ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಡುವಿನ ಕುರ್ಚಿ ಗುದ್ದಾಟದಿಂದ ಕಾಂಗ್ರೆಸ್ ಸರ್ಕಾರ ಪತನವಾಗಲಿದೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.

ಮದ್ದೂರು (ಮೇ.08): ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಡುವಿನ ಕುರ್ಚಿ ಗುದ್ದಾಟದಿಂದ ಕಾಂಗ್ರೆಸ್ ಸರ್ಕಾರ ಪತನವಾಗಲಿದೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು. ಪಟ್ಟಣದ ಎಂ.ಎಸ್.ಸಿದ್ದರಾಜು ಕಾಂಪ್ಲೆಕ್ಸ್ ನಲ್ಲಿ ನೂತನವಾಗಿ ಪ್ರಾರಂಭಗೊಂಡ ಪರಿಮಳ ಬೇಕರಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಮುಖ್ಯಮಂತ್ರಿ ಸ್ಥಾನ ಉಳಿಸಿಕೊಡಲು ಸಿದ್ದರಾಮಯ್ಯ ಒಂದೆಡೆ ಹೋರಾಟ ಮಾಡುತ್ತಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅದೇ ರೀತಿ ಸಿಎಂ ಕುರ್ಚಿ ಪಡೆಯಲು ಡಿ.ಕೆ. ಶಿವಕುಮಾರ್ ಮತ್ತೊಂದು ರೀತಿ ಹೋರಾಟ ಮಾಡುತ್ತಿದ್ದಾರೆ. ಹೀಗಾಗಿ ಇಬ್ಬರ ಕಿತ್ತಾಟದಲ್ಲಿ ರಾಜ್ಯದ ಅಭಿವೃದ್ಧಿ ಕುಂಠಿತಗೊಂಡಿದೆ ಎಂದು ಟೀಕಿಸಿದರು. 2028ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಮತ್ತೆ ಅಧಿಕಾರಕ್ಕೆ ಬರಲಿದೆ. ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಬೇಕು ಎನ್ನುವುದು ಕಾರ್ಯಕರ್ತರ ಅಭಿಪ್ರಾಯವಾಗಿದೆ. ಚುನಾವಣೆ ನಂತರ ಪಕ್ಷದ ವರಿಷ್ಠರು ಮುಖ್ಯಮಂತ್ರಿ ಆಯ್ಕೆ ಬಗ್ಗೆ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದರು.

ರಾಜ್ಯದ ಮುಂದಿನ ಆಶಾಕಿರಣ ನಿಖಿಲ್: ಸಿ.ಎಸ್.ಪುಟ್ಟರಾಜು

ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ನಟ ವಿಜಯ್ ಸುನಾಮಿಯಂತೆ ಮೇಲೆದ್ದು ಬಂದಂತೆ 2028ರ ಚುನಾವಣೆಯಲ್ಲಿ ದೇವೇಗೌಡರ ವಂಶದ ಕುಡಿ ಮೇಲೆದ್ದು ಬರಲಿದೆ ಎಂದು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಭವಿಷ್ಯ ನುಡಿದರು. ನಿಖಿಲ್ ಮೇಲೆ ದೈವಶಕ್ತಿ ಇದೆ, ನಿಖಿಲ್ ಅವರು ರಾಜ್ಯದಲ್ಲಿ ಜೆಡಿಎಸ್ ಅಲೆ ಎಬ್ಬಿಸಿ ಪಕ್ಷವನ್ನು ಅಧಿಕಾರಕ್ಕೆ ತರುವ ಶಕ್ತಿ ಅವರಿಗಿದೆ. ಅದಕ್ಕಾಗಿ ಪಾಂಡವರು ಹೋರಾಡಿದ ಮಣ್ಣಿನಿಂದಲೇ ಅದಕ್ಕೆ ಚಾಲನೆಯನ್ನು ನೀಡಿದ್ದಾರೆ. ಮುಂದಿನ ಚುನಾವಣೆಯಲ್ಲಿ ಗೆದ್ದುಬಂದು ರಾಜ್ಯದ ಆಶಾಕಿರಣವಾಗಲಿದ್ದಾರೆ. ಅವರಿಂದ ಹೊಸದೊಂದು ಅಧ್ಯಾಯ ಶುರುವಾಗಲಿದೆ ಎಂದು ವಿಶ್ವಾಸದಿಂದ ನುಡಿದರು.

ದೇವೇಗೌಡರು 1983ರಲ್ಲಿ ಪಕ್ಷವನ್ನು ಸ್ವತಂತ್ರವಾಗಿ ಅಧಿಕಾರಕ್ಕೆ ತಂದರು. 1991ರಲ್ಲಿ ಯುವ ಜನತಾದಳದ ಪ್ರಧಾನ ಕಾರ್ಯದರ್ಶಿಯಾಗಿ 1994ರಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯನಾಗಿ ಶಾಸಕನಂತೆ ಕೆಲಸ ಮಾಡಿದೆ. 1998ರಲ್ಲಿ ರಾಮನಗರದಲ್ಲಿ ಅಂಬರೀಶ್ ಗೆಲ್ಲಲಾಗದೆ ಸೋತರು, ಅವರನ್ನು ಎಸ್.ಡಿ.ಜಯರಾಂ ಮಂಡ್ಯಕ್ಕೆ ಕರೆತಂದು ಲೋಕಸಭೆಯಿಂದ ಕಣಕ್ಕಿಳಿಸಿ ಗೆಲ್ಲಿಸಿದರು. ಅಂಬರೀಶ್ ಕಾಂಗ್ರೆಸ್ ಪಕ್ಷ ಸೇರಿಕೊಂಡಾಗ ನನ್ನನ್ನೂ ಬಲವಂತವಾಗಿ ಪಕ್ಷಕ್ಕೆ ಸೇರಿಸಿಕೊಳ್ಳುವ ಪ್ರಯತ್ನ ನಡೆಸಿದ್ದರು. ಆಗ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ನೀವೇನಾದರೂ ಕಾಂಗ್ರೆಸ್ ಸೇರಿದರೆ ವಿಷ ಕುಡಿಯುವುದಾಗಿ ಧಮಕಿ ಹಾಕಿದರು. ಆಗ ನಾನು ಜೆಡಿಎಸ್ ಬಿಟ್ಟು ಯಾವುದೇ ಪಕ್ಷವನ್ನು ಸೇರುವುದಿಲ್ಲ ಎಂದು ಖಡಕ್ಕಾಗಿ ಹೇಳಿ ಬಂದಿದ್ದಾಗಿ ತಿಳಿಸಿದರು.