Mandya: ಮೂಲ ಸೌಲಭ್ಯವಿಲ್ಲದ ಮಂಡ್ಯ ವಿಶ್ವವಿದ್ಯಾನಿಲಯ
ಮಂಡ್ಯ ವಿಶ್ವವಿದ್ಯಾಲಯಕ್ಕೆ ಅಗತ್ಯ ಮೂಲ ಸೌಕರ್ಯ ಒದಗಿಸಬೇಕು, ಅಲ್ಲಿರುವ ತಾಂತ್ರಿಕ ಸಮಸ್ಯೆ ಬಗೆಹರಿಸಬೇಕು ಎಂಬಿತ್ಯಾದಿ ಪ್ರಮುಖ ಸಮಸ್ಯೆಗಳ ಪರಿಹಾರಕ್ಕೆ ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಅವರಲ್ಲಿ ಉಪ ಕುಲಪತಿ ಹಾಗೂ ರಿಜಿಸ್ಟ್ರಾರ್ ಮನವಿ ಮಾಡಿದರು.
ಮಂಡ್ಯ (ಡಿ.09): ಮಂಡ್ಯ ವಿಶ್ವವಿದ್ಯಾಲಯಕ್ಕೆ ಅಗತ್ಯ ಮೂಲ ಸೌಕರ್ಯ ಒದಗಿಸಬೇಕು, ಅಲ್ಲಿರುವ ತಾಂತ್ರಿಕ ಸಮಸ್ಯೆ ಬಗೆಹರಿಸಬೇಕು ಎಂಬಿತ್ಯಾದಿ ಪ್ರಮುಖ ಸಮಸ್ಯೆಗಳ ಪರಿಹಾರಕ್ಕೆ ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಅವರಲ್ಲಿ ಉಪ ಕುಲಪತಿ ಹಾಗೂ ರಿಜಿಸ್ಟ್ರಾರ್ ಮನವಿ ಮಾಡಿದರು.
ಮಂಡ್ಯ ವಿಶ್ವವಿದ್ಯಾಲಯದ ಸಮಿತಿ ಸದಸ್ಯರಾಗಿ ಆಯ್ಕೆಯಾಗಿರುವ ಶಾಸಕ ದಿನೇಶ ಗೂಳಿಗೌಡ ಅವರು ವಿಶ್ವ ವಿದ್ಯಾಲಯಕ್ಕೆ ಭೇಟಿ ನೀಡಿ, ವಿವಿಧ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿದರು. ಇದೇ ವೇಳೆ, ವಿಶ್ವ ವಿದ್ಯಾಲಯದ ಕಾರ್ಯವೈಖರಿ ಬಗ್ಗೆ ಸಲಹೆ ನೀಡಿ ವಿವಿಗಳು ಉದ್ಯೋಗಾಧಾರಿತ, ಕೌಶಲ್ಯ ಭರಿತ ಶಿಕ್ಷಣ ನೀಡುವಂತಾಗಬೇಕೇ ವಿನಃ ಪದವಿ ನೀಡುವ ಕಾರ್ಖಾನೆಯಾಗಬಾರದು ಎಂಬ ಕಿವಿಮಾತನ್ನೂ ಹೇಳಿದರು.
ಶೈಕ್ಷಣಿಕವಾಗಿ ಜಿಲ್ಲೆಯನ್ನು ಮತ್ತಷ್ಟುಬೆಳೆಸುವ ನಿಟ್ಟಿನಲ್ಲಿ ಶಾಸಕರು ಸಾಕಷ್ಟುಸಲಹೆ- ಸೂಚನೆ ನೀಡಿದರು. ವಿವಿಯ ಉಪಕುಲಪತಿ ಪ್ರೊ. ಪುಟ್ಟರಾಜು ಹಾಗೂ ರಿಜಿಸ್ಟ್ರಾರ್ ಡಾ.ನಾಗರಾಜ್ ಹಲವಾರು ವಿಷಯಗಳನ್ನು ದಿನೇಶ್‌ಗೂಳಿಗೌಡರ ಗಮನಕ್ಕೆ ತಂದರು. ಈ ಎಲ್ಲ ಸಮಸ್ಯೆಗಳನ್ನು ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಸಮಸ್ಯೆ ಬಗೆಹರಿಸಲು ಮನವಿ ಮಾಡಿದರು.
ವಿಶ್ವ ವಿದ್ಯಾಲಯಕ್ಕೆ ಸರ್ಕಾರ ಇದುವರೆಗೂ ಯಾವುದೇ ವಿಶೇಷ ಅನುದಾನ ನೀಡಿಲ್ಲ. ಒಟ್ಟಿನಲ್ಲಿ ಮಂಡ್ಯದಲ್ಲಿ ಹೆಸರಿಗೆ ಮಾತ್ರ ಯುನಿವರ್ಸಿಟಿ ಕಾರ್ಯನಿರ್ವಹಿಸುತ್ತಿದೆ. ಒಂದು ಪರಿಪೂರ್ಣ ವಿವಿಗೆ ಬೇಕಾದ ಬೋಧಕರು, ಬೋಧಕೇತರ ಸಿಬ್ಬಂದಿ ಹಾಗೂ ಮೂಲ ಸೌಕರ್ಯ ಯಾವುವೂ ಇಲ್ಲದೆ, ಜಿಲ್ಲೆಯ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದೆ ಎಂದರು.
ಕಾಲೇಜು ಹಸ್ತಾಂತರವಾಗಿಲ್ಲ:
ಮಂಡ್ಯ ಜಿಲ್ಲೆಯಲ್ಲಿ 47 ಪದವಿ ಕಾಲೇಜುಗಳಿವೆ. ಆದರೆ, ಅವುಗಳನ್ನು ಮೈಸೂರು ವಿವಿಯಿಂದ ಮಂಡ್ಯ ವಿವಿಗೆ ಹಸ್ತಾಂತರಿಸಿರುವ ಬಗ್ಗೆ ಅಧಿಕೃತ ಆದೇಶವೇ ಆಗಿಲ್ಲ. ಕೇವಲ ಮಂಡ್ಯದ ಕೆಲ ಕಾಲೇಜುಗಳ 4 ಸಾವಿರ ವಿದ್ಯಾರ್ಥಿಗಳು ಮಾತ್ರ ಸದ್ಯ ವಿವಿ ವ್ಯಾಪ್ತಿಗೆ ಸೇರಿದ್ದಾರೆ. ಈ ಹಿಂದೆ ಮಂಡ್ಯದ ತೂಬಿನಕೆರೆ ಎಂಬಲ್ಲಿ ಮೈಸೂರು ವಿವಿಯ ಸ್ನಾತಕೋತ್ತರ ಅಧ್ಯಯನ ಕೇಂದ್ರವಿತ್ತು. ಅದನ್ನು ಮಂಡ್ಯ ವಿವಿಗೆ ಹಸ್ತಾಂತರಿಸುವ ಪ್ರಕ್ರಿಯೆಯೂ ಆಗಿಲ್ಲ. ಇಂತಹ ತಾಂತ್ರಿಕ ಪ್ರಕ್ರಿಯೆಗಳನ್ನೂ ಶೀಘ್ರ ಮುಗಿಸಬೇಕು ಎಂದು ಒತ್ತಾಯಿಸಿದರು.
ಬೋಧಕ ಸಿಬ್ಬಂದಿಯಲ್ಲಿ ಗೊಂದಲ:
ವಿಶ್ವವಿದ್ಯಾಲಯದಲ್ಲಿ ಸದ್ಯ ಕಾರ್ಯನಿರ್ವಹಿಸುತ್ತಿರುವ ಪ್ರಾಧ್ಯಾಪಕರು, ಸಹ ಪ್ರಾಧ್ಯಾಪಕ ಮುಂತಾದ ಬೋಧಕ ಸಿಬ್ಬಂದಿಯೂ ಗೊಂದಲದಲ್ಲಿದ್ದಾರೆ. ಬೋಧಕರು ಸದ್ಯ ಕಾಲೇಜು ಶಿಕ್ಷಣ ಇಲಾಖೆಯಡಿಯೇ ಕಾರ್ಯನಿವಹಿಸುತ್ತಿದ್ದಾರೆ. ಮಂಡ್ಯ ವಿವಿಗೆ ಅವರ ಹುದ್ದೆಗಳನ್ನು ಸೇರಿಸಲು ಹಲವು ಕಾನೂನು ತೊಡಕುಗಳಿವೆ. ಅವುಗಳನ್ನು ಬಗೆಹರಿಸಿಕೊಟ್ಟರೆ ಮಾತ್ರ ನಾವು ವಿವಿಯಲ್ಲಿ ಮುಂದುವರಿಯುತ್ತೇವೆ. ಇಲ್ಲದಿದ್ದಲ್ಲಿ ನಮ್ಮನ್ನು ಬೇರೆಡೆ ವರ್ಗಾವಣೆ ಮಾಡಿ ಎಂಬ ಬೇಡಿಕೆ ಇಟ್ಟಿದ್ದಾರೆ. ಇಂತಹ ಸಮಸ್ಯೆಗಳನ್ನು ಶೀಘ್ರ ಬಗೆಹರಿಸಿ ಬೋಧಕರನ್ನು ಉಳಿಸಿಕೊಳ್ಳುವ ಕಾರ್ಯವಾಗಬೇಕು. ಇಲ್ಲದಿದ್ದಲ್ಲಿ ಶೈಕ್ಷಣಿಕ ಗುಣಮಟ್ಟದ ಮೇಲೆ ಪರಿಣಾಮ ಬೀರಲಿದೆ ಎಂಬ ವಿಷಯವನ್ನೂ ದಿನೇಶ್ ಗೂಳಿಗೌಡ ಅವರ ಗಮನಕ್ಕೆ ತರಲಾಯಿತು.
ಜೀವನ ರೂಪಿಸುವ ಹೊಸ ಕೋರ್ಸ್ ಪರಿಚಯಿಸಿ
ವಿಶ್ವವಿದ್ಯಾಲಯ ಕೇವಲ ಪದವಿ ಕೊಡುವ ಕಾರ್ಖಾನೆಯಾಗಬಾರದು. ವಿದ್ಯಾರ್ಥಿಗಳು ಅಲ್ಲಿ ಪದವಿ ಪಡೆದ ಮೇಲೆ ಉದ್ಯೋಗ ಸಿಗಬೇಕು. ಉದ್ಯೋಗಾಧಾರಿತ, ಕೌಶಲ್ಯ ಭರಿತ ಶಿಕ್ಷಣ ನೀಡಬೇಕು. ಎಲ್ಲ ಕಡೆ ಇರುವ ಕೋರ್ಸ್‌ಗಳನ್ನೇ ಮಂಡ್ಯ ವಿವಿಯಲ್ಲೂ ಪ್ರಾರಂಭಿಸಬಾರದು. ಹೊಸ ಕೋರ್ಸ್‌ಗಳನ್ನು ಪ್ರಾರಂಭಿಸಬೇಕು. ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿ, ಈಗ ಇರುವ ಬಿಎ, ಬಿಎಸ್‌ಸಿ ಮುಂತಾದ ಪದವಿ ಪಡೆದವರಿಗೆ ಉದ್ಯೋಗ ಸಿಗುತ್ತಿಲ್ಲ. ಈಗಾಗಲೇ ಲಕ್ಷಾಂತರ ಪದವೀಧರರಿದ್ದಾರೆ. ಅವರಿಗೇ ಉದ್ಯೋಗ ಸಿಗುತ್ತಿಲ್ಲ. ಈಗಿನ ವಿದ್ಯಾರ್ಥಿಗಳು ಮತ್ತೆ ಅದೇ ಪದವಿ ಪಡೆದು ಪೋಷಕರಿಗೆ ಹೊರೆಯಾಗಬಾರದು ಎಂದು ಶಾಸಕ ದಿನೇಶ್ ಗೂಳಿಗೌಡ ಅವರು ಕುಲಪತಿ ಪೊ›. ಪುಟ್ಟರಾಜು ಅವರಿಗೆ ಸಲಹೆ ನೀಡಿದರು.
ಸಮಸ್ಯೆ ಗಂಭೀರವಾದದಾಗಿದ್ದು, ಶೈಕ್ಷಣಿಕ ಪ್ರಗತಿ ಬಹಳ ಮುಖ್ಯವಾಗುತ್ತದೆ. ಈ ಹಿನ್ನೆಲೆಯಲ್ಲಿ ಈ ಎಲ್ಲ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರುತ್ತೇನೆ. ಶೀಘ್ರ ಎಲ್ಲ ಸಮಸ್ಯೆಗಳನ್ನು ಬಗೆಹರಿಸುವ ಪ್ರಯತ್ನ ಮಾಡುತ್ತೇನೆ ಎಂದು ದಿನೇಶ್ ಗೂಳಿಗೌಡ ಭರವಸೆ ನೀಡಿದರು.