ಕೊಪ್ಪಳ(ಮಾ.19): ಜಿಲ್ಲೆಯಲ್ಲಿ ಮೊದಲ ಕೊರೋನಾ ಶಂಕಿತ ವ್ಯಕ್ತಿ ಪತ್ತೆಯಾಗಿದ್ದು, ಅವರಿಗೆ ಬುಧವಾರ ಕೊಪ್ಪಳದ ಜಿಲ್ಲಾಸ್ಪತ್ರೆಯ ಐಸೋಲೇಷನ್ ವಾರ್ಡ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 

ಸುಧಾಕರ್‌ ಪರಿಶ್ರಮಕ್ಕೆ ಪ್ರತಿಪಕ್ಷದಿಂದಲೂ ಮೆಚ್ಚುಗೆ!

ಜಿಲ್ಲೆಯ ಗಂಗಾವತಿ ನಿವಾಸಿ ಕೊರೋನಾ ಶಂಕಿತ ವ್ಯಕ್ತಿಯಾಗಿದ್ದು, ಅವರು ಕಳೆದ ಫೆ. 29 ರಂದು ಸೌದಿಯಿಂದ ಹೈದ್ರಾಬಾದ್ ಮೂಲಕ ಗಂಗಾವತಿಗೆ ಆಗಮಿಸಿದ್ದಾರೆ. ನಂತರ ಬಾಗಲಕೋಟೆ, ಲಿಂಗಸ್ಗೂರು, ರಾಯಚೂರಿನಲ್ಲಿ ಓಡಾಡಿ ಗಂಗಾವತಿಗೆ ಬಂದಿದ್ದು, ಮಾ. 13 ರಿಂದ ಕೆಮ್ಮು ಮತ್ತು ಜ್ವರದಿಂದ ಬಳಲುತ್ತಿದ್ದು, ಹೀಗಾಗಿ ಅವರನ್ನು ಜಿಲ್ಲಾಸ್ಪತ್ರೆಯ ಐಸೋಲೇಷನ್ ವಾರ್ಡ್‌ನಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. 

33ಕ್ಕೆ ಏರಿಕೆ:

ಜಿಲ್ಲಾದ್ಯಂತ ಇದುವರೆಗೂ ಕೊರೋನಾ ಸೋಂಕಿತರ ಅಥವಾ ಅನುಮಾನಾಸ್ಪದ ಪ್ರಕರಣಗಳು ಪತ್ತೆಯಾಗಿಲ್ಲ. ಆದರೆ, ನಿಗಾ ಇಟ್ಟವರ ಸಂಖ್ಯೆ ಏರುತ್ತಲೇ ಇದ್ದು, ಅದು 33ಕ್ಕೆ ಏರಿದೆ. ಬುಧವಾರ 22 ಇದ್ದ ಈ ಸಂಖ್ಯೆ ಗುರುವಾರ ಏಕಾಏಕಿ 33 ಕ್ಕೆ ಏರಿಕೆಯಾಗಿದ್ದು, ಅಂದರೆ ನಿಗಾ ಇಟ್ಟವರ ಸಂಖ್ಯೆ ಒಂದೇ ದಿನದಲ್ಲಿ 11 ಏರಿಕೆಯಾಗಿದೆ ಎನ್ನುವ ಮಾಹಿತಿಯನ್ನು ಜಿಲ್ಲಾಧಿಕಾರಿ ಪಿ. ಸುನಿಲ್ ಕುಮಾರ್ ಅವರು ಬಿಡುಗಡೆ ಮಾಡಿದ್ದಾರೆ. ನಾನಾ ದೇಶದಿಂದ ಬಂದವರು ಸೇರಿದಂತೆ ನಾನಾ ಜಿಲ್ಲೆ ಮತ್ತು ರಾಜ್ಯದಿಂದ ಬಂದು ಅಲ್ವಸ್ವಲ್ಪ ಲಕ್ಷಣ ಕಂಡುಬಂದಿರುವವರನ್ನು ಮನೆಯಲ್ಲಿ ಮಾತ್ರ ನಿಗಾ ಇಡಲಾಗಿದೆ. 

ಬಂದ್ ಬಂದ್ ಬಂದ್: 

ಜಿಲ್ಲಾದ್ಯಂತ ಬಂದ್ ಬಂದ್ ಬಂದ್ ಎನ್ನುವಂತಾಗಿದೆ. ಕೊರೋನಾ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಅಧಿಕಾರಿಗಳು ಮಾರುಕಟ್ಟೆಗೆ ದಾಳಿ ಮಾಡಿ, ಸಂಪೂರ್ಣ ಬಂದ್ ಮಾಡಿಸಿದ್ದಾರೆ. ಜಿಲ್ಲಾ ಕೇಂದ್ರ ಕೊಪ್ಪಳದಲ್ಲಿ ನಗರಸಭೆ ಜಾಗೃತಿಯನ್ನು ಮೂಡಿಸುವುದು ಹಾಗೂ ಅಂಗಡಿ, ಮುಂಗಟ್ಟುಗಳನ್ನು ಸಹ ಬಂದ್ ಮಾಡಲಾಗಿದೆ. ಮಹಲ್, ಅಂಗಡಿ, ಥೇಟರ್, ಶಾಲಾ, ಕಾಲೇಜು ಸೇರಿದಂತೆ ಎಲ್ಲವೂ ಸಂಪೂರ್ಣ ಬಂದ್ ಆಗಿವೆ. ಹೀಗಾಗಿ, ಜಿಲ್ಲಾದ್ಯಂತ ಎಲ್ಲಿಯೂ ಸಹಜ ಪರಿಸ್ಥಿತಿ ಕಂಡುಬರುತ್ತಿಲ್ಲ. ಮುನ್ನೆಚ್ಚರಿಕೆಯ ಈ ಕ್ರಮದಿಂದ ಜನರು ಭಯಭೀತರಾಗಿದ್ದು, ಮನೆಯಿಂದ ಆಚೆ ಬರುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಇಂಥ ದುಸ್ಥಿತಿಯನ್ನು ಎಂದು ಕಂಡಿರಲಿಲ್ಲ ಎಂದೇ ಬಣ್ಣಿಸಲಾಗುತ್ತದೆ. ವ್ಯಾಪಾರ, ವಹಿವಾಟು ಹಾಗೂ ಸಂಚಾರ ಸಂಪೂರ್ಣ ಬಂದ್ ಆಗಿದ್ದು, ಸಣ್ಣಪುಟ್ಟ ಅಂಗಡಿಗಳು ಮಾತ್ರ ತೆರೆದಿವೆ. ಅವುಗಳನ್ನು ಕದ್ದುಮುಚ್ಚಿ ಪ್ರಾರಂಭಿಸಲಾಗಿದೆ. 

ತಪ್ಪು ಮಾಹಿತಿ ಹರಡದಿರಿ: 

ಸಾರ್ವಜನಿಕರು ಜಿಲ್ಲಾಡಳಿತ ನೀಡುವ ಮಾಹಿತಿಯನ್ನೇ ತಪ್ಪಾಗಿ ಅರ್ಥೈಸಿ, ಸೋಶಿಯಲ್ ಮೀಡಿಯಾದಲ್ಲಿ (ಸಾಮಾಜಿಕ ಜಾಲತಾಣ) ಹರಡುತ್ತಿದ್ದಾರೆ. ವಿದೇಶದಿಂದ ಬಂದವರ ಮೇಲೆ ನಿಗಾ ಇಡಲಾಗಿದೆ. ಅಂದರೆ, ಇದ್ಯಾವುದು ಕೊರೋನಾ ಸೋಂಕಿತ ಪ್ರಕರಣವಲ್ಲ. ಹೀಗೆ ಬಂದವರನ್ನು ನಿಗಾ ಇಟ್ಟಿರುವ ಮಾಹಿತಿಯನ್ನು ಜಿಲ್ಲಾಡಳಿತ ಪ್ರಕಟಣೆಯ ಮೂಲಕ ತಿಳಿಸಿದರೆ ಅದನ್ನೇ ಕೊರೋನಾ ಸೋಂಕಿತರು ಎನ್ನುವ ತಪ್ಪು ಸಂದೇಶವನ್ನು ಸೋಶಿಯಲ್ ಮೀಡಿಯಾದಲ್ಲಿ ಹಾಕಿ ಜನರನ್ನು ಭಯಭೀತಿಗೊಳಿಸುತ್ತಿದ್ದಾರೆ. ಈ ಕುರಿತು ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕು.

ಜಯಮಾಲಾ ಪುತ್ರಿ, ನಾರಾಯಣಸ್ವಾಮಿ ಪುತ್ರ ವಿದೇಶದಲ್ಲಿ ಪರದಾಟ!

ನಗರದ ಮಧ್ಯೆವೇಕೆ ಕೊರೋನಾ ಚಿಕಿತ್ಸಾ ಕೇಂದ್ರ?

ಕೊರೋನಾ ಚಿಕಿತ್ಸಾ ಕೇಂದ್ರವನ್ನು ಜಿಲ್ಲಾ ಕೇಂದ್ರ ಕೊಪ್ಪಳದ ಮಧ್ಯ ಇರುವ ವಿಜ್ಞಾನ ಭವನದಲ್ಲಿ ಮಾಡಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಅದರಲ್ಲೂ ತಹಸೀಲ್ದಾರ್ ಕಚೇರಿ, ನೋಂದಣಿ ಇಲಾಖೆ ಸೇರಿದಂತೆ ಅನೇಕ ಇಲಾಖೆಗಳು ಇದ್ದು, ಇಲ್ಲಿಯೇ ಕೊರೋನಾ ಚಿಕಿತ್ಸಾ ಕೇಂದ್ರವನ್ನು ತೆರೆಯುವ ಅಗತ್ಯವೇನಿತ್ತು ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಡಿಸಿದ್ದಾರೆ. ನಗರದ ಹೊರವಲಯದಲ್ಲಿ ಅನೇಕ ಕಟ್ಟಡಗಳು ಇದ್ದು, ವಿಶೇಷವಾಗಿ ವೈದ್ಯಕೀಯ ಕಾಲೇಜು ಇದೆ. ಅಲ್ಲಿಯಾದರೂ ಮಾಡುವುದನ್ನು ಬಿಟ್ಟು, ನಗರದ ಮಧ್ಯೆ ಮತ್ತು ಜನನಿಬಿಡ ಪ್ರದೇಶದಲ್ಲಿ ಮಾಡಿರುವುದು ಎಷ್ಟು ಸರಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.