ಮಂಗಳೂರು(ಸೆ.13): ಪಂಪ್‌ವೆಲ್ ಫ್ಲೈಓವರ್ ಕಾಮಗಾರಿಯನ್ನು ನವೆಂಬರ್‌ಗೆ ಮುಕ್ತಾಯಗೊಳಿಸುವ ಬಗ್ಗೆ ಪ್ರಯತ್ನ ನಡೆಸಬೇಕು ಎಂದು ಸಂಸದ ನಳಿನ್ ಕುಮಾರ್ ಭಾರತೀಯ ರಾಷ್ಟ್ರೀಯ ಹೆದ್ದಾರಿ ಇಲಾಖೆ(ಎನ್‌ಎಚ್‌ಎಐ) ವ್ಯವಸ್ಥಾಪಕ ನಿರ್ದೇಶಕ ಸೂರ್ಯವಂಶಿ ಸೂಚನೆ ನೀಡಿದ್ದಾರೆ.

ಮಂಗಳೂರಿನ ಜಿಲ್ಲಾ ಪಂಚಾಯ್ತಿ ನೇತ್ರಾವತಿ ಸಭಾಂಗಣದಲ್ಲಿ ಗುರುವಾರ ಜಿಲ್ಲಾ ಅಭಿವೃದ್ಧಿ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದ್ದಾರೆ. ಬಹಳ ಕಾಲದಿಂದ ನೆನೆಗುದಿಗೆ ಬಿದ್ದಿರುವ ಪಂಪ್‌ವೆಲ್‌ ಮೇಲ್ಸೇತುವೆ ಕಾಮಗಾರಿ ತ್ವರಿತಗತಿಯಲ್ಲಿ ನಡೆಯುತ್ತಿದೆ. ಈ ಕಾಮಗಾರಿ ಡಿಸೆಂಬರ್‌ಗೆ ಮುಕ್ತಾಯಗೊಳ್ಳಲಿದೆ ಎಂದು ನವಯುಗ ಗುತ್ತಿಗೆ ಕಂಪನಿಯ ಅಧಿಕಾರಿಗೆ ಪ್ರತಿಕ್ರಿಯಿಸಿದ್ದಾರೆ.

ಕುಲಶೇಖರ-ಕಾರ್ಕಳ ಹೆದ್ದಾರಿ ಅಗಲೀಕರಣ:

ಕುಲಶೇಖರ-ಕಾರ್ಕಳ ಹೆದ್ದಾರಿ 45 ಮೀಟರ್‌ ಅಗಲಗೊಳ್ಳಲಿದೆ. ಇದರ ಕಾಮಗಾರಿಗೆ ಭೂಸ್ವಾಧೀನ ಬಾಕಿ ಇದೆ. 20 ಗ್ರಾಮಗಳ ಪೈಕಿ 18 ಗ್ರಾಮಗಳ ಸರ್ವೆ ಪೂರ್ತಿಯಾಗಿದೆ. ಸೆ.25ರೊಳಗೆ ಭೂಸ್ವಾಧಿನಕ್ಕೆ ಸಿದ್ಧತೆ ನಡೆಸಲಾಗುವುದು ಎಂದು ಭೂಸ್ವಾಧೀನ ಅಧಿಕಾರಿ ಮೇಘನಾ ತಿಳಿಸಿದರು. ಮಂಗಳೂರು ನಗರ ಬೈಪಾಸ್‌ ರಸ್ತೆ ಕಾಮಗಾರಿ ಆರಂಭಿಸಲು ಪ್ರಥಮ ಹಂತದಲ್ಲಿ 43 ಕಿ.ಮೀ. ಪೈಕಿ 12 ಕಿ.ಮೀ.ಗೆ ಮಾತ್ರ ಅನುಮತಿ ಸಿಕ್ಕಿದೆ ಎಂದಿದ್ದಾರೆ.

ಹೆದ್ದಾರಿ ದುರಸ್ತಿಗೆ ಅನುದಾನ ಸಿಕ್ಕಿಲ್ಲ:

ಇನ್ನು 18 ಕಿ.ಮೀ. ಒಪ್ಪಿಗೆಗೆ ಬಾಕಿ ಇದೆ. ಕುಂದುಕೊರತೆಗಳಿದ್ದರೆ, ನನ್ನ ಗಮನಕ್ಕೆ ತನ್ನಿ ಎಂದು ಸೂರ್ಯವಂಶಿ ತಿಳಿಸಿದರು. ಹೆದ್ದಾರಿಗಳ ದುರಸ್ತಿ ಅನುದಾನ ಕೋರಿ ಕೇಂದ್ರ ಸರ್ಕಾರಕ್ಕೆ ವರದಿ ಕಳುಹಿಸಿದರೂ ಅನುದಾನ ಬಿಡುಗಡೆಯಾಗಿಲ್ಲ. ಆದ್ದರಿಂದ ತಕ್ಷಣಕ್ಕೆ ರಾಜ್ಯ ಸರ್ಕಾರದಿಂದ ಅನುದಾನ ದೊರಕಿಸಿಕೊಡುವಂತೆ ಹೆದ್ದಾರಿ ಇಲಾಖೆ ಅಧಿಕಾರಿ ಸುಬ್ಬರಾಮ ಹೊಳ್ಳ ವಿನಂತಿಸಿದರು.

ನೇತ್ರಾವತಿ ನದಿಗೆ ಬಿದ್ದು 10 ಕಿಮೀ ಬಳಿಕ ಸಿಕ್ಕ ವೃದ್ಧೆ!