ಬೆಂಗಳೂರು (ಡಿ.19):  ಸಿಐಡಿ ಡಿವೈಎಸ್ಪಿ ವಿ.ಲಕ್ಷ್ಮೇ ಅವರ ನಿಗೂಢ ಸಾವಿನ ತನಿಖೆಯನ್ನು ಪೊಲೀಸರು ಚುರುಕುಗೊಳಿಸಿದ್ದು, ಅಧಿಕಾರಿ ಮೊಬೈಲ್‌ ನಾಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿ ಕೊಟ್ಟಿದೆ.

ಬೆಂಗಳೂರಿನ ನಾಗರಾಬಾವಿಯಲ್ಲಿರುವ ಸ್ನೇಹಿತ ಮನೋಹರ್‌ ಮನೆಯಲ್ಲಿ ಪಾರ್ಟಿ ಮಾಡಿದ್ದ ಬಳಿಕ ಅಧಿಕಾರಿ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಆದರೆ ಸ್ಥಳದಲ್ಲಿ ಲಕ್ಷ್ಮಿ ಅವರ ಮೊಬೈಲ್‌ ಪತ್ತೆಯಾಗಿಲ್ಲ. ಹೀಗಾಗಿ ಮೊಬೈಲ್‌ ಪತ್ತೆಗೆ ಪೊಲೀಸರು ಶೋಧ ನಡೆಸಿದ್ದು, ಮೊಬೈಲ್‌ ಒಳ ಹಾಗೂ ಹೊರ ಕರೆಗಳ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನು ಪಾರ್ಟಿ ಮಾಡಿದ ವೇಳೆ ಡಿವೈಎಸ್ಪಿ ಲಕ್ಷ್ಮಿ ಅವರ ಜತೆಗಿದ್ದ ಮನೋಹರ್‌ ​ಅಲಿ​ಯಾ​ಸ್‌ ಮನು, ಆತನ ಸ್ನೇಹಿತ ರಾಹುಲ್‌, ಪ್ರಜ್ವಲ್‌, ರಂಜಿತ್‌ ಹಾಗೂ ಧರ್ಮೇಗೌಡ ಎಂಬುವರ ವಿಚಾರಣೆಯನ್ನು ಶುಕ್ರವಾರ ಕೂಡ ಪೊಲೀಸರು ಮುಂದುವರೆಸಿದ್ದಾರೆ.

DySP ಲಕ್ಷ್ಮೀ ಸುಸೈಡ್: ಪಾರ್ಟಿಯ ನಂತರ ಫ್ಲ್ಯಾಟ್‌ನಲ್ಲಿ ನಡೆದಿದ್ದೇನು..?

ಸದ್ಯ ಲಕ್ಷ್ಮಿ ಅವರ ಸ್ನೇಹಿತರ ಹೇಳಿಕೆಗಳು ಗೊಂದಲದಿಂದ ಕೂಡಿವೆ. ಕೋಣನಕುಂಟೆ ಮನೆ ಮತ್ತು ಘಟನೆ ನಡೆದ ಫ್ಲಾಟ್‌, ಸುತ್ತಲ ಪ್ರದೇಶದಲ್ಲಿ ಹುಡುಕಾಟ ನಡೆಸಿದ್ದರೂ ಇಲ್ಲಿಯವರೆಗೂ ಮೊಬೈಲ್‌ ಸಿಕ್ಕಿಲ್ಲ. ಮೊಬೈಲ್‌ ಪತ್ತೆಯಾದರೆ ಸಾಕಷ್ಟುಮಾಹಿತಿ ಸಿಗಲಿದೆ. ಅಲ್ಲದೆ, ಅಧಿಕಾರಿ ಅವರ ಕುಟುಂಬಸ್ಥರು ಹಾಗೂ ಸರ್ಕಾರಿ ಕಾರು ಚಾಲಕ, ಕಚೇರಿ ಸಿಬ್ಬಂದಿಯಿಂದಲೂ ಅವರ ಬಗ್ಗೆ ಮಾಹಿತಿ ಪಡೆದುಕೊಳ್ಳಲಾಗುತ್ತಿದೆ. ಮೃತಪಟ್ಟದಿನ ಲಕ್ಷ್ಮಿ ಅವರು ಯಾರಾರ‍ಯರನ್ನು ಭೇಟಿಯಾಗಿದ್ದಾರೆ ಎಂಬ ಬಗ್ಗೆ ಕೂಡ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಎರಡ್ಮೂರು ದಿನಗಳಲ್ಲಿ ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಬರಲಿದೆ. ಆ ಬಳಿಕ ಡಿವೈಎಸ್ಪಿ ಅವರದ್ದು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬುದು ತಿಳಿಯಲಿದೆ. ತನಿಖೆ ಮುಂದುವರೆದಿದೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ಡಾ.ಸಂಜೀವ್‌ ಎಂ.ಪಾಟೀಲ್‌ ‘ಕನ್ನಡಪ್ರಭ’ಕ್ಕೆ ತಿಳಿಸಿದರು.

ಡಿ.16ರಂದು ಲಕ್ಷ್ಮಿ ಅವರು ಸ್ನೇಹಿತನ ಮನೆಗೆ ತೆರಳಿದ್ದರು. ನೇಣು ಬಿಗಿದ ಸ್ಥಿತಿಯಲ್ಲಿ ಲಕ್ಷ್ಮಿ ಅವರ ಮೃತ ದೇಹ ಪತ್ತೆಯಾಗಿತ್ತು. ಮೃತ ಅಧಿಕಾರಿ ತಂದೆ ನಮ್ಮ ಪುತ್ರಿ ಆತ್ಮಹತ್ಯೆ ಮಾಡಿಕೊಳ್ಳುವ ಮನಸ್ಥಿತಿಯವರಲ್ಲ ಎಂದು ಹೇಳಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.