ಚಿಕ್ಕಬಳ್ಳಾಪುರ (ಏ.02):  ಮಾಜಿ ಸಚಿವ ವರ್ತೂರು ಪ್ರಕಾಶ್‌ ರಾಜಕೀಯ ಪತನ ಶುರುವಾಗಿದೆ. ಈಗಾಗಲೇ ತಮ್ಮ ಸ್ವಾರ್ಥ ರಾಜಕೀಯ ಲಾಭಕ್ಕೆ ಅನೇಕ ಪಕ್ಷಗಳನ್ನು ಬದಲಾಯಿಸಿರುವ ವರ್ತೂರು ಪ್ರಕಾಶ್‌ ಅಧಿಕಾರ ಇಲ್ಲದೇ ಮಾನಸಿಕವಾಗಿ ಅಸ್ವಸ್ಥರಾಗಿ ಮಾಜಿ ಕೇಂದ್ರ ಸಚಿವ ಕೆ.ಎಚ್‌.ಮುನಿಯಪ್ಪ ವಿರುದ್ದ ಇಲ್ಲಸಲ್ಲದ ಹೇಳಿಕೆಗಳನ್ನು ನೀಡುತ್ತಿದ್ದಾರೆ. ವರ್ತೂರು ತಮ್ಮ ವರ್ತನೆ ಬದಲಿಸಿಕೊಳ್ಳದಿದ್ದರೆ ಹೋರಾಟ ನಡೆಸುವುದಾಗಿ ಜಿಲ್ಲೆಯ ಕಾಂಗ್ರೆಸ್‌ ಮುಖಂಡರು ಎಚ್ಚರಿಕೆ ನೀಡಿದರು.

ನಗರದ ಪತ್ರಕರ್ತರ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಪಂ ಮಾಜಿ ಅಧ್ಯಕ್ಷ ಎಂ.ವಿ.ಕೃಷ್ಣಪ್ಪ, ಜಿಲ್ಲಾ ಕಾಂಗ್ರೆಸ್‌ ಕಾರ್ಯದರ್ಶಿ ಕೋನಪಲ್ಲಿ ಕೋದಂಡ, ಜಿಲ್ಲಾ ಉಪಾಧ್ಯಕ್ಷ ಪಟ್ರೇನಹಳ್ಳಿ ಕೃಷ್ಣ, ಮಮತಾಮೂರ್ತಿ ಮತ್ತಿತರರು ವರ್ತೂರು ಪ್ರಕಾಶ್‌ ನೀಡಿರುವ ಹೇಳಿಕೆ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಕೆಲ ಮುಖಂಡರ ಓಲಿಸಲು ಹೇಳಿಕೆ

 ಚಿಕನ್ ಸಿಗದೆ ಇದ್ರೆ ಬಿಡಲ್ಲ... ಪ್ರಕಾಶರ ಬಾಡೂಟ.. ಜನವೋ ಜನ!

ಕೆ.ಎಚ್‌.ಮುನಿಯಪ್ಪ ತಮ್ಮ ತಂದೆ ಸಮಾನರು, ದೇವರು ಎಂದು ಹೇಳಿ ಕ್ಷೇತ್ರದಲ್ಲಿ ಶಾಸಕರಾದ ವರ್ತೂರು ಪ್ರಕಾಶ್‌, ಈಗ ಕೆ.ಎಚ್‌.ಮುನಿಯಪ್ಪರನ್ನು ಕಾಂಗ್ರೆಸ್‌ನಿಂದ ಉಚ್ಚಾಟಿಸಬೇಕೆಂದು ಹೇಳಿಕೆ ನೀಡುವ ಮೂಲಕ ಕಾಂಗ್ರೆಸ್‌ನ ಕೆಲ ಮುಖಂಡರ ಓಲೈಕೆಗೆ ಮುಂದಾಗಿದ್ದಾರೆ. ಈಗಾಗಲೇ ಕೋಲಾರ ಕ್ಷೇತ್ರದಲ್ಲಿ ವರ್ತೂರು ಪ್ರಕಾಶ್‌ ಸಂಪೂರ್ಣ ರಾಜಕೀಯ ನೆಲೆ ಕೆಳೆದುಕೊಂಡಿದ್ದಾರೆ. ಅವರನ್ನು ಕಾಂಗ್ರೆಸ್‌ಗೆ ಸೇರಿಸಿಕೊಳ್ಳದಿರುವುದಕ್ಕೆ ಮುನಿಯಪ್ಪ ವಿರುದ್ದ ಹೇಳಿಕೆ ನೀಡುತ್ತಿದ್ದಾರೆ ಎಂದು ಟೀಕಿಸಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಿಸಾನ್‌ ಕಾಂಗ್ರೆಸ್‌ನ ಜಿಲ್ಲಾಧ್ಯಕ್ಷ ರಾಮಕೃಷ್ಣಪ್ಪ, ಹಿರಿಯ ಮುಖಂಡರಾದ ನಾರಾಯಣಸ್ವಾಮಿ, ಎನ್‌ಎಸ್‌ಯುಐ ರಾಜ್ಯ ಸಂಚಾಲಕ ಕುಂದಲಗುರ್ಕಿ ಮುನೀಂದ್ರ, ಪ್ರಸನ್ನ, ವಿಶ್ವನಾಥ, ಮಂಜುನಾಥ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.