ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಕಾಫಿ ತೋಟವೊಂದರಲ್ಲಿ ಅಡಕೆ ಹಾಳೆಯಲ್ಲಿ ಸುತ್ತಿಟ್ಟಿದ್ದ ನವಜಾತ ಹೆಣ್ಣು ಶಿಶುವೊಂದು ಪತ್ತೆಯಾಗಿದೆ. ಸ್ಥಳೀಯರು ಮತ್ತು ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ ಮಗುವನ್ನು ರಕ್ಷಿಸಿ, ಮಡಿಕೇರಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಮಡಿಕೇರಿ (ಏ.12): ಹೆತ್ತವರೇ ಮಗುವನ್ನು ಅನಾಥವಾಗಿ ಕಾಫಿ ತೋಟದಲ್ಲಿ ಬಿಟ್ಟು ಹೋಗಿರುವ ಘಟನೆ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಬೇತ್ರಿಯಲ್ಲಿ ನಡೆದಿದೆ. ಕಾಫಿ ತೋಟವೊಂದರಲ್ಲಿ ಅಡಕೆ ಹಾಳೆಯಲ್ಲಿ ಸುತ್ತಿ ಮಲಗಿಸಲಾಗಿದ್ದ ನವಜಾತ ಹೆಣ್ಣು ಶಿಶು ಪತ್ತೆಯಾಗಿದ್ದು, ಅದನ್ನು ಸ್ಥಳೀಯರು ಮತ್ತು ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ ರಕ್ಷಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದನ್ನೂ ಓದಿ: ಕೊಡಗಿನಲ್ಲಿ ಭೀಕರ ರಸ್ತೆ ಅಪಘಾತ; ಚಿತ್ರನಟ ಹರೀಶ್ ಸ್ಥಳದಲ್ಲೇ ಸಾವು!

ಬೇತ್ರಿ ಗ್ರಾಮದ ಹೆಮ್ಮಾಡು ವ್ಯಾಪ್ತಿಯ ಕಾಫಿ ತೋಟದಲ್ಲಿ ಶಿಶು ಅಳುವುದನ್ನು ಕೇಳಿದ ಸ್ಥಳೀಯರು ಹೋಗಿ ನೋಡಿದಾಗ, ಅಡಕೆ ಹಾಳೆಯಲ್ಲಿದ್ದ ಮಗು ಜಾರಿತ್ತು. ಬಟ್ಟೆಯಿಲ್ಲದೆ, ಶೀತದಿಂದ ನಡುಗುತ್ತಿರುವ ಸ್ಥಿತಿಯಲ್ಲಿ ಕಂಡುಬಂದಿದೆ. ತಕ್ಷಣವೇ ಎಚ್ಚೆತ್ತ ಗ್ರಾಮಸ್ಥರು ಮಕ್ಕಳ ರಕ್ಷಣಾ ಘಟಕಕ್ಕೆ ಮಾಹಿತಿ ನೀಡಿದ್ದಾರೆ.

 ಸ್ಥಳಕ್ಕೆ ಧಾವಿಸಿದ ಘಟಕದ ಸಿಬ್ಬಂದಿ ಮಗುವನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ. ಮಗುವು ಸ್ವಲ್ಪ ಅಸ್ವಸ್ಥಗೊಂಡಿದ್ದರಿಂದ ತಕ್ಷಣವೇ ಮಡಿಕೇರಿಯ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಮಗುವಿಗೆ ವೈದ್ಯರಿಂದ ಚಿಕಿತ್ಸೆ ಮತ್ತು ಆರೈಕೆ ನೀಡಲಾಗುತ್ತಿದ್ದು, ಶಿಶುವು ಪ್ರಾಣಾಪಾಯದಿಂದ ಪಾರಾಗಿದೆ ಎಂದು ತಿಳಿದುಬಂದಿದೆ. ಮಡಿಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮಗುವಿನ ಪೋಷಕರ ಪತ್ತೆಗಾಗಿ ಶೋಧ ನಡೆಸುತ್ತಿದ್ದಾರೆ.