ಅಭ್ಯುದಯಕ್ಕಾಗಿ ಪಂಚ ಗ್ಯಾರಂಟಿಗಳೊಂದಿಗೆ ಜನಪರ ಆಡಳಿತ ನೀಡುತ್ತಿರುವ ಕಾಂಗ್ರೆಸ್ ಸರ್ಕಾರ 2028ರಲ್ಲಿ ಮತ್ತೆ ರಾಜ್ಯದಲ್ಲಿ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.

ಹೊಸಕೋಟೆ (ಮೇ.24): ರಾಜ್ಯದಲ್ಲಿ ಬಡ ಮಧ್ಯಮ ವರ್ಗದವರ ಅಭ್ಯುದಯಕ್ಕಾಗಿ ಪಂಚ ಗ್ಯಾರಂಟಿಗಳೊಂದಿಗೆ ಜನಪರ ಆಡಳಿತ ನೀಡುತ್ತಿರುವ ಕಾಂಗ್ರೆಸ್ ಸರ್ಕಾರ 2028ರಲ್ಲಿ ಮತ್ತೆ ರಾಜ್ಯದಲ್ಲಿ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು. ಚುನಾವಣಾ ಪೂರ್ವದಲ್ಲಿ 2 ಕೋಟಿ ಉದ್ಯೋಗ ಸೃಷ್ಟಿ ಮಾಡುವ ಆಶ್ವಾಸನೆ ಕೊಟ್ಟ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ತನ್ನ ಆಶ್ವಾಸನೆಯನ್ನು ಮರೆತಿದೆ. ಬದಲಾಗಿ ದೇಶದಲ್ಲಿ ನಿರುದ್ಯೋಗ ತಾಂಡವವಾಡುತ್ತಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅಗತ್ಯ ವಸ್ತುಗಳ ಬೆಲೆಯನ್ನು ಗಣನೀಯವಾಗಿ ಏರಿಕೆ ಮಾಡುತ್ತಿರುವ ಕೇಂದ್ರ ಸರ್ಕಾರ ಬಡವರ ಬದುಕನ್ನ ಸಂಕಷ್ಟಕ್ಕೆ ದೂಡಿದೆ. ದೇಶಕ್ಕೆ ಸ್ವಾತಂತ್ರ‍್ಯ ಬಂದ ದಿನದಿಂದಲೂ ಬಡವರ ಹಿತಕ್ಕಾಗಿ ಕೆಲಸ ಮಾಡುತ್ತಿರುವ ಏಕೈಕ ಪಕ್ಷ ಕಾಂಗ್ರೆಸ್ ಮಾತ್ರ ಎಂದು ಹೇಳಿದರು. ಮುಂದಿನ ದಿನಗಳಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರು ಬೂತ್ ಮಟ್ಟದಿಂದ ಕಾಂಗ್ರೆಸ್ ಸರ್ಕಾರದ ಸಾಧನೆಗಳನ್ನು ಮನೆಮನಗಳಿಗೆ ತಲುಪಿಸಿ ಮತ್ತಷ್ಟು ಪಕ್ಷ ಸಂಘಟನೆಯತ್ತ ಗಮನ ಹರಿಸಬೇಕು. ಪ್ರಜಾಪ್ರಭುತ್ವವನ್ನು ಉತ್ತಮ ದಾರಿಯಲ್ಲಿ ಕೊಂಡೊಯ್ಯಲು ಯುವಕರಿಂದ ಮಾತ್ರ ಸಾಧ್ಯ. ತಾಲೂಕಿನಲ್ಲಿ ಅನೂಪ್ ಗೌಡರ ನೇತೃತ್ವದಲ್ಲಿ ಯುವ ಕಾಂಗ್ರೆಸ್ ಮತ್ತಷ್ಟು ಬಲಿಷ್ಠವಾಗಿ ಪಕ್ಷ ಸಂಘಟನೆಯಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡಲಿ ಎಂದು ಪ್ರೋತ್ಸಾಹಿಸಿದರು.

ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಎಚ್.ಎಸ್ ಮಂಜುನಾಥ್ ಗೌಡ ಮಾತನಾಡಿ, 2028ಕ್ಕೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದೇ ತರುತ್ತೇವೆ. ಈ ನಿಟ್ಟಿನಲ್ಲಿ ದೃಢ ಸಂಕಲ್ಪ ಹೊತ್ತು ಕೆಲಸ ಮಾಡಲು ಕಾರ್ಯಕರ್ತರು ಮುಂದಡಿ ಇಟ್ಟಿದ್ದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನಮ್ಮನ್ನು ಬೆನ್ನು ತಟ್ಟಿ ಪ್ರೋತ್ಸಾಹಿಸುತ್ತಿದ್ದಾರೆ. ಕಾಂಗ್ರೆಸ್ ನೀಡುತ್ತಿರುವ ಗ್ಯಾರಂಟಿ ಯೋಜನೆಗಳ ಸೌಲಭ್ಯ ಬಿಜೆಪಿಯವರೆ ಹೆಚ್ಚಾಗಿ ಪಡೆಯುತ್ತಿದ್ದಾರೆ. ಯುವ ಕಾಂಗ್ರೆಸ್ ಕೇವಲ ಕಾಂಗ್ರೆಸ್ ಪಕ್ಷದ ಸಂಘಟನೆ ಅಲ್ಲ, ಸಮಾಜದಲ್ಲಿ ನೊಂದವರಿಗೆ ಸಾಮಾಜಿಕವಾಗಿಯೂ ನೆರವಿನ ಹಸ್ತ ಚಾಚುತ್ತಿದೆ ಎಂದು ತಿಳಿಸಿದರು.

ನಿಖಿಲ್ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ

ಜೆಡಿಎಸ್ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ರೈತರ ಪರವಾಗಿದ್ದೇವೆ ಎಂದು ಸುಳ್ಳು ಹೇಳಿ ರೈತರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿ ಲಕ್ಷಾಂತರ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ. ನೂರಾರು ಹೆಣ್ಣು ಮಕ್ಕಳಿಗೆ ಅವರ ಅಣ್ಣ ಮೋಸ ಮಾಡಿದ್ದಾನೆ. ಅವರ ವಿರುದ್ಧ ಮಾತನಾಡಲಿ. ಅದನ್ನು ಬಿಟ್ಟು ರಾಜಕೀಯ ಅನುಭವ ಇಲ್ಲದೆ ರಾಜ್ಯದ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಯನ್ನು ಪ್ರಶ್ನೆ ಮಾಡುತ್ತಾರೆ. ಯುವನಾಯಕನಾಗಿ ಸಮಾಜದಲ್ಲಿ ಗುರುತಿಸಿಕೊಳ್ಳಬೇಕಾದರೆ ಮೊದಲು ಅವರಪ್ಪ ಕುಮಾರಸ್ವಾಮಿ ಕೇಂದ್ರದಲ್ಲಿ ಮಂತ್ರಿಯಾಗಿದ್ದು ಸಂಸತ್ ನಲ್ಲಿ ರಸಗೊಬ್ಬರ ಸಮಸ್ಯೆ ಬಗ್ಗೆ ಮಾತನಾಡಲು ಒತ್ತಾಯಿಸಲಿ. ತನ್ನ ದೊಡ್ಡಪ್ಪನ ಮಗ ಮಾಡಿದ ಅತ್ಯಾ*ಚಾರದ ಸಂತ್ರಸ್ತರಿಗೆ ನ್ಯಾಯ ಕೊಡಿಸುವ ಕೆಲಸ ಮಾಡಲಿ ಎಂದು ನಿಖಿಲ್‌ ವಿರುದ್ಧ ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಮಂಜುನಾಥ್ ಗೌಡ ವಾಗ್ದಾಳಿ ನಡೆಸಿದರು.