ಎನ್‌.ಎಲ್‌. ಶಿವಮಾದು

ಬೆಂಗಳೂರು(ಡಿ.27): ಹೊಸ ವರ್ಷಾಚರಣೆಯನ್ನು ಸಂಭ್ರಮಿಸಲು ನಗರದ ಕ್ಲಬ್‌, ಪಬ್‌ಗಳಲ್ಲಿ ಆಯೋಜನೆಯಾಗುತ್ತಿದ್ದ ಪಾರ್ಟಿಗಳು ಈ ಬಾರಿ ಕೊರೋನಾ ಹಿನ್ನೆಲೆಯಲ್ಲಿ ಹೊರ ವಲಯದ ತೋಟದ ಮನೆ, ಫಾರ್ಮ್‌ ಹೌಸ್‌, ಜಮೀನುಗಳಿಗೆ ಶಿಫ್ಟ್‌ ಆಗುವ ಸಾಧ್ಯತೆಗಳಿವೆ.

ಕೊರೋನಾ ಹಿನ್ನೆಲೆಯಲ್ಲಿ ಹೊಸ ವರ್ಷಾಚರಣೆ ಸಂಭ್ರಮಕ್ಕೆ ರಾಜ್ಯ ಸರ್ಕಾರ ಬ್ರೇಕ್‌ ಹಾಕಬಹುದು ಎಂಬ ಮುನ್ನೆಚ್ಚರಿಕೆ ವಹಿಸಿರುವ ಆಯೋಜಕರು ಈ ಬಾರಿ ಹೊಸ ವರ್ಷದ ಕಾರ್ಯಕ್ರಮಗಳು, ಪಾರ್ಟಿಗಳನ್ನು ನಗರದಿಂದ 20ರಿಂದ 30 ಕಿ.ಮೀ. ಹೊರ ವಲಯದಲ್ಲಿ ಆಯೋಜನೆಗೆ ಸಿದ್ಧತೆ ನಡೆಸಿದ್ದಾರೆ.

ನಗರದೊಳಗೆ ಪಾರ್ಟಿ ಆಯೋಜಿಸಿದರೆ ನಿಯಮ ಉಲ್ಲಂಘನೆ ಮಾಡಲಾಗಿದೆ ಎಂದು ಪೊಲೀಸರು ಪಾರ್ಟಿಗಳನ್ನು ರದ್ದುಗೊಳಿಸಬಹುದು ಎಂಬ ಶಂಕೆಯಿಂದ ನಗರದ ಹೊರ ವಲಯಗಳಾದ ಬಿಡದಿ, ರಾಮನಗರ, ಮಾಗಡಿ, ನೆಲಮಂಗಲ, ದೊಡ್ಡಬಳ್ಳಾಪುರ, ಕನಕಪುರ, ಹೊಸಕೋಟೆ ಮತ್ತು ಆನೇಕಲ್‌ ಸುತ್ತಲಿನ ಪ್ರದೇಶಗಳಲ್ಲಿರುವ ತೋಟದ ಮನೆಗಳು, ಫಾಮ್‌ರ್‍ ಹೌಸ್‌ಗಳು, ಸ್ನೇಹಿತರ ಜಮೀನುಗಳಲ್ಲಿ ಪಾರ್ಟಿಗಳು ಆಯೋಜನೆಗೊಳ್ಳುತ್ತಿವೆ.

ನ್ಯೂ ಇಯರ್ ಆಚರಣೆಗೆ ಎಷ್ಟೊಂದು ಕಂಡೀಷನ್! ಬ್ರಿಗೇಡ್‌ ಹೋಗೋರಿಗೆ ಟೆನ್ಶನ್‌

ಹೊರ ವಲಯದಲ್ಲಿ ಪಾರ್ಟಿಗಳ ಆಯೋಜನೆಯಿಂದ ಮೊದಲನೆಯದಾಗಿ ಪೊಲೀಸರ ಕಾಟ ಇರುವುದಿಲ್ಲ. ಸಾಮಾನ್ಯವಾಗಿ ಹೊಸ ವರ್ಷದ ಪಾರ್ಟಿಗಳು ರಾತ್ರಿ 12 ಗಂಟೆಯ ಬಳಿಕವೇ ರಂಗೇರುತ್ತವೆ. ಪೊಲೀಸರು ಮಧ್ಯರಾತ್ರಿ 1 ಗಂಟೆಗೆ ಬಾಗಿಲು ಹಾಕಿಸುತ್ತಾರೆ. ಹೊರ ವಲಯಗಳಲ್ಲಿ ಪೊಲೀಸರ ತೊಂದರೆ ಇರುವುದಿಲ್ಲ. ಪಾರ್ಟಿ ಮುಗಿದ ಬಳಿಕ ತಮ್ಮ ಮನೆಗಳಿಗೆ ತೆರಳುವ ಸಂದರ್ಭ ಎದುರಾಗುವುದಿಲ್ಲ. ಬೆಳಗ್ಗೆ ವರೆಗೆ ಅಲ್ಲಿಯೇ ಇದ್ದು, ನಿದ್ದೆ ಮಾಡಿ ಮಾರನೆಯೆ ದಿನ ಹಿಂತಿರುಗಬಹುದು. ಇದರಿಂದ ತಡರಾತ್ರಿ ಪಾರ್ಟಿ ಮುಗಿಸಿ ವಾಪಸ್ಸಾಗುವಾಗ ಅಪಘಾತಗಳಾಗುವುದನ್ನು ಸಹ ತಡೆಯಬಹುದು. ಇದೆಲ್ಲಕ್ಕಿಂತ ಮುಖ್ಯವಾಗಿ ಕೊರೋನಾ ನಿಯಮಗಳನ್ನು ಉಲ್ಲಂಘಿಸಿದರೂ ಯಾರೊಬ್ಬರು ಕೇಳುವುದಿಲ್ಲ ಎಂಬ ಕಾರಣಕ್ಕೆ ಹೊರ ವಲಯದಲ್ಲಿ ಪಾರ್ಟಿ ಆಯೋಜನೆಗೊಳ್ಳುತ್ತಿವೆ ಎನ್ನಲಾಗಿದೆ.

ಪರಿಚಯಸ್ಥರೇ ಕೂಡಿ ಪಾರ್ಟಿ:

ಪಾರ್ಟಿಗಳನ್ನು ದೊಡ್ಡ ಮಟ್ಟದಲ್ಲಿ ಆಯೋಜಿಸುವ ಬದಲಾಗಿ ಸ್ನೇಹಿತರು, ಪರಿಚಯಸ್ಥರೇ 20ರಿಂದ 30 ಜನ ಸೇರಿ ಸಣ್ಣ ಮಟ್ಟದಲ್ಲಿ ಪಾರ್ಟಿ ಆಯೋಜನೆ ಮಾಡುತ್ತಿದ್ದಾರೆ. ಪರಿಯಸ್ಥ ಜನರೇ ಪಾರ್ಟಿಗಳನ್ನು ಮಾಡುವುದರಿಂದ ಭದ್ರತೆ ಮತ್ತು ಸುರಕ್ಷತೆ ದೃಷ್ಟಿಯಿಂದಲೂ ಉತ್ತಮ ಎನಿಸುತ್ತಿದೆ. ಎಂಟ್ರಿ ಪಾಸ್‌ಗಳ ಬದಲಾಗಿ ಮೊದಲೇ ಇಂತಿಷ್ಟುಹಣವನ್ನು ಮುಂಗಡವಾಗಿ ಪಡೆದು ಪಾರ್ಟಿಗಳನ್ನು ಆಯೋಜನೆ ಮಾಡಲಾಗುತ್ತಿದೆ. ಕ್ಲಬ್‌, ಪಬ್‌ಗಳಲ್ಲಿ ಹೋದರೆ ಬೇರೆಯವರಿಂದ ಕೊರೋನಾ ಹರಡಬಹುದು ಎಂಬ ಆತಂಕವಿದೆ. ಹೀಗಾಗಿ, ಪರಿಚಯಸ್ಥರೇ ಇದ್ದರೆ ಯಾವುದೇ ಭಯ ಇರುವುದಿಲ್ಲ ಎನ್ನುತ್ತಾರೆ ಜಯನಗರದ ಸಂದೀಪ್‌.

ಹೊರ ವಲಯವೇ ಉತ್ತಮ

ಕೊರೋನಾ ನಿಯಮ ಪಾಲನೆ, ವರ್ಷಾಚರಣೆ ಪಾರ್ಟಿಗಳು ನಿಗದಿತ ಸಮಯಕ್ಕಿಂತ ತಡವಾದರೆ ಪೊಲೀಸರೊಂದಿಗೆ ವಾಗ್ವಾದ, ಪಾರ್ಟಿ ಮುಗಿಸಿ ಮನೆಗೆ ಹಿಂತಿರುಗುವ ವೇಳೆ ಅಪಘಾತವಾಗುವ ಸಾಧ್ಯತೆಗಳಿವೆ. ಎಲ್ಲವನ್ನು ನೋಡಿದಾಗ ಹೊರ ವಲಯವೇ ಉತ್ತಮ ಮತ್ತು ಆರಾಮದಾಯಕ ಎನಿಸಿದೆ. ಸ್ನೇಹಿತರ ತೋಟದ ಮನೆಗಳಲ್ಲಿ, ನಗರದಿಂದ ದೂರವಿರುವ ಬಯಲು ಪ್ರದೇಶಗಳಲ್ಲಿಯೇ ಡಿಜೆ, ಲೈಟಿಂಗ್ಸ್‌ ಅಲಂಕಾರ ಮಾಡಿಸಿ ಪಾರ್ಟಿಗಳನ್ನು ಆಯೋಜನೆ ಮಾಡಲಾಗುತ್ತಿದೆ ಎನ್ನುತ್ತಾರೆ ಪಾರ್ಟಿ ಆಯೋಜಕ ಕೀರ್ತಿ ಚಂದ್ರ.

ಈ ವರ್ಷ ಕೇವಲ ಶೇ.25ರಷ್ಟು ವಹಿವಾಟು

ಈ ಬಾರಿ ಕೊರೋನಾದಿಂದ ಪಬ್‌, ಕ್ಲಬ್‌ ಹಾಗೂ ರೆಸ್ಟೋರೆಂಟ್‌ಗಳಿಗೆ ಜನರು ಬರುವುದೇ ಅನುಮಾನವಾಗಿದೆ. ಆದ್ದರಿಂದ ಇಲ್ಲಿಯವರೆಗೂ ಯಾವುದೇ ಸಿದ್ಧತೆಗಳನ್ನು ಮಾಡಿಕೊಂಡಿಲ್ಲ. ನಾವು ಎಷ್ಟೇ ಸುರಕ್ಷತಾ ಕ್ರಮಗಳನ್ನು ಕೈಗೊಂಡರು ಸಹ ಜನರು ಮಾತ್ರ ಪಾರ್ಟಿಗಳಿಗೆ ಬರುವರೇ ಎಂಬ ಅನುಮಾನವಿದೆ. ಕಳೆದ ವರ್ಷಕ್ಕೆ ಹೋಲಿಸಿಕೊಂಡರೆ ಕೇವಲ ಶೇ.25ರಷ್ಟು ವಹಿವಾಟು ನಡೆಯಬಹುದು ಎಂದು ಅಂದಾಜಿಸಲಾಗಿದೆ. ಅಂತಿಮವಾಗಿ ಪರಿಸ್ಥಿತಿ ನೋಡಿಕೊಂಡು ಸಿದ್ಧತೆ ಮಾಡಿಕೊಳ್ಳಲಾಗುತ್ತದೆ ಎನ್ನುತ್ತಾರೆ ಬಾರ್‌ ಮತ್ತು ರೆಸ್ಟೋರೆಂಟ್‌ ಮಾಲೀಕರ ಸಂಘದ ಅಧ್ಯಕ್ಷ ಮಧುಕರ್‌ ಶೆಟ್ಟಿ.