ನೆರೆ ಇದ್ದರೂ ಕುಡಿಯಲು ಮಾತ್ರ ಹನಿ ನೀರಿಲ್ಲ
ಭಾರೀ ಪ್ರವಾಹ ಪರಿಸ್ಥಿತಿ ಇದ್ದರೂ ಕುಡಿಯಲು ಮಾತ್ರ ಇಲ್ಲಿ ಹನಿ ನೀರಿಗೂ ತತ್ವಾರ ಎದುರಿಸಬೇಕಿದೆ. ಎಲ್ಲೆಲ್ಲೂ ನೀರು. ಆದರೆ ಕುಡಿಯಲು ಮಾತ್ರ ಯೋಗ್ಯವಾಗಿಲ್ಲ.
ನಾರಾಯಣ ಹೆಗಡೆ
ಹಾವೇರಿ [ಆ.12]: ವರದಾ ನದಿ ಪ್ರವಾಹದಿಂದ ಇವರ ಮನೆಗಳು ಜಲಾವೃತಗೊಂಡಿವೆ. ಊರ ತುಂಬೆಲ್ಲ ಎಲ್ಲಿ ನೋಡಿದರೂ ನೀರೇ ನೀರು. ಆದರೆ, ಇವರಿಗೆ ಮಾತ್ರ ಕುಡಿಯಲು ನೀರಿಲ್ಲ. ಹೀಗಾಗಿ ಕಲುಷಿತಗೊಂಡಿರುವ ಪ್ರವಾಹದ ನೀರನ್ನೇ ನೇರವಾಗಿ ಕುಡಿಯುವ ಅನಿವಾರ್ಯತೆ. ಕುದಿಸಿ ಕುಡಿಯೋಣವೆಂದರೆ ಕಟ್ಟಿಗೆ, ಗ್ಯಾಸ್ ಕೂಡ ಇಲ್ಲ.
ವರದಾ ಹಾಗೂ ತುಂಗಭದ್ರಾ ಸಂಗಮ ಪ್ರದೇಶದ ಪ್ರವಾಹ ಪೀಡಿತ ತಾಲೂಕಿನ ಮೇವುಂಡಿ ಗಳಗನಾಥ, ಬೆಳವಗಿ, ನೀರಲಗಿ, ಗುಯಿಲಗುಂದಿ ಗ್ರಾಮಗಳ ಜನರ ಸ್ಥಿತಿಯಿದು. ಕಳೆದ ಒಂದು ವಾರದಿಂದಲೂ ವರದಾ ನದಿ ಪ್ರವಾಹದಿಂದ ಅನೇಕ ಕುಟುಂಬಗಳು ಸಂತ್ರಸ್ತರಾಗಿದ್ದಾರೆ. ಮನೆ ತೊರೆದು ಪರಿಹಾರ ಕೇಂದ್ರದಲ್ಲಿ ವಾಸವಾಗಿದ್ದಾರೆ. ಇನ್ನು ಕೆಲವು ಮನೆಗಳಿಗೆ ನೀರು ನುಗ್ಗದಿದ್ದರೂ ಸದ್ಯಕ್ಕೆ ಅವರಿಗೂ ಸ್ವಚ್ಛ ನೀರು ಲಭ್ಯವಿಲ್ಲದ್ದರಿಂದ ನದಿ ನೀರನ್ನೇ ಬಳಸುತ್ತಿದ್ದಾರೆ.
ಅನೇಕರ ಮನೆ ಬಾಗಿಲಿಗೇ ನೀರು ಬಂದು ತಲುಪಿದೆ. ಊರಿನ ರಸ್ತೆ ಮೇಲೆಯೇ ನೀರು ಹರಿಯುತ್ತಿದೆ. ವಾರದಿಂದ ಬೀಳುತ್ತಿರುವ ಮಳೆಯಿಂದಾಗಿ ಈ ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕವಿಲ್ಲ. ಪ್ರವಾಹದಿಂದ ಈ ಗ್ರಾಮಗಳಿಗೆ ಪೂರೈಸುತ್ತಿದ್ದ ಪಂಪ್‌ಸೆಟ್‌ಗಳು ನೀರಿನಲ್ಲಿ ಮುಳುಗಿದ್ದು, ವಿದ್ಯುತ್ ಸ್ವಿಚ್ ಬೋರ್ಡ್‌ಗಳು ಪ್ರವಾಹದಲ್ಲಿ ತೇಲಿ ಹೋಗಿವೆ. ಇದರಿಂದ ಕುಡಿಯುವ ನೀರಿನ ಪೂರೈಕೆಯೇ ಇಲ್ಲದಂತಾಗಿದೆ. ಹೀಗಾಗಿ ಕುಡಿಯುವ ನೀರು ಬೇಕಾದವರು ಊರ ರಸ್ತೆ ಮೇಲೆ ಹರಿಯುತ್ತಿರುವ ನೀರನ್ನೇ ಕೊಡದಲ್ಲಿ ತುಂಬಿಕೊಂಡು ಹೋಗುತ್ತಿದ್ದಾರೆ. ದೂಡುವ ಗಾಡಿಗಳಲ್ಲಿ ಕೊಡ ತುಂಬಿಕೊಂಡು, ಟ್ರ್ಯಾಕ್ಟರ್‌ಗಳಲ್ಲಿ ಬ್ಯಾರೆಲ್ ಹಾಕಿಕೊಂಡು ಬಂದು ನೀರು ಒಯ್ಯುತ್ತಿದ್ದಾರೆ. ಸಂತ್ರಸ್ತರ ಪರಿಹಾರ ಕೇಂದ್ರದವರೂ ಇದೇ ನೀರನ್ನು ಬಳಸುತ್ತಿದ್ದಾರೆ.
ಗಳಗನಾಥ, ಬೆಳವಗಿ ಗ್ರಾಮಗಳಲ್ಲಿ ತೆರೆದಿರುವ ಪರಿಹಾರ ಕೇಂದ್ರದಲ್ಲಿ ಎರಡು ಹೊತ್ತು ಊಟ ಬಿಟ್ಟರೆ ಮತ್ತೇನೂ ನೀಡುತ್ತಿಲ್ಲ. ಸಂತ್ರಸ್ತರೇ ಹೊಳೆಗೆ ಹೋಗಿ ಕಲುಷಿತ ನೀರು ತಂದು ಕುಡಿಯುತ್ತಿದ್ದಾರೆ.
ದನಕರುಗಳು, ಕುರಿಗಳನ್ನು ಪರಿಹಾರ ಕೇಂದ್ರದ ಆವರಣದಲ್ಲೇ ಕಟ್ಟಿಕೊಂಡಿದ್ದಾರೆ. ಕಲುಷಿತ ನೀರು ಕುಡಿದು ಬೆಳವಗಿ ಗ್ರಾಮದಲ್ಲಿ ಸುಮಾರು 25 ಜನರು ಅನಾರೋಗ್ಯ ಪೀಡಿತರಾಗಿದ್ದಾರೆ. ಟ್ಯಾಂಕರ್‌ನಲ್ಲಿ ನೀರು ಪೂರೈಸುವ ಬಗ್ಗೆಯೂ ಸ್ಥಳೀಯ ಗ್ರಾಪಂಗೆ ಟ್ಯಾಂಕರ್ ಸಿಗುತ್ತಿಲ್ಲ. ಇದರಿಂದ ಈ ಗ್ರಾಮಗಳ ಸಂತ್ರಸ್ತರ ಸ್ಥಿತಿ ಅಯೋಮಯವಾಗಿದೆ.
ಕೆಸರಳ್ಳಿ ಗ್ರಾಮ ಜಲಾವೃತಗೊಂಡಿದ್ದು, ಗ್ರಾಮದ ಶಾಲೆಯಲ್ಲಿ ತೆರೆದಿರುವ ಪರಿಹಾರ ಕೇಂದ್ರವೇ ಈಗ ಮುಳುಗಿದೆ. ಇದರಿಂದ ರಸ್ತೆ ಮೇಲೆಯೇ ಪರಿಹಾರ ಕೇಂದ್ರ ಮಾಡಲಾಗಿದೆ. ಊರಿನ ಜನರೆಲ್ಲ ರಸ್ತೆಯ ಮೇಲೆಯೇ ಠಿಕಾಣಿ ಹೂಡಿದ್ದಾರೆ.