ಶಿವಮೊಗ್ಗದ ಗವಟೂರಿನಲ್ಲಿ ಅನಾಥವಾಗಿ ಸಿಕ್ಕ ನವಜಾತ ಹೆಣ್ಣು ಶಿಶುವಿನ ತಾಯಿಯನ್ನು ರಿಪ್ಪನ್‌ಪೇಟೆ ಪೊಲೀಸರು ಪತ್ತೆಹಚ್ಚಿದ್ದಾರೆ. ಪ್ರೀತಿಯ ಫಲವಾಗಿ ಜನಿಸಿದ ಮಗುವನ್ನು ಜನಾಪವಾದಕ್ಕೆ ಹೆದರಿ ತ್ಯಜಿಸಿದ್ದ 21 ವರ್ಷದ ಯುವತಿಯನ್ನು ಪತ್ತೆಹಚ್ಚಿ, ಮಗುವನ್ನು ತಾಯಿಯ ಮಡಿಲಿಗೆ ಸೇರಿಸಲಾಗಿದೆ.
ಶಿವಮೊಗ್ಗ (ಜು.13): ಹೊಸನಗರ ತಾಲೂಕಿನ ಗವಟೂರಿನ ಪ್ರಯಾಣಿಕರ ತಂಗುದಾಣದಲ್ಲಿ ಜುಲೈ.5 ರ ರಾತ್ರಿ ಅನಾಥವಾಗಿ ದೊರೆತಿದ್ದ ನವಜಾತ ಹೆಣ್ಣು ಶಿಶುವಿನ ಜನ್ಮದಾತೆಯನ್ನು ಪತ್ತೆ ಹಚ್ಚುವಲ್ಲಿ ರಿಪ್ಪನ್ ಪೇಟೆ ಪಟ್ಟಣ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಸಾಗರ ನಗರದ 21 ವರ್ಷದ ಯುವತಿ ಮಗು ಬಿಟ್ಟುಹೋದ ಆರೋಪಿ ಎಂದು ಗುರುತಿಸಲಾಗಿದೆ. ನವಜಾತ ಶಿಶು ಪ್ರೇಮಿಗಳಿಗೆ ಬೇಡವಾಗಿದ್ದ ಕಾರಣ ಬಿಟ್ಟು ಹೋಗಿದ್ದ ಮಹಾತಾಯಿ!
ಬಡ ಕುಟುಂಬದ ಹಿನ್ನೆಲೆಯ ಯುವಕ-ಯುವತಿ ಇಬ್ಬರೂ ಕಳೆದೊಂದು ವರ್ಷದಿಂದ ಪ್ರೀತಿಸುತ್ತಿದ್ದು ಸಲುಗೆ ಬೆಳೆಸಿಕೊಂಡಿದ್ದರು. ಆದರೆ ಇವರ ಪ್ರಣಯವನ್ನು ಮನೆಯವರಿಗೆ ತಿಳಿಯದಂತೆ ಗೌಪ್ಯತೆ ಕಾಪಾಡಿದ್ದಾರೆ. ಹೀಗಿರುವಾಗ ಇವರಿಬ್ಬರ ಪ್ರೇಮದ ಪ್ರತಿಫಲವಾಗಿ ಯುವತಿ ಗರ್ಭವತಿ ಯಾಗಿದ್ದಾಳೆ. ಗರ್ಭ ತ್ಯಜಿಸಲು ಯುವತಿ ಕೆಲವು ಮನೆಮದ್ದುಗಳನ್ನು ಬಳಸಿದರೂ ಪ್ರಯೋಜನವಾಗಿರಲಿಲ್ಲ. ತಿಂಗಳು ತುಂಬಿ ಪ್ರಸವವೇದನೆ ಅನುಭವಿಸ ತೊಡಗಿದಾಗ ತಾಯಿ ಏನಾಗಿದೆ ಎಂದು ವಿಚಾರಿಸಿದರೆ ಯಾಕೋ ಮೈಕೈ ನೋವೆಂದು ಹೇಳಿ ಕಷಾಯ ಮಾಡಿಸಿಕೊಂಡು ಕುಡಿದು ಮರೆ ಮಾಚಿದ್ದಾಳೆ.
ಕೆಲ ದಿನಗಳ ಬಳಿಕ ಮಗಳು ಮನೆಯಲ್ಲೇ ಚಡಪಡಿಸುತ್ತಾ ಹೆಣ್ಣು ಮಗುವಿಗೆ ಜನ್ಮ ನೀಡಿದಾಗ ತಾಯಿ ದಿಗ್ಧಾಂತರಾಗಿದ್ದಾರೆ. ಬಸಿರಿಗೆ ಕಾರಣವಾದ ವೃತ್ತಾಂತವನ್ನು ಕೇಳಿದ ಪೋಷಕರು ಮಗಳ ದುಡುಕಿನ ನಡವಳಿಕೆಯಿಂದ ದಿಕ್ಕು ತೋಚದಂತಾಗಿದ್ದಾರೆ. ಮಗು ಕರುಣಿಸಲು ಕಾರಣವಾದ ಯುವಕನನ್ನು ಸಂಪರ್ಕಿಸಿ ಜನನದ ವಿಷಯ ತಿಳಿಸಿದ್ದಾರೆ. ಅವಿವಾಹಿತರಾಗಿ ಮಗು ಹೊಂದಿದ ಜನಾಪವಾದಕ್ಕೆ ಹೆದರಿದ ಯುವತಿ ಮಗುವನ್ನು ತ್ಯಜಿಸುವ ನಿರ್ಧಾರ ತಳೆದು ಸಹೋದರನ ದ್ವಿಚಕ್ರ ವಾಹನದಲ್ಲಿ ರಿಪ್ಪನ್‌ಪೇಟೆ ಮಾರ್ಗವಾಗಿ ಸಾಗಿಬಂದು ರಾತ್ರಿ 7.30ರ ಸಮಯದಲ್ಲಿ ಕೈಚೀಲವೊಂದರಲ್ಲಿ ಶಿಶು ಮತ್ತು ಹಾಲಿನ ಬಾಟಲಿ ಇಟ್ಟು, ಗವಟೂರಿನ ಪ್ರಯಾಣಿಕರ ತಂಗುದಾಣದಲ್ಲಿರಿಸಿ ತೆರಳಿದ್ದಾಳೆ.
ವಿಷಯ ತಿಳಿದು ಭಾನುವಾರ ರಾತ್ರಿ ಮಗುವನ್ನು ರಕ್ಷಿಸಿದ್ದ ಪೊಲೀಸರು ಶಿವಮೊಗ್ಗದ ಆರೈಕೆ ಕೇಂದ್ರಕ್ಕೆ ದಾಖಲಿಸಿದ್ದರು. ಪಿಎಸ್‌ಐ ರಾಜು ರೆಡ್ಡಿ ಹಲವು ಆಯಾಮಗಳಲ್ಲಿ ತನಿಖೆ ಕೈಗೊಂಡಿದ್ದರು. ಯಾವ ಸುಳಿವೂ ದೊರೆಯದಿದ್ದಾಗ ಮೊಬೈಲ್ ಟವರ್ ಡಂಪ್ ನಂತಹ ತಾಂತ್ರಿಕ ವ್ಯವಸ್ಥೆಯ ನೆರವಿನಿಂದ ಶಿಶುವಿನ ತಾಯಿಯ ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಇದೀಗ ನವಜಾತ ಹೆಣ್ಣು ಶಿಶು ತಾಯಿಯ ಮಡಿಲನ್ನು ಸೇರಿದೆ


