ಮಗಾ ಈ ಭೂ ತಾಯಿನ ನಂಬ್ಕೊಂಡು ಬದುಕು ಕಟ್ಕೊಂಡಿದಿವಿ, ಇದಿಲ್ಲ ಅಂದ್ರೆ ನಮ್ಗೆ ಜೀವನನೇ ಇಲ್ಲ... ಅವ್ರು ಕೊಡೊ ಕೋಟಿ ರುಪಾಯಿಗೆ ಯಾವ ರೈತನೂ ಆಸೆ ಪಡಲ್ಲ, ಬೇಕಾದ್ರೆ ಅವ್ರೆ ನಮ್ಮತ್ರ ಕೂಲಿಗೆ ಬರ್ಲಿ.

ರಾಮನಗರ (ಮೇ.28): ಮಗಾ ಈ ಭೂ ತಾಯಿನ ನಂಬ್ಕೊಂಡು ಬದುಕು ಕಟ್ಕೊಂಡಿದಿವಿ, ಇದಿಲ್ಲ ಅಂದ್ರೆ ನಮ್ಗೆ ಜೀವನನೇ ಇಲ್ಲ... ಅವ್ರು ಕೊಡೊ ಕೋಟಿ ರುಪಾಯಿಗೆ ಯಾವ ರೈತನೂ ಆಸೆ ಪಡಲ್ಲ, ಬೇಕಾದ್ರೆ ಅವ್ರೆ ನಮ್ಮತ್ರ ಕೂಲಿಗೆ ಬರ್ಲಿ... ಟೌನ್ ಶಿಪ್ ನ ಭೂಮಿ ಮೇಲಲ್ಲ, ಅನ್ನದಾತರ ಹೆಣದ ಮೇಲೆ ಕಟ್ಬೇಕಾಗುತ್ತೆ... ನಮ್ ಜೀವ ಹೋದ್ರೂ ಸರಿ ಭೂಮಿ ಮಾತ್ರ ಕೊಡಲ್ಲ...

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದು ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ (ಬಿಡದಿ ಟೌನ್ ಶಿಪ್ ) ಯೋಜನೆ ವ್ಯಾಪ್ತಿಯ ಬೈರಮಂಗಲ ಮತ್ತು ಕಂಚುಗಾರನಹಳ್ಳಿ ಗ್ರಾಮ ಪಂಚಾಯಿತಿಯ ಹಳ್ಳಿಗಳಿಗೆ ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿರವರು ರಿಯಾಲಿಟಿ ಚೆಕ್ ನಡೆಸಲು ಭೇಟಿ ನೀಡಿದ ವೇಳೆ ಅನ್ನದಾತರಿಂದ ಕೇಳಿ ಬಂದ ಆಕ್ರೋಶದ ನುಡಿಗಳು. ಭೈರಮಂಗಲ ವೃತ್ತದಲ್ಲಿ ಧರಣಿ ನಿರತರ ಸ್ಥಳಕ್ಕೆ ಆಗಮಿಸಿದ ನಿಖಿಲ್ ಕುಮಾರಸ್ವಾಮಿ ಅವರಿಗೆ ರೈತರು ಜಿಲ್ಲಾಡಳಿತಕ್ಕೆ ಸಲ್ಲಿಸಿರುವ 3600 ಆಕ್ಷೇಪಣ ಅರ್ಜಿಗಳ ಪ್ರತಿಗಳನ್ನು ನೀಡಿದರು. ಆ ವೇಳೆ

ರೈತ ಮಹಿಳೆಯರು ಅಳಲು ತೋಡಿಕೊಂಡರು. ಅಲ್ಲದೇ ನಮ್ಮ ಭೂಮಿ ಉಳಿಸಿಕೊಡುವಂತೆ ಹಲವು ರೈತರ ಮನವಿಗೆ ಸ್ಪಂದಿಸಿದ ನಿಖಿಲ್ ಇಂದಿನಿಂದ ಇದು ನಿಮ್ಮ ಹೋರಾಟವಲ್ಲ ನನ್ನ ಹೋರಾಟ ಎಂದು ಬಲ‌ ತುಂಬಿದರು. ಆನಂತರ ನಿಖಿಲ್ ರವರು ಮಾಜಿ ಶಾಸಕ ಎ.ಮಂಜುನಾಥ್ ಅವರೊಂದಿಗೆ ಗ್ರಾಮಗಳು ಮಾತ್ರವಲ್ಲದೆ ರೈತರ ಕೃಷಿ ಜಮೀನು , ತೋಟಗಳಲ್ಲಿನ ಬೆಳೆಗಳು ಹಾಗೂ ರೇಷ್ಮೆ ಸಾಕಾಣಿಕೆ ಕೇಂದ್ರಕ್ಕೂ ಭೇಟಿ ನೀಡಿ ವೀಕ್ಷಣೆ ಮಾಡಿದರು.

ಕಂಚುಗಾರನಹಳ್ಳಿ ಗ್ರಾಮದಲ್ಲಿನ ಹಾಲು ಉತ್ಪಾದಕರ ಸಹಕಾರ ಕೇಂದ್ರಕ್ಕೆ ಭೇಟಿ ನೀಡಿದ ನಿಖಿಲ್ ರವರು ಹಾಲಿನ ಉತ್ಪಾದನೆ ಬಗ್ಗೆ ಮಾಹಿತಿ ಪಡೆದುಕೊಂಡರು. ಆನಂತರ ಅರಳಾಳುಸಂದ್ರ ಗ್ರಾಮಕ್ಕೆ ಭೇಟಿ ನೀಡಿದ ವೇಲೆ ರೈತ ಹೊನ್ನಪ್ಪ ಅವರ ಜಮೀನಿನಲ್ಲಿ ಟ್ರಾಕ್ಟರ್ ಓಡಿಸಿ,ರೈತರ ಸಂಕಷ್ಟ ಆಲಿಸಿದ ನಿಖಿಲ್ , ನೀವು ಧೃತಿಗೇಡಬೇಡಿ, ನಿಮ್ಮೊಂದಿಗೆ ನಾವಿದ್ದೇವೆ ಎಂದು ಧೈರ್ಯ ತುಂಬಿದರು.

ಸತ್ಯದ ಮನವರಿಕೆ ಮಾಡಿಕೊಡುವ ಪ್ರಯತ್ನ

ಕೆಂಪಶೆಟ್ಟಿದೊಡ್ಡಿ, ಕೆಂಪಯ್ಯನಪಾಳ್ಯ, ಅರಳಾಳುಸಂದ್ರ, ಕಂಚುಗಾರನಹಳ್ಳಿ, ಹೊಸೂರು ಹಾಗೂ ಬನ್ನಿಗಿರಿ ಗ್ರಾಮಗಳಲ್ಲಿ ನಿಖಿಲ್ ರವರು ಪ್ರವಾಸ ನಡೆಸಿ ಸರ್ಕಾರಕ್ಕೆ ವಾಸ್ತವ ಸತ್ಯದ ಮನವರಿಕೆ ಮಾಡಿಕೊಡುವ ಪ್ರಯತ್ನ ‌ನಡೆಸಿದರು. ಈ ಸಂದರ್ಭದಲ್ಲಿ ಅಹವಾಲು ಹೇಳಿಕೊಂಡ ರೈತರು ಬಿಡದಿ ಟೌನ್ ಶಿಪ್ ಯೋಜನೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಬೈರಮಂಗಲ-ಕಂಚುಗಾರನಹಳ್ಳಿ ಭಾಗದ ಹಲವಾರು ಹಳ್ಳಿಗಳಲ್ಲಿ ರಿಯಾಲಿಟಿ ಚೆಕ್ ನಡೆಸಿದ ನಿಖಿಲ್ ಕುಮಾರಸ್ವಾಮಿರವರು ಈ ಭಾಗದಲ್ಲಿ ರೈತರೇ ಇಲ್ಲ ಎಂದು ಅನ್ನದಾತರ ಬಗ್ಗೆ ಲಘುವಾಗಿ ಮಾತನಾಡುವ ಮಾನ್ಯ ಉಪ ಮುಖ್ಯಮಂತ್ರಿಗಳೇ, ಇಲ್ಲಿನ ರೈತರನ್ನು ಒಮ್ಮೆಯಾದರೂ ಭೇಟಿ ಮಾಡಿ, ಅವರ ಮನವಿಯನ್ನು ಆಲಿಸಿ ಎಂದು ಹರಿಹಾಯ್ದರು.