ಕಲಬುರಗಿಯಲ್ಲೂ ಭಾರೀ ಮಳೆ: ರೆಡ್ ಅಲರ್ಟ್, ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ
* ಕಲಬುರಗಿ ಜಿಲ್ಲೆಯಲ್ಲಿ ನಿರಂತರ ಮಳೆ
* ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದ ವರುಣ
* ಜು.13 ರಂದು 13 ಎಂಎಂ ಮಳೆಯಾಗುವ ಸಾಧ್ಯತೆ ಇದೆ ಎಂದು ಮುನ್ಸೂಚನೆ ನೀಡಿದ ಹವಾಮಾನ ಇಲಾಖೆ
ಕಲಬುರಗಿ(ಜು.09): ಬಿಸಿಲೂರು ಕಲಬುರಗಿ ಜಿಲ್ಲೆಯಲ್ಲಿ ಭಾರಿ ಮಳೆ ಸರಿಯಿತ್ತಿದ್ದು, ನಾಳೆ ಜಿಲ್ಲೆಯ ಹಲವೆಡೆ ರೆಡ್ ಅಲರ್ಟ ಘೋಷಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಧ್ಯಂತ ನಾಳೆ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ಯಶವಂತ ಗುರುಕರ್ ಏಷ್ಯಾನೇಟ್ ಸುವರ್ಣ ನ್ಯೂಸಗೆ ಮಾಹಿತಿ ನೀಡಿದ್ದಾರೆ.
ಈ ವರ್ಷ ಮುಂಗಾರು ಮಳೆಯ ಕೊರತೆಯಿಂದ ಕಲಬುರಗಿ ಜಿಲ್ಲೆಯಲ್ಲಿ ಬಿತ್ತನೆಗೆ ತೀವ್ರ ಹಿನ್ನಡೆ ಉಂಟಾಗಿತ್ತು. ಭೂಮಿ ಹಸಿಯಾಗದ ಕಾರಣ, ರೈತರು ಆತಂಕದಲ್ಲಿದ್ದರು. ಆದ್ರೆ ಕಳೆದ ಎರಡು ದಿನಗಳಿಂದ ಸುರಿಯಿತ್ತಿರುವ ಮಳೆ, ಈ ವರ್ಷದ ಮುಂಗಾರಿನ ಮೊದಲ ಮಳೆಯಾಗಿ ಗುರುತಿಸಿಕೊಂಡಿದೆ. ಮಳೆಯೇ ಇಲ್ಲದೇ ಆಕಾಶದತ್ತ ಮುಖಮಾಡಿ ಕುಳಿತಿದ್ದ ರೈತರ ಮೊಗದಲ್ಲಿ ಇದೀಗ ಮಂದಹಾಸ ಮೂಡಿದೆ.
ನಗರದ ರಸ್ತೆಗಳು ಜಲಾವೃತ
ಮಳೆಯಿಂದ ಕಲಬುರಗಿ ನಗರದ ರಸ್ತೆಗಳಲೆಲ್ಲಾ ನೀರೇ ನೀರು ಆವರಿಸಿಕೊಂಡು ಬಿಟ್ಟಿದೆ. ರಸ್ತೆ ತುಂಬಾ ನೀರು ತುಂಬಿದ ಕಾರಣ ವಾಹನಗಳ ಸೈಲೆನ್ಸರನಲ್ಲಿ ನೀರು ಹೋಗಿ ವಾಹನಗಳು ಬಂದ್ ಆದ ಕಾರಣ ವಾಹನ ಸವಾರರು ತೀವ್ರ ಪರದಾಟ ನಡೆಸುವಂತಾಯಿತು.
ಕಲಬುರಗಿ ಏರ್‌ಪೋರ್ಟ್‌ಲ್ಲೂ ವಿಮಾನ ಚಾಲನಾ ತರಬೇತಿ: ಕೇಂದ್ರ ಸರ್ಕಾರ ಅನುಮತಿ
ಶೇ 60 ರಷ್ಟು ಮಳೆ ಅಧಿಕ
ಕಲಬುರಗಿ ಜಿಲ್ಲೆಯಲ್ಲಿ ಕಳೆದ 24 ಗಂಟೆಗಳಲ್ಲಿ ವಾಡಿಗೆಗಿಂತ ಶೇ 60 ರಷ್ಟು ಅಧಿಕ ಮಳೆ ಸುರಿದಿದೆ. ಕಳೆದ ಮೂರು ದಿನಗಳಲ್ಲಿ ಕಲಬುರಗಿ ಜಿಲ್ಲೆಯಲ್ಲಿ 40 ಎಂಎಂ ಮಳೆಯಾಗಿದೆ ಎಂದು ಕೃಷಿ ಇಲಾಖೆ ಮಾಹಿತಿ ನೀಡಿದೆ. ಕಳೆದ ಮೂರು ದಿನಗಳಿಂದ ಮಾತ್ರ ಸುರಿದ ಮಳೆ ಈ ವರ್ಷದ ಮಳೆ ಕೊರತೆಯನ್ನು ನೀಗಿಸಿದೆ.
ಇನ್ನೂ ಐದು ದಿನ ರೇನ್ ಅಲರ್ಟ್
ಕಲಬುರಗಿ ಜಿಲ್ಲೆಯಲ್ಲಿ ಮುಂಬರುವ ಐದು ದಿನಗಳಲ್ಲಿಯೂ ಭಾರಿ ಮಳೆ ಮುನ್ಸೂಚನೆ ನೀಡಲಾಗಿದೆ. ನಾಳೆ ಜು.9 ರಂದು 54 ಎಂಎಂ, ನಾಡಿದ್ದು ಜು.10 ರಂದು 47 ಎಂಎಂ, ಜು.11 ರಂದು 8 ಎಂಎಂ, ಜು 12 ರಂದು 19 ಎಂಎಂ, ಹಾಗೂ ಜು.13 ರಂದು 13 ಎಂಎಂ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ರೆಡ್ ಅಲರ್ಟ್ ಘೋಷಣೆ
ಕಲಬುರಗಿ ಜಿಲ್ಲೆಯ ಚಿಂಚೋಳಿ ಭಾಗದಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದ್ದು, ಮೋಡ ಸ್ಫೋಟ ಸಾಧ್ಯತೆ ಇದೆ ಎನ್ನಲಾಗಿದೆ. ಹಾಗಾಗಿ ಇಡೀ ಜಿಲ್ಲಾದ್ಯಂತ ಮುಂಜಾಗ್ರತಾ ಕ್ರಮವಾಗಿ ಶಾಲೆ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಯಶವಂತ ಗುರುಕರ್ ಸುವರ್ಣ ನ್ಯೂಸಗೆ ಮಾಹಿತಿ ನೀಡಿದ್ದಾರೆ.