ನಿಡುಮಾಮಿಡಿ ಶ್ರೀ ಗರಂ : ಖಡಕ್ ವಾರ್ನಿಂಗ್
28 ವರ್ಷಗಳಿಂದ ಮಠಕ್ಕೆ ಜಿಲ್ಲಾಡಳಿತ ಅಸಹಕಾರ, ಪಕ್ಷಪಾತ ಧೋರಣೆ, ಆನ್ಯಾಯ ಮಾಡುತ್ತಿದ್ದು ಇದರ ವಿರುದ್ಧ ಹೋರಾಟ ನಡೆಸುದಾಗಿ ನಿಡುಮಾಮಿಡಿ ಸ್ವಾಮೀಜಿ ಎಚ್ಚರಿಕೆ ನೀಡಿದರು.
ಚಿಕ್ಕಬಳ್ಳಾಪುರ (ಏ.06): ಜಿಲ್ಲೆಯ ಅಧಿಕಾರಿಗಳು, ಪೂರ್ವಗ್ರಹ ಪೀಡಿತವಾಗಿ ನಿಡುಮಾಮಿಡಿ ಮಾನವ ಧರ್ಮ ಪೀಠದ ಮಠದ ಮೇಲೆ ದೌರ್ಜನ್ಯ, ದಬ್ಬಾಳಿಕೆ ಮಾಡುತ್ತಿದ್ದಾರೆಂದು ಮಠದ ಪೀಠಾಧಿಪತಿ ಶ್ರೀ ವೀರಭದ್ರಚೆನ್ನಮಲ್ಲ ಮಹಾ ಸ್ವಾಮೀಜಿ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 28 ವರ್ಷಗಳಿಂದ ಮಠಕ್ಕೆ ಜಿಲ್ಲಾಡಳಿತ ಅಸಹಕಾರ, ಪಕ್ಷಪಾತ ಧೋರಣೆ, ಆನ್ಯಾಯ ಮಾಡುತ್ತಿದ್ದು ಇದರ ವಿರುದ್ಧ ಹೋರಾಟ ನಡೆಸುವ ಎಚ್ಚರಿಕೆ ನೀಡಿದರು.
ಮಂಜೂರಾದ ಅನುದಾನ ನೀಡಿಲ್ಲ : ಈ ಹಿಂದೆ ಸಿದ್ದರಾಮಯ್ಯ ಅವಧಿಯಲ್ಲಿ ಗೂಳೂರು ಮಠದ ಹಾಸ್ಟಲ್‌ಗೆ ಹಣ ಕೊಟ್ಟರೂ ಜಿಲ್ಲಾಡಳಿತ ಆ ಹಣ ಬಿಡುಗಡೆ ಮಾಡದೇ ಬೇರೆ ಉದ್ದೇಶಗಳಿಗೆ ಬಳಸಿಕೊಂಡಿದೆ. ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಮಾಮ್ತಾಜ್ ಆಲಿಖಾನ್ ಹಾಗೂ ಸಚಿವೆಯಾಗಿದ್ದ ಮೋಟಮ್ಮ ಶಾಲೆಗಳಿಗೆ ನೀಡಿದ್ದ ಅನುದಾನ ಕೂಡ ಜಿಲ್ಲಾಡಳಿತ ಬೇರೆ ಉದ್ದೇಶಗಳಿಗೆ ಬಳಸಿಕೊಂಡು ಮಠಕ್ಕೆ ದ್ರೋಹ ಬಗೆದಿದೆ ಎಂದರು.
ಮಾಜಿ ಸಚಿವರೋರ್ವರ ರಾಜಕೀಯ ಪತನ ಶುರು .
12 ವರ್ಷದಿಂದ ಮಠದ ಅರ್ಚಕರಿಗೆ ತಸ್ತಿಕ್ ಹಣ ಕೊಡುತ್ತಿಲ್ಲ. ಸರ್ಕಾರದಿಂದ ನಾವು ಮಂಜೂರು ಮಾಡಿಸಿದ ಅನುದಾನ ಕೂಡ ನಮಗೆ ಕೊಡುತ್ತಿಲ್ಲ. ಕಳೆದ 3 ದಶಕಗಳಿಂದ ಸಮಾಜದಲ್ಲಿ ಬಡವರು, ಅಸಹಾಯಕರಿಗೆ, ಅವಕಾಶ ವಂಚಿತರ ಪರವಾಗಿ ಹೋರಾಟಗಳನ್ನು ಮಾಡಿಕೊಂಡು ಬಂದ ತಾವು ಈಗ ಜಿಲ್ಲಾಡಳಿತದ ಅಸಹಕಾರವನ್ನು ಇಷ್ಟುವರ್ಷ ಸಹಿಸಿಕೊಂಡು ಬಂದಿದ್ದೇನೆ. ಮುಂದೆ ಸಹಿಸುವ ಪ್ರಶ್ನೆ ಇಲ್ಲ. ಇದನ್ನು ಮುಖ್ಯಮಂತ್ರಿ, ಕಂದಾಯ ಹಾಗೂ ಗೃಹ ಸಚಿವರ ಗಮನಕ್ಕೆ ತರುತ್ತೇವೆ. ಸಮಸ್ಯೆ ಬಗೆಹರಿಯದೇ ಹೋದರೆ ನಮ್ಮದೇ ಆದ ದಾರಿ ಹಿಡಿಯಬೇಕಾಗುತ್ತದೆ ಎಂದು ಸ್ವಾಮೀಜಿ ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ನಿಡುಮಾಮಿಡಿ ಮಠದ ಧರ್ಮದರ್ಶಿ ಪರಮೇಶ್ವರಪ್ಪ, ಗುರುಮೂರ್ತಿ, ಎಂ.ಎಸ್.ಎರ್ರಿಸ್ವಾಮಿ, ಮಠದ ಆಡಳಿತಾಧಿಕಾರಿ ಡಾ.ಶಿವಜ್ಯೋತಿ, ಎ.ಮಂಜುನಾಥ ಸೇರಿದಂತೆ ಮತ್ತಿತರರು ಇದ್ದರು.
ನಮ್ಮದು ಹೋರಾಟದ ಪರಂಪರೆ : ನಮ್ಮ ಮಠದ ಮೇಲೆ ನಡೆಯುತ್ತಿರುವ ಶೋಷಣೆ, ದಬ್ಬಾಳಿಕೆ ಸಹಿಸುವುದಿಲ್ಲ. ನಮ್ಮದು ಹೋರಾಟದ ಪರಂಪರೆ, ಪ್ರತಿಭಟಿಸುವ ಶಕ್ತಿ ಇದೆ. ಸಮುದಾಯಗಳಿಗೆ, ಸಮಾಜಕ್ಕೆ ಆನ್ಯಾಯವಾದಾಗ ಸುಮ್ಮನೆ ಕೂತ ವ್ಯಕ್ತಿ ನಾನಲ್ಲ. ಜಿಲ್ಲಾಡಳಿತದ ವಿರುದ್ದ ಹೋರಾಟದ ಹಾದಿ ತುಳಿಯಬೇಕಾಗುತ್ತದೆ. ಸರ್ಕಾರದ ಗಮನಕ್ಕೂ ಜಿಲ್ಲಾಡಳಿತದ ಧೋರಣೆ ತೋರುತ್ತೇವೆ.
-ವೀರಭದ್ರ ಚೆನ್ನಮಲ್ಲ ಮಹಾ ಸ್ವಾಮೀಜಿ, ನಿಡುಮಾಮಿಡಿ ಮಠ,