ಅಕ್ಕಿ ಹಗರಣದ ತನಿಖೆ ಮುಗಿಯುವವರೆಗೆ ಚುನಾವಣೆ ಬೇಡ: ಎಸ್.ಗಂಗಾಧರ್
ಟಿಎಪಿಸಿಎಂಎಸ್ ಗೋದಾಮಿನಿಂದ ಅಕ್ಕಿ ನಾಪತ್ತೆಯಾಗಿರುವ ಹಗರಣದ ತನಿಖೆ ಪೂರ್ಣಗೊಂಡು ತಪ್ಪಿತಸ್ಥರಿಗೆ ಶಿಕ್ಷೆಯಾದ ನಂತರವೇ ಸಂಸ್ಥೆಗೆ ಚುನಾವಣೆ ನಡೆಸಬೇಕು ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಸ್.ಗಂಗಾಧರ್ ಅಗ್ರಹಿಸಿದರು.
ಚನ್ನಪಟ್ಟಣ (ಡಿ.06): ಟಿಎಪಿಸಿಎಂಎಸ್ ಗೋದಾಮಿನಿಂದ ಅಕ್ಕಿ ನಾಪತ್ತೆಯಾಗಿರುವ ಹಗರಣದ ತನಿಖೆ ಪೂರ್ಣಗೊಂಡು ತಪ್ಪಿತಸ್ಥರಿಗೆ ಶಿಕ್ಷೆಯಾದ ನಂತರವೇ ಸಂಸ್ಥೆಗೆ ಚುನಾವಣೆ ನಡೆಸಬೇಕು ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಸ್.ಗಂಗಾಧರ್ ಅಗ್ರಹಿಸಿದರು. ನಗರದ ಕಾಂಗ್ರೆಸ್ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಡವರಿಗೆ ಅನ್ನಭಾಗ್ಯ ಕಲ್ಪಿಸಲು ಸರ್ಕಾರ ನೀಡಿದ್ದ ಅಕ್ಕಿಗೆ ಗೋದಾಮಿನಲ್ಲೇ ಕನ್ನ ಹಾಕಲಾಗಿದೆ. ಟಿಎಪಿಸಿಎಂಎಸ್‌ನಲ್ಲಿ ಮತ್ತೆ ಅಧಿಕಾರಕ್ಕೆ ಬಂದಲ್ಲಿ ಈ ಹಗರಣವನ್ನು ಮುಚ್ಚಿಹಾಕಬಹುದು,
ಇಲ್ಲದಿದ್ದಲ್ಲಿ ನಾವು ಬೀದಿಗೆ ಬರಬೇಕಾಗುತ್ತದೆ ಎಂಬ ಆತಂಕದಲ್ಲಿ ಜೆಡಿಎಸ್‌ನವರು ಚುನಾವಣೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದಾರೆ ಎಂದು ಅರೋಪಿಸಿದರು. ತಾಲೂಕಿನಲ್ಲಿ ಜೆಡಿಎಸ್‌ನ ಶಾಸಕರಿದ್ದು, ಆ ಪಕ್ಷವೇ ಆಡಳಿತ ಪಕ್ಷವಾಗಿದೆ. ಒಂದು ಭ್ರಷ್ಟಾಚಾರದ ಪ್ರಕರಣವನ್ನು ಮುಚ್ಚಿಹಾಕುವ ಉದ್ದೇಶವಿಟ್ಟುಕೊಂಡು ಆಡಳಿತ ಪಕ್ಷವೇ ಪ್ರತಿಭಟನೆ ನಡೆಸಿರುವುದು ಸೋಜಿಗ. ಯಾವುದೇ ಕಾರಣಕ್ಕೂ ಅಕ್ಕಿ ಹಗರಣದ ತನಿಖೆ ಪೂರ್ಣಗೊಳ್ಳುವವರೆಗೆ ಟಿಎಪಿಸಿಎಂಎಸ್ ಆಡಳಿತ ಮಂಡಳಿಗೆ ಚುನಾವಣೆ ನಡೆಸಬಾರದು ಎಂದು ಆಗ್ರಹಿಸಿದರು.
Chikkamagaluru: ಅರ್ಜುನನ ಸಾವಿನಿಂದ ನೋವು, ಕಾಫಿನಾಡಿನಲ್ಲಿ ಕಾಡಾನೆ ಸೆರೆ ಕಾರ್ಯಾಚರಣೆ ಸ್ಥಗಿತ!
ಮಾತನಾಡದ ಎಚ್‌ಡಿಕೆ: ಅಕ್ಕಿ ಹಗರಣ ನಡೆದು ಸುಮಾರು ೧೫ ದಿನವಾದರೂ ಕ್ಷೇತ್ರದ ಶಾಸಕರೂ ಆದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಇದರ ಬಗ್ಗೆ ಚಕಾರ ಎತ್ತುತ್ತಿಲ್ಲ. ಈ ವಿಚಾರದಲ್ಲಿ ಎಚ್‌ಡಿಕೆ ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕು. ತಮ್ಮ ಪಕ್ಷದ ಮುಖಂಡರಿಗೆ ಬುದ್ಧಿ ಹೇಳಿ ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು ಎಂದು ಆಗ್ರಹಿಸಿದರು.
ತನಿಖೆ ಎದುರಿಸಿ: ತಮ್ಮ ಮನೆಗೆ ಅಕ್ರಮ ವಿದ್ಯುತ್ ಸಂಪರ್ಕ ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಮಾರಸ್ವಾಮಿ ದಂಡ ಪಾವತಿಸಿದ್ದರು. ಅದೇ ಮಾದರಿಯನ್ನು ಇಲ್ಲೂ ಅನುಸರಿಸಬೇಕು. ಅಕ್ಕಿ ಹಗರಣದ ಹೊಣೆಯನ್ನು ಟಿಎಪಿಸಿಎಂಎಸ್ ಆಡಳಿತ ಮಂಡಳಿ ಹೊರಬೇಕು. ಜನ ನಿಮ್ಮನ್ನು ನಂಬಬೇಕು ಎಂದರೆ ಈ ಹಗರಣದ ತನಿಖೆ ಎದುರಿಸಿ, ಆ ನಂತರ ಚುನಾವಣೆಯಲ್ಲಿ ಬೇಕಾದರೇ ನೀವೇ ಗೆದ್ದು ಬಂದು ಅಧಿಕಾರ ನಡೆಸಿ ಯಾರು ಬೇಡ ಎನ್ನುವುದಿಲ್ಲ ಎಂದರು.
ಶೇರುದಾರರರಲ್ಲದವರನ್ನು, ತಮಗಿಷ್ಟ ಬಂದವರನ್ನು ಮತದಾರ ಪಟ್ಟಿಗೆ ಸೇರಿಸಿ ಜೆಡಿಎಸ್ ಚುನಾವಣೆ ನಡೆಸಲು ಹವಣಿಸಿದೆ. ಡಿ.೩ರ ಚುನಾವಣೆ ಮುಂದೂಡಿಕೆಯಾಗಿದ್ದು, ಸಾಕಷ್ಟು ಜನರಿಗೆ ಮೆಚ್ಚುಗೆಯಾಗಿತ್ತು. ಬಿಜೆಪಿ, ಜೆಡಿಎಸ್‌ನ ಸಾಕಷ್ಟು ಕಾರ್ಯಕರ್ತರಿಗೆ ಚುನಾವಣೆ ಮುಂದೂಡಿಕೆಯಾಗಿದ್ದು, ಸಂತಸ ಮೂಡಿಸಿತ್ತು ಎಂದು ತಿಳಿಸಿದರು.
ಮಾತನಾಡದ ಸಿಪಿವೈ: ಸುಮಾರು ೨ ದಶಕಗಳ ಕಾಲ ತಾಲೂಕಿನ ಶಾಸಕರಾಗಿ ಸಿ.ಪಿ.ಯೋಗೇಶ್ವರ್ ಆಡಳಿತ ನಡೆಸಿದ್ದಾರೆ. ಆದರೆ, ಟಿಎಪಿಸಿಎಂಎಸ್‌ನಲ್ಲಿ ನಡೆದಿರುವ ಅಕ್ಕಿ ಹಗರಣ ಸಂಬಂಧ ಅವರು ಸಹ ಮಾತನಾಡಲು ಮುಂದಾಗಿಲ್ಲ. ನಿಮ್ಮ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರೇ ಚುನಾವಣೆಗೆ ವಿರೋಧವಿದ್ದಾರೆ. ಆದರೆ, ಸಿಪಿವೈ ಯಾಕೆ ಮಾತನಾಡುತ್ತಿಲ್ಲವೋ ಗೊತ್ತಿಲ್ಲ ಎಂದರು.
ಇತ್ತೀಚಿಗೆ ನಗರಸಭೆ ಸಾಮಾನ್ಯ ಸಭೆಯಲ್ಲಿ ಮಹಿಳೆಯರ ಹಕ್ಕು ಪ್ರತಿಪಾಧಿಸಿದ ಕಾಂಗ್ರೆಸ್ ಸದಸ್ಯ ವಾಸೀಲ್ ಅಲಿಖಾನ್ ಅವರ ಮೇಲೆ ಸಭೆಯ ನಂತರ ಜೆಡಿಎಸ್ ಕಾರ್ಯಕರ್ತ ಹಲ್ಲೆ ನಡೆಸಿ, ಅವರ ಮೇಲೆ ಚಪ್ಪಲಿ ಎಸೆದಿದ್ದಾನೆ. ಇದು ಜೆಡಿಎಸ್ ನೀತಿಯಾಗಿದೆ ಎಂದು ಕಿಡಿಕಾರಿದರು. ಟಿಎಪಿಸಿಎಂಎಸ್ ಚುನಾವಣೆ ಮುಂದೂಡಿಕೆಗೆ ಸಂಬಂಧಿಸಿದಂತೆ ಹೋರಾಟ ನಡೆಸಿದ್ದಕ್ಕೆ ನನ್ನನ್ನು ಟಾರ್ಗೇಟ್ ಮಾಡಲಾಗಿದೆ. ನಿಮ್ಮನ್ನು ಗುರಿಯಾಗಿಸಿದ್ದು, ನೀವು ಎಚ್ಚರಿಕೆಯಿಂದ ಇರುವಂತೆ ಕೆಲವು ಹಿತೈಷಿಗಳು ನನಗೆ ಸಲಹೆ ನೀಡಿದ್ದಾರೆ.
Kodagu: 40 ವರ್ಷದ ಹಿಂದೆ ಜಲಾಶಯದೊಳಗೆ ಮುಳುಗಿದ್ದ ಶಿವನ ದೇವಾಲಯ ಪತ್ತೆ!
ನಾವು ಇದಕ್ಕೆಲ್ಲ ಹೆದರುವುದಿಲ್ಲ. ಟಿಎಪಿಸಿಎಂಎಸ್ ಚುನಾವಣೆಗೆ ಸಂಬಂಧಿಸಿದಂತೆ ನಾವು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಕುಕ್ಕೂಟ ಮಹಾಮಂಡಳದ ಅಧ್ಯಕ್ಷ ಕಾಂತರಾಜು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್.ಆರ್. ಪ್ರಮೋದ್, ಸುನೀಲ್, ಮುಖಂಡರಾದ ಚಂದ್ರಣ್ಣ, ಪಿ.ಡಿ.ರಾಜು, ಪಾಪಣ್ಣ, ಕೋಕಿಲಾರಾಣಿ ಮುಂತಾದವರು ಇದ್ದರು.