ಯಾದಗಿರಿ: ಶ್ರೀಗಂಧ ಕಳುವು ಮರೆಮಾಚಲು ಹೊಸ ಮರ ಕಡಿದು ತಂದಿಟ್ಟ ಖದೀಮರು..!

ವಶಕ್ಕೆ ಪಡೆದಿದ್ದ ಶ್ರೀಗಂಧದ ಮರದ ತುಂಡುಗಳನ್ನು ಯಾದಗಿರಿ ನಗರದ ಲಾಲ್‌ ಬಹಾದ್ದೂರ್ ಶಾಸ್ತ್ರಿ ವೃತ್ತದ ಸಮೀಪ ಅರಣ್ಯ ಇಲಾಖೆ ಅಧಿಕಾರಿಗಳ ಕಚೇರಿಯಲ್ಲಿಡಲಾಗಿತ್ತು. ಆದರೆ ನಾಲ್ಕೈದು ದಿನಗಳ ಹಿಂದೆ ಈ ಶ್ರೀಗಂಧದ ದಾಸ್ತಾನು ಕಳ್ಳತನ ಆಗಿದೆ ಎಂಬ ಆರೋಪ ಕೇಳಿಬಂದಿದೆ. 
 

New Tree Cut For Hide the Sandalwood Theft in Yadgir grg

ಆನಂದ್ ಎಂ. ಸೌದಿ

ಯಾದಗಿರಿ(ಅ.07): ಮರಗಳ್ಳರಿಂದ ಜಪ್ತಿ ಮಾಡಿಕೊಂಡಿದ್ದ 150 ಕೆ.ಜಿ. ಶ್ರೀಗಂಧದ ಮರದ ತುಂಡುಗಳು ಅರಣ್ಯ ಇಲಾಖೆ ಕಚೇರಿಯಿಂದಲೇ ಕಳ್ಳತನವಾಗಿದ್ದು, ಇದನ್ನು ಮರೆಮಾಚಲು ಹೊಸದಾಗಿ ಮರಕಡಿದು ಶ್ರೀಗಂಧದ ತುಂಡುಗಳನ್ನು ಅದೇ ಜಾಗದಲ್ಲಿ ತಂದಿಟ್ಟಿರುವ ಗಂಭೀರ ಆರೋಪ ಯಾದಗಿರಿಯಲ್ಲಿ ಕೇಳಿಬಂದಿದೆ. ಈ ಸಂಬಂಧ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಗುರುಮಠಕಲ್ ಶಾಸಕ ಶರಣಗೌಡ ಕಂದಕೂರು ಅವರು ಅರಣ್ಯ ಸಚಿವ ಈಶ್ವರ ಖಂಡ್ರೆಯರಿಗೆ ಇದೀಗ ಪತ್ರ ಬರೆದಿದ್ದಾರೆ.

ಸೆ.13-14 ರಂದು ಯಾದಗಿರಿ ಜಿಲ್ಲೆಯ ಹತ್ತಿಕುಣಿ ಪ್ರದೇಶದ ಬಗ್ಗಲಮಡು-ಹಂದರಕಿ ಭಾಗದಲ್ಲಿ ಅಕ್ರಮವಾಗಿ ಶ್ರೀಗಂಧದ ಗಿಡಗಳನ್ನು ಕಡಿದು ಸಾಗಿಸುತ್ತಿರುವ ಕುರಿತು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಅರಣ್ಯಾಧಿಕಾರಿಗಳು, ಮಹಾರಾಷ್ಟ್ರದ ಸತಾರ ಜಿಲ್ಲೆಯ ವ್ಯಕ್ತಿಯನ್ನು ಬಂಧಿಸಿದ್ದರು. ಜತೆಗೆ ಒಂದು ಕಾರು ಹಾಗೂ ಬೈಕ್ ಸೇರಿ 1.5 ಕ್ವಿಂಟಲ್‌ನಷ್ಟು 15 ಲಕ್ಷ ರುಪಾಯಿ ಮೌಲ್ಯದ ಶ್ರೀಗಂಧದ ತುಂಡುಗಳನ್ನು ಜಪ್ತಿ ಮಾಡಿಕೊಂಡಿದ್ದರು.

ಯಾದಗಿರಿ ನಗರದಲ್ಲಿ ಹೆಚ್ಚಾದ ಕಳ್ಳತನ ಪ್ರಕರಣಗಳು: ಕಳ್ಳರನ್ನು ಹಿಡಿಯಲು ಪೋಲಿಸರ ಹರಸಾಹಸ

ವಶಕ್ಕೆ ಪಡೆದಿದ್ದ ಈ ಶ್ರೀಗಂಧದ ಮರದ ತುಂಡುಗಳನ್ನು ಯಾದಗಿರಿ ನಗರದ ಲಾಲ್‌ ಬಹಾದ್ದೂರ್ ಶಾಸ್ತ್ರಿ ವೃತ್ತದ ಸಮೀಪ ಅರಣ್ಯ ಇಲಾಖೆ ಅಧಿಕಾರಿಗಳ ಕಚೇರಿಯಲ್ಲಿಡಲಾಗಿತ್ತು. ಆದರೆ ನಾಲ್ಕೈದು ದಿನಗಳ ಹಿಂದೆ ಈ ಶ್ರೀಗಂಧದ ದಾಸ್ತಾನು ಕಳ್ಳತನ ಆಗಿದೆ ಎಂಬ ಆರೋಪ ಕೇಳಿಬಂದಿದೆ. ಇದರಿಂದ ಆತಂಕಗೊಂಡ ಇಲಾಖೆಯ ಕೆಲವರು, ಮೂರು ದಿನಗಳ ಹಿಂದೆ ಗುರುಮಠಕಲ್‌ ಅರಣ್ಯ ಪ್ರದೇಶ ವ್ಯಾಪ್ತಿಯ ಮಲ್ಲಾ ಭಾಗದಲ್ಲಿ ಶ್ರೀಗಂಧದ ಗಿಡಗಳನ್ನು ಕಡಿದು ಜಪ್ತಿ ಮಾಡಿದ್ದ ಮಾಲಿನ ಜಾಗದಲ್ಲಿಟ್ಟಿದ್ದರು ಎಂದು ಹೇಳಲಾಗುತ್ತಿದೆ.

ಈ ವಿಚಾರ ಗಮನಕ್ಕೆ ಬರುತ್ತಿದ್ದಂತೆ ಶಾಸಕ ಶರಣಗೌಡ ಕಂದಕೂರು ಅವರು ಅರಣ್ಯ ಸಚಿವ ಈಶ್ವರ ಖಂಡ್ರೆ ಅವರಿಗೆ ಪತ್ರ ಬರೆದು ಸೂಕ್ತ ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ. ಅರಣ್ಯ ಇಲಾಖೆ ಕಚೇರಿಯಲ್ಲೇ ಜಪ್ತಿ ಮಾಡಿಟ್ಟಿದ್ದ ಶ್ರೀಗಂಧದ ಮರ ಕಳ್ಳತನದ ಮುಜುಗರದಿಂದ ತಪ್ಪಿಸಿಕೊಳ್ಳಲು ಮತ್ತೆ ಅರಣ್ಯ ಪ್ರದೇಶದಲ್ಲಿ ಶ್ರೀಗಂಧದ ಗಿಡಗಳನ್ನು ಕಡಿದಿರುವ ಆರೋಪ ಕೇಳಿಬಂದಿದೆ. ಇದಕ್ಕೆ ಇಲಾಖೆ ಒಳಗಿನವರೇ ಸಹಕರಿಸಿರುವ ಅನುಮಾನಗಳಿವೆ. ಈ ಸಂಬಂಧ ಪರಿಶೀಲನೆ ನಡೆಸಬೇಕು, ಅರಣ್ಯ ಪ್ರದೇಶದಲ್ಲಿ ಮತ್ತೆ ಶ್ರೀಗಂಧದ ಗಿಡ ಕಡಿದಿರುವುದು ದೃಢಪಟ್ಟರೆ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಅನುದಾನ ಬಿಡುಗಡೆ ಮಾಡದ ಸರ್ಕಾರ: ಶಾಲೆಗಳ ಮಧ್ಯಾಹ್ನದ ಬಿಸಿಯೂಟಕ್ಕೆ ಗ್ಯಾಸ್‌ ಟ್ರಬಲ್‌..!

ಜಪ್ತಿ ಆಗಿದ್ದ ಶ್ರೀಗಂಧದ ಮರದ ತುಂಡು ಕಳವು ಹಾಗೂ ಅದನ್ನು ಮರೆಮಾಚಲು ಮತ್ತೆ ಶ್ರೀಗಂಧದ ಗಿಡಗಳನ್ನು ಕಡಿದು ಅದೇ ಜಾಗದಲ್ಲಿಟ್ಟಿದ್ದು ತಪ್ಪು. ಇದು ಬೇಲಿಯೇ ಎದ್ದು ಹೊಲ ಮೇಯ್ದಂತೆ. ಈ ಆರೋಪ ನಿಜವೇ ಆಗಿದ್ದರೆ ಈ ಕುರಿತು ತನಿಖೆಯಾಗಲಿ ಎಂದು ಅರಣ್ಯ ಸಚಿವರಿಗೆ ಪತ್ರ ಬರೆದಿದ್ದೇನೆ ಎಂದು ಗುರುಮಠಕಲ್ ಶಾಸಕ ಶರಣಗೌಡ ಕಂದಕೂರು ಹೇಳಿದ್ದಾರೆ.  

ಜಪ್ತಿ ಮಾಡಿಟ್ಟಿದ್ದ ಶ್ರೀಗಂಧದ ದಾಸ್ತಾನು ಕಳ್ಳತನ ಆಗಿದೆ. ಈ ಬಗ್ಗೆ ವಿಚಾರಣೆಯಿಂದ ತಿಳಿದುಬಂದಿದ್ದು, ದೂರು ನೀಡಲು ನಿರ್ಧರಿಸಲಾಗಿದೆ. ಇನ್ನು, ಕಳ್ಳತನ ಮರೆಮಾಚಲು ಮತ್ತೆ ಶ್ರೀಗಂಧ ಗಿಡಗಳ ಕಡಿದ ಆರೋಪಗಳ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಯಾದಗಿರಿ ಅರಣ್ಯ ಇಲಾಖೆ ಡಿಸಿಎಫ್‌ ಕಾಜಲ್ ಪಾಟೀಲ್ ತಿಳಿಸಿದ್ದಾರೆ. 

Latest Videos
Follow Us:
Download App:
  • android
  • ios