ಕೌಶಲ್ಯ ಶಿಕ್ಷಣ ಹೆಚ್ಚು ಮಂದಿಗೆ ದೊರಕಿಸುವ ನಿಟ್ಟಿನಲ್ಲಿ ಸರ್ಕಾರಿ ಉಪಕರಣಗಾರ ಸಂಸ್ಥೆಗಳಲ್ಲಿ (ಜಿಟಿಟಿಸಿ) ಪ್ರವೇಶಾತಿ ಮಿತಿಯನ್ನು 2,500 ರಿಂದ ಪ್ರವೇಶಾತಿ 6,000 ಕ್ಕೆ ಏರಿಸಲಾಗಿದೆ ಎಂದು ಸಚಿವ ಶರಣ ಪ್ರಕಾಶ್‌ ಪಾಟೀಲ್‌ ಹೇಳಿದರು.

ಮಂಗಳೂರು (ಮೇ.24): ಕೌಶಲ್ಯ ಶಿಕ್ಷಣ ಹೆಚ್ಚು ಮಂದಿಗೆ ದೊರಕಿಸುವ ನಿಟ್ಟಿನಲ್ಲಿ ಸರ್ಕಾರಿ ಉಪಕರಣಗಾರ ಸಂಸ್ಥೆಗಳಲ್ಲಿ (ಜಿಟಿಟಿಸಿ) ಪ್ರವೇಶಾತಿ ಮಿತಿಯನ್ನು 2,500 ರಿಂದ ಪ್ರವೇಶಾತಿ 6,000 ಕ್ಕೆ ಏರಿಸಲಾಗಿದೆ. ಇದಲ್ಲದೆ ರಾಜ್ಯದಲ್ಲಿ 20 ಹೊಸ ಜೆಟಿಟಿಸಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಸಚಿವ ಶರಣ ಪ್ರಕಾಶ್‌ ಪಾಟೀಲ್‌ ಹೇಳಿದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅವರು ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಕರ್ನಾಟಕ ಜರ್ಮನ್‌ ಮಲ್ಟಿಸ್ಕಿಲ್‌ ಡೆವಲಪ್‌ಮೆಂಟ್‌ ಸೆಂಟರ್‌ (ಕೆಜಿಎಂಎಸ್‌ಡಿಸಿ) ಸೊಸೈಟಿ ಆಶ್ರಯದಲ್ಲಿ ಕರ್ನಾಟಕ ಜರ್ಮನ್‌ ತಾಂತ್ರಿಕ ತರಬೇತಿ ಸಂಸ್ಥೆ (ಕೆಜಿಟಿಟಿಐ) ಮಂಗಳೂರು ಇದರ 20 ಕೋಟಿ ರು. ವೆಚ್ಚದ ನೂತನ ಹವಾನಿಯಂತ್ರಿತ ಕಟ್ಟಡವನ್ನು ಕದ್ರಿಹಿಲ್ಸ್‌ನ ಸರಕಾರಿ ಐಟಿಐ ಆವರಣದಲ್ಲಿ ಉದ್ಘಾಟಿಸಿ ಮಾತನಾಡಿದರು.

ಕೌಶಲ್ಯ ಭರಿತ ವಿದ್ಯಾವಂತರನ್ನು ಸೃಷ್ಟಿಸಲು ರಾಜ್ಯದ 8 ಕಡೆ ಹೊಸದಾಗಿ ಕೆಜಿಟಿಟಿಐ ಕೇಂದ್ರಗಳನ್ನು ಮಂಜೂರುಗೊಳಿಸಲಾಗಿದೆ. ಇಲ್ಲಿ ರೆಫ್ರಿಜರೇಷನ್ ಮತ್ತು ಎಸಿ ತಾಂತ್ರಿಕತೆ ತರಬೇತಿಯ ಕೋರ್ಸುಗಳನ್ನು ಪ್ರಾರಂಭಿಸಲಾಗುವುದು. ಪ್ರಸ್ತುತ ಇಲ್ಲಿ 1 ದೀರ್ಘಾವಧಿ ಮತ್ತು 31 ಅಲ್ಪಾವಧಿ ತರಬೇತಿ ನೀಡಲಾಗುತ್ತಿದೆ ಎಂದರು.

ಮಂಗಳೂರಿನಲ್ಲಿ ಉದ್ಯೋಗ ಮೇಳ

ಮಂಗಳೂರು ನಗರದಲ್ಲಿ ಶೀಘ್ರದಲ್ಲೇ ಬೃಹತ್ ಉದ್ಯೋಗ ಮೇಳವನ್ನು ರಾಜ್ಯ ಸರ್ಕಾರ ಆಯೋಜಿಸಲಿದೆ. ಕರಾವಳಿ ಕರ್ನಾಟಕದ 3 ಜಿಲ್ಲೆಗಳ ಯುವ ಜನರನ್ನು ಕೇಂದ್ರೀಕರಿಸಿ ಈ ಉದ್ಯೋಗ ಮೇಳ ನಡೆಯಲಿದೆ. ಇದುವರೆಗೆ ರಾಜ್ಯದ ವಿವಿಧೆಡೆ ನಡೆದ ಉದ್ಯೋಗ ಮೇಳಗಳಿಂದ 30 ಸಾವಿರಕ್ಕೂ ಅಧಿಕ ಮಂದಿಗೆ ಉದ್ಯೋಗ ದೊರಕಿದೆ ಎಂದರು.

ವಿಧಾನ ಪರಿಷತ್‌ ಸದಸ್ಯರಾದ ಐವನ್‌ ಡಿಸೋಜಾ, ಮಂಜುನಾಥ ಭಂಡಾರಿ, ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ. ಗಫೂರ್‌, ರಾಜ್ಯ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿ.ಎಂ.ಶಾಹೀದ್‌ ತೆಕ್ಕಿಲ್‌, ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣದ ಸಂಸ್ಥೆಯ ಅಧ್ಯಕ್ಷೆ ಲಾವಣ್ಯ ಬಲ್ಲಾಳ್‌ ಜೈನ್‌, ಮಾಜಿ ಕಾರ್ಪೊರೇಟರ್‌ ಶಕೀಲಾ ಕಾವ, ಮಂಗಳೂರು ಕೆಜಿಟಿಟಿಐನ ನಿರ್ದೇಶಕ ಗಿರಿಧರ ಸಾಲಿಯಾನ್‌ ಮತ್ತಿತರರು ಇದ್ದರು.