19ರ ಹರೆಯದ ಅಮೂಲ್ಯ ಮೃತದೇಹ ಅನುಮಾನಸ್ಪದ ರೀತಿಯಲ್ಲಿ ಪತ್ತೆಯಾಗಿದೆ. ಘಟನೆ ಬಳಿಕ ಪತಿ ಹಾಗೂ ಆತನ ಕುಟುಂಬಸ್ಥರು ನಾಪತ್ತೆಯಾಗಿದ್ದಾರೆ. ಪ್ರೀತಿಸಿ ಮದುವೆಯಾಗಿದ್ದ ಅಮೂಲ್ಯ ಬಾಳಲ್ಲಿ ಏನಾಯಿತು?

ದಾವಣಗೆರೆ (ಜೂ.21) ಅನುಮಾನಸ್ಪದ ರೀತಿಯಲ್ಲಿ ನವ ವಿವಾಹಿತೆಯ ಮೃತದೇಹ ಪತ್ತೆಯಾದ ಘಟನೆ ದಾವಣಗೆರೆ ನಗರದ ರಾಮನಗರದಲ್ಲಿ ನಡೆದಿದೆ. ದಾವಣಗೆರೆ ತಾಲೂಕು ಕೈದಾಳೆ ಗ್ರಾಮದ ನಿವಾಸಿ 19ರ ಹರೆಯದ ಅಮೂಲ್ಯ ಶವವಾಗಿ ಪತ್ತೆಯಾಗಿದ್ದಾಳೆ. ಬಾಡಿಗೆ ಮನೆಯಲ್ಲಿ ಅಮೂಲ್ಯ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಘಟನೆ ಬೆನ್ನಲ್ಲೇ ಅಮೂಲ್ಯ ಪತಿ ಧನುಷ್ ಹಾಗೂ ಆತನ ಪೋಷಕರು ನಾಪತ್ತೆಯಾಗಿದ್ದಾರೆ. ದಾವಣೆಗೆ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಪ್ರೀತಿಸಿ ಮದುವೆಯಾಗಿದ್ದ ಅಮೂಲ್ಯ

ಅಮೂಲ್ಯ ಹಾಗೂ ಧನುಷ್ ಪ್ರೀತಿಯಲ್ಲಿ ಬಿದ್ದಿದ್ದರು. ಅಪ್ರಾಪ್ತ ವಯಸ್ಸಿನಲ್ಲಿ ಧನುಷ್ ಪ್ರೀತಿಯ ಬಲೆಗೆ ಬಿದ್ದಿದ್ದ ಅಮೂಲ್ಯ 18 ತುಂಬಿದ ಬೆನ್ನಲ್ಲೇ ಮದುವೆಯಾಗಿದ್ದರು. ಅಮೂಲ್ಯ ಮದುವೆಯಾಗಿ ಒಂದು ವರ್ಷ ಉರುಳಿದೆ. ಅಷ್ಟರಲ್ಲೇ ಸಂಸಾರದಲ್ಲಿ ಸಮಸ್ಯೆಗಳು ತೀವ್ರಗೊಂಡಿದೆ ಎನ್ನಲಾಗುತ್ತಿದೆ. ರಾಮನಗರ ಬಾಡಿಗೆ ಮನೆಯಲ್ಲಿ ಧನುಷ್ ಹಾಗೂ ಅಮೂಲ್ಯ ಜೋಡಿ ವಾಸವಿತ್ತು. ಮೃತ ಅಮೂಲ್ಯ ಪತಿ ಧನುಷ್ ದಾವಣಗೆರೆಯ ಹೂವಿನ ಮಾರುಕಟ್ಟೆಯಲ್ಲಿ ಕೂಲಿ ಕೆಲಸ ಮಾಡುತ್ತಿದ್ದ.

ಜೂನ್ 20ರ ರಾತ್ರಿ ಅಮೂಲ್ಯ ಮೃತದೇಹ ಬಾಡಿಗೆ ಮನೆಯಲ್ಲಿ ಪತ್ತೆಯಾಗಿದೆ. ಮಗಳ ಸಾವಿನ ಸುದ್ದಿ ಕೇಳಿ ಪೋಷಕರು ಕಂಗಾಲಾಗಿದ್ದಾರೆ. ಅಮೂಲ್ಯ ಪತಿ ಧನುಷ್ ಹಾಗೂ ಆತನ ಪೋಷಕರ ವಿರುದ್ದ ಆರೋಪಗಳು ಕೇಳಿಬಂದಿದೆ. ಇತ್ತ ಪೋಷಕರು ದಾವಣೆಗೆರೆ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಧನುಷ್ ಹಾಗೂ ಪೋಷಕರು ನಾಪತ್ತೆ

ಅಮೂಲ್ಯ ಮೃತದೇಹ ಪತ್ತೆಯಾಗುತ್ತಿದ್ದಂತೆ ಇತ್ತ ಪತಿ ಧನುಷ್ ಹಾಗೂ ಆತನ ಪೋಷಕರು ನಾಪತ್ತೆಯಾಗಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಧನುಷ್ ಹಾಗೂ ಆತನ ಪೋಷಕರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.