ಮಂಗಳೂರು(ಮಾ.18): ನ್ಯಾಯಬೆಲೆ ಅಂಗಡಿಗಳಲ್ಲಿ ಆನ್‌ಲೈನ್‌ ಪಡಿತರ ವಿತರಣೆಯನ್ನು ಬೆರಳಚ್ಚು ಬಯೋಮೆಟ್ರಿಕ್‌ ಮೂಲಕ ಮಾಡಲಾಗುತ್ತಿದೆ. ಆದರೆ ಈಗ ಕರೋನಾ ವೈರಸ್‌ನಿಂದಾಗಿ ಬೆರಳಚ್ಚು ಬಯೋಮೆಟ್ರಿಕ್‌ ನೀಡುವ ಬದಲು ಆಧಾರ್‌ ಆಧಾರಿತ ಮೊಬೈಲ್‌ ಒಟಿಪಿ ಮೂಲಕ ಪಡಿತರ ವಿತರಣೆಯನ್ನು ಜಾರಿಗೆ ತರಲಾಗಿದೆ.

ಇದನ್ನು ಬುಧವಾರದಿಂದ ದ.ಕ. ಜಿಲ್ಲೆಯಲ್ಲಿ ಜಾರಿಗೆ ತಂದಿದ್ದು, ಎಲ್ಲ ನ್ಯಾಯಬೆಲೆ ಅಂಗಡಿಗಳಲ್ಲಿ ಈ ಮಾಹಿತಿಯನ್ನು ಪ್ರಚುರಪಡಿಸಲಾಗಿದೆ. ಪಡಿತರ ಪಡೆಯಲು ಬರುವ ಪಡಿತರ ಚೀಟಿದಾರರ ಸಂಖ್ಯೆ ನಮೂದಿಸಿ, ಪಡಿತರ ಪಡೆಯಲು ಬಂದ ಕುಟುಂಬದ ಸದಸ್ಯರ ಹೆಸರು ಆಯ್ಕೆ ಮಾಡಿಕೊಂಡು ನಂತರ ಒಟಿಪಿ ಆಯ್ಕೆ ಮಾಡಬೇಕು ಎನ್ನಲಾಗಿದೆ.

ಕೊರೋನಾ ಕಾಟ: ಕೆಲ ರೈಲುಗಳ ಸಂಚಾರ ತಾತ್ಕಾಲಿಕ ರದ್ದು

ತಕ್ಷಣವೇ ಗ್ರಾಹಕರ ಮೊಬೈಲ್‌ ಸಂಖ್ಯೆಗೆ ಬಂದ ಒಟಿಪಿಯನ್ನು ತಂತ್ರಾಂಶದಲ್ಲಿ ನಮೂದಿಸಿ ನಂತರ ಬಿಲ್‌ ಜನರೇಟ್‌ ಮಾಡಿ, ಪಡಿತರ ವಿತರಣೆ ಮಾಡಬೇಕು. ಇದನ್ನು ತಾತ್ಕಾಲಿಕವಾಗಿ ಜಾರಿಗೆ ತರಲಾಗಿದೆ ಎಂದು ಆಹಾರ ಇಲಾಖೆಯ ಪ್ರಕಟಣೆ ತಿಳಿಸಿದೆ.