ಬೆಂಗಳೂರಿನ ಸೆಂಟ್ರಲ್ ಸಿಲ್ಕ್ ಬೋರ್ಡ್‌ನಿಂದ ವಿಮಾನ ನಿಲ್ದಾಣಕ್ಕೆ ಸಂಪರ್ಕಿಸುವ ನಮ್ಮ ಮೆಟ್ರೋ 'ನೀಲಿ ಮಾರ್ಗ' 2028ಕ್ಕೆ ಪೂರ್ಣಗೊಳ್ಳಲಿದೆ. ಹೆಬ್ಬಾಳ ಮತ್ತು ಮೆಖ್ರಿ ವೃತ್ತದ ನಡುವೆ ಎತ್ತರಿಸಿದ ಕಾರಿಡಾರ್ ಕಾಮಗಾರಿಯಿಂದಾಗಿ ಬಳ್ಳಾರಿ ರಸ್ತೆಯಲ್ಲಿ 18 ತಿಂಗಳ ಕಾಲ ಭಾರಿ ವಾಹನ ಸಂಚಾರ ನಿಷೇಧಿಸಲಾಗಿದೆ.

ಬೆಂಗಳೂರು: ರಾಜಧಾನಿ ಬೆಂಗಳೂರಿನ ವಿಮಾನ ನಿಲ್ದಾಣ ಪ್ರಯಾಣಿಕರು ಹಾಗೂ ಹೊರ ವರ್ತುಲ ರಸ್ತೆ ಸವಾರರಿಗೆ ಮಹತ್ವದ ಸುದ್ದಿಯೊಂದು ಲಭ್ಯವಾಗಿದೆ. ಸೆಂಟ್ರಲ್ ಸಿಲ್ಕ್ ಬೋರ್ಡ್‌ನಿಂದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ 58 ಕಿಲೋಮೀಟರ್ ಉದ್ದದ ನಮ್ಮ ಮೆಟ್ರೋ 'ನೀಲಿ ಮಾರ್ಗ' ಸಂಪೂರ್ಣವಾಗಿ ಕಾರ್ಯಾರಂಭಗೊಳ್ಳಲು ಮಾರ್ಚ್ 2028 ರವರೆಗೆ ಕಾಯಬೇಕಾಗಿದೆ. ಅದರಲ್ಲೂ ಬಳ್ಳಾರಿ ರಸ್ತೆಯನ್ನು ಒಂದೂವರೆ ವರ್ಷ ಬಂದ್ ಮಾಡಲಾಗಿದ್ದು, ಇದು ಕೂಡ ದೊಡ್ಡ ಹೊಡೆತ. ಜೊತೆಗೆ ಕಾಮಗಾರಿ ಮೂಲಸೌಕರ್ಯಕ್ಕೆ ಬೇಕಾದ ಅಗತ್ಯ ವಸ್ತುಗಳ ಕೊರತೆ ಕೂಡ ದಟ್ಟವಾಗಿದೆ. ಭವಿಷ್ಯದಲ್ಲಿ ಇನ್ನೇನೇನು ಸಮಸ್ಯೆಗಳು ಕಾಡಲಿದೆ ಅನ್ನುವುದು ಕಾದು ನೋಡಬೇಕಿದೆ.

ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ ಎಂಜಿನಿಯರಿಂಗ್ ಅಡಚಣೆಗಳು ಹಾಗೂ ಸವಾಲುಗಳ ಹಿನ್ನೆಲೆಯಲ್ಲಿ ಈ ಹಿಂದೆ ನಿಗದಿಪಡಿಸಿದ್ದ ಡಿಸೆಂಬರ್ 2027ರ ಗಡುವನ್ನು ಮೂರು ತಿಂಗಳು ವಿಸ್ತರಿಸಿದೆ. ಮತ್ತೊಂದೆಡೆ, ಬಿಡಿಎ ವತಿಯಿಂದ ಹೆಬ್ಬಾಳದ ಆನಂದನಗರ ಮತ್ತು ಮೆಖ್ರಿ ವೃತ್ತದ ನಡುವೆ ಎತ್ತರಿಸಿದ ಕಾರಿಡಾರ್ ಕಾಮಗಾರಿ ಆರಂಭವಾಗಿರುವುದರಿಂದ ಬಳ್ಳಾರಿ ರಸ್ತೆಯಲ್ಲಿ ಮುಂದಿನ 18 ತಿಂಗಳ ಕಾಲ ಭಾರಿ ಸಂಚಾರ ನಿರ್ಬಂಧ ಜಾರಿಯಲ್ಲಿರಲಿದೆ.

ಹಂತ ಹಂತವಾಗಿ ಮುಕ್ತಾಯಗೊಳ್ಳಲಿರುವ ಮೆಟ್ರೋ ನೀಲಿ ಮಾರ್ಗ

58 ಕಿ.ಮೀ. ಉದ್ದದ ಈ ಬೃಹತ್ ಕಾರಿಡಾರ್‌ ಅನ್ನು ಬಿಎಮ್‌ಆರ್‌ಸಿಎಲ್ ಮೂರು ಪ್ರಮುಖ ಹಂತಗಳಲ್ಲಿ ಸಾರ್ವಜನಿಕ ಸಂಚಾರಕ್ಕೆ ಮುಕ್ತಗೊಳಿಸಲು ಯೋಜನೆ ರೂಪಿಸಿದೆ.

ಹಂತ 2ಎ: ಸೆಂಟ್ರಲ್ ಸಿಲ್ಕ್ ಬೋರ್ಡ್ ನಿಂದ ಕೆ.ಆರ್.ಪುರಂ

ಈ ಭಾಗದಲ್ಲಿ 2027ರ ಆರಂಭದಲ್ಲಿ ಪ್ರಾಯೋಗಿಕ ಸಂಚಾರ ಆರಂಭವಾಗಲಿದ್ದು, 2027ರ ಮಧ್ಯಭಾಗದ ವೇಳೆಗೆ ವಾಣಿಜ್ಯ ಕಾರ್ಯಾಚರಣೆ ಶುರುವಾಗಲಿದೆ. ಅಕ್ಟೋಬರ್ ವೇಳೆಗೆ ಕೆಆರ್ ಪುರಂ-ಇಬ್ಲೂರು ಹಾಗೂ ಡಿಸೆಂಬರ್ ವೇಳೆಗೆ ಇಬ್ಲೂರು-ಸಿಲ್ಕ್ ಬೋರ್ಡ್ ನಡುವೆ ಪ್ರಾಯೋಗಿಕ ಓಟ ನಡೆಯಲಿದೆ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.

ಹಂತ 2ಬಿ: ಹೆಬ್ಬಾಳ ದಿಂದ ವಿಮಾನ ನಿಲ್ದಾಣ

ನೇರವಾಗಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸಂಪರ್ಕಿಸುವ ಈ ಮಾರ್ಗವನ್ನು ಸೆಪ್ಟೆಂಬರ್ 2027ರ ವೇಳೆಗೆ ಪೂರ್ಣಗೊಳಿಸಿ ಉದ್ಘಾಟಿಸುವ ಗುರಿ ಹೊಂದಲಾಗಿದೆ.

ಸಂಕೀರ್ಣ ವಿಭಾಗ : ಕೆ.ಆರ್. ಪುರಂ to ನಾಗವಾರ to ಹೆಬ್ಬಾಳ

ಅತ್ಯಂತ ಸಂಕೀರ್ಣವಾದ ಇಂಟರ್ಚೇಂಜ್ ರಚನೆಗಳನ್ನು ಒಳಗೊಂಡಿರುವ ಈ ಮಾರ್ಗವು ಡಿಸೆಂಬರ್ 2027 ರಿಂದ ಮಾರ್ಚ್ 2028 ರ ನಡುವೆ ಪೂರ್ಣಗೊಳ್ಳಲಿದೆ.

ನೀಲಿ ಮಾರ್ಗ ಕಾಮಗಾರಿ ವಿಳಂಬಕ್ಕೆ ಪ್ರಮುಖ ಕಾರಣಗಳು

ನಾಲ್ಕು ಹಳಿಗಳ ಬೃಹತ್ ಮೆಟ್ರೋ ಕಾರಿಡಾರ್: ಹೆಬ್ಬಾಳ ಮತ್ತು ಕೆಂಪಾಪುರ ನಡುವೆ 4 ಹಳಿಗಳನ್ನು (4-tracks) ಒಳಗೊಂಡ ವಿಶಿಷ್ಟ ಎತ್ತರಿಸಿದ ಮೆಟ್ರೋ ಮಾರ್ಗವನ್ನು ನಿರ್ಮಿಸಲಾಗುತ್ತಿದೆ. ಇದು ಭವಿಷ್ಯದಲ್ಲಿ ಜೆಪಿ ನಗರ-ಕೆಂಪಾಪುರ 'ಕಿತ್ತಳೆ ಮಾರ್ಗ'ದ (Orange Line) ಜೊತೆ ವಿಲೀನಗೊಳ್ಳಲಿದೆ. ಬಿಎಮ್‌ಆರ್‌ಸಿಎಲ್ ಇತಿಹಾಸದಲ್ಲೇ ಮೊದಲ ಬಾರಿಗೆ 1 ಕಿ.ಮೀ. ವ್ಯಾಪ್ತಿಯಲ್ಲಿ 3-ಪಿಯರ್ ಪೋರ್ಟಲ್ ರಚನೆಯನ್ನು ನಿರ್ಮಿಸಲಾಗುತ್ತಿದೆ. ಭಾರಿ ವಾಹನ ದಟ್ಟಣೆ, ಭೂಸ್ವಾಧೀನ ಪ್ರಕ್ರಿಯೆಯ ವಿಳಂಬ, ಭೂಗತ ಯುಟಿಲಿಟಿ (ಕೇಬಲ್/ಪೈಪ್‌ಲೈನ್) ಸ್ಥಳಾಂತರ ಹಾಗೂ ಹೊರ ವರ್ತುಲ ರಸ್ತೆಯುದ್ದಕ್ಕೂ ನಿಲ್ದಾಣಗಳ ನಿರ್ಮಾಣದ ತೊಡಕುಗಳು ಯೋಜನೆಯನ್ನು ತಡಗೊಳಿಸಿವೆ.

ಬಳ್ಳಾರಿ ರಸ್ತೆಯಲ್ಲಿ ನಿರ್ಬಂಧ ನಿಯಮಗಳು

ಹೆಬ್ಬಾಳದ ಆನಂದನಗರ ಮತ್ತು ಮೆಖ್ರಿ ವೃತ್ತದ ನಡುವೆ 1.7 ಕಿ.ಮೀ. ಉದ್ದದ ನಾಲ್ಕು ಪಥಗಳ ಎತ್ತರಿಸಿದ ಕಾರಿಡಾರ್ ನಿರ್ಮಾಣ ಕಾಮಗಾರಿ ನಡೆಯುತ್ತಿರುವುದರಿಂದ ಕೆಳಗಿನ ಸಂಚಾರ ನಿಯಮಗಳು ಜಾರಿಯಲ್ಲಿರುತ್ತವೆ.

ಲಘು, ಮಧ್ಯಮ ಮತ್ತು ಭಾರಿ ಸರಕು ಸಾಗಣೆ ವಾಹನಗಳು ಹಾಗೂ ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಮತ್ತು ಖಾಸಗಿ ಬಸ್‌ಗಳ ಸಂಚಾರವನ್ನು ಈ ಮಾರ್ಗದಲ್ಲಿ ನಿಷೇಧಿಸಲಾಗಿದೆ.

ಸ್ವಂತ ಕಾರುಗಳು, ಟ್ಯಾಕ್ಸಿ/ಕ್ಯಾಬ್‌ಗಳು, ದ್ವಿಚಕ್ರ ವಾಹನಗಳು, ಶಾಲಾ ಬಸ್‌ಗಳು ಮತ್ತು ಆಂಬ್ಯುಲೆನ್ಸ್ ನಂತಹ ತುರ್ತು ವಾಹನಗಳು ಮಾತ್ರ ಸಂಚರಿಸಬಹುದು.

ವಿಮಾನ ನಿಲ್ದಾಣ ಹಾಗೂ ಹೆಬ್ಬಾಳ ಪ್ರಯಾಣಿಕರಿಗೆ ಪರ್ಯಾಯ ಮಾರ್ಗಗಳು

ಸಂಚಾರ ದಟ್ಟಣೆ ನಿವಾರಿಸಲು ಬೆಂಗಳೂರು ಸಂಚಾರ ಪೊಲೀಸರು ಪ್ರಮುಖ ಪರ್ಯಾಯ ಮಾರ್ಗಗಳನ್ನು ಸೂಚಿಸಿದ್ದಾರೆ:

ನಗರದಿಂದ ವಿಮಾನ ನಿಲ್ದಾಣದ ಕಡೆಗೆ ತೆರಳುವ ವಾಹನಗಳಿಗೆ, ಓಲ್ಡ್ ಹೈ ಗ್ರೌಂಡ್ಸ್ ಜಂಕ್ಷನ್ - ಕಲ್ಪನಾ ಜಂಕ್ಷನ್ - ಓಲ್ಡ್ ಉದಯ ಟಿವಿ ಜಂಕ್ಷನ್ -ಕಂಟೋನ್ಮೆಂಟ್ ರೈಲ್ವೆ ನಿಲ್ದಾಣ - ಟ್ಯಾನರಿ ರಸ್ತೆ - ನಾಗವಾರ ರಸ್ತೆ ಮೂಲಕ ವಿಮಾನ ನಿಲ್ದಾಣ ತಲುಪುವುದು.

ವಿಮಾನ ನಿಲ್ದಾಣದಿಂದ ನಗರದ ಕೇಂದ್ರ ಭಾಗಕ್ಕೆ ಬರುವ ವಾಹನಗಳಿಗೆ, ನಾಗವಾರ ಜಂಕ್ಷನ್ - ಬಿದಿರು ಬಜಾರ್ - ಕ್ವೀನ್ಸ್ ರಸ್ತೆ ಮಾರ್ಗ.

ಹೆಬ್ಬಾಳ ಹೊರ ವರ್ತುಲ ರಸ್ತೆ - ಕುವೆಂಪು ವೃತ್ತ - ಗೊರಗುಂಟೆಪಾಳ್ಯ ಜಂಕ್ಷನ್ ಮಾರ್ಗ.

ಇತರ ಪ್ರಮುಖ ಮಾರ್ಗ ಬದಲಾವಣೆಗಳು:

ಹೆಬ್ಬಾಳದಿಂದ ನಗರಕ್ಕೆ ಬರುವವರು, ಫ್ಲೈಓವರ್ ಇಳಿದ ನಂತರ ಬ್ಯಾಪ್ಟಿಸ್ಟ್ ಆಸ್ಪತ್ರೆ ಮುಂಭಾಗದ ಸರ್ವಿಸ್ ರಸ್ತೆ ಬಳಸಿ ಸಿಬಿಐ ಜಂಕ್ಷನ್ ಕಡೆಗೆ ಸಾಗಬೇಕು.

ಯಶವಂತಪುರದಿಂದ ವಿಮಾನ ನಿಲ್ದಾಣಕ್ಕೆ ಹೋಗುವವರು, ಮತ್ತಿಕೆರೆ ರಸ್ತೆ - ಬಿಇಎಲ್ ವೃತ್ತ - ಹೊರ ವರ್ತುಲ ರಸ್ತೆ ಮಾರ್ಗವನ್ನು ಬಳಸಬಹುದು.