬೆಟ್ಟ ಹತ್ತೋಕೆ ಶುರು ಮಾಡುತ್ತಾರೆ. ಬೆಟ್ಟವನ್ನೇರುವಾಗಿ ಕೊಂಚ ಎಡವಿದ್ರು ಪಾತಾಳ ಸೇರೋದು ಗ್ಯಾರಂಟಿ. ಈ ವರ್ಷದಿಂದ ಬೆಟ್ಟ ಏರಿ ದೇವಿ ದರ್ಶನ ಪಡೆಯಲು ಎರಡು ದಿನ ಅವಕಾಶ ನೀಡಲಾಗಿದ್ದು ಇಂದು ಮೊದಲ ದಿನವೇ 50 ಸಾವಿರಕ್ಕೂ ಅಧಿಕ ಭಕ್ತರು ದೇವಿ ದರ್ಶನ ಪಡೆದಿದ್ದಾರೆ. ‌ನಾಳೆ ನರಕ ಚತುರ್ದಶಿ ಹಿನ್ನೆಲೆ ಇನ್ನಷ್ಟು ಹೆಚ್ಚುವ ನಿರೀಕ್ಷೆ ಮಾಡಲಾಗಿದೆ. ಇಂದು ಚಿತ್ರನಟಿ ಅಮೂಲ್ಯ ಸೇರಿದಂತೆ ಬೇಲೂರು ಮೂಲದ ಅಂಗವಿಕಲ ಕುಮಾರ್ ಬೆಟ್ಟ ಏರಿದ್ದು ವಿಶೇಷವಾಗಿತ್ತು.

ಸಮುದ್ರಮಟ್ಟದಿಂದ ಸುಮಾರು 6500 ಅಡಿ ಎತ್ತದಲ್ಲಿರೋ ದೇವಿರಮ್ಮನ ಬೆಟ್ಟ

ಇಲ್ಲಿ ಹರಕೆ ಕಟ್ಟಿಕೊಂಡೋರು ಬೆಟ್ಟ ಹತ್ತುವಾಗ ಎಷ್ಟೇ ಕಷ್ಟವಾದ್ರು ಅವರ ಶಕ್ತಿಗನುಸಾರವಾಗಿ ಸೌದೆಯನ್ನ ಹೊತ್ತೊಯ್ಯುತ್ತಾರೆ. ಇದರ ಜೊತೆಗೆ, ಸೀರೆ, ತುಪ್ಪ, ಬೆಣ್ಣೆ, ಕಾಯಿ, ಬಾಳೆಹಣ್ಣನ್ನ ದೇವಿಗೆ ಸಮರ್ಪಿಸ್ತಾರೆ. ಸಮುದ್ರಮಟ್ಟದಿಂದ ಸುಮಾರು 6500 ಅಡಿ ಎತ್ತದಲ್ಲಿರೋ ದೇವಿರಮ್ಮನ ಬೆಟ್ಟದಲ್ಲಿ ವರ್ಷಕ್ಕೊಮ್ಮೆ ಮಾತ್ರ ಪೂಜೆ ನಡೆಯೋದು. ವ್ರತದ ಮೂಲಕ ಹರಕೆ ಕಟ್ಟಿ ಉಪವಾಸವಿದ್ದೋರು ದೇವರಿಗೆ ಪೂಜೆ ಸಲ್ಲಿಸಿದ ಬಳಿಕ ಬೆಟ್ಟದಲ್ಲಿ ಸಂಜೆ ದೀಪ ಬೆಳಗಿದ ನಂತರವೇ ಊಟ ಮಾಡೋದು. ಆದರೆ, ಈ‌ ವರ್ಷ ಭಕ್ತರ ಸಂಖ್ಯೆ ಹೆಚ್ಚುವ ಸಾಧ್ಯತೆ ಇದ್ದ ಕಾರಣ ಜಿಲ್ಲಾಡಳಿತ ದೇವಾಲಯ ಆಡಳಿತ ಮಂಡಳಿಯ ‌ಜೊತೆ ಚರ್ಚೆ ನಡೆಸಿ ಎರಡು ದಿನಗಳ ಕಾಲ ಬೆಟ್ಟ ಏರಲು ಅವಕಾಶ ನೀಡಿತ್ತು.

ಒಂದೇ ದಿನ ಸುಮಾರು 50 ಸಾವಿರಕ್ಕೂ ಅಧಿಕ ಭಕ್ತರಿಂದ ದೇವಿ ದರ್ಶನ

ಇಂದು ಮುಂಜಾನೆ ಇಂದ ಬೆಟ್ಟ ಏರಿದ ಭಕ್ತರಿಗೆ 10 ಗಂಟೆಯಿಂದ ದೇವಿರಮ್ಮ ದರ್ಶನ ಭಾಗ್ಯ ಸಿಕ್ಕಿದೆ. ಇಂದು‌ ಒಂದೇ ದಿನ ಸುಮಾರು 50 ಸಾವಿರಕ್ಕೂ ಅಧಿಕ ಭಕ್ತರು ದೇವಿ ದರ್ಶನ ಪಡೆದಿದ್ದಾರೆ. ನಾಳೆ ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 3 ಗಂಟೆಯ ವರೆಗೆ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಎರಡು ದಿನ ಭಕ್ತರು ತಂದ ಸೌದೆ, ಎಣ್ಣೆ, ಬೆಣ್ಣೆ, ಸೀರೆ, ರವಕೆಗಳಿಗೆ ನಾಳೆ ಸಂಜೆ ಬೆಟ್ಟದ ಮೇಲೆ ಅಗ್ನಿ ಸ್ಪರ್ಶ ಮಾಡಿದ ಮೇಲೆ ಚಿಕ್ಕಮಗಳೂರಿನ ಸುತ್ತಮುತ್ತಲಿನ ಜನ ಆ ಜ್ಯೋತಿಯನ್ನೇ ನೋಡಿದ ಬಳಿಕ ಅದಕ್ಕೆ ಆರತಿ ಮಾಡಿ ದೀಪಾವಳಿ ಆಚರಿಸೋದು. ಈ ಬೆಟ್ಟದ ತಾಯಿಗೂ ಮೈಸೂರು ಅರಸರಿಗೂ ತೀರಾ ಅವಿನಾಭಾವ ಸಂಬಂಧ. ಪ್ರತಿವರ್ಷ ಮೈಸೂರಿನ ಅರಮನೆಯಿಂದ ಈ ದೇವಾಲಯಕ್ಕೆ ಇಂದಿಗೂ ಎಣ್ಣೆ, ಸೀರೆ, ಅರಿಶಿನ-ಕುಂಕುಮ ಸೇರಿದಂತೆ ಪೂಜೆ ವಸ್ತುಗಳು ಬರುತ್ತದೆ. ಭದ್ರತೆಗಾಗಿ ಕೆಳಭಾಗದಿಂದ ಬೆಟ್ಟದ ಮೇಲ್ಬಾಗದ ವರೆಗೂ ಹಗ್ಗದ ವ್ಯವಸ್ಥೆ ಮಾಡಲಾಗಿತ್ತು. 500ಕ್ಕೂ ಅಧಿಕ ಪೊಲೀಸರು ಸೇರಿದಂತೆ ಅಗ್ನಿಶಾಮಕದಳ ಸಿಬ್ಬಂದಿಗಳು, ಆರೋಗ್ಯ ಇಲಾಖೆಯ ಸಿಬ್ಬಂದಿಗಳನ್ನ ನಿಯೋಜನೆ ಮಾಡಲಾಗಿತ್ತು.

ಒಟ್ಟಾರೆ, ಶಕ್ತಿ ದೇವತೆ ನೆಲಿಸಿರುವ ಬೆಟ್ಟದ ತಾಯಿಯನ್ನ ನೋಡೋಕೆ ಪ್ರತಿವರ್ಷ ರಾಜ್ಯ-ಹೊರರಾಜ್ಯದಿಂದಲೂ ಸಾವಿರಾರು ಭಕ್ತರು ಬರ್ತಾರೆ. ಇಲ್ಲಿನ ಆಹ್ಲಾದಕರ ವಾತಾವರಣವನ್ನ ಸವಿಯೋಕೆ ಬರೋರು ಉಂಟು, ಪ್ರೇಮಿಗಳು ಉಂಟು, ಕಷ್ಟವನ್ನ ಪರಿಹರಿಸೆ ತಾಯಿ ಅಂತ ಬೇಡೋರು ಉಂಟು. ಬೆಟ್ಟ ಹತ್ತಿ ಎಂಜಾಯ್ ಮಾಡೋರು ಇದ್ದಾರೆ. ಆದರೆ, ಆ ಬೆಟ್ಟದ ತಾಯಿ ಮಾತ್ರ ತನ್ನ ಮಡಿಲಿಗೆ ಬರೋ ಯಾರೊಬ್ಬರಿಗೂ ಎಳ್ಳಷ್ಟು ಅನಾಹುತವಾಗದಂತೆ ಕಾಯ್ತಿದ್ದಾಳೆ. ಎರಡು ದಿನದ ಹಗಲಲ್ಲಿ ಬರುವ ಸುಮಾರು ಲಕ್ಷದಷ್ಟು ಭಕ್ತರನ್ನ ನಿಭಾಯಿಸಿ-ಸಂಭಾಳಿಸುವಷ್ಟರಲ್ಲಿ ಪೊಲೀಸರು ಮಾತ್ರ ಹೈರಾಣಾಗಿರ್ತಾರೆ. (ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು)

YouTube video player