Asianet Suvarna News Asianet Suvarna News

ಅಗ್ನಿ ಅನಾಹುತಗಳ ಮಧ್ಯೆ ಬೆಂಗಳೂರಿಗೆ ಶಾಕ್ ಕೊಟ್ಟ ಸಮೀಕ್ಷಾ ವರದಿ!

*  ಅಪಾರ್ಟ್‌ಮೆಂಟ್‌ಗಳಲ್ಲಿಯೇ ನಿಯಮ ಉಲ್ಲಂಘನೆ ಪ್ರಕರಣ ಹೆಚ್ಚು
*  ಅಧಿಕಾರಿಗಳ ನಿರ್ಲಕ್ಷ್ಯದಿಂದ ಅಗ್ನಿ ಅನಾಹುತ
*  4 ಅಂತಸ್ತಿನ ಅಥವಾ 15 ಮೀಟರ್‌ ಎತ್ತರದ ಕಟ್ಟಡಕ್ಕೆ ಅಗ್ನಿಶಾಮಕ ಅಳವಡಿಸಬೇಕು
 

No Fire Safety to 13000 Buildings in Bengaluru grg
Author
Bengaluru, First Published Sep 24, 2021, 8:23 AM IST

ಬೆಂಗಳೂರು(ಸೆ.24): ಬಿಬಿಎಂಪಿ(BBMP) ವ್ಯಾಪ್ತಿಯಲ್ಲಿ ಅಗ್ನಿಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಿರುವ ಸುಮಾರು 13 ಸಾವಿರಕ್ಕೂ ಅಧಿಕ ಕಟ್ಟಡಗಳಿವೆ ಎಂದು ತಿಳಿದು ಬಂದಿದೆ.

ನಗರ ವ್ಯಾಪ್ತಿಯ ಬಹುಮಹಡಿಯ ಕಟ್ಟಡಗಳ ಕುರಿತು ಐದು ವರ್ಷದ ಹಿಂದೆ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ ನಡೆಸಿರುವ ಸಮೀಕ್ಷೆಯಲ್ಲಿ ಸುಮಾರು 13 ಸಾವಿರ ಕಟ್ಟಡಗಳಲ್ಲಿ ಅಗ್ನಿ ಸುರಕ್ಷತಾ ನಿಯಮಗಳ ಉಲ್ಲಂಘನೆಯಾಗಿರುವುದು ಬಯಲಾಗಿತ್ತು. ಅದರಲ್ಲೂ ಈ 13 ಸಾವಿರ ಕಟ್ಟಡಗಳ ಪೈಕಿ ಬಹು ಅಂತಸ್ತಿನ ಅಪಾರ್ಟ್‌ಮೆಂಟ್‌ಗಳಲ್ಲೇ(Apartment) ಅತಿಹೆಚ್ಚು ನಿಯಮ ಉಲ್ಲಂಘನೆ ಕಂಡು ಬಂದಿತ್ತು. ಕಳೆದ ಐದು ವರ್ಷಗಳ ಅವಧಿಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಹೊಸ ಕಟ್ಟಡಗಳು ಪಾಲಿಕೆ ವ್ಯಾಪ್ತಿಯಲ್ಲಿ ತಲೆ ಎತ್ತಿವೆ. ಮತ್ತೊಮ್ಮೆ ಸಮೀಕ್ಷೆ ಮಾಡಿದರೆ ಅಗ್ನಿಸುರಕ್ಷತಾ ನಿಯಮಗಳ ಉಲ್ಲಂಘಿಸಿರುವ ಮತ್ತಷ್ಟುಕಟ್ಟಡಗಳು ಬೆಳಕಿಗೆ ಬರುವ ಸಾಧ್ಯತೆಯಿದೆ.

ನಿಯಮಗಳ ವಿವರ:

ನೆಲಮಹಡಿ ಸೇರಿ ನಾಲ್ಕು ಅಂತಸ್ತಿನ ಕಟ್ಟಡ ಹಾಗೂ ನೆಲದಿಂದ 15 ಮೀಟರ್‌ ಎತ್ತರದ ಕಟ್ಟಡಗಳ ನಿರ್ಮಾಣದ ವೇಳೆ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ ಅಧಿಕಾರಿಗಳು ಯೋಜನೆ ಪರಿಶೀಲಿಸಿ ನಿರಪೇಕ್ಷಣಾ ಪತ್ರ(ಎನ್‌ಒಸಿ) ನೀಡಬೇಕು. ಈ ನಿರಪೇಕ್ಷಣಾ ಪತ್ರ ಸಲ್ಲಿಕೆ ಬಳಿಕವೇ ಸ್ಥಳೀಯ ಸಂಸ್ಥೆಗಳು ನಕ್ಷೆ ಮಂಜೂರಾತಿ ನೀಡಬೇಕು. ಕಟ್ಟಡದ ಸುತ್ತ ಅಗ್ನಿಶಾಮಕ ವಾಹನ ಸಂಚರಿಸಲು ರಸ್ತೆ ಇರಬೇಕು. ಅಪಾರ್ಟ್‌ಮೆಂಟ್‌ಗಳಲ್ಲಿ ಕನಿಷ್ಠ ಎರಡು ಕಡೆ ಮೆಟ್ಟಿಲು ಹಾಗೂ ಲಿಫ್ಟ್‌ ಇರಬೇಕು.

ಬೆಂಗಳೂರು : ಫ್ಲ್ಯಾಟ್‌ನಲ್ಲಿ ಬೆಂಕಿ ಅವಘಢ, ತಾಯಿ- ಮಗಳು ಸಜೀವ ದಹನ

ನಿವಾಸಿಗಳಿಗೆ ಅಗ್ನಿ ಸುರಕ್ಷತೆ ಬಗ್ಗೆ ಪ್ರಾತ್ಯಕ್ಷಿಕೆ ನೀಡಬೇಕು. ಕಟ್ಟಡ ನಿರ್ಮಾಣದ ಬಳಿಕ ಮತ್ತೆ ಅಗ್ನಿಶಾಮಕ ಮತ್ತು ತುರ್ತು ಸೇವೆ ಅಧಿಕಾರಿಗಳು ಕಟ್ಟಡದಲ್ಲಿ ಅಗ್ನಿ ಸುರಕ್ಷತಾ ವ್ಯವಸ್ಥೆ ಬಗ್ಗೆ ಪರಿಶೀಲಿಸಿ ಎಲ್ಲವೂ ನಿಯಮ ಬದ್ಧವಾಗಿದ್ದಲ್ಲಿ ಮಾತ್ರ ಮತ್ತೊಮ್ಮೆ ಎನ್‌ಒಸಿ ನೀಡಬೇಕು. ಬಳಿಕ ಮಾಲೀಕರು ಆ ಎನ್‌ಒಸಿಯನ್ನು ಸ್ಥಳೀಯ ಸಂಸ್ಥೆಗೆ ಸಲ್ಲಿಸಿ ಸ್ವಾಧೀನಾನುಭವ ಪತ್ರ(ಒಸಿ) ಪಡೆಯಬೇಕು. ಆದರೆ, ಬಹುತೇಕರು ಈ ನಿಯಮಗಳನ್ನು ಉಲ್ಲಂಘಿಸುತ್ತಿದ್ದಾರೆ ಎಂದು ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

ಬೆಂಗಳೂರು : ಫ್ಲ್ಯಾಟ್‌ ದುರಂತಕ್ಕೆ ಕಾರಣ ಇನ್ನೂ ನಿಗೂಢ!

ಲಂಚ ಕೊಟ್ಟು ಎನ್‌ಒಸಿ

ಪಾಲಿಕೆ ವ್ಯಾಪ್ತಿಯಲ್ಲಿ ಬಹುತೇಕರು ಬಹುಮಹಡಿ ಕಟ್ಟಡ ನಿರ್ಮಾಣದ ವೇಳೆ ಅಗ್ನಿಶಾಮಕ ಇಲಾಖೆಯಿಂದ ಎನ್‌ಒಸಿ ಪಡೆಯುವ ಗೋಜಿಗೆ ಹೋಗುವುದಿಲ್ಲ. ಪಾಲಿಕೆ ಅಧಿಕಾರಿಗಳನ್ನು ಓಲೈಸಿ ಸ್ವಾಧೀನಾನುಭವ ಪತ್ರ ಪಡೆಯುತ್ತಾರೆ. ನಗರ ವ್ಯಾಪ್ತಿಯಲ್ಲಿರುವ ಬಹುಮಹಡಿಯ ಅಪಾರ್ಟ್‌ಮೆಂಟ್‌ಗಳು ಹಾಗೂ ವಾಣಿಜ್ಯ ಕಟ್ಟಡಗಳನ್ನು ಸಮರ್ಪಕವಾಗಿ ಸಮೀಕ್ಷೆ ಮಾಡಿದರೆ ಅಗ್ನಿಸುರಕ್ಷತಾ ವ್ಯವಸ್ಥೆಯ ವಾಸ್ತವಾಂಶ ಬೆಳಕಿಗೆ ಬರಲಿದೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಅಮಾಯಕರು ಪ್ರಾಣ ಕಳೆದುಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ ಎಂದು ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.

ಬೊಮ್ಮನಹಳ್ಳಿಯ ವಲಯ ವ್ಯಾಪ್ತಿಯ ದೇವರಚಿಕ್ಕನಹಳ್ಳಿ ಅಪಾರ್ಟ್‌ಮೆಂಟ್‌ನ ಫ್ಲ್ಯಾಟ್‌ನಲ್ಲಿ ಸಂಭವಿಸಿದ ಅಗ್ನಿದುರಂತದಲ್ಲಿ ತಾಯಿ-ಮಗಳು ಸಜೀವ ದಹನವಾದ ಹೃದಯ ವಿದ್ರಾವಕ ಘಟನೆ ಬಳಿಕ ಕಟ್ಟಡಗಳಲ್ಲಿ ಅಗ್ನಿ ಸುರಕ್ಷತೆ ಬಗ್ಗೆ ಹೆಚ್ಚಿನ ಚರ್ಚೆಗಳು ಆರಂಭವಾಗಿದ್ದು, ಅನೇಕ ಕಡೆ ಪಾಲಿಕೆಯ ಅನುಮತಿ ಇಲ್ಲದೇ ಕಟ್ಟಡಗಳ ಬಾಲ್ಕನಿಯನ್ನು ಪರಿವರ್ತನೆ ಮಾಡತೊಡಗಿದ್ದಾರೆ.

ನಗರದ ಅಪಾರ್ಟ್‌ಮೆಂಟ್‌ಗಳು ಹಾಗೂ ಬಹುಮಹಡಿ ಕಟ್ಟಡಗಳಲ್ಲಿ ಅಗ್ನಿಸುರಕ್ಷತಾ ಕ್ರಮಗಳನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳಬೇಕು. ಬಿಲ್ಡರ್‌ಗಳು ಕಟ್ಟಡ ನಿರ್ಮಾಣ ಸಂದರ್ಭದಲ್ಲಿ ನಿಯಮಾನುಸಾರ ಅಗ್ನಿಸುರಕ್ಷತಾ ನಿಯಮಗಳನ್ನು ಪಾಲಿಸಬೇಕು. ಸಂಬಂಧಪಟ್ಟ ಇಲಾಖೆಗಳು ಕಟ್ಟಡಗಳನ್ನು ಪರಿಶೀಲಿಸಿ ಅಗ್ನಿಸುರಕ್ಷತಾ ನಿಯಮಗಳ ಅನುಷ್ಠಾನ ಮಾಡಿಸಬೇಕು ಎಂದು ಕನಕಪುರ ರಸ್ತೆ ಸಂಘಟನೆ ಚೇಂಜ್‌ ಮೇಕ​ರ್ಸ್‌ ಅಧ್ಯಕ್ಷ ಅಬ್ದುಲ್‌ ಅಲೀಂ ತಿಳಿಸಿದ್ದಾರೆ.  
 

Follow Us:
Download App:
  • android
  • ios