ಮಂಗಳೂರು(ಮಾ.19): ಕೊರೋನಾ ವೈರಲ್‌ ಭೀತಿ ಅಡಕೆ ಮಾರುಕಟ್ಟೆಗೆ ಸದ್ಯಕ್ಕೆ ತೊಂದರೆ ಇಲ್ಲ, ಆದರೆ ಕ್ಯಾಂಪ್ಕೋ ಚಾಕಲೇಟ್‌ಗೆ ಬಿಸಿ ತಟ್ಟಿದೆ. ಕರಾವಳಿಯಲ್ಲಿ ಮಾರುಕಟ್ಟೆಗೆ ಅಡಕೆ ಪೂರೈಕೆ ಕಡಿಮೆಯಾಗಿದೆ. ಅಡಕೆ ಧಾರಣೆ ಏರುಗತಿಯಲ್ಲಿದ್ದರೂ ನಿರೀಕ್ಷಿತ ಪ್ರಮಾಣದಲ್ಲಿ ಅಡಕೆ ಮಾರುಕಟ್ಟೆಗೆ ಬರುತ್ತಿಲ್ಲ.

ಇದರಿಂದಾಗಿ ಪ್ರಸ್ತುತ ಮಾರುಕಟ್ಟೆಧಾರಣೆಯಲ್ಲಿ ತುಸು ಸ್ಥಿರತೆ ಕಾಯ್ದುಕೊಳ್ಳುವಂತಾಗಿದೆ. ಆದರೆ ಅಡಕೆ ರಫ್ತು ವಿಚಾರದಲ್ಲಿ ಮಾತ್ರ ತೊಂದರೆ ಕಾಣಿಸಿದೆ. ಅಡಕೆ ಖರೀದಿ ಹಾಗೂ ಮಾರಾಟ ಮಾಡುವ ಅಂತಾರಾಜ್ಯ ಸಹಕಾರಿ ಸಂಸ್ಥೆ ಕ್ಯಾಂಪ್ಕೋಗೆ ತನ್ನದೇ ಚಾಕಲೇಟ್‌ ಮಾರಾಟಕ್ಕೆ ಕೊರೋನಾ ಸೋಂಕಿನ ಭೀತಿ ಬಿಸಿ ತಟ್ಟಿಸಿದೆ.

ಸರಕು ಸಾಗಾಟ ತೊಂದರೆ:

ಕರಾವಳಿಯಲ್ಲಿ ಖರೀದಿಸುವ ಅಡಕೆಯನ್ನು ಕ್ಯಾಂಪ್ಕೋ ಉತ್ತರ ಭಾರತದ ರಾಜ್ಯಗಳಿಗೆ ಮಾರಾಟ ಮಾಡುತ್ತದೆ. ಮುಖ್ಯವಾಗಿ ಗುಜರಾತ್‌, ಅಹಮದಾಬಾದ್‌, ಸೂರತ್‌, ಕಾನ್ಪುರ, ಉತ್ತರ ಪ್ರದೇಶ ಹಾಗೂ ಕೋಲ್ಕೊತ್ತಾಗಳಿಗೆ ಮಾರಾಟ ಮಾಡುತ್ತದೆ. ಈ ರಾಜ್ಯಗಳಲ್ಲಿ ಈಗ ಕೊರೋನಾ ಸೋಂಕಿನ ಎಫೆಕ್ಟ್ ಕಾಣಿಸಿದೆ. ಹಾಗಾಗಿ ಇಲ್ಲೆಲ್ಲ ಸರಕು ಸಾಗಾಟ ಲಾರಿಗಳ ಸಂಚಾರ ವಿರಳವಾಗುತ್ತಿದೆ. ಇದರಿಂದಾಗಿ ಅಡಕೆ ಸಾಗಾಟಕ್ಕೆ ಸರಕು ಲಾರಿಗಳ ಕೊರತೆ ಉಂಟಾಗಿದೆ ಎಂದು ಕ್ಯಾಂಪ್ಕೋ ಹೇಳಿದೆ.

ಕರಾವಳಿಯಲ್ಲಿ ಖರೀದಿಸಿದ ಅಡಕೆಯನ್ನು ಟ್ರಕ್‌ಗಳಲ್ಲಿ ಉತ್ತರ ಭಾರತಕ್ಕೆ ರವಾನಿಸಲಾಗುತ್ತದೆ. ನಿತ್ಯವೂ ಐದಾರು ಟ್ರಕ್‌ಗಳು ಉತ್ತರ ಭಾರತಕ್ಕೆ ಸಂಚರಿಸುತ್ತಿವೆ. ಈಗ ಕೊರೋನಾ ಭೀತಿಯಿಂದ ಟ್ರಕ್‌ಗಳ ಸಂಚಾರ ವಿರಳವಾಗಿದೆ. ಟ್ರಕ್‌ ಚಾಲಕ ಹಾಗೂ ನಿರ್ವಾಹಕರು ಉತ್ತರ ಭಾರತಕ್ಕೆ ಸಂಚರಿಸಲು ಹಿಂದೇಟು ಹಾಕುತ್ತಿದ್ದಾರೆ. ಒಂದು ವೇಳೆ ಅಡಕೆಗೆ ತೆಗೆದುಕೊಂಡು ಹೋದರೂ ಮರಳಿ ಬರುವಾಗ ಖಾಲಿ ಟ್ರಕ್‌ ಬರಬೇಕಾಗುತ್ತದೆ ಎಂಬ ಸಬೂಬು ಹೇಳುತ್ತಾರೆ.

ರೇಷನ್‌ಗೆ ಬೆರಳಚ್ಚು ಬೇಡ, OTP ಸಾಕು

ಉತ್ತರ ಭಾರತದಿಂದ ವಾಪಸ್‌ ಬರುವಾಗ ಟ್ರಕ್‌ಗಳು ಖಾಲಿಯಾಗಿ ಬರುವುದಿಲ್ಲ. ಮುಖ್ಯವಾಗಿ ಗುಜರಾತ್‌ ಬಂದರಿಗೆ ಚೀನಾದಿಂದ ಆಮದು ಆಗುವ ಸರಕುಗಳನ್ನು ಕರಾವಳಿಗೆ ತಂದುಕೊಳ್ಳುತ್ತಾರೆ. ಕಟ್ಟಡ ನಿರ್ಮಾಣಕ್ಕೆ ಬಳಕೆಯಾಗುವ ಮಾರ್ಬಲ್‌, ಗ್ರಾನೈಟ್‌ ಅಲ್ಲದೆ ಫರ್ನಿಚರ್‌ಗಳನ್ನು ಹೇರಿಕೊಂಡು ಬರುತ್ತಾರೆ. ಇದರಿಂದಾಗಿ ಟ್ರಕ್‌ಗಳ ಉತ್ತರ ಭಾರತ ಸಂಚಾರ ಲಾಭದಾಯಕವಾಗುತ್ತದೆ. ಈಗ ಚೀನಾದಿಂದ ಹಡಗು ಭಾರತಕ್ಕೆ ಆಗಮಿಸುತ್ತಿಲ್ಲ. ಗುಜರಾತ್‌ನಲ್ಲಿ ಇರುವ ಮಾರ್ಬಲ್‌ ಘಟಕದಲ್ಲಿ ನಿರ್ಮಾಣ ಸಾಮಗ್ರಿಗಳ ಕೊರತೆ ತಲೆದೋರಿದೆ. ಬೇಡಿಕೆ ಇದ್ದರೂ ಪೂರೈಕೆ ಇಲ್ಲದ ಕಾರಣ ಸರಕು ಲಾರಿಗಳು ಉತ್ತರ ಭಾರತಕ್ಕೆ ಹೊರಡಲು ಒಪ್ಪುತ್ತಿಲ್ಲ ಎಂದು ಕ್ಯಾಂಪ್ಕೋ ಅಧಿಕಾರಿಗಳು ಹೇಳುತ್ತಾರೆ.

ಸದ್ಯಕ್ಕೆ ತೊಂದರೆ ಇಲ್ಲ:

ಸಾಮಾನ್ಯವಾಗಿ ಉತ್ತರ ಭಾರತದ ಗೋದಾಮುಗಳಲ್ಲಿ ಕನಿಷ್ಠ ಮೂರು ತಿಂಗಳಿಗೆ ಸಾಕಾಗುವಷ್ಟುಅಡಕೆ ದಾಸ್ತಾನು ಇರುತ್ತದೆ. ಹಾಗಾಗಿ ದಿಢೀರನೆ ಸರಕು ಲಾರಿ ಸಂಚಾರ ಸ್ಥಗಿತಗೊಂಡರೂ ತಕ್ಷಣಕ್ಕೆ ಇಲ್ಲಿನ ಮಾರುಕಟ್ಟೆಯಲ್ಲಿ ಅಡಕೆ ಧಾರಣೆ ಮೇಲೆ ಪರಿಣಾಮ ಉಂಟಾಗದು. ಕೊರೋನಾ ವೈರಸ್‌ ಬಗ್ಗೆ ಮುಂಜಾಗ್ರತೆ ಮೂಡಿಸುತ್ತಿದ್ದರೂ, ಉತ್ತರ ಭಾರತದಲ್ಲಿ ಅಡಕೆ ಜಗಿಯುವುದು ಹವ್ಯಾಸವಾಗಿದೆ. ಏನೇ ಆದರೂ ಜಗಿಯುವ ಹವ್ಯಾಸವನ್ನು ಅಷ್ಟುಸುಲಭದಲ್ಲಿ ಸ್ಥಗಿತಗೊಳಿಸಲು ಸಾಧ್ಯವಿಲ್ಲ. ಅಡಕೆಯ ಮೌಲ್ಯವರ್ಧಿತ ಉತ್ಪನ್ನಗಳ ಸರಾಗ ಬಳಕೆ ಕರಾವಳಿಗರ ಪಾಲಿಗೆ ಪ್ರಯೋಜನವಾಗಿದೆ ಎನ್ನುತ್ತಾರೆ ಕ್ಯಾಂಪ್ಕೋ ಅಧಿಕಾರಿಗಳು.

ಚಾಕಲೇಟ್‌ಗೆ ತಟ್ಟಿದ ಬಿಸಿ:

ಕೊರೋನಾ ಎಫೆಕ್ಟ್ ಕ್ಯಾಂಪ್ಕೋ ಚಾಕಲೇಟ್‌ಗೆ ನೇರವಾಗಿ ತಟ್ಟಿದೆ. ಪುತ್ತೂರಿನ ಕ್ಯಾಂಪ್ಕೋ ಚಾಕಲೇಟ್‌ ಫ್ಯಾಕ್ಟರಿಯಿಂದ ವಿನ್ನರ್‌ ಎಂಬ ಪೇಯದ ಪೌಡರ್‌ನ್ನು ದಕ್ಷಿಣ ಆಫ್ರಿಕಾಗೆ ರಫ್ತು ಮಾಡಲಾಗುತ್ತದೆ. ಪ್ರತಿ ತಿಂಗಳು 100 ಟನ್‌ನಷ್ಟುವಿನ್ನರ್‌ ಬಂದರು ಮೂಲಕ ರಫ್ತಾಗುತ್ತಿದೆ. ಈಗ ಕಳೆದ ಒಂದು ವಾರದಿಂದ ಮಂಗಳೂರು ಬಂದರಿನಿಂದ ಆಫ್ರಿಕಾಗೆ ಹಡಗುಗಳು ಸಂಚರಿಸಿಲ್ಲ. ಇದರಿಂದಾಗಿ ಒಂದು ವಾರದಿಂದ ವಿನ್ನರ್‌ನ್ನು ರಫ್ತು ಮಾಡಲು ಸಾಧ್ಯವಾಗುತ್ತಿಲ್ಲ ಎನ್ನುತ್ತಾರೆ ಕ್ಯಾಂಪ್ಕೋ ಅಧಿಕಾರಿಗಳು.

ಕೊರೋನಾ ಭೀತಿಯಿಂದ ಶಾಲಾ ಕಾಲೇಜುಗಳಿಗೆ ರಜೆ ಸಾರಲಾಗಿದೆ. ಮಾಲ್‌ಗಳು ಬಂದ್‌ ಆಗಿವೆ. ಇದು ಕೂಡ ಕ್ಯಾಂಪ್ಕೋಗೆ ಚಾಕಲೇಟ್‌ ಮಾರುಕಟ್ಟೆಯಲ್ಲಿ ಹೊಡೆತ ನೀಡಿದೆ. ಚಿಲ್ಲರೆ ಮಾರಾಟ ಅಂಗಡಿಯಲ್ಲಿ ದಿನದಲ್ಲಿ 8 ಸಾವಿರ ರು. ವ್ಯಾಪಾರವಾಗುತ್ತಿದ್ದ ಚಾಕಲೇಟ್‌ ಈಗ 5 ಸಾವಿರ ರು.ಗೆ ಇಳಿಕೆಯಾಗಿದೆ ಎಂದು ಅಂಗಡಿಯವರು ಹೇಳುತ್ತಿದ್ದಾರೆ. ಚಿಲ್ಲರೆ ಅಂಗಡಿಗಳು ತೆರೆದಿದ್ದರೂ ಮಕ್ಕಳು ಆಗಮಿಸದೆ ಚಾಕಲೇಟ್‌ ಮಾರಾಟಕ್ಕೆ ಸ್ವಲ್ಪ ಮಟ್ಟಿನ ಹೊಡೆತ ಉಂಟಾಗಿದೆ ಎನ್ನುತ್ತಾರೆ ಕ್ಯಾಂಪ್ಕೋ ವ್ಯವಸ್ಥಾಪಕ ನಿರ್ದೇಶಕ ಸುರೇಶ್‌ ಕುಮಾರ್‌.

ಕೊಪ್ಪಳದಲ್ಲಿ ಕೊರೋನಾ ಶಂಕಿತ ಮೊದಲ ವ್ಯಕ್ತಿ ಪತ್ತೆ: ಹೈಅಲರ್ಟ್‌

ಕೊರೋನಾ ವೈರಸ್‌ ಭೀತಿಯಿಂದ ಅಡಕೆ ಮಾರುಕಟ್ಟೆಯಲ್ಲಿ ಏನೂ ತೊಂದರೆ ಉಂಟಾಗಿಲ್ಲ. ಹಡಗು ಸಂಚಾರ ಸ್ಥಗಿತಗೊಂಡ ಕಾರಣ ವಿನ್ನರ್‌ ಪೌಡರ್‌ ರಫ್ತಿಗೆ ಸಾಧ್ಯವಾಗುತ್ತಿಲ್ಲ. ಪ್ರಸಕ್ತ ಮಾರುಕಟ್ಟೆಯಲ್ಲಿ ಅಡಕೆ ಧಾರಣೆ ಏರುಗತಿಯಲ್ಲಿದ್ದು, ಬೆಳೆಗಾರರಿಗೆ ಯಾವುದೇ ತೊಂದರೆ ಉಂಟಾಗದು ಎಂದು ಮಂಗಳೂರು ಕ್ಯಾಂಪ್ಕೋ ಅಧ್ಯಕ್ಷ ಎಸ್‌.ಆರ್‌.ಸತೀಶ್ಚಂದ್ರ ತಿಳಿಸಿದ್ದಾರೆ.

-ಆತ್ಮಭೂಷಣ್‌