ಮಂಗಳೂರು(ಸೆ.13): ಬೆಳ್ತಂಗಡಿ ತಾಲೂಕಿನಲ್ಲಿ ಇತ್ತೀಚೆಗೆ ಭೂಕುಸಿತ ಸಂಭವಿಸಿದ ಜಾಗಗಳಲ್ಲಿ ಬೆಟ್ಟಗಳ ತಳಭಾಗದಲ್ಲಿ ಈಗ ವಿಚಿತ್ರ ಸದ್ದು ಕೇಳಿ ಬರುತ್ತಿದ್ದು, ಅಲ್ಲಿ ಜಲಪಾತಗಳು ಇಲ್ಲದ ಜಾಗಗಳಲ್ಲಿ ಹೊಸ ಮಿನಿ ಜಲಪಾತಗಳು ಹಾಗೂ ಸಣ್ಣ ತೋಡುಗಳು ಸೃಷ್ಟಿಯಾಗಿವೆ.

ಈಗಾಗಲೇ ಇದ್ದ ಜಲಪಾತಗಳು ತನ್ನ ವ್ಯಾಪ್ತಿ ಮೀರಿ ಹರಿಯುತ್ತಿವೆ. ಕೆಲವು ಜಲಪಾತಗಳು ತನ್ನ ಸಹಜ ದಾರಿ ಬಿಟ್ಟು ಕವಲುಗಳಾಗಿ ಬೇರೆ ಯಾವುದೋ ದಿಕ್ಕಿನಲ್ಲಿ ಹರಿಯುತ್ತಿವೆ. ಕೇವಲ ಮೂರು ಅಡಿ ಅಗಲದ ಚಿಕ್ಕ ಝರಿ (ನಂದಿ ಕಾಡು, ಸಿಂಗನಾರ್‌) 80 ಅಡಿ ಅಗಲದಲ್ಲಿ ದಾರಿ ಮಾಡಿ ಹರಿಯುತ್ತಿವೆ.

ಕುಸಿದ ಬೆಟ್ಟಗಳಲ್ಲಿ ಜುಳು ಜುಳು ನಾದ:

ಈ ಹಿಂದೆ ಇದ್ದ ಜಲಪಾತಗಳು ಇದ್ದ ಜಾಗದ ಮಣ್ಣು, ಮರ, ಗಿಡ, ಕಲ್ಲು ಗಳು ಅಲ್ಲಿಂದ ಜಾರಿ ಎಲ್ಲೋ ಎತ್ತಲೋ ಹರಡಿ ಹೋಗಿವೆ. ಕಾಡಿನಲ್ಲಿ ಮುಚ್ಚಿ ಹೋಗಿದ್ದ ಜಲಪಾತಗಳು ಇಂದು ಅಲ್ಲಿ ಸಂಪೂರ್ಣ ತೆರೆದು ನೀರು ಧುಮುಕುವ ಶಬ್ದ, ಅದರ ವಿರುದ್ಧ ಬೆಟ್ಟಅಥವಾ ಕಾಡಿನ ಪ್ರದೇಶಕ್ಕೆ ಪ್ರತಿ ಧ್ವನಿಯಾಗಿ ಹರಡುವ ಕಾರಣ ಬೆಟ್ಟದ ಭಾಗದಿಂದ ವಿಚಿತ್ರ ಸದ್ದು ಕೇಳಿಸುತ್ತವೆ ಎಂಬುದನ್ನು ಸ್ಥಳಕ್ಕೆ ಭೇಟಿ ನೀಡಿದ ಸಹ್ಯಾದ್ರಿ ಪರಿಸರ ಸಂಘಟನೆಯ ತಂಡ ಹೇಳಿದೆ.

ನೇತ್ರಾವತಿ ನದಿಗೆ ಬಿದ್ದು 10 ಕಿಮೀ ಬಳಿಕ ಸಿಕ್ಕ ವೃದ್ಧೆ!

ದುರ್ಗದ ಬೆಟ್ಟದ ಕೆಳಗಿನ ಮಕ್ಕಿ ಜಲಪಾತ ಕಾಡಿನ ಒಳಗೆ ಗುಪ್ತ ಗಾಮಿನಿಯಾಗಿ ಧುಮುಕುತಿತ್ತು. ಆದರೆ ಮೊನ್ನೆಯ ದುರಂತದ ನಂತರ ಈ ಜಲಪಾತದ ಎರಡೂ ಕಡೆಗಳಲ್ಲಿ ಎಲ್ಲ ಕೊಚ್ಚಿ ಹೋದ ಕಾರಣ ಈಗ ಮಕ್ಕಿ ಜಲಪಾತದ ಪಥ ಅಗಲವಾಗಿ ಅದರ ಎದುರು ದಿಕ್ಕಿನ ಬೆಟ್ಟಕ್ಕೆ ನೀರು ಧುಮುಕುವ ಸದ್ದು ಪ್ರತಿಧ್ವನಿ ಆಗಿ ವಿಚಿತ್ರ ಸದ್ದನ್ನು ಹೊರಡಿಸುತ್ತಿದೆ. ಈ ಸದ್ದು ಸುಮಾರು ಒಂದು ಕಿ.ಮೀ. ದೂರದ ವರೆಗೂ ಕೇಳಿಸುತ್ತಿದೆ ಎನ್ನುತ್ತಾರೆ ಪರಿಸರ ಪ್ರೇಮಿಗಳು.

ಮಂಗಳೂರು ಪಂಪ್‌ವೆಲ್‌ ಮೇಲ್ಸೇತುವೆ ಡಿಸೆಂಬರ್‌ಗೆ ಪೂರ್ಣ..?

ಅದೇ ರೀತಿ ಮೊನ್ನೆಯ ಭೂಕುಸಿತದ ಪರಿಣಾಮವಾಗಿ ದುರ್ಗದ ಬೆಟ್ಟ, ಬಾಳೆ ಗುಡ್ಡ, ದೊಡ್ಡೇರಿ ಬೆಟ್ಟ, ಹೊಸಮನೆ ಗುಡ್ಡ, ಮಲೆ ಮನೆ ಬೆಟ್ಟ, ರಾಮನ ಗುಡ್ಡ, ಬಾಲೂರು ಬೆಟ್ಟ... ಹೀಗೆ ಇನ್ನೂ ಅನೇಕ ಕಡೆಗಳಲ್ಲಿ ಸಹಜ ನೀರಿನ ಪಥ ಬದಲಾವಣೆಯಾಗಿ ಮತ್ತು ಬೆಟ್ಟಇದ್ದ ಕಡೆ ಈಗ ಅಲ್ಲಿ ಕುಸಿತವಾಗಿ, ಎಲ್ಲೋ ಇದ್ದ ದೊಡ್ಡ ಗಾತ್ರದ ಮರ, ಕಲ್ಲುಗಳು ಜಾರಿ ಹೋಗಿವೆ. ಇದೇ ಕಾರಣಕ್ಕೆ ಧಾರಾಕಾರ ಮಳೆ ಬರುವಾಗ ಮತ್ತು ಜಲಧಾರೆಯ ನೀರು ಹೆಚ್ಚಾದಾಗ ಧ್ವನಿ, ಪ್ರತಿಧ್ವನಿಯಾಗಿ ಸ್ಥಳೀಯರಿಗೆ ಆತಂಕ ಉಂಟು ಮಾಡುತ್ತಿವೆ ಎನ್ನುತ್ತಾರೆ ಪರಿಸರ ಪ್ರೇಮಿಗಳು.

ಭೂಕುಸಿತ ಅಧ್ಯಯನಕ್ಕೆ ಆಗ್ರಹ:

ಈ ಬಗ್ಗೆ ಭೂಗರ್ಭ ಇಲಾಖೆ, ಜಲ ತಜ್ಞರು, ಪಶ್ಚಿಮ ಘಟ್ಟಅಧ್ಯಯನಕಾರರು ತನಿಖಾ ಸಮಿತಿ ಮಾಡಿ ಭೂಕುಸಿತ, ಜಲಸ್ಫೋಟಕ್ಕೆæ ಕಾರಣವೇನು ಎಂದು ಅಧ್ಯಯನ ಆಗಬೇಕು. ಇನ್ನು ಮುಂದೆ ಆಗಲಿರುವ ಪ್ರಾಕೃತಿಕ ದುರಂತವನ್ನು ತಡೆಯುವ ಪ್ರಯತ್ನ ಆಗಲೇಬೇಕು. ಇದು ಯಾವುದೂ ಅಧ್ಯಯನ, ತನಿಖೆ, ಸಮೀಕ್ಷೆ ಆಗದೇ ಇದ್ದಲ್ಲಿ ಕಳೆದ ವರ್ಷ ಮಡಿಕೇರಿ, ಈ ಬಾರಿ ಚಾರ್ಮಾಡಿ, ಶಿರಾಡಿ, ಹೀಗೆ ಮುಂದಿನ ವರ್ಷ ಇನ್ನೆಲ್ಲೋ ಎಂಬ ಭಯದಿಂದ ಬದುಕುವಂತೆ ಆಗಬಾರದು. ಅದಕ್ಕಿಂತಲೂ ಹೆಚ್ಚಾಗಿ ಪಶ್ಚಿಮ ಘಟ್ಟದಲ್ಲಿ ಈ ರೀತಿ ನೈಸರ್ಗಿಕ ದುರಂತ ಆದರೆ ಭವಿಷ್ಯದಲ್ಲಿ ದಕ್ಷಿಣ ಭಾರತದ ಎಲ್ಲ ಕಡೆ ಸಮಸ್ಯೆ ವಿಪರೀತ ಆಗಬಹುದು ಎನ್ನುತ್ತಾರೆ ಪರಿಸರ ಪ್ರೇಮಿ ದಿನೇಶ್‌ ಹೊಳ್ಳ.

ಮಂಗಳೂರು: ಹದಗೆಟ್ಟ ರಸ್ತೆಗಳ ದುರಸ್ತಿಗೆ ಅಕ್ಟೋಬರ್‌ ಗಡುವು