*  ವಿಮಾನ ಚಾಲನಾ ಕ್ಷೇತ್ರದಲ್ಲೂ ತನ್ನ ಛಾಪು ಮೂಡಿಸಲು ಸಿದ್ಧವಾದ ಕಲಬುರಗಿ ಏರ್ಪೋರ್ಟ್‌*  ಈ ಕುರಿತು ಮಾಹಿತಿ ನೀಡಿದ ವಿಮಾನ ನಿಲ್ದಾಣ ನಿರ್ದೇಶಕ ಜ್ಞಾನೇಶ್ವರ ರಾವ್‌ *  ಪೈಲೆಟ್‌ ಟ್ರೈನಿಂಗ್‌ ಶಾಲೆ ತೆರೆಯಲು ಅನುಮತಿ  

ಕಲಬುರಗಿ(ಜು.02): ವಿಮಾನಯಾನ ಕಾರ್ಯಾಚರಣೆಗೆ ತೆರೆದುಕೊಂಡ ಎರಡೂವರೆ ವರ್ಷದಲ್ಲೇ ಅತೀ ಹೆಚ್ಚು ಜನ ದಟ್ಟಣೆಯೊಂದಿಗೆ ಈಗಾಗಲೇ ಗಮನ ಸೆಳೆದಿರುವ ಕಲಬುರಗಿ ಏರ್ಪೋರ್ಟ್‌ ಇದೀಗ ವಿಮಾನ ಚಾಲನಾ ಕ್ಷೇತ್ರದಲ್ಲೂ ತನ್ನ ಛಾಪು ಮೂಡಿಸಲು ಸಿದ್ಧವಾಗಿದೆ. 

ಕೇಂದ್ರ ವಿಮಾನ ನಿಲ್ದಾಣ ಪ್ರಾಧಿಕಾರ (ಎಎಐ) ನಗರದಲ್ಲಿ ವೈಮಾನಿಕ ತರಬೇತಿ ಶಾಲೆಗೆ ಒಪ್ಪಿಗೆ ನೀಡಿರುವುದಾಗಿ ಅಧಿಕೃತವಾಗಿ ತಿಳಿಸಿದೆ. ಇದರೊಂದಿಗೆ ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ ಭಾಗದ ಯುವಕ/ಯುವತಿಯರಿಗೆ ವಿಮಾನ ಚಾಲನಾ ತರಬೇತಿಯ ಹೊಸ ಅವಕಾಶದ ಬಾಗಿಲು ತೆರೆದುಕೊಂಡಂತಾಗಿದೆ.

ಕಲಬುರಗಿ ಏರ್‌ರ್ಪೋರ್ಟ್‌: ವರ್ಷದಲ್ಲಿ 43797 ಜನ ವಿಮಾನಯಾನ

ಈ ಕುರಿತು ವಿಮಾನ ನಿಲ್ದಾಣ ನಿರ್ದೇಶಕ ಜ್ಞಾನೇಶ್ವರ ರಾವ್‌ ಟ್ವೀಟ್‌ ಮಾಡಿದ್ದು ಬೆಂಗಳೂರು, ಬೆಳಗಾವಿ ಮತ್ತು ಹುಬ್ಬಳ್ಳಿ ನಂತರ ಇದೀಗ ನಗರದ ವಿಮಾನ ನಿಲ್ದಾಣದಲ್ಲೂ ಕೇಂದ್ರ ವಿಮಾನ ನಿಲ್ದಾಣ ಪ್ರಾಧಿಕಾರವು ವೈಮಾನಿಕ ತರಬೇತಿ ಶಾಲೆ (ಪೈಲೆಟ್‌ ಟ್ರೈನಿಂಗ್‌) ತೆರೆಯಲು ಅನುಮತಿ ನೀಡಿದೆ ಎಂದು ತಿಳಿಸಿದ್ದಾರೆ.

ಈಗಾಗಲೇ ಹೈದರಾಬಾದ್‌ ಮೂಲದ ಏಷ್ಯಾ ಫೆಸಿಫಿಕ್‌ ಪ್ಲೈಟ್‌ ಟ್ರೈನಿಂಗ್‌ ಅಕಾಡೆಮಿ ಮತ್ತು ರೆಡ್‌ಬರ್ಡ್‌ ಫ್ಲೈಟ್‌ ಟ್ರೈನಿಂಗ್‌ ಅಕಾಡೆಮಿಗೆ ಅಗತ್ಯವಿರುವ ಭೂಮಿ ಮತ್ತು ಮೂಲ ಸೌಕರ್ಯಗಳನ್ನು ಪ್ರಾಧಿಕಾರ ಒದಗಿಸಲು ಸಿದ್ಧತೆ ನಡೆಸಿದೆ. ರೆಡ್‌ಬರ್ಡ್‌ ಸಂಸ್ಥೆಯವರು ಗುರುವಾರ ಕಲಬುರಗಿ ವಿಮಾನ ನಿಲ್ದಾಣಲ್ಲಿ ತಮ್ಮ ಕಲಿಕಾ ವಿಮಾನಗಳೊಂದಿಗೆ ಬಂದಿಳಿದಿದ್ದಾರೆ.