ಬೀದರ್ ಜಿಲ್ಲೆಯ ಹುಲಸೂರು ತಾಲೂಕಿನ ಗಡಿಗೌಡಗಾಂವ್ ಗ್ರಾಮದಲ್ಲಿ, ಕಿರಾಣಿ ಅಂಗಡಿಯ ಪಕ್ಕದ ಚರಂಡಿಯಲ್ಲಿ ನವಜಾತ ಶಿಶುವಿನ ಮೃತದೇಹ ಪತ್ತೆಯಾಗಿದೆ. ಆಗಷ್ಟೇ ಹುಟ್ಟಿದ ಮಗುವನ್ನು ರಾತ್ರೋರಾತ್ರಿ ಎಸೆದು ಹೋಗಿರುವ ಶಂಕೆ ವ್ಯಕ್ತವಾಗಿದ್ದು, ಈ ಅಮಾನವೀಯ ಕೃತ್ಯದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಬೀದರ್: ಜೀವನದಲ್ಲಿ ಅದೆಷ್ಟೋ ಜನ ಮಕ್ಕಳಿಲ್ಲದೆ ಕೊರಗುತ್ತಿದ್ದಾರೆ. ಅದೆಷ್ಟೋ ಮಂದಿ ಮಕ್ಕಳನ್ನು ಪಡೆಯಲು ವರ್ಷಾನುಗಟ್ಟಲೆ ಚಿಕಿತ್ಸೆ ತೆಗೆದುಕೊಳ್ಳುತ್ತಾರೆ. ಇನ್ನು ಕೆಲವರು ಐವಿಎಫ್ ಮೊರೆ ಹೋಗುತ್ತಿದ್ದಾರೆ. ಆದರೆ ಇಂತಹ ಸನ್ನಿವೆಶದ ನಡುವೆ ಬೀದರ್‌ ನಲ್ಲಿ ಮನುಕುಲವೇ ತಲೆತಗ್ಗಿಸುವ ಹೃದಯವಿದ್ರಾವಕ ಘಟನೆ ನಡೆದಿದೆ. ಇಲ್ಲಿನ ಹುಲಸೂರು ತಾಲೂಕಿನ ಗಡಿಗೌಡಗಾಂವ್ ಗ್ರಾಮದ ಬಸವೇಶ್ವರ ವೃತ್ತದ ಸಮೀಪ ಇರುವ ಕಿರಾಣಿ ಅಂಗಡಿ ಪಕ್ಕದ ಚರಂಡಿಯಲ್ಲಿ ನವಜಾತ ಶಿಶುವಿನ ಮೃತದೇಹ ಪತ್ತೆಯಾಗಿದೆ. ಈ ಮೂಲಕ ಹೆತ್ತವರು ಮಾನವೀಯತೆಯನ್ನು ಮರೆತು ಮಗುವನ್ನು ಬೀದಿ ಹೆಣ ಮಾಡಿದ್ದಾರೆ.

Add Asianetnews Kannada as a Preferred SourcegooglePreferred

ಚರಂಡಿಯಲ್ಲಿ ಕಾಣಿಸಿದ ಅನುಮಾನಾಸ್ಪದ ವಸ್ತು

ಸ್ಥಳೀಯರು ಬೆಳಿಗ್ಗೆ ಚರಂಡಿಯಲ್ಲಿ ಏನೋ ಅನುಮಾನಾಸ್ಪದ ವಸ್ತು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಿದಾಗ ನವಜಾತ ಶಿಶುವಿನ ಶವ ಕಂಡುಬಂದಿದೆ. ಈ ದೃಶ್ಯ ಕಂಡು ಬೆಚ್ಚಿಬಿದ್ದ ಗ್ರಾಮಸ್ಥರು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ದೌಡಾಯಿಸಿದ ಹುಲಸೂರು ಠಾಣೆ ಪೊಲೀಸರು ಪರಿಶೀಲನೆ ನಡೆಸಿ, ಮಗುವಿನ ಮೃತದೇಹವನ್ನು ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ರವಾನಿಸಿದ್ದಾರೆ.

ಮೃತ ಶಿಶಿವಿನ ಹೊಕ್ಕಳ ಬಳ್ಳಿ ಇನ್ನೂ ಹಸಿಯಾಗಿಯೇ ಇತ್ತು. ಆಗಷ್ಟೇ ಹುಟ್ಟಿದ ಮಗುವನ್ನು ರಾತ್ರೋರಾತ್ರಿ ಚರಂಡಿಗೆ ಎಸೆದು ಹೋಗಿರುವ ಶಂಕೆ ವ್ಯಕ್ತವಾಗಿದ್ದು, ಜನನದ ವಿಚಾರವನ್ನು ಮುಚ್ಚಿಡಲು ಈ ಅಮಾನವೀಯ ಕೃತ್ಯ ಎಸಗಿರುವ ಸಾಧ್ಯತೆ ಇದೆ ಎಂದು ಶಂಕೆ ವ್ಯಕ್ತವಾಗಿದೆ. ಅಕ್ರಮ ಸಂಬಂಧದಲ್ಲಿ ಈ ಮಗು ಜನಿಸಿರಬಹುದೆಂಬ ಶಂಕೆ ಕೂಡ ಇದೆ.

ಸಾರ್ವಜನಿಕರ ತೀವ್ರ ಆಕ್ರೋಶ

ಈ ಘಟನೆ ಮಾನವೀಯ ಮೌಲ್ಯಗಳನ್ನು ಪ್ರಶ್ನಿಸುವಂತಿದ್ದು, ಹೆತ್ತ ಮಗುವನ್ನೇ ತ್ಯಜಿಸಿರುವ ಪೋಷಕರ ವಿರುದ್ಧ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಗು ಜನಿಸಿದ ತಕ್ಷಣವೇ ಅದನ್ನು ತ್ಯಜಿಸಿ ಚರಂಡಿಗೆ ಎಸೆದಿರುವುದು ಮನುಕುಲವೇ ತಲೆತಗ್ಗಿಸುವ ಸಂಗತಿ. ಘಟನೆ ಸಂಬಂಧ ಹುಲಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಶಿಶುವನ್ನು ಚರಂಡಿಗೆ ಎಸೆದವರು ಯಾರು ಎಂಬುದರ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಸುತ್ತಮುತ್ತಲಿನ ಪ್ರದೇಶದ ಸಿಸಿಟಿವಿ ದೃಶ್ಯಗಳು ಹಾಗೂ ಸ್ಥಳೀಯರಿಂದ ಮಾಹಿತಿ ಸಂಗ್ರಹಿಸಿ ಆರೋಪಿಗಳನ್ನು ಪತ್ತೆಹಚ್ಚಲು ಕ್ರಮ ಕೈಗೊಳ್ಳಲಾಗಿದೆ. ಒಟ್ಟಿನಲ್ಲಿ, ಈ ದುರ್ಘಟನೆ ಸಮಾಜದಲ್ಲಿ ಮಾನವೀಯತೆ ಕುಗ್ಗುತ್ತಿರುವುದಕ್ಕೆ ಕನ್ನಡಿ ಹಿಡಿದಂತಿದ್ದು, ಇಂತಹ ಘಟನೆಗಳು ಮರುಕಳಿಸದಂತೆ ಕಠಿಣ ಕ್ರಮಗಳ ಅಗತ್ಯವಿದೆ.